ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹಾರ ನೀಡಲು ಬಂದವರು ತಂಪಾಗಿ ಕುಳಿತರು

Last Updated 17 ಏಪ್ರಿಲ್ 2017, 6:32 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನಾದ್ಯಾಂತ ಉರಿಯುತ್ತಿರುವ ಬಿಸಿಲು. ಜನರು ಮತ್ತು ಜಾನವಾರುಗಳು ಬಿಸಿಲಿನ ಧಗೆಯಿಂದ ಬಳಲುತ್ತಿದ್ದರೆ, ಇತ್ತ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಮಿಸಿದ್ದ ತಾಲ್ಲೂಕಿನ ವಿವಿಧ ಕ್ಷೇತ್ರಗಳ ತಾಲ್ಲೂಕು ಪಂಚಾಯ್ತಿ ಸದಸ್ಯರು ತಂಪಾಗಿ ಕುಳಿತು ಅಧಿಕಾರಿಗಳು ಹೇಳಿದ ಮಾತನ್ನು ಕೇಳುತ್ತ ಕುಳಿತ ಘಟನೆ ಗುರುವಾರ ಕಂಡು ಬಂದಿತು.

ಬರಗಾಲದ ಭೀಕರತೆ ಮತ್ತು ಕುಡಿಯುವ ನೀರಿಗೆ ಪರಿಹಾರ ಕಂಡುಕೊಳ್ಳಬೇಕಿದ್ದ ಸದಸ್ಯರು ಸಾಮಾನ್ಯ ಸಭೆಯಲ್ಲಿ ತಮಗೆ ಏನೂ ಗೊತ್ತಿಲ್ಲ ಎನ್ನುವಂತೆ ಮೌನವಾಗಿ ಕುಳಿತಿದ್ದರು.ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಇಲಾಖಾ ಪ್ರಗತಿ ಮತ್ತು ಮಾಡಬೇಕಾದ ಕೆಲಸಗಳ ಕುರಿತು ವಿವರಣೆ ನೀಡುವಾಗ ಆಸಕ್ತಿಯಿಂದ ಸದಸ್ಯರು ಚರ್ಚೆ ಮಾಡಲಿಲ್ಲ.

ಕಳೆದ ಮೂರು ವರ್ಷಗಳಿಂದ ತಾಲೂಕು ಭೀಕರ ಬರ ಎದುರಿಸುತ್ತಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಜತೆಗೆ ಮೇವಿನ ಅಭಾವವೂ ಸೃಷ್ಟಿಯಾಗಿದ್ದರೂ ಬಹುತೇಕ ಸದಸ್ಯರು ಈ ಬಗ್ಗೆ ಮಾತನಾಡದೇ ಇರುವುದು ಸೋಜಿಗದ ವಿಷಯ.ಮಹಿಳಾ ಸದಸ್ಯರ ಹಾಜರಿ ಸಾಕಷ್ಟು ಕಂಡು ಬಂದಿತು. ಅವರಾದರೂ ಬಾಯಿ ಬಿಟ್ಟಾರು ಎಂದು ನೋಡಿದರೆ ಯಾರು ಅಭಿವೃದ್ಧಿ ಪರ ಬಾಯಿ ಬಿಡಲಿಲ್ಲ. ಪುರುಷ ಸದಸ್ಯರ ಪೈಕಿ ಕೇವಲ ಎರಡು ಅಥವಾ ಮೂವರು ಸದಸ್ಯರನ್ನುಹೊರತುಪಡಿಸಿದರೆ ಸಭೆಯಲ್ಲಿ ಹಾಜರಿದ್ದ ಬಹುತೇಕರು ಮೌನಕ್ಕೆ ಶರಣಾಗಿದ್ದರು.

ಆಗೊಮ್ಮ ಈಗೊಮ್ಮೆ ಎಂಬಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ದಸ್ತಗೀರ್ ಸಾಹೇಬರು ಸದಸ್ಯರಿಗೆ ಮನವರಿಕೆ ಮಾಡಿಕೊಡುವಂತೆ ಕಂಡು ಬಂದಿತು.ಕೆಲವೊಂದು ಇಲಾಖೆಯ ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು. ಬೆಣಿವಾಡ ಕ್ಷೇತ್ರದ ಸದಸ್ಯ ಬಸ್ ಸೌಲಭ್ಯಕ್ಕೆ ಕೇಳಿದ ಪ್ರಶ್ನೆಗೆ ಸಂಬಂಧಿಸಿದ ಅಧಿಕಾರಿಯಿಂದ ಸರಿಯಾದ ಉತ್ತರ ಬರಲಿಲ್ಲ. ಕಣಗಲಾ ಸದಸ್ಯ ಸಮಸ್ಯೆ ಹೇಳಿದಾಗ ಬರೆದು ಕೊಡಿರಿ ಎಂದು ಹೇಳಿದಾಗ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

 ವಿಷಯ ಮೈಮೇಲೆ ಬರುವಂತೆ ಕಂಡಾಗ ಅಧಿಕಾರಿ’ ನೀವು ಹಂಗಂತಿರಿ ಅಂದ್ರ ಅದು ಹಂಗರಿ’ ಎಂದು ಸಭೆಗೆ ಉತ್ತರಿಸಿದಾಗ ಸದಸ್ಯರು ನಗೆಗಡಲಲ್ಲಿ ತೇಲಿದರು.
ಹೆಚ್ಚು ಮಾತನಾಡುವ ತಹಶೀಲ್ದಾರರು ಕೂಡಾ ಇಂದು ಸುಮ್ಮನೆ ಕುಳಿತುಕೊಂಡು ಸದಸ್ಯರು ಹೇಳುತ್ತಿದ್ದ ವಿಷಯವನ್ನು ಟಿಪ್ಪಣೆ ಮಾಡಿಕೊಂಡರು. ಅವರಿಗೆ ವಿಷಯದ ಗಾಂಭಿರ್ಯತೆ ಗೊತ್ತು ಇರುವಂತೆ ಕಂಡಿತು.\ಉಪಾಧ್ಯಕ್ಷೆ ಲಕ್ಮೀಬಾಯಿ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಬಿಸಿರೊಟ್ಟಿ, ಇಒ ಎಂ.ಎಸ್. ಬಿರಾದಾರಪಾಟೀಲ, ತಹಶೀಲ್ದಾರ್ ನಾಗನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT