ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿಯಲ್ಲೂ ಸೌಲಭ್ಯಗಳಿಗೆ ಕೊರತೆ!

Last Updated 17 ಏಪ್ರಿಲ್ 2017, 6:37 IST
ಅಕ್ಷರ ಗಾತ್ರ

ಬೆಳಗಾವಿ: ಪಕ್ಕಾ ರಸ್ತೆ ಇಲ್ಲ... ಎರಡು ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆ... ಬೀದಿ ದೀಪಗಳಿಲ್ಲ... ಇದು ಯಾವುದೋ ಹಳ್ಳಿಯ ಚಿತ್ರಣವಲ್ಲ. ಸ್ಮಾರ್ಟ್‌ ಸಿಟಿ ಎನ್ನುವ ಖ್ಯಾತಿಗೆ ಒಳಗಾಗಿರುವ ಬೆಳಗಾವಿಯ ಗಣೇಶಪುರದ ಸರಸ್ವತಿ ನಗರದ ಚಿತ್ರಣ! ಈ ಪ್ರದೇಶವು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಇನ್ನೂ ಬೆನಕನಹಳ್ಳಿ ಗ್ರಾಮ ಪಂಚಾಯ್ತಿಯಿಂದ ಹಸ್ತಾಂತರವಾಗಿಲ್ಲ. ಕಳೆದ ಎರಡು ದಶಕದಿಂದ ಮನೆ ಕಟ್ಟಿಸಿಕೊಂಡು ಜನ ವಾಸಿಸುತ್ತಿದ್ದಾರೆ. ಅದಕ್ಕೆ ಪಂಚಾಯ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲ ಅನುಮತಿಯೂ ಪಡೆದುಕೊಂಡಿದ್ದಾರೆ. ಆದರೆ ಈ ಭಾಗಕ್ಕೆ  ಮೂಲ ಸೌಕರ್ಯ ನೀಡಲು ಮಾತ್ರ ಯಾರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಬೆನಕನಹಳ್ಳಿ ಕಡೆಗೆ ಸಾಗುವ ಮಾರ್ಗದ 3 ಮತ್ತು 4ನೇ ಕ್ರಾಸ್‌ನ ರಸ್ತೆಗಳನ್ನು ಕಳೆದ ಒಂದು ದಶಕದಿಂದ ಮಾಡಿಸಿಲ್ಲ. ಬಹಳ ಒತ್ತಾಯದ ಮೇರೆಗೆ ಎರಡು ವರ್ಷಗಳ ಹಿಂದೆ ಒಂದಿಷ್ಟು ಮಣ್ಣು ಹಾಕಿದ್ದು, ಬಿಟ್ಟರೆ ಇನ್ನೇನೂ ಕೆಲಸಗಳಾಗಿಲ್ಲ ಎಂದು ಆರೋಪಿಸಿದ್ದಾರೆ.  ಈ ಜಾಗದ ಅಭಿವೃದ್ಧಿ ಬಗ್ಗೆ ಕೇಳಿದರೆ, ಮಹಾನಗರ ಪಾಲಿಕೆಯವರು ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದೆ ಎನ್ನುತ್ತಾರೆ. ಗ್ರಾಮ ಪಂಚಾಯ್ತಿಯವರು ಹಣ ಇಲ್ಲ ಎನ್ನುತ್ತಾರೆ. ನಗರಾಭಿವೃದ್ಧಿ ಪ್ರಾಧಿಕಾರದವರು ಗ್ರಾಮ ಪಂಚಾಯ್ತಿಗೆ ಒಪ್ಪಿಸಿ ತಮ್ಮ ಜವಾಬ್ದಾರಿ ಕಳಚಿಕೊಂಡಿದ್ದಾರೆ. ಸಮಸ್ಯೆಗಳನ್ನು ಯಾರಿಗೆ ಹೇಳಬೇಕು ಎಂಬ ಗೊಂದಲ ಸ್ಥಳೀಯ ನಿವಾಸಿಗರನ್ನು ಕಾಡುತ್ತಿದೆ.  

ಈ ಭಾಗದ ಶಾಸಕರು ಸುಳ್ಳು ಭರವಸೆಗಳನ್ನೇ ಕೊಡುತ್ತಿದ್ದಾರೆ. ಈ ಭಾಗದಲ್ಲಿ ರಸ್ತೆಯಲ್ಲಿ ರಸ್ತೆ, ನೀರು, ಬೀದಿದೀಪ ಕೊಡಿಸಲು ಶಾಸಕರಿಗೂ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೂ ಆಸಕ್ತಿ ಇಲ್ಲದಾಗಿದೆ. ಚುನಾವಣೆ ಬಂದಾಗ ಮಾತ್ರ ಓಡಿ ಬರುತ್ತಾರೆ. ಆಮೇಲೆ ನೋಡುವುದಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

15 ದಿನಕ್ಕೊಮ್ಮೆ ನೀರು: ಈ ಭಾಗದ ಜನರಿಗೆ ಬೇಸಿಗೆ ಕಾಲ ಎಂದರೆ ದೊಡ್ಡ ಶಾಪವಿದ್ದಂತೆ. ಬೇಸಿಗೆ ಬಂದರೆ ನೀರಿಗೆ ಬರ. 15 ದಿನಕ್ಕೊಮ್ಮೆ ನೀರು ಬಿಡುತ್ತಾರೆ ಎನ್ನುವುದು ನಿವಾಸಿಗಳ ಅನಿಸಿಕೆ.‘ಇದೇ 3ನೇ ಕ್ರಾಸ್‌ನ ಕೊನೆಯ ಅಂಚಿನಲ್ಲಿ ಹೊಸ ಪೆಟ್ರೋಲ್‌ ಪಂಪ್‌ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ಇಲ್ಲಿಯ ಚರಂಡಿ ಅಗಿದು, ಹೊಲಸು ನೀರನ್ನು ರಸ್ತೆಯ ಮೇಲೆ ಬಿಡಲಾಗಿದೆ. ಪ್ರಧಾನಿಗಳ ಸ್ವಚ್ಛ ಭಾರತ ಯೋಜನೆಯು ಬಿಜೆಪಿ ಪ್ರಾಬಲ್ಯದ ಈ ಭಾಗದಲ್ಲಿ ಮಲೀನವಾಗಿದೆ’ ಎಂದು ನಿವಾಸಿ ಮನೋಹರ ಜಾಧವ ಕಿಡಿಕಾರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT