ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ಬೆಸುಗೆ ರಾಕಾಸಮ್ಮನ ಉತ್ಸವ

ದಲಿತ ಸಮುದಾಯದವರ ಆರಾದ್ಯ ದೈವ ರಾಕಾಸಮ್ಮನ ಹಬ್ಬಕ್ಕೆ ಚಾಲನೆ ಇಂದು
Last Updated 17 ಏಪ್ರಿಲ್ 2017, 6:43 IST
ಅಕ್ಷರ ಗಾತ್ರ
ಭಾರತೀನಗರ: ‘ತಿಂಗಾಳು ಮುಳುಗಿದವೊ, ರಂಗೋಲಿ ಬೆಳಗಿದವೋ, ತಾಯಿ ರಾಕಾಸಿಯ ಪೂಜೆಗೆಂದು ಬಾಳೆ ಬಾಗಿದವೋ’.... ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನೆಲಸಿರುವ ರಾಕಾಸಮ್ಮನನ್ನು ಗ್ರಾಮದ ಮಹಿಳೆಯರು ಹಾಡಿನ ಮೂಲಕ ವರ್ಣಿಸುವ ಪರಿಯಿದು.
 
ರಾಕಾಸಮ್ಮನ ಐತಿಹ್ಯ: ಪುರಾತನ ಕಾಲದಲ್ಲಿ ಕಾಡುಕೊತ್ತನಹಳ್ಳಿ ಗ್ರಾಮದ ಸೀರೆ ವ್ಯಾಪಾರಿಯೊಬ್ಬರು ತೊಣ್ಣೂರಿಗೆ ಹೋದ ಸಂದರ್ಭ ಅಲ್ಲಿನ ರಾಕಾಸಮ್ಮ ದೇವಾಲಯದ ಆವರಣದಲ್ಲಿ ಉಳಿದುಕೊಂಡಿದ್ದ.
 
ಆಗ ದೇವಿ ವ್ಯಾಪಾರಿಯ ಕನಸಿನಲ್ಲಿ ಬಂದು ‘ನನಗೆ ಇಲ್ಲಿ ನೆಲೆಸುವುದಕ್ಕೆ ಹಿಂಸೆ ಎನಿಸುತ್ತಿದೆ. ನಾನು ಇಲ್ಲಿರಲಾರೆ. ಜೊತೆಯಲ್ಲೇ ಕರೆದುಕೊಂಡು ಹೋಗು’ ಎಂದು ಹೇಳಿದಳಂತೆ. ಅದರಂತೆ ವ್ಯಾಪಾರಿಯ ಜತೆಯಲ್ಲೇ ಬಂದು ಗ್ರಾಮದ ಬೇವಿನ ಮರದ ಕೆಳಗೆ ರಾಕಾಸಮ್ಮ ನೆಲೆಸಿದಳೆಂಬ ಪ್ರತೀತಿ ಇದೆ.
 
ವಿಶೇಷ ದೇವಾಲಯ: ಗ್ರಾಮದ ರಾಕಾಸಮ್ಮ ದೇವಾಲಯ ವಿಶೇಷತೆ ಯಿಂದ ಕೂಡಿದೆ. ದೇವಿಯ ಗರ್ಭಗುಡಿಯ ಸುತ್ತಲೂ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಗರ್ಭಗುಡಿಗೆ ಮಾತ್ರ ಇಂದಿಗೂ ಚಾವಣಿ ಇಲ್ಲ. ದೇವಿಯ ವಿಗ್ರಹದ ಬಳಿ ಬೇವಿನಮರ ಒಂದಿದೆ. ಇದೇ  ರಾಕಾಸಮ್ಮ ದೇವತೆಯ ವಿಶೇಷ.
 
ರಾಕಾಸಮ್ಮ ದೇವಿಯನ್ನು ಗ್ರಾಮದ ದಲಿತ ಸಮುದಾಯದವರಷ್ಟೇ ಅಲ್ಲದೇ, ಇತರೆ ಸಮುದಾಯದವರು ಕೂಡ ಪೂಜಿಸುತ್ತಾರೆ. ಹಬ್ಬ ಹರಿದಿನಗಳಂದು ದೇವಾಲಯಕ್ಕೆ ಬಂದು ದಲಿತರೊಟ್ಟಿಗೆ ಪೂಜೆ ಸಲ್ಲಿಸುತ್ತಾರೆ.
 
ಗ್ರಾಮದ ದಲಿತ ಸಮುದಾಯದಲ್ಲಿ ವಿಶೇಷ ಎಂಬಂತೆ ಮೂರು ಕೇರಿಗಳಿವೆ. ಕೂನನ ಕೇರಿ, ಬೊದರೆ ಕೇರಿ, ಕಣಿಯನ ಕೇರಿ ಎಂಬ ಹೆಸರುಗಳಿಂದ ಇಂದಿಗೂ ಕರೆಯಲಾಗುತ್ತದೆ. ಮೂರು ಕೇರಿಗಳಿಗೂ ಮೂರು ಮಂದಿ ದೊಡ್ಡ ಯಜಮಾನರು ಇದ್ದಾರೆ. ಪ್ರತಿ ಕೇರಿಯಲ್ಲೂ 4 ತೆಂಡೆಗಳು ಇವೆ. 4 ತೆಂಡೆಗಳಿಗೂ ಪ್ರತ್ಯೇಕ ತೆಂಡೆ ಯಜಮಾನರಿದ್ದು, ದೇವಿಯ ಹಬ್ಬದ ಉಸ್ತುವಾರಿ ವಹಿಸಲಿದ್ದಾರೆ.
 
ಎರಡುದಿನ ಹಬ್ಬ: ರಾಕಾಸಮ್ಮನ ಹಬ್ಬ ಏ. 17 ಮತ್ತು 18ರಂದು ವಿಜೃಂಭಣೆಯಿಂದ ಜರುಗಲಿದೆ. ಸೋಮವಾರ ರಾತ್ರಿ ರಾಕಾಸಮ್ಮನ ಕರಗ, ಪೂಜೆ, ಹೆಬ್ಬಾರೆಗಳನ್ನು, ತಮಟೆ ವಾದ್ಯಗಳೊಂದಿಗೆ ಗ್ರಾಮದ ಕೆರೆಯಿಂದ ಹೂ ಹೊಂಬಾಳೆ ಹಾಗೂ ಮಡಿಯಿಂದ ಸಿಂಗರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸೂರ್ಯೋದಯಕ್ಕೂ ಮುನ್ನ ರಾಕಾಸಮ್ಮನ ಮೆರವಣಿಗೆ ನಡೆಯಲಿದೆ. 
 
ಮಂಗಳವಾರ ಬೆಳಿಗ್ಗೆ ರಾಕಾಸಮ್ಮ ದೇವತೆಗೆ ಹರಕೆ ಮರಿ ಒಪ್ಪಿಸುವುದು. ಮಧ್ಯಾಹ್ನ 2 ಗಂಟೆಗೆ ಗ್ರಾಮ ದೇವತೆಗೆ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದ್ದು, ಸಂಜೆ ದೇವರ ಮೆರವಣಿಗೆ, ರಾತ್ರಿ ಗ್ರಾಮದ ಕಲಾವಿದರಿಂದ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.
ಅಂಬರಹಳ್ಳಿ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT