ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡವಾದ ಬೌದ್ಧಿಕತೆಗೆ ಜೀವಸ್ಪರ್ಶ ಕೊಟ್ಟ ಎಚ್‌ಎಲ್‌ಕೆ

‘ನಮ್ಮ ನುಡಿ ನಮನ’ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಅಭಿಮತ
Last Updated 17 ಏಪ್ರಿಲ್ 2017, 6:45 IST
ಅಕ್ಷರ ಗಾತ್ರ
ಮಂಡ್ಯ: ‘ಎಚ್‌ಎಲ್‌ಕೆ’ ಅವರು ಜಡವಾದ ಬೌದ್ಧಿಕತೆಗೆ ಜೀವಸ್ಪರ್ಶ ಕೊಟ್ಟವರು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
 
ನಗರದ ರೈತ ಸಭಾಂಗಣದಲ್ಲಿ ದಲಿತ– ರೈತ– ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಭಾನುವಾರ ನಡೆದ ಪತ್ರಕರ್ತ, ಸಾಹಿತಿ ಎಚ್.ಎಲ್‌.ಕೇಶವಮೂರ್ತಿಗೆ ‘ನಮ್ಮ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಎಚ್‌ಎಲ್‌ಕೆ, ಬೆಸಗರಹಳ್ಳಿ ರಾಮಣ್ಣ, ಶಿವಳ್ಳಿ ಕೆಂಪೇಗೌಡ ಸೇರಿದಂತೆ ಮಹನೀಯರ ಕೃತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ವೇದಿಕೆ ಸಿದ್ಧಪಡಿಸಬೇಕು. ಅದು ವಿಷಯಗಳನ್ನು ಬಿತ್ತುವ ಕೆಲಸ ಆಗುತ್ತದೆ. ಮಹಾನ್‌ ವ್ಯಕ್ತಿಗಳ ಚಿಂತನೆಗಳ ಜತೆಗೆ ಅವರು ಮರೆಯಾದರೂ ಮರುಹುಟ್ಟು ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
 
ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಸಮಾನ ಶೋಷಿತರಾದ ಹಾಗೂ ಸಮಾನ ದುಃಖಿಗಳಾದ ಜನ ಒಂದೇ ವೇದಿಕೆಯಲ್ಲಿ ನಿಲ್ಲಲು ಆಗುತ್ತಿಲ್ಲ. ಇದಕ್ಕೆ ಕಾರಣವೇನೆಂದು ತಿಳಿಯುತ್ತಿಲ್ಲ. ಇದರಿಂದ ಶೋಷಣೆಯ ವಿರುದ್ಧ ಹೋರಾಟಕ್ಕೆ ಹಿನ್ನಡೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
 
ಸಮಾಜದಲ್ಲಿ ಅಸಮಾನತೆಯ ಕಂದಕಗಳು ಹೆಚ್ಚಿವೆ. ಅವುಗಳನ್ನು ಸಮಾನತೆಯ ಅಸ್ತ್ರದಿಂದ ಮುಚ್ಚುವ ಸಂದರ್ಭದಲ್ಲಿ ಪ್ರೊ.ಎಚ್‌.ಎಲ್‌. ಕೇಶವಮೂರ್ತಿ ಅವರ ನಿಧನವಾಗಿದ್ದು ತೀವ್ರ ಹಿನ್ನಡೆಯಾಗಿದೆ ಎಂದರು.
 
ಸಿನಿಮಾ ತಾರೆಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಸಭೆಗೆ ಬಂದರೆ ಜನರು ಕಕ್ಕಿರಿದು ಸಭಾಂಗಣ ತುಂಬಿ ಹೋಗುತ್ತದೆ. ಪ್ರೊ.ಎಚ್.ಎಲ್‌.ಕೆ. ಅವರು ಸಮಾಜದ ಶಕ್ತಿ ಆಗಿದ್ದರು. ಆದರೆ, ಅವರ ವೈಚಾರಿಕ ಚಿಂತನೆಗಳನ್ನು ತಿಳಿಸಲು ಹಮ್ಮಿಕೊಂಡಿರುವ ಸಭೆಗೆ ಜನರು ಬಾರದಿರುವುದು ಬೇಸರ ತರಿಸಿದೆ ಎಂದರು. 
 
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು.  ರಂಗಕರ್ಮಿ ಎಚ್‌. ಜನಾರ್ದನ್‌, ಸಾಹಿತಿಗಳಾದ ಹುಲ್ಕೆರೆ ಮಹದೇವು, ಜಗದೀಶ್‌ ಕೊಪ್ಪ, ಅಂಕಣಕಾರ ಬಿ.ಚಂದ್ರೇಗೌಡ, ಮುಖಂಡರಾದ ಸುನಂದಾ ಜಯರಾಂ, ಶಂಭೂನಹಳ್ಳಿ ಸುರೇಶ್‌, ಡಾ.ವಾಸು, ಸಿ.ಕುಮಾರಿ, ಸೋಮಶೇಖರ್‌ ಕೆರಗೋಡು, ಎಚ್‌.ಸಿ. ಮಂಜುನಾಥ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.
***
ಜಾತಿ, ಧರ್ಮದ ಗೊಡವೆ ಮಧ್ಯೆ ಮನುಷ್ಯನಾಗುವುದೇ ದೊಡ್ಡ ಸಾಧನೆ. ಪ್ರೊ.ಎಚ್‌.ಎಲ್‌.ಕೆ. ಅವರು ಹೆಚ್ಚು ಮನುಷ್ಯತ್ವ ಉಳ್ಳವರಾಗಿದ್ದರು. ಜತೆಗೆ ನ್ಯಾಯಬದ್ಧ, ಸಂವೇದನಾಶೀಲ ವ್ಯಕ್ತಿಯೂ ಆಗಿದ್ದರು
ದೇವನೂರ ಮಹಾದೇವ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT