ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿ ಅಂಡ್‌ ಡಿ’ ಭೂಮಿ: ವಾರದಲ್ಲಿ ಆದೇಶ

ಕಂದಾಯ ಅಧಿಕಾರಿಗಳ ಸಭೆಯಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಭರವಸೆ
Last Updated 17 ಏಪ್ರಿಲ್ 2017, 7:04 IST
ಅಕ್ಷರ ಗಾತ್ರ
ಮಡಿಕೇರಿ: ‘ಸಿ ಅಂಡ್‌ ಡಿ’ ಜಮೀನಿಗೆ (ಕಂದಾಯ ಇಲಾಖೆಗೆ ಸೇರಿರುವ ಅರಣ್ಯ ಭೂಮಿ­) ಸಂಬಂಧಿಸಿದಂತೆ ವಾರದಲ್ಲಿ ಹೊಸ ಆದೇಶ ಹೊರಡಿಸಲಾಗುವುದು. ಅರಣ್ಯ ಬೆಳೆಸಿದ್ದರೆ ಮಾತ್ರ ಅರಣ್ಯ ಇಲಾಖೆಗೆ ಬಿಟ್ಟು ಉಳಿದ ಎಲ್ಲ ಜಮೀನು ವಾಪಸ್‌ ಪಡೆದು ಭೂರಹಿತರಿಗೆ ಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಆದೇಶ ಹೊರಡಿಸಿದ ಬಳಿಕ ಅಧಿಕಾರಿಗಳು ಪಾಲಿಸಬೇಕು. ನನ್ನ ಕ್ಷೇತ್ರವಾದ ಸಾಗರದಲ್ಲಿ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಂದೇ ಒಂದು ಅರ್ಜಿಯೂ ಬಾಕಿ ಉಳಿದಿಲ್ಲ’ ಎಂದು ಹೇಳಿದರು.
 
ಕಂಪೆನಿ ಒತ್ತುವರಿ ಪಟ್ಟಿ:  ಕೊಡಗು ಜಿಲ್ಲೆಯಲ್ಲಿ ಸಾವಿರಾರರು ಎಕರೆ ಕಾಫಿ ತೋಟ ಹೊಂದಿರುವ ಪ್ರತಿಷ್ಠಿತ ಕಂಪೆನಿಗಳು ಒತ್ತುವರಿ ಮಾಡಿಕೊಂಡು ಕಾಫಿ ಬೆಳೆದಿರುವ ದೂರುಗಳು ಬಂದಿವೆ. ಅಧಿಕಾರಿಗಳು ಧೈರ್ಯದಿಂದ ಅಂತಹ ಕಂಪೆನಿಗಳ ಪಟ್ಟಿ ತಯಾರಿಸಬೇಕು. ಒತ್ತುವರಿ ತೆರವುಗೊಳಿಸಿ ಭೂರಹಿತರಿಗೆ ಹಂಚಿಕೆ ಮಾಡೋಣ ಎಂದರು.
 
ವಸತಿ ರಹಿತ ಪಟ್ಟಿಗೆ ಸೂಚನೆ: ಪಿಡಿಒ ಹಾಗೂ ಗ್ರಾಮ ಲೆಕ್ಕಿಗರು ವಾರದೊಳಗೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿವಾರು ವಸತಿ ರಹಿತರ ಪಟ್ಟಿ ತಯಾರಿಸಬೇಕು. ತಿಂಗಳೊಳಗೆ ಮತ್ತೊಮ್ಮೆ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಸೂಚಿಸಿದ ಕೆಲಸಗಳು ಮುಕ್ತಾಯ ವಾಗಿರಬೇಕು ಎಂದರು.
 
ಅರ್ಜಿ ನಮೂನೆ 50, 53 ಗಳನ್ನು ಇತ್ಯರ್ಥಗೊಳಿಸಬೇಕು. ಜೂನ್‌ ಒಳಗೆ ಎಲ್ಲರಿಗೂ ಹಕ್ಕುಪತ್ರಗಳನ್ನು ವಿತರಣೆ ಮಾಡಬೇಕು. ಸಾಗುವಳಿ ಚೀಟಿ ದೊರತ ಕೂಡಲೇ ಆರ್‌ಟಿಸಿ ವಿತರಣೆಗೂ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
 
ಗೋಮಾಳ ಎಂಬ ಸಬೂಬು ಹೇಳಿ ಮನೆಯ ಹಕ್ಕುಪತ್ರ ನೀಡುವುದನ್ನು ವಿಳಂಬ ಮಾಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಗೋಮಾಳದಲ್ಲಿ ಮನೆ ನಿರ್ಮಿಸಿದ್ದರೆ ಹಕ್ಕುಪತ್ರ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
 
ಗುತ್ತಿಗೆಗೆ ನೀಡಿದ್ದರೆ ನೋಟಿಸ್‌: ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನರಿಗೆ ಹಂಚಿಕೆ ಮಾಡಿರುವ ಭೂಮಿಯನ್ನು ಭೂಮಾಲೀಕರಿಗೆ ಮಾರಾಟ ಮಾಡಿರುವ ಬಗ್ಗೆ ದೂರುಗಳು ಬಂದಿವೆ ಎಂದು ಕಾಗೋಡು ವಿಷಯ ಪ್ರಸ್ತಾಪಿಸಿದರು. 
 
ಇದಕ್ಕೆ ಎಸಿ ನಂಜುಂಡೇಗೌಡ ಪ್ರತಿಕ್ರಿಯಿಸಿ, ಜಮೀನು ಮಾರಾಟ ಮಾಡಿಲ್ಲ; ಗುತ್ತಿಗೆಗೆ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಅಂತಹವರಿಗೆ ನೋಟಿಸ್‌ ನೀಡಿ; ಸರ್ಕಾರವೇ ಜಮೀನು ನೀಡಿದ್ದರೂ ಕಾಲು ಕೆಸರಾಗಲಿದೆ ಎಂದು ಗುತ್ತಿಗೆ ನೀಡಿದ್ದಾರೆ ಎಂದು ಕಿಡಿ ಕಾರಿದರು. 
 
ಸರ್ಕಾರ ಜಮೀನು ನೀಡುವ ಜತೆಗೆ ಎತ್ತು, ಬಿತ್ತನೆ ಬೀಜ ಕೊಡಲೂ ಸಿದ್ಧವಿದೆ. ಅಗತ್ಯಬಿದ್ದರೆ ಕೃಷಿಯ ತರಬೇತಿ ಕೊಡಲು ತಯಾರಿದೆ ಎಂದು ಹೇಳಿದರು.
ಪಾಲೇಮಾಡು ವಿಚಾರ– ಸಚಿವರ ಉಲ್ಟಾ: ಪಾಲೇಮಾಡು ರುದ್ರಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ರುದ್ರಭೂಮಿಗೆ ನಿಗದಿ ಪಡಿಸಿದ ಎರಡು ಎಕರೆ ಭೂಮಿ ನೀಡುವಂತೆ ಸಚಿವರು ಸೂಚನೆ ನೀಡಿದ್ದರು. 
 
ಬಳಿಕ ಜಿಲ್ಲಾಧಿಕಾರಿ ಕಚೇರಿಯೊಳಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಜಿಲ್ಲೆಯ ಚುನಾಯಿತ ಪ್ರತಿನಿಧಿ ಯೊಬ್ಬರು, ಸಚಿವರಿಗೆ ಪಾಲೇಮಾಡು ಜಮೀನು ವಿವಾದ ಕೋರ್ಟ್‌ ಮೆಟ್ಟಿಲೇರಿದ್ದು ಕ್ರಿಕೆಟ್‌ ಸ್ಟೇಡಿಯಂಗೆ ಜಮೀನು ಆಗಿದೆ ಎಂದು ತಿಳಿಸಿದರು.
 
ಆಗ ಕಾಗೋಡು ತಿಮ್ಮಪ್ಪ ಸಹ ‘ಕೋರ್ಟ್‌ ಆದೇಶವಿದ್ದರೆ ನಾವೂ ಏನು ಮಾಡಲು ಆಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಸ್ಟೇಡಿಯಂಗೆ ಸಂಬಂಧಿಸಿದವರೂ ಸಚಿವರೊಂದಿಗೆ ಮಾತುಕತೆ ನಡೆಸಿದರು.
 
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಂದಾಯ ಭೂಮಿಗೆ ಸಂಬಂಧಿ ಸಿದಂತೆ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. 
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿರಾಜಪೇಟೆ ತಾಲ್ಲೂಕಿಗೂ ಉಪ ಸಮಿತಿ ರಚಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. 
 
ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್ ಹಾಜರಿ ದ್ದರು. ಇದೇ ಸಂದರ್ಭದಲ್ಲಿ ಕಂದಾಯ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
***
‘ದಿಡ್ಡಳ್ಳಿ: ಅರಣ್ಯ ಜಮೀನಾಗಿದ್ದರೆ ವಾಪಸು ಪಡೆಯುವುದು ಕಷ್ಟ’
ಮಡಿಕೇರಿ: ‘ದಿಡ್ಡಳ್ಳಿಯು ಮೀಸಲು ಅರಣ್ಯವೇ ಆಗಿದ್ದರೆ ಕೇಂದ್ರದಿಂದ ವಾಪಸ್‌ ಪಡೆದು ಅದೇ ಸ್ಥಳ ನಿರಾಶ್ರಿತರಿಗೆ ಹಂಚಿಕೆ ಮಾಡುವುದು ಕಷ್ಟ’ ಎಂದು ಸಚಿವ ಕಾಗೋಡು ತಿಮ್ಮಪ್ಪ ಸ್ಪಷ್ಟನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ದಿಡ್ಡಳ್ಳಿ ಸಮಸ್ಯೆಯನ್ನು ಬಗೆಹರಿಸುವ ತೀರ್ಮಾನ ಮಾಡಿದ್ದೇವೆ. ಬುಧವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆಯನ್ನೂ ಕರೆಯಲಾಗಿದೆ’ ಎಂದರು.

ದಿಡ್ಡಳ್ಳಿ ವ್ಯಾಪ್ತಿಯ ಭೂಮಿಯು ಅರಣ್ಯ ಇಲಾಖೆಗೆ ಸೇರಿರುವ ಜಮೀನೋ, ಪೈಸಾರಿಯೋ ಎಂಬುದು ಮೊದಲು ತೀರ್ಮಾನ ಆಗಬೇಕು’ ಎಂದು ಹೇಳಿದರು.
‘ನಿವೇಶನ ರಹಿತರ ಪಟ್ಟಿ ತಯಾರಿಸಲು ಸೂಚಿಸಿದ್ದೇನೆ. ಖಾಲಿ ಉಳಿದಿರುವ ಕಂದಾಯ ಜಮೀನು ಪಟ್ಟಿ ತಯಾರಿಸಲು ಎಸಿಗೆ ಸೂಚಿಸಲಾಗಿದೆ. ಬಳಿಕ ಡಿಸಿಯೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿದರೆ ಜಿಲ್ಲೆಯ ವಸತಿರಹಿತರಿಗೆ ವಸತಿ, ಭೂಮಿ ನೀಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.
***
ನಾನು ಹೋರಾಟದಿಂದ ಗೆದ್ದು ಬಂದವನು. ದಿಢೀರ್‌ ಟೋಪಿ ಹಾಕಿಕೊಂಡು ಬಂದು ಇಲ್ಲಿ ಕುಳಿತಿಲ್ಲ. ದಿಡ್ಡಳ್ಳಿ ಮಾಧ್ಯಮಕ್ಕೆ ಒಳ್ಳೆಯ ಆಹಾರ. ವಿವಾದ ಶೀಘ್ರವೇ ಬಗೆಹರಿಸುತ್ತೇವೆ
ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT