ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಪಾಸ್‌ ನಿರ್ಮಾಣಕ್ಕೆ ಎನ್‌ಎಚ್‌ಎಐ ನಕಾರ

Last Updated 17 ಏಪ್ರಿಲ್ 2017, 7:07 IST
ಅಕ್ಷರ ಗಾತ್ರ

ಕಾರವಾರ: ಬೈಪಾಸ್‌ ನಿರ್ಮಾಣವನ್ನು ಕೈಬಿಟ್ಟಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ತಾಲ್ಲೂಕಿನಲ್ಲಿ ಪ್ರಸ್ತುತ ಹಾದು ಹೋಗಿ­ರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿಯೇ ಚತುಷ್ಪಥ ಮಾಡಲು ತೀರ್ಮಾನಿಸಿದೆ.

‘ಬೈಪಾಸ್‌ಗೆ ಗೊತ್ತುಪಡಿಸಿರುವ ಭೂಮಿ­ಯು ಭಾಗಶಃ ಅರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿನ ಭೂ ಸ್ವಾಧೀನಕ್ಕೆ ಅರಣ್ಯ ಇಲಾಖೆ ಅನುಮತಿ ಅಗತ್ಯವಾಗಿದ್ದು, ಈ ಪ್ರಕ್ರಿಯೆ ತುಂಬಾ ಸಮಯ ಹಿಡಿಯುತ್ತದೆ. ಅಲ್ಲದೇ ಈ ಭಾಗದ ಕೆಲ ಖಾಸಗಿ ಭೂಮಿ ಮಾಲೀ­ಕರು ಬೈಪಾಸ್‌ಗೆ ವಿರೋಧ ವ್ಯಕ್ತಪಡಿ­ಸಿದ್ದು, ಸರ್ವೇ ಕಾರ್ಯಕ್ಕೂ ಅಡ್ಡಗಾಲು ಹಾಕಿದ್ದಾರೆ’ ಎಂದು ಎನ್‌ಎಚ್‌ಎಐಯು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವ­ರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

‘ತಾಲ್ಲೂಕಿನ ಅಮದಳ್ಳಿ, ತೋಡೂ­ರು, ಚೆಂಡಿಯಾ ಹಾಗೂ ಅರಗಾದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲೇ ಚತು­ಷ್ಪಥ ಮಾಡಲು ಜಿಲ್ಲಾಡಳಿತ ಸಹ­ಕರಿಸಬೇಕು. ಇದರಿಂದ ಈ ಯೋಜನೆ­ಯನ್ನು ಶೀಘ್ರ ಮುಗಿಸಲು ಸಾಧ್ಯವಾಗ­ಲಿದೆ’ ಎಂದು ಪ್ರಾಧಿಕಾರ ಕೋರಿದೆ.

ಚತುಷ್ಪಥಕ್ಕೆ ತಾಲ್ಲೂಕಿನ ಅಮದಳ್ಳಿ, ತೋಡೂರು, ಚೆಂಡಿಯಾ ಹಾಗೂ ಅರಗಾ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಸರ್ವೇ ಕಾರ್ಯಕ್ಕೂ ಸ್ಥಳೀಯರು ಅಡ್ಡಿ ಪಡಿ­ಸಿದ್ದರು ಹಾಗೂ ಶಾಸಕ ಸತೀಶ್ ಸೈಲ್‌ ಮುಂದಾಳತ್ವದಲ್ಲಿ ಗ್ರಾಮಸ್ಥರು ಬೃಹತ್‌ ಪ್ರತಿಭಟನೆ ಹಾಗೂ ಅಮದಳ್ಳಿಯಿಂದ ಕಾರವಾರದವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು.

‘ಚತುಷ್ಪಥ ಕಾಮಗಾರಿಯಿಂದ ಅಮ­ದಳ್ಳಿ, ತೋಡೂರು, ಚೆಂಡಿಯಾ ಹಾಗೂ ಅರಗಾ ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ಭೂಮಿ ಹಾಗೂ ಮನೆಯನ್ನು ಕಳೆದುಕೊಳ್ಳಲಿವೆ. ಅಲ್ಲದೇ ಇದರಲ್ಲಿ ಬಹುಪಾಲು ಮಂದಿ ಸೀಬರ್ಡ್‌ ಯೋಜನೆಯಲ್ಲಿ ನಿರಾಶ್ರಿತರಾ­ದ­ವರು. ಈ ಯೋಜನೆಯಿಂದ ಅವರ ಬದುಕು ಮತ್ತೆ ಅತಂತ್ರವಾಗುತ್ತದೆ.

ಹೀಗಾಗಿ ಅಮದಳ್ಳಿಯಿಂದ ಅರಗಾದ ಐಎನ್‌ಎಸ್‌ ಪತಂಜಲಿ ಆಸ್ಪತ್ರೆವರೆಗೆ ಬೈಪಾಸ್ ಮಾಡಬೇಕು’ ಎಂದು ಸ್ಥಳೀ­ಯರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಿದ್ದರು.  ಹೋರಾ­ಟಗಾರರ ಬೆನ್ನಿಗಿದ್ದ ಶಾಸಕ ಸತೀಶ್‌ ಸೈಲ್‌ ಅವರು ಹೆದ್ದಾರಿ ಪ್ರಾಧಿ­ಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಬೈಪಾಸ್‌ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT