ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಗೇರಿ ಕೆರೆ ಕಾಮಗಾರಿ ಅರೆಬರೆ

Last Updated 17 ಏಪ್ರಿಲ್ 2017, 7:13 IST
ಅಕ್ಷರ ಗಾತ್ರ

ಶಿರಸಿ: ನಗರದ ಬನವಾಸಿ ರಸ್ತೆಯ ನೂರಾರು ಮನೆಗಳಿಗೆ ಜಲಪಾತ್ರೆ­ಯಾ­ಗಿರುವ ಗೊಲಗೇರಿಯ ಕೆರೆ ಹೂಳೆತ್ತುವ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಅರ್ಧ ಕೆಲಸ ಮುಗಿದು ತಿಂಗಳು ಕಳೆದರೂ ಕೆಲಸ ಪುನರಾರಂಭ­ವಾಗುವ ಲಕ್ಷಣಗಳು ಕಾಣುತ್ತಿಲ್ಲ.ನಗರಸಭೆಯ 26ನೇ ವಾರ್ಡಿನಲ್ಲಿ ಸರ್ವೆಸಂಖ್ಯೆ 186ರಲ್ಲಿರುವ ಗೋಲ­ಗೇರಿ ಕೆರೆ ಸಮೃದ್ಧ ಜಲ ಇರುವ ತಾಣ. ಎರಡು ಎಕರೆ ಪ್ರದೇಶದಲ್ಲಿರುವ ಈ ಕೆರೆಯ ದಂಡೆಯ ಮೇಲೆ ರಸ್ತೆ ಹಾದು ಹೋಗುತ್ತದೆ.

ಸುತ್ತಲಿನ ಮನೆಗಳಿಗೆ ಜಲಮೂಲವಾಗಿರುವ ಕೆರೆಯ ಹೂಳೆ­ತ್ತಬೇಕು ಎಂಬ ಬೇಡಿಕೆ ಬಹುವರ್ಷ­ಗಳಿಂದ ಇತ್ತು. ಸ್ಥಳೀಯ ಉತ್ಸಾಹಿಗಳು ಸೇರಿ ರಚಿಸಿಕೊಂಡಿರುವ ವಿನೂತನ ಸೇವಾ ಟ್ರಸ್ಟ್‌ನ ವಿಶೇಷ ಪ್ರಯತ್ನದಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ₹ 4 ಲಕ್ಷ ಅನುದಾನ ಕೆರೆ ಹೂಳೆತ್ತುವ ಕಾಮ­ಗಾರಿಗೆ ಮಂಜೂರು ಆಗಿತ್ತು. ಈ ಮೊತ್ತದಲ್ಲಿ ಕೆರೆಯ ಅರ್ಧಭಾಗದಲ್ಲಿ ಹೂಳು ತೆಗೆಯಲಾಗಿದೆ. ಈ ಕಾಮ­ಗಾರಿ ಮುಗಿದು ಮೂರು ತಿಂಗಳು ಕಳೆದರೂ ಇನ್ನುಳಿದ ಕೆಲಸ ಆರಂಭ­ವಾಗಿಲ್ಲ ಎಂಬುದು ಸ್ಥಳೀಯರ ಆಕ್ಷೇಪ.

ಕೆರೆಯಲ್ಲಿ ಇನ್ನೂ ನಾಲ್ಕಾರು ಅಡಿ ಹೂಳೆತ್ತಿ ಆಳಗೊಳಿಸಬೇಕು. ಈಗಾ­ಗಲೇ ತೆಗೆದಿರುವ ಮಣ್ಣನ್ನು ಪಕ್ಕಕ್ಕೆ ಹಾಕಿರುವುದರಿಂದ ಪಿಚ್ಚಿಂಗ್ಮಾಡ­ದಿದ್ದರೆ ಮಳೆಗಾಲದಲ್ಲಿ ತೆಗೆದಿರುವ ಮಣ್ಣು ಮತ್ತೆ ಕೆರೆಯೊಳಗೆ ಬಂದು ಸೇರುತ್ತದೆ ಎನ್ನುತ್ತಾರೆ ಸ್ಥಳೀಯರು.ಗೋಲಗೇರಿ ಕೆರೆಯ ಆರಂಭದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಅದಕ್ಕಿಂತ ಮುಂದಿನ ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಗೃಹದವರೆಗೆ ತೆರಳುವ ಮಾರ್ಗ ಮಣ್ಣಿನ ರಸ್ತೆಯಾಗಿದೆ. 200 ಮೀಟರ್ ದೂರದ ಈ ರಸ್ತೆ ಅಭಿವೃದ್ಧಿಪ­ಡಿಸಬೇಕು.

ಕೆರೆಯ ಮಣ್ಣುಕೆರೆಗೆ ಬಿದ್ದು, ಈಗಾಗಲೇ ವೆಚ್ಚ ಮಾಡಿರುವ ಹಣ ಮಣ್ಣಾಗಿ ಹೋಗುವ ಮೊದಲು ಕೆರೆ ಕಾಮಗಾರಿ ಪೂರ್ತಿಗೊಳಿಸಬೇಕು ಎಂದು ಹೆಸರು ಹೇಳಲಿಚ್ಛಿಸಿದ ಸ್ಥಳೀಯರೊಬ್ಬರು ಹೇಳಿದರು.‘ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ಗೋಲಗೇರಿ ಕೆರೆ ಅಭಿವೃದ್ಧಿಗೆ ₹ 10 ಲಕ್ಷ ನಿಗದಿಪ­ಡಿಸಲಾಗಿದೆ. ನಗರೋತ್ಥಾನ ಕಾಮ­ಗಾರಿಯ ಕ್ರಿಯಾಯೋಜನೆ­ಯನ್ನು ಜಿಲ್ಲಾಧಿ­ಕಾರಿ ಕಚೇರಿಗೆ ಕಳುಹಿಸ­ಲಾಗಿದೆ. ಮಂಜೂರು ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT