ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲ್ಲಿಗಳಲ್ಲಿ ಕಲುಷಿತ ನೀರು

ನಗರಸಭೆ ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 17 ಏಪ್ರಿಲ್ 2017, 8:28 IST
ಅಕ್ಷರ ಗಾತ್ರ
ಹಾಸನ: ಮಳೆ ಇಲ್ಲದೆ ಕೊಳವೆ ಬಾವಿಗಳ ಅಂತರ್ಜಲ ಬತ್ತಿ ಹೋಗಿ ಜೀವಜಲಕ್ಕೆ ಪರದಾಡುವಂತಾಗಿದೆ. ಜಲಾಶಯದ ಡೆಡ್‌ ಸ್ಟೋರೇಜ್‌ ನೀರನ್ನು ಶುದ್ಧೀಕರಿಸಿ ಬಳಸಲಾಗುತ್ತಿದೆ. ಆದರೂ, ನಗರಸಭೆ ನಲ್ಲಿಗಳ ಮೂಲಕ ಪೂರೈಸುತ್ತಿರುವ ನೀರು ಕಲುಷಿತಗೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿವೆ.
 
ಕೆಲ ದಿನಗಳ ಹಿಂದೆ ನಗರದ 27ನೇ ವಾರ್ಡ್ ಹಾಗೂ ಸುತ್ತಮುತ್ತಲ ಪ್ರದೇಶದ ಮನೆಗಳು ಹಾಗೂ ಸಾರ್ವಜನಿಕ ನಲ್ಲಿಗಳಲ್ಲಿ ಕಲುಷಿತ ನೀರು ಸರಬರಾಜು ಮಾಡಲಾಗಿದೆ. ಸಾರ್ವಜನಿ ಕರು ಕಲುಷಿತ ನೀರು ತುಂಬಿದ್ದ ಬಕೆಟ್‌ಗಳನ್ನು ರಸ್ತೆ ಮಧ್ಯೆ ಇಟ್ಟು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
 
ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ಬತ್ತಿ ಹೋಗಿರುವುದರಿಂದ ಸದ್ಯ ನಗರಕ್ಕೆ 8–10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಎಂಟು ದಿನಗಳ ನಂತರ ಪೂರೈಕೆ ಮಾಡಿದ ನೀರು ಸಹ ಸಂಪೂರ್ಣ ಕಲುಷಿತಗೊಂಡಿದೆ. ಅದೇ ನೀರನ್ನು ಜನರು ಕುಡಿಯಬೇಕು ಮತ್ತು ಗೃಹೋಪ ಯೋಗಿ ಕೆಲಸಕ್ಕೆ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
 
ನೀರು ಪೂರೈಕೆ ಮಾಡುವ ಟ್ಯಾಂಕ್‌ ಸ್ವಚ್ಛಗೊಳಿಸಿ ಹಲವು ವರ್ಷಗಳೇ ಕಳೆದಿದೆ. ನಲ್ಲಿಗಳಲ್ಲಿ ಬಂದಿರುವ ನೀರು ಮಲೀನಗೊಂಡಿದ್ದು, ಬಟ್ಟೆ ಮತ್ತು ಪಾತ್ರೆ ತೊಳೆಯಲು ಯೋಗ್ಯವಾಗಿರಲಿಲ್ಲ. ಬರದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇಂತಹ ಸಂದರ್ಭದಲ್ಲಿ ಕಲುಷಿತ ನೀರು ಸರಬರಾಜು ಮಾಡಿದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಮಾತು ಕೇಳಿ ಬಂದಿದೆ.
 
‘ಮನೆ ಹಾಗೂ ಸಾರ್ವಜನಿಕ ನಲ್ಲಿಗಳಲ್ಲಿ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿ ಹಲವು ವರ್ಷಗಳಾಗಿವೆ. ಮಲೀನ ನೀರನ್ನು ಕುಡಿದರೆ ಆಸ್ಪತ್ರೆ ಸೇರುವುದು ಖಚಿತ’ ಎಂದು ನಿವಾಸಿ ಪದ್ಮಾ ಅಸಮಾಧಾನ ವ್ಯಕ್ತಪಡಿಸಿದರು.
 
‘ನಗರಸಭೆ ಸದಸ್ಯರಿಗೆ ಕಲುಇಷತ ನೀರಿನ ವಿಷಯ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಯಾವಾಗ ಕೇಳಿದರು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಈ ನೀರು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಟ್ಯಾಂಕ್‌ ಸ್ವಚ್ಛಗೊಳಿಸುವಂತೆ ಎಷ್ಟು ಕೇಳಿದರೂ ಮಾಡುತ್ತಿಲ್ಲ. ನೀರು ಬಳಸಲು ಯೋಗ್ಯವಲ್ಲ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
 
‘ಜಲಾಶಯದ ಡೆಡ್‌ ಸ್ಟೋರೇಜ್‌ ನೀರನ್ನು ಶುದ್ಧೀಕರಿಸಿ ಪೂರೈಸಲಾಗುತ್ತಿದೆ. ನೀರು ಕುಡಿಯಲು ಯೋಗ್ಯ ಇದೆಯೇ ಎಂಬುದನ್ನು ಹಿಮ್ಸ್‌ ಪ್ರಯೋಗಾಲಯ ಮತ್ತು ಇತರೆ ಪ್ರಯೋಗಾಲಯದಲ್ಲಿ ಪರೀಕ್ಷೆ  ಮಾಡಿಸಲಾಗಿದೆ.
 
ನೀರು ಕುಡಿಯಲು ಯೋಗ್ಯವಿದೆ ಎಂದು ಪ್ರಮಾಣ ಪತ್ರ ನೀಡಿದ ಬಳಿಕ ಸರಬರಾಜು ಮಾಡಲಾಗುತ್ತಿದೆ. ಕಲುಷಿತ ನೀರು ಪೂರೈಕೆ ಆಗಿರುವ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಗುವುದು. ಜನರಿಗೆ ಶುದ್ಧ ನೀರು ಪೂರೈಸಲು ಅಗತ್ಯ ಕ್ರಮ ಜರುಗಿಸಲು ಸೂಚಿಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಡಾ.ಅನಿಲ್‌ ಕುಮಾರ್‌ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT