ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರಿಗೂ ಹಾಹಾಕಾರ: ಅವಸಾನದತ್ತ ಕೃಷಿ!

Last Updated 17 ಏಪ್ರಿಲ್ 2017, 8:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ, ಕೆರೆಕಟ್ಟೆ, ಕೊಳವೆ ಬಾವಿ ನೀರು ಅವಲಂಬಿಸಿ ಬೆಳೆ ಬೆಳೆಯುತ್ತಿದ್ದ ಜಿಲ್ಲೆಯ ಬಯಲು ಸೀಮೆಯ ರೈತರು, ಈಗ ಬೆಳೆ ಉಳಿಸಿ ಕೊಳ್ಳಲು ಟ್ಯಾಂಕರ್‌ ನೀರು ನೆಚ್ಚಿಕೊ ಳ್ಳುವ ಭೀಕರ ಪರಿಸ್ಥಿತಿಗೆ ತಲುಪಿದ್ದಾರೆ!ತಾಲ್ಲೂಕಿನ ಬಯಲು ಸೀಮೆಯಲ್ಲಿ ಬೇಸಿಗೆ ಮತ್ತು ಬರಗಾಲದ ತೀವ್ರತೆಗೆ ಒಣಗಿ ಹೋಗುತ್ತಿರುವ ಬೆಳೆಗಳನ್ನು ಉಳಿಸಲು ನಗರ ಪ್ರದೇಶದಿಂದ ಟ್ಯಾಂಕರ್‌ಗಳಲ್ಲಿ ನೀರು ಕೊಂಡು ತರುತ್ತಿದ್ದಾರೆ. ಸಮೀಪದ ಲಕ್ಯಾ ಗ್ರಾಮ, ಲಕ್ಷ್ಮೀಪುರದಲ್ಲಿ ಬೆಳೆಗಳಿಗೆ ನೀರು ಪೂರೈಸಲು ಐದಾರು ಮಂದಿ ಟ್ಯಾಂಕರ್‌ಗಳನ್ನು ಇಟ್ಟುಕೊಂಡಿದ್ದಾರೆ. ಗ್ರಾಮಗಳಲ್ಲಿ ಯಾವುದೇ ಕೆರೆಕಟ್ಟೆಗಳಲ್ಲಿ ಹನಿ ನೀರಿಲ್ಲ.

ಕೊಳವೆ ಬಾವಿಗಳು ನೀರಿಲ್ಲದೆ ಬಣಗುಡುತ್ತಿವೆ. ಈ ಭಾಗದ ಗಂಗೆಹಳ್ಳ (ವೇದಾವತಿ ನದಿ) ಹರಿಯುವುದು ನಿಲ್ಲಿಸಿ ಎರಡು ಮೂರು ದಶಕಗಳೇ ಉರುಳಿವೆ. ಅಂತರ್ಜಲ ಬತ್ತಿ ನಿಷ್ಪ್ರಯೋಜಕವಾಗಿರುವ ಕೊಳವೆ ಬಾವಿಗಳಿಂದ ಮೋಟಾರ್‌ ಪಂಪ್‌ಸೆಟ್‌ ಹೊರಗೆಳೆದು ಹಾಕಿರುವ ದೃಶ್ಯಗಳು ರೈತರ ಹೊಲಗಳಲ್ಲಿ ಕಾಣುತ್ತಿವೆ. ಜನ, ಜಾನುವಾರು, ಬೆಳೆಗಳ ಜೀವ ಉಳಿಸಿಕೊಳ್ಳಲು ನಗರದ ಕಡೆಯಿಂದ ಬರುವ ನೀರಿನ ಟ್ಯಾಂಕರ್‌ಗಳನ್ನು ಎದುರು ನೋಡುವ ಪರಿಸ್ಥಿತಿಗೆ ಲಕ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳು ತಲುಪಿವೆ.

ನಗರದ ಕೋಟೆ ಬಡಾವಣೆಯಲ್ಲಿ ಖಾಸಗಿ ಕೊಳವೆ ಬಾವಿಗಳ ಮಾಲೀಕರು ಒಂದು ಟ್ಯಾಂಕರ್‌ ನೀರನ್ನು ₹100 ದರಕ್ಕೆ ಕೊಡುತ್ತಿದ್ದಾರೆ. ಹೊಲ, ತೋಟ ಗಳನ್ನು ಟ್ಯಾಂಕರ್‌ ನೀರು ತಲುಪು ವಷ್ಟರಲ್ಲಿ ಸಾಗಣೆ ವೆಚ್ಚ, ಬಾಡಿಗೆ ಎಲ್ಲ ಸೇರಿ ಒಂದು ಟ್ಯಾಂಕರ್‌ ನೀರಿಗೆ ₹1200 ರಿಂದ ₹1300 ಬೆಲೆಯನ್ನು ರೈತರು ತೆರಬೇಕಾಗಿದೆ. ಮಳೆ ಬರುವವರೆ ಗಾದರೂ ಬೆಳೆಯ ಜೀವ ಉಳಿಸುವ ಜಿದ್ದಿಗೆ ಬಿದ್ದಿರುವ ರೈತರು ನಿತ್ಯ ಟ್ಯಾಂಕರ್‌ ನೀರಿಗಾಗಿ ಸಾವಿರಾರು ರೂಪಾಯಿ ವಿನಿಯೋಗಿಸುತ್ತಿದ್ದಾರೆ. ಒಣಗುತ್ತಿರುವ ಟೊಮೆಟೊ, ಕಾಳು ಮೆಣಸು, ತೆಂಗು, ಅಡಿಕೆ ಮರಗಳಿಗೆ ಟ್ಯಾಂಕರ್‌ ನೀರುಣಿಸಿ ಬದುಕಿಸುವ ಹರಸಾಹಸ ಮಾಡುತ್ತಿದ್ದಾರೆ.

‘ಪ್ರತಿ ದಿನ ಸರಾಸರಿ 6 ಟ್ರಿಪ್‌ ಟ್ಯಾಂಕರ್‌ ನೀರು ಸರಬರಾಜು ಮಾಡು ತ್ತಿದ್ದೇನೆ. ತೆಂಗು, ಅಡಿಕೆ, ಟೊಮೆಟೊ ಬೆಳೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಿ ಕೊಂಡಿರುವವರು ಕೊಳವೆ ಬಾವಿಗಳು ಬತ್ತಿದ ಪರಿಣಾಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ ನೀರು ಖರೀದಿಸುತ್ತಿದ್ದಾರೆ. ನಾನೂ ಕೂಡ 3 ಎಕರೆ ತೆಂಗಿನ ತೋಟ ವನ್ನು ಇದೇ ರೀತಿ ಟ್ಯಾಂಕರ್‌ ನೀರು ತಂದು ಗಿಡಗಳಿಗೆ ಹಾಕಿ ಉಳಿಸಿಕೊಳ್ಳು ತ್ತಿದ್ದೇನೆ’ ಎನ್ನುತ್ತಾರೆ ಟ್ಯಾಂಕರ್‌ ನೀರು ಸರಬರಾಜು ಮಾಡುವ ಶಶಿಧರ.

‘2 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಕೊಳವೆ ಬಾವಿ ಬತ್ತಿ ಹೋಗಿ ತುಂಬಾ ದಿನಗಳೇ ಕಳೆದಿವೆ. ಟೊಮೆಟೊ ಗಿಡಗಳು ಈಗ ಹೂವಿಗೆ ಬಂದಿವೆ. ಮಳೆ ಬರುವವರೆಗೆ ಗಿಡಗಳನ್ನು ಬದುಕಿಸಿದರೆ ಫಸಲು ಕೈಗೆ ಸಿಗಬಹುದೆಂಬ ಆಸೆಯಿಂದ ಪ್ರತಿ ದಿನ ಎರಡೂವರೆ ಸಾವಿರ ಹಣ ವೆಚ್ಚ ಮಾಡಿ ಟ್ಯಾಂಕರ್‌ನಲ್ಲಿ ನೀರು ತಂದು ಬೆಳೆಗೆ ಹಾಯಿಸುತ್ತಿದ್ದೇನೆ. ಇಂತಹ ಪರಿಸ್ಥಿತಿ ಬರಬಹುದೆಂದು ಕನಸಿನಲ್ಲೂ ಊಹಿಸಿರಲಿಲ್ಲ. ಕೃಷಿ ಮತ್ತು ಕೃಷಿಕರು ನಿಜವಾಗಿಯೂ ಈಗ ಅಳಿವಿನಂಚಿಗೆ ಬಂದಿದ್ದೇವೆ’ ಎನ್ನುತ್ತಾರೆ ಲಕ್ಯ ಗ್ರಾಮದ ರೈತ ರಮೇಶ್‌.

‘3 ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಒಣಗಿ ಹೋಗುತ್ತಿದೆ. ಒಂದು ಟ್ಯಾಂಕರ್‌ಗೆ ₹1300 ಹಣ ಕೊಟ್ಟು ಟ್ಯಾಂಕರ್‌ ನೀರು ಖರೀದಿಸಿ ಟೊಮೆಟೊ ಗಿಡಗಳಿಗೆ ಹಾಕುತ್ತಿದ್ದೇವೆ’ ಎಂದು ರೈತರಾದ ಸಬ್ಬೀರ್‌ ಖಾನ್‌ ಮತ್ತು ಸೈಯದ್‌ ಸಾದಿಕ್‌ ಅಳಲು ತೋಡಿಕೊಂಡರು.ಇದೇ ಗ್ರಾಮದ ಎಲ್‌.ವಿ. ಬಸವರಾಜು ಅವರು 3 ಎಕರೆ ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆದಿ ರುವ ಕಾಳುಮೆಣಸು ಉಳಿಸಿ ಕೊಳ್ಳಲು ನಿತ್ಯ 6 ಟ್ಯಾಂಕರ್‌ ನೀರು ಖರೀದಿಸಿ ಗಿಡಗಳಿಗೆ ಹಾಕುತ್ತಿದ್ದಾರೆ.

ಲಕ್ಯ, ಲಕ್ಷ್ಮೀಪುರ, ಕಣಿವೆ, ಕುರು ವಂಗಿ ಭಾಗದಲ್ಲಿ ರೈತರು ಹೆಚ್ಚು ತರಕಾರಿ ಬೆಳೆದು ನಗರಕ್ಕೆ ಪೂರೈಸುತ್ತಿದ್ದರು. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರು. ಈ ಬಾರಿ ಎದುರಾಗಿರವ ಭೀಕರ ಬರಗಾಲ ಬೆಳೆ ಮತ್ತು ಜಾನುವಾರು ಜೀವ ಉಳಿಸಿಕೊಳ್ಳಲು ದೊಡ್ಡ ಸವಾಲೊಡ್ಡಿದೆ.ಹಳ್ಳ ಒಣಗಿ ಕೃಷಿ ಭೂಮಿ ಬೆಂಗಾಡು: ಮುಳ್ಳಯ್ಯನಗಿರಿಯ ಶೋಲಾ ಅರಣ್ಯದಲ್ಲಿ ಹುಟ್ಟುವ ಗೌರಿಹಳ್ಳ ದಾಸರ ಹಳ್ಳಿ, ಕಣಿವೆ ಮಾರ್ಗದಲ್ಲಿ ಹರಿದು ಲಕ್ಯದಲ್ಲಿ ಗಂಗೆಹಳ್ಳವೆಂದು ಕರೆಸಿಕೊ ಳ್ಳುತ್ತಿತ್ತು. ಅಯ್ಯನಕೆರೆ, ಸಖರಾಯ ಪಟ್ಟಣ, ಕಡೂರು ಮೂಲಕ ಹರಿದು ಹೊಸದುರ್ಗದ ಮಾರಿಕಣಿವೆ ಸೇರಿ ನಂತರ ವೇದಾವತಿ ನದಿಯಾಗಿ ಹರಿಯುತ್ತಿತ್ತು.

ಈ ನದಿ ಜೀವಂತವಾಗಿ ದ್ದಾಗ ಲಕ್ಯ, ಸಖರಾಯಪಟ್ಟಣ ಕಡೂರು ಭಾಗದ ಯಗಟಿ, ಮಚ್ಚೇರಿ ಭಾಗದಲ್ಲಿ ತೋಟಗಳು ಸಮೃದ್ಧವಾಗಿದ್ದವು. ಕೃಷಿ ಬೆಳೆಗಳು ರೈತರ ಕೈಗೆ ದಕ್ಕುತ್ತಿದ್ದವು. ಗಿರಿಸಾಲಿನಲ್ಲಿ ಅರಣ್ಯ ತೆಳುವಾಗುತ್ತಿರುವುದು, ವರ್ಷ ವರ್ಷವೂ ಕಾಳ್ಗಿಚ್ಚಿಗೆ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಬಲಿಯಾಗಿ ನದಿ ಮೂಲ ಬತ್ತಿ ಹೋಗುತ್ತಿದೆ. ನದಿ ಹರಿಯುವುದು ನಿಂತ ಮೇಲೆಯೇ ಈ ಭಾಗದ ಕೃಷಿ ಭೂಮಿ ಇನ್ನಷ್ಟು ಬೆಂಗಾಡಾಗುತ್ತಿದೆ ಎನ್ನುತ್ತಾರೆ ಪರಿಸರ ಚಿಂತಕ ಡಿ.ವಿ.ಗಿರೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT