ಹನ್ನೆರಡನೇ ತರಗತಿ ಉತ್ತೀರ್ಣನಾದ 11ರ ಬಾಲಕ
ತೆಲಂಗಾಣದ ಎಸ್‌ಎಸ್‌ಸಿ ಮಂಡಳಿಯಿಂದ ವಿಶೇಷ ಅನುಮತಿ ಪಡೆದು 9ನೇ ವಯಸ್ಸಿನಲ್ಲಿಯೇ ಎಸ್‌ಎಸ್‌ಸಿ(10ನೇ ತರಗತಿ) ಪರೀಕ್ಷೆ ಬರೆದ ಅಗಸ್ತ್ಯ ತೇರ್ಗಡೆಯಾಗಿದ್ದ.


ಹೈದರಾಬಾದ್: ಹನ್ನೊಂದು ವರ್ಷದ ಬಾಲಕ ಅಗಸ್ತ್ಯ ಜೈಸ್ವಾಲ್ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.
ತೆಲಂಗಾಣದ ಎಸ್‌ಎಸ್‌ಸಿ ಮಂಡಳಿಯಿಂದ ವಿಶೇಷ ಅನುಮತಿ ಪಡೆದು 9ನೇ ವಯಸ್ಸಿನಲ್ಲಿಯೇ ಎಸ್‌ಎಸ್‌ಸಿ(10ನೇ ತರಗತಿ) ಪರೀಕ್ಷೆ ಬರೆದ ಅಗಸ್ತ್ಯ ತೇರ್ಗಡೆಯಾಗಿದ್ದ.
ಯೂಸುಫ್‌ಗುಡದ ಸೇಂಟ್ ಮೇರಿಸ್ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅಗಸ್ತ್ಯ ಇದೇ ಮಾರ್ಚ್‌ನಲ್ಲಿ 12ನೇ ತರಗತಿ ಪರೀಕ್ಷೆ ಬರೆದಿದ್ದರು. ಭಾನುವಾರ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.63 ಅಂಕ ಬಂದಿರುವುದಾಗಿ ಅಗಸ್ತ್ಯ ತಂದೆ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಭಾಷಾ ವಿಷಯಗಳೊಂದಿಗೆ ಪೌರನೀತಿ, ಅರ್ಥಶಾಸ್ತ್ರ ಹಾಗೂ ವಾಣಿಜ್ಯ ವಿಷಯಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲಾಗಿತ್ತು. ಅದ್ಭುತ ಸಾಮರ್ಥ್ಯದ ಬಾಲಕನೆಂದು ಹೆಸರಾಗಿರುವ ಅಗಸ್ತ್ಯ ಅಕ್ಕ ಕೂಡ ಇಂಥದ್ದೇ ಸಾಧನೆ ಮಾಡಿದ್ದಾರೆ.
ಕಿರಿಯ ಸಂಶೋಧಕಿ: ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ್ತಿ ನೈನಾ ಜೈಸ್ವಾಲ್, ಪಿಎಚ್‌ಡಿ ಮಾಡುತ್ತಿರುವ ಅತಿ ಕಿರಿಯ ಕ್ರೀಡಾಪಟು ಎನ್ನುವ ಖ್ಯಾತಿ ಹೊಂದಿದ್ದಾರೆ.
ತನ್ನ 15ನೇ ವಯಸ್ಸಿನಲ್ಲಿ ನೈನಾ ರಾಜ್ಯ ಶಾಸ್ತ್ರ ವಿಷಯದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.