ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ ಅಡಿಕೆ ತೋಟ: ಬಸವಳಿದ ರೈತ

Last Updated 17 ಏಪ್ರಿಲ್ 2017, 19:57 IST
ಅಕ್ಷರ ಗಾತ್ರ
ADVERTISEMENT

ರಾಜ್ಯದಲ್ಲಿ ಸತತ ಬರಗಾಲ ಬಂದಿದ್ದರಿಂದ ಅಡಿಕೆ ಮರಗಳು ಒಣಗುತ್ತಿವೆ. ಕೆಲವು ಕಡೆ ಎಕರೆಗಟ್ಟಲೆ ತೋಟವನ್ನು ರೈತರೇ ಕೈಯ್ಯಾರೆ ಕಿತ್ತು ಹಾಕುತ್ತಿದ್ದಾರೆ. ಇನ್ನು ಕೆಲವರು ಹೇಗಾದರೂ ಮಾಡಿ ಅಡಿಕೆ ತೋಟವನ್ನು ಉಳಿಸಿಕೊಳ್ಳಬೇಕು ಎಂದು ಹಟಕ್ಕೆ ಬಿದ್ದು ಕೊಳವೆ ಬಾವಿಗಳನ್ನು ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಕೊರೆಸುತ್ತಿದ್ದಾರೆ. ಆದರೆ ನೀರು ಸಿಗುತ್ತಿಲ್ಲ. ಟ್ಯಾಂಕರ್, ಟ್ರ್ಯಾ ಕ್ಟರ್ ಮೂಲಕ ನೀರು ತಂದು ಹಾಕುತ್ತಿದ್ದಾರೆ. ಭೂಮಿಯನ್ನು ಕೊರೆದು ಜಲಕ್ಕಾಗಿ ಹುಡುಕುತ್ತಿರುವ ರೈತರು ಮಳೆಗಾಗಿ ಆಕಾಶದತ್ತ ಮುಖಮಾಡಿದ್ದಾರೆ. ಆದರೆ ಎಲ್ಲಿಯೂ ನೀರು ಸಿಗು ತ್ತಿಲ್ಲ. ಕಣ್ಣೀರಿನ ಕೋಡಿಗೆ ಕೊರತೆ ಇಲ್ಲ.  ರಾಜ್ಯದ ಅಡಿಕೆ ತೋಟಗಳ ಈಗಿನ ಪರಿಸ್ಥಿತಿ ಬಗೆಗಿನ ನೋಟ ಇಲ್ಲಿದೆ.

ಇಲ್ಲಿ ನೀರಿಲ್ಲ; ಹಳದಿ ರೋಗ ತೊಲಗಿಲ್ಲ

ಚಿಕ್ಕಮಗಳೂರು: ‘ಚಿನ್ನದ ಬೆಲೆ’ ತಂದುಕೊಡುತ್ತಿದ್ದ ಅಡಿಕೆ ಬೆಳೆ ಮಲೆನಾಡಿನಲ್ಲಿ ಹಳದಿ ಎಲೆ ರೋಗಕ್ಕೆ ತುತ್ತಾಗಿ ಬೆಳೆಗಾರರ ಬದುಕು ಮೂರಾಬಟ್ಟೆ ಮಾಡಿದರೆ, ಬಯಲು ಸೀಮೆಯಲ್ಲಿ ಸತತ ಬರಗಾಲ ಅಡಿಕೆ ತೋಟಗಳನ್ನು ಬಲಿ ತೆಗೆದುಕೊಂಡಿದೆ.

ಚಿಕ್ಕಮಗಳೂರು ತಾಲ್ಲೂಕು, ಕಡೂರು ಹಾಗೂ ತರೀಕೆರೆ ಭಾಗದಲ್ಲಿ ಈ ಬಾರಿ ಬರಗಾಲಕ್ಕೆ ತತ್ತರಿಸಿರುವ ಅಡಿಕೆ ಬೆಳೆಗಾರರು, ಒಣಗಿ ಹೋಗಿರುವ ಅಡಿಕೆ ಮರಗಳನ್ನು ಬುಡ ಸಮೇತ ಕಡಿದು, ಬೇರೆ ಬೆಳೆ ಬೆಳೆಯಲು ಭೂಮಿ ಖುಲ್ಲಾಪಡಿಸುತ್ತಿದ್ದಾರೆ. ಫಸಲಿಗೆ ಬಂದಿದ್ದ ಅಡಿಕೆ ಬೆಳೆ ನಾಶವಾದ ಪರಿಣಾಮ ಲಕ್ಷಾಂತರ ರೂಪಾಯಿ ಸಾಲ ಬೆಳೆಗಾರರ ಹೆಗಲೇರಿದೆ. ತೋಟ ನಿರ್ವಹಣೆಗೆ ಮತ್ತು ಕೊಳವೆ ಬಾವಿ ಕೊರೆಸಲು ಮಾಡಿರುವ ಸಾಲ ತೀರಿಸಲಾಗದೆ ಅಡಿಕೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

[related]

ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ, ಕಳಸಾಪುರ, ಲಕ್ಯ ಭಾಗದಲ್ಲಿ ಎಲ್ಲಿ ನೋಡಿದರಲ್ಲಿ ಒಣಗಿರುವ ಅಡಿಕೆ ಬೋಳು ಮರಗಳು, ಬುಡಕ್ಕೆ ಕಡಿದು ಧರೆಗುರುಳಿಸಿರುವ ಅಡಿಕೆ ಮರಗಳ ‘ಕಳೇಬರಹ’ದ ರಾಶಿ ಕಾಣಸಿಗುತ್ತವೆ. ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿಯ ಸಾಮಗ್ರಿಗಳನ್ನು ಬಿಚ್ಚಿ ಬದುವಿನಲ್ಲಿ ರಾಶಿ ಹಾಕಲಾಗಿದೆ. ಕೋಳಿ ಫಾರಂ, ರೇಷ್ಮೆ ಫಾರಂ, ದನ, ಕುರಿ ಕೊಟ್ಟಿಗೆ ಕಟ್ಟುವವರು, ಅಡಿಕೆ ದಬ್ಬೆ ಮಾರಾಟ ಮಾಡುವವರು ಒಣಗಿದ ಅಡಿಕೆ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಅಡಿಕೆ ತೋಟಗಳು ಹಳದಿ ಎಲೆ ರೋಗಕ್ಕೆ ತುತ್ತಾಗಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡರು. ಕೆಲ ರೈತರು ಊರು ತೊರೆದು ಬೆಂಗಳೂರು ಸೇರಿದರು. ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕೊಳವೆ ಬಾವಿ, ಹನಿ ನೀರಾವರಿ ಸೌಲಭ್ಯದಿಂದ ಹಸಿರಾಗಿಟ್ಟುಕೊಂಡಿದ್ದ ಅಡಿಕೆ ತೋಟಗಳು ಈಗ ಸತತ ಬರಗಾಲಕ್ಕೆ ತುತ್ತಾಗಿ ಒಣಗಿವೆ. ಕೊಳವೆ ಬಾವಿಗಳು ಬತ್ತಿದ ಪರಿಣಾಮ ಈ ಬಾರಿ ಸಾವಿರಾರು ಎಕರೆಯಲ್ಲಿ ಅಡಿಕೆ ಮರಗಳನ್ನು ರೈತರು ಕಡಿದು ಹಾಕುತ್ತಿದ್ದಾರೆ.
‘ದಶಕದ ಹಿಂದೆ ಅಡಿಕೆ ಗೊಂಚಲಿನಿಂದ ತೂಗಿತೊನೆಯುತ್ತಿದ್ದ ಅಡಿಕೆ ಮರಗಳು ಕಾಣಿಸುತ್ತಿದ್ದವು. ಈಗ ಗ್ರಾಮದಲ್ಲಿ ಒಣಗಿ ನಿಂತಿರುವ ಅಡಿಕೆ ತೋಟಗಳು, ತೋಟದಲ್ಲಿ ಅಡ್ಡಬಿದ್ದಿರುವ ಮರಗಳು ನಮ್ಮ ಪರಿಸ್ಥಿತಿ ಸಾರಿ ಹೇಳುತ್ತಿವೆ’ ಎನ್ನುವುದು ಕಳಸಾಪುರದ ಅಡಿಕೆ ಬೆಳೆಗಾರ ಪ್ರಕಾಶ್‌ ಅವರ ನೋವಿನ ನುಡಿ.

ಮೂರು ಎಕರೆ ಅಡಿಕೆ ತೋಟಕ್ಕೆ ಇದುವರೆಗೂ ₹8 ಲಕ್ಷ ವೆಚ್ಚವಾಗಿದೆ. ಫಸಲು ಪಡೆಯುವ ಮೊದಲೇ 1050 ಅಡಿಕೆ ಗಿಡಗಳು ಸಂಪೂರ್ಣ ಒಣಗಿವೆ. ಮರಗಳನ್ನು ಕಡಿದು ಹಾಕಿ, ಚೇಣಿ ಅಥವಾ ರಾಗಿ ಬೆಳೆಯಲು ಯೋಚಿಸುತ್ತಿದ್ದೇನೆ.
ರಮೇಶ್‌, ಲಕ್ಷ್ಮೀಪುರದ ರೈತ

29,045 -ಹೆಕ್ಟೇರ್‌ ಅಡಿಕೆ ಬೆಳೆ ಪ್ರದೇಶ

22,818- ಹೆಕ್ಟೇರ್‌ ನೀರಾವರಿ ಆಶ್ರಿತ

6,227- ಹೆಕ್ಟೇರ್‌  ಮಳೆ ಆಶ್ರಿತ

22,609 -ಹೆಕ್ಟೇರ್‌ ಸ್ಥಳೀಯ ತಳಿ ಅಡಿಕೆ

205.4 -ಹೆಕ್ಟೇರ್‌ ಹೈ ಈಲ್ಡ್‌  ಅಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT