ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಶಿಕ್ಷಕರ ಆಯ್ಕೆ ಗೊಂದಲ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಡಿ ಬರುವ ‘ಕೇಂದ್ರೀಯ ವಿದ್ಯಾಲಯ ಸಂಘಟನ್‌’ ದೇಶದಾದ್ಯಂತ ಇರುವ ಕೇಂದ್ರೀಯ ವಿದ್ಯಾಲಯಗಳ ಸಂಗೀತ ಶಿಕ್ಷಕರ ಹುದ್ದೆಗೆ ಲಿಖಿತ ಪರೀಕ್ಷೆಗಳನ್ನು ನಡೆಸಿದೆ.  ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನಕ್ಕೆ ಪತ್ರ ಕಳುಹಿಸಿತ್ತು. ಆದರೆ ದೆಹಲಿಯ ಸಂದರ್ಶನ ಕೊಠಡಿಗೆ ಬಂದ ಬಹುಪಾಲು ಅಭ್ಯರ್ಥಿಗಳಿಗೆ, ‘ನಿಮ್ಮ ಬಳಿ ಇರುವ ಯಾವ ಪ್ರಮಾಣ ಪತ್ರವೂ  ಈ ಹುದ್ದೆಗೆ ಅರ್ಹವಲ್ಲ’ ಎಂದು ಹೇಳಿ  ಅವಮಾನಿಸಿದೆ.

ಲಿಖಿತ ಪರೀಕ್ಷೆಯಲ್ಲಿ ಪಾಸಾಗುವವರೆಗೆ ಅರ್ಹವಾಗಿಯೇ ಇದ್ದ ಪ್ರಮಾಣ ಪತ್ರಗಳು ಸಂದರ್ಶನದ ವೇಳೆ ಇದ್ದಕ್ಕಿದ್ದಂತೆಯೇ ಹೇಗೆ ಅನರ್ಹವಾದವು ಎಂದು ಅಭ್ಯರ್ಥಿಗಳು ತಬ್ಬಿಬ್ಬಾಗಿ ತಮ್ಮ ಊರಿಗೆ ಮರಳಿದ್ದಾರೆ.  ಸಂದರ್ಶನಕ್ಕೆ ಹಾಜರಾದ ಶೇಕಡ 70ರಷ್ಟು ಅಭ್ಯರ್ಥಿಗಳು  ನಿರಾಶರಾಗಿ ವಾಪಸಾಗಿದ್ದಾರೆ.

ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಶಾಲೆಗಳ ಸಂಗೀತ ಶಿಕ್ಷಕರ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿತ್ತು. ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮುಂಬೈಯ ಗಂಧರ್ವ ಮಹಾಮಂಡಲ, ಅಲಹಾಬಾದ್‌ನ ಪ್ರಯಾಗ ಸಂಗೀತ ಸಭಾ, ಲಖನೌದ ಭಾತಖಂಡ ವಿಶ್ವವಿದ್ಯಾಲಯವು ಸಂಗೀತದ ಪರೀಕ್ಷೆಗಳನ್ನು ನಡೆಸುತ್ತವೆ. ಸಂಗೀತವನ್ನು  ಗುರುಕುಲ ಪದ್ಧತಿಯಲ್ಲಿ ಏಳು ವರ್ಷ ಅಭ್ಯಸಿಸುವ ಕಲಾವಿದರು ಬಳಿಕ ‘ಸಂಗೀತ ವಿಶಾರದ’, ‘ಸಂಗೀತ ಪ್ರಭಾಕರ’ ಅಥವಾ ಆಯಾ ಸಂಸ್ಥೆಯು ನೀಡುವ ಪ್ರಮಾಣ ಪತ್ರವನ್ನು ಪಡೆಯುತ್ತಾರೆ. ಇವೆಲ್ಲ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಾದ್ದರಿಂದ ಸಂಗೀತ ಕ್ಷೇತ್ರದಲ್ಲಿ  ಮಾನ್ಯತೆ ಪಡೆದಿವೆ.

ಧಾರವಾಡದ ಕರ್ನಾಟಕ ಕಾಲೇಜಿನಂತಹ ಕೆಲವೆಡೆ ಮಾತ್ರ  ಕಾಲೇಜುಗಳಿಗೆ ಹೋಗಿ ಆಧುನಿಕ ಶಿಕ್ಷಣ ವ್ಯವಸ್ಥೆಯಡಿ ಸಂಗೀತವನ್ನು ಕಲಿತು ಪದವಿ ಪಡೆಯುವ ಅವಕಾಶ ಇದ್ದರೂ, ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಕಲಾವಿದರೇ ಹೆಚ್ಚು. ಹೆಚ್ಚಿನವರು ಸಂಗೀತ ಕ್ಷೇತ್ರಕ್ಕೇ ತಮ್ಮನ್ನು ಸಮರ್ಪಿಸಿಕೊಂಡು ಕಲಿಕೆ ನಡೆಸುವುದರಿಂದಾಗಿ, ಕಾಲೇಜು ಪದವಿಗಿಂತ, ಗುರುಕುಲ ಪದ್ಧತಿಯನ್ನೇ ಇಷ್ಟಪಡುತ್ತಾರೆ. 

ಇಂತಹ ಕಲಿಕೆಯ ಮೂಲಕ ಪಡೆದ  ಪ್ರಮಾಣ ಪತ್ರಗಳನ್ನು ಕೇಂದ್ರೀಯ ವಿದ್ಯಾಲಯ  ಕಳೆದ ವರ್ಷದವರೆಗೆ  ಮಾನ್ಯ ಮಾಡಿಯೇ ನೇಮಕಾತಿ ಮಾಡಿಕೊಂಡಿತ್ತು.  ಈ ಬಾರಿಯೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರೆಗೆ ಕೇಂದ್ರೀಯ ವಿದ್ಯಾಲಯ ಸಂಘಟನ್‌, ಪ್ರಮಾಣ ಪತ್ರದ ಬಗ್ಗೆ ಯಾವುದೇ ಅಪಸ್ವರ ಎತ್ತಿರಲಿಲ್ಲ. ‘ಅರ್ಜಿ ಸ್ವೀಕೃತಗೊಂಡಿತ್ತು. ಈ ಪ್ರಮಾಣ ಪತ್ರಗಳ ಆಧಾರದಲ್ಲಿಯೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಡಿಸೆಂಬರ್‌ನಲ್ಲಿ  ಲಿಖಿತ ಪರೀಕ್ಷೆ ನಡೆದಿತ್ತು.  ಆ ಸಂದರ್ಭದಲ್ಲಿಯೂ ಈ ಪ್ರಮಾಣ ಪತ್ರಗಳ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ’ ಎನ್ನುತ್ತಾರೆ ಕರ್ನಾಟಕದಿಂದ ಪರೀಕ್ಷೆ ಬರೆದ ಗಾಯಕಿ ಶ್ರೀಮತಿದೇವಿ ಪಿ.

‘ಅತ್ಯಂತ ಶಿಸ್ತುಬದ್ಧವಾಗಿ ಪರೀಕ್ಷೆಗಳು ನಡೆದಿವೆ. ಪರೀಕ್ಷೆಯ ಬಳಿಕ ಸಂದರ್ಶನದ ಮಾಹಿತಿಯೂ ಸ್ಪಷ್ಟವಾಗಿ ದೊರೆತಿದೆ. ಅಧಿಕಾರಿಗಳು ಸ್ವತಃ ಫೋನ್‌ ಮಾಡಿ ಸಂದರ್ಶನಕ್ಕೆ ಮಾಡಿಕೊಳ್ಳಬೇಕಾದ ತಯಾರಿ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕಾರಣಗಳಿಂದ ಪರೀಕ್ಷಾ ಪದ್ಧತಿಯ ಬಗ್ಗೆ ಗೌರವ ಮೂಡಿತ್ತು. ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಸುಮಾರು 200 ಮಂದಿ ಪರೀಕ್ಷೆ ಬರೆದಿದ್ದಾರೆ’ ಎನ್ನುತ್ತಾರೆ ಶ್ರೀಮತಿದೇವಿ.

‘ಯಾರು ಅತ್ಯುತ್ತಮ ಗಾಯಕರೆಂಬುದನ್ನು ಅಥವಾ ಸಂಗೀತದ ಒಳಹೊರಗು ಬಲ್ಲವರು ಯಾರೆಂಬುದನ್ನು ಪದವಿಗಳು ನಿರ್ಧರಿಸುವುದಿಲ್ಲ. ಒಂದು ವೇಳೆ ಪದವಿಗಳೇ ನಿರ್ಧರಿಸುತ್ತವೆ ಎಂದು ಆಯೋಜಕರು ಭಾವಿಸಿದ್ದರೂ ಅದನ್ನು ಮುಂಚಿತವಾಗಿಯೇ ತಿಳಿಸಬೇಕಿತ್ತು. ಇದ್ದಕ್ಕಿದ್ದಂತೆಯೇ ಅಭ್ಯರ್ಥಿಗಳನ್ನು ವಾಪಸು ಕಳುಹಿಸುವ ಉದ್ದೇಶವಾದರೂ ಏನು ಎಂಬುದು ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ ಲಖನೌದ ರೀತಾ ಸಿಂಗ್‌. ಅವರು ಪ್ರಯಾಗ್‌ ಸಂಗೀತ ಸಭಾದಿಂದ ‘ಸಂಗೀತ ಪ್ರಭಾಕರ’ ಪದವಿ ಪಡೆದವರು. ಲಿಖಿತ ಪರೀಕ್ಷೆಯಲ್ಲಿ 22ನೇ ರ್‍ಯಾಂಕ್‌ ಪಡೆದ ಪ್ರತಿಭಾವಂತೆ. 

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಶಿಷ್ಯವೇತನದ ಮೂಲಕವೇ ಸಂಗೀತ ಅಭ್ಯಾಸ ಮಾಡಿದ ಶ್ರೀಮತಿದೇವಿ, ಆಕಾಶವಾಣಿಯ ‘ಬಿ ಹೈ ಗ್ರೇಡ್‌’ ಕಲಾವಿದೆ. ಗಂಧರ್ವ ಮಹಾಮಂಡಲದಿಂದ ‘ಸಂಗೀತ ವಿಶಾರದ’ ಪದವಿ  ಪಡೆದವರು.

ಆಂಧ್ರಪ್ರದೇಶದ ರೋಹನ್‌ ನಾಯ್ಡು ಕೂಡ ಆಯ್ಕೆ ಪ್ರಕ್ರಿಯೆಯಲ್ಲಿ ಉಂಟಾದ ವ್ಯತ್ಯಾಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಈ ಕುರಿತು ನ್ಯಾಯಾಲಯದ ಮೆಟ್ಟಿಲೇರುವ ಚಿಂತನೆ ನಡೆದಿದೆ. ಆದರೆ ಅಭ್ಯರ್ಥಿಗಳು ದೇಶದಾದ್ಯಂತ ಇರುವುದರಿಂದ, ಸಂತ್ರಸ್ತ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಡಿ ತರುವ ಸಂಘಟನೆಯ ಕೆಲಸ ಕೊಂಚ ಕಷ್ಟ’ ಎಂದು ಹೇಳುತ್ತಾರೆ. 

‘ಈ ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆಗೆ ಶೇ 60 ಅಂಕಗಳು, ಗಾಯನಕ್ಕೆ ಶೇ 25 ಹಾಗೂ ಮೌಖಿಕ ಸಂದರ್ಶನಕ್ಕೆ ಶೇ 15 ಅಂಕಗಳನ್ನು ಮೀಸಲಿಡಲಾಗಿದೆ. ಆದರೆ ಸಂದರ್ಶನದ ಸಮಯದಲ್ಲಿ ದಿಢೀರನೆ ನಿಯಮ ಬದಲಾಗಲು ಕಾರಣವೇನು ಎಂಬುದು ಅರಿವಾಗುತ್ತಿಲ್ಲ’ ಎಂದು ಅವರು ಹತಾಶೆ ವ್ಯಕ್ತಪಡಿಸುತ್ತಾರೆ.

ಈ ಕುರಿತು  ಆಯೋಜಕರನ್ನು ಪ್ರಶ್ನಿಸಿದಾಗ, ‘ನೀವು ಕಲಿತ ಸಂಸ್ಥೆಗಳು ನೀಡಿದ ಪ್ರಮಾಣ ಪತ್ರಗಳಲ್ಲಿ ‘ವಿಶ್ವವಿದ್ಯಾಲಯ ನೀಡುವ ಸಂಗೀತ ಪದವಿಗೆ ತತ್ಸಮಾನ’ ಎಂದು ಬರೆಯಿಸಿಕೊಂಡು ಬಂದರೆ ನಿಮ್ಮನ್ನು  ಸಂದರ್ಶನಕ್ಕೆ ಪರಿಗಣಿಸಲಾಗುವುದು’ ಎಂದು ಉತ್ತರಿಸುತ್ತಾರೆ. ಆದರೆ ವಾಸ್ತವವಾಗಿ ಏಳು ವರ್ಷಗಳ ನಿರಂತರ ಕಲಿಕೆಯು ಮೂರು ವರ್ಷದ ಪದವಿಗಿಂತಲೂ ಉತ್ಕೃಷ್ಟವಾಗಿರುತ್ತದೆ. ಅಲ್ಲದೆ ‘ಕೇಂದ್ರೀಯ ವಿದ್ಯಾಲಯಕ್ಕಾಗಿ ನಮ್ಮ ಪ್ರಮಾಣ ಪತ್ರವನ್ನು ತಿದ್ದುವುದು ಸಾಧ್ಯವಿಲ್ಲ’ ಎಂದು ಸಂಸ್ಥೆಗಳು ಸ್ಪಷ್ಟಪಡಿಸಿವೆ ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಹೊಸ ತಲೆಮಾರಿಗೆ ಭಾರತೀಯ ಸಂಗೀತ ಪರಂಪರೆಯ ಅರಿವಾಗಬೇಕು ಎಂಬ ಉದ್ದೇಶದಿಂದ ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಹಂತದಲ್ಲಿ ಸಂಗೀತ ಕಲಿಕೆಯನ್ನು ಅಳವಡಿಸಿಕೊಂಡಿರುವುದು ಶ್ಲಾಘನಾರ್ಹ. ಆದರೆ  ಇಂತಹ ಎಡವಟ್ಟುಗಳಿಂದ ಸಂಗೀತ ಕಲಿಕೆಯ ಉದ್ದೇಶ ಈಡೇರುವುದಿಲ್ಲ.  ಕಲಾವಿದರಲ್ಲಿ ಗೊಂದಲ ಸೃಷ್ಟಿ ಮಾಡುವುದರಿಂದ ಸಂಗೀತ ಕ್ಷೇತ್ರದತ್ತ ಯುವಜನರ ಆಸಕ್ತಿ ಕುಂದುತ್ತದೆ ಎಂದು ರೋಹನ್‌ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT