ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಕ್ಕೆ ಬೇಕು ರಾಜಕೀಯ ಪರಿಹಾರದ ಮುಲಾಮು

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ಹತ್ತಿಕೊಂಡಿರುವ ಹಿಂಸಾಚಾರದ ಬೆಂಕಿ ಆರುತ್ತಿಲ್ಲ; ಸದ್ಯಕ್ಕೆ ಆರುವ ಲಕ್ಷಣಗಳೂ ಕಾಣುತ್ತಿಲ್ಲ. ಏಕೆಂದರೆ ಅಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಮತ್ತು ಅಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುವ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳಿಗೆ  ಕಾಶ್ಮೀರದ ಜನಸಾಮಾನ್ಯರು ಶಾಂತಿ, ನೆಮ್ಮದಿಯಿಂದ ಇರುವುದು ಬೇಕಿಲ್ಲ. ಇದರ ನಡುವೆಯೇ ಭಾರತ ವಿರೋಧಿ ಶಕ್ತಿಗಳಿಂದ ಪ್ರಚೋದನೆ ಪಡೆದು ಹಿಂಸಾಕೃತ್ಯ ಎಸಗುತ್ತಿರುವ ಸ್ಥಳೀಯ ಯುವಕರು ಮತ್ತು ಭದ್ರತಾ ಪಡೆಗಳ ನಡುವಿನ ಸಂಘರ್ಷದಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ವಾರದ ಹಿಂದೆ ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಾಲಕ್ಕೆ ನಡೆದ ಹಿಂಸಾಕೃತ್ಯಗಳಲ್ಲಿ ಎಂಟು ಜನ ಸಾವಿಗೀಡಾಗಿದ್ದರು. ಅದೇ ದಿನ ಬಡಗಾಂನಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಯೋಧರ ಮೇಲೆ ಕೆಲ ಕಿಡಿಗೇಡಿ ಯುವಕರ ಗುಂಪು ಹಲ್ಲೆ ನಡೆಸಿತ್ತು. ಆದರೆ ಆ ಸಂದರ್ಭದಲ್ಲಿ ಏಟು ತಿಂದ ಯೋಧರು ಯಾವುದೇ ರೀತಿಯ ಪ್ರತೀಕಾರ ತೋರಿಸದೆ ಸಂಯಮ ಪ್ರದರ್ಶಿಸಿದ್ದರು.  ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೊ ಚಿತ್ರಣ ಪ್ರಸಾರವಾಗಿತ್ತು. ಯೋಧರ ತಾಳ್ಮೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರ ಬೆನ್ನಲ್ಲೇ ಯೋಧರ ಗುಂಪೊಂದು, ಕಲ್ಲು ಹೊಡೆಯುವ ಕಿಡಿಗೇಡಿಗಳಿಂದ ಬಚಾವಾಗಲು ತಮ್ಮ ವಾಹನದ ಮುಂಭಾಗಕ್ಕೆ ಯುವಕನೊಬ್ಬನನ್ನು ಕಟ್ಟಿಹಾಕಿ ಮಾನವ ಗುರಾಣಿಯಂತೆ ಬಳಸಿಕೊಂಡಿದೆ ಎಂಬ ಆರೋಪ ಎದುರಿಸಬೇಕಾಯಿತು. ಇದು ಭದ್ರತಾ ಪಡೆಗಳ ಬಗ್ಗೆ ಸದಾ ಕಿಡಿ ಕಾರುವವರಿಗೆ, ಅದರಲ್ಲೂ ವಿಶೇಷವಾಗಿ ಅಲ್ಲಿನ ರಾಜಕಾರಣಿಗಳಿಗೆ ಯೋಧರ ವಿರುದ್ಧ ಝಳಪಿಸಲು ಮತ್ತೊಂದು ಅಸ್ತ್ರವಾಗಿದೆ. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಈಗೇನೋ ಉನ್ನತ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ವಾಸ್ತವವಾಗಿ ಆ ಯುವಕನನ್ನು ಮಾನವ ಗುರಾಣಿಯಾಗಿ ಬಳಸಿಕೊಂಡಿಲ್ಲ ಎಂದು ಸೇನಾ ಅಧಿಕಾರಿಗಳು ಸಮಜಾಯಿಷಿ ಕೊಟ್ಟಿದ್ದಾರೆ. ಅಲ್ಲಿನ ಪರಿಸ್ಥಿತಿ ನೋಡಿದರೆ ಭದ್ರತಾ ಪಡೆಗಳದು ತಂತಿ ಮೇಲಿನ ನಡಿಗೆಯಷ್ಟೇ ಕಷ್ಟದ ಕೆಲಸ ಎನ್ನುವುದೇನೋ ನಿಜ. ಆದರೆ ಇಂತಹ ವಿದ್ಯಮಾನಗಳು ಅಪನಂಬಿಕೆ ಹೆಚ್ಚಿಸುತ್ತವೆ. ಕಾಶ್ಮೀರ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನಕ್ಕೆ ಅಡ್ಡಗಾಲಾಗುತ್ತವೆ ಎನ್ನುವುದು ಎಲ್ಲರ ಗಮನದಲ್ಲೂ ಇರಬೇಕು.

ಈ ತಿಂಗಳ ಆರಂಭದಲ್ಲಿ ಅಲ್ಲಿ ದೇಶದಲ್ಲಿನ ಅತ್ಯಂತ ಉದ್ದನೆಯ ಸುರಂಗ ಮಾರ್ಗ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಯೋತ್ಪಾದನೆ ಬಿಟ್ಟು ಪ್ರವಾಸೋದ್ಯಮದ ಕಡೆ ಗಮನ ಕೊಡಿ’ ಎಂದು ಅಲ್ಲಿನ ಯುವಜನರಿಗೆ ಕರೆ ನೀಡಿದ್ದರು. ರಾಜ್ಯದಲ್ಲಿ 40 ವರ್ಷಗಳಿಂದ ನಡೆಯುತ್ತಿರುವ ರಕ್ತಪಾತದಿಂದ ಯಾರಿಗೂ ಒಳಿತಾಗಿಲ್ಲ ಎಂಬುದನ್ನು  ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು. ಕೇಂದ್ರ ಸರ್ಕಾರ ಕೂಡ ಕಾಶ್ಮೀರದಲ್ಲಿ ಅಭಿವೃದ್ಧಿಗೆ ಬಹಳಷ್ಟು ಹಣ ಸುರಿಯುತ್ತಿದೆ. ಇಷ್ಟಾದರೂ ಕಾಶ್ಮೀರಿಗಳ ಮನಗೆಲ್ಲುವ ಪ್ರಯತ್ನಗಳು ಪದೇ ಪದೇ ಸೋಲುತ್ತಿವೆ. ಅದಕ್ಕೆ ಕಾರಣಗಳು ಹಲವು.

ಆದರೆ ಅದರಲ್ಲಿ ಮುಖ್ಯವಾದದ್ದು  ಉಗ್ರಗಾಮಿಗಳಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಗಡಿಯಾಚೆಯಿಂದ ಸಿಗುತ್ತಿರುವ ನಾನಾ ಬಗೆಯ ಪ್ರೋತ್ಸಾಹ, ಪ್ರಚೋದನೆ. ಕಳೆದ ವರ್ಷದ ಜುಲೈನಿಂದ ಈಚೆಗೆ ಸ್ಥಳೀಯ ಸುಮಾರು 250 ಯುವಕರು ಉಗ್ರಗಾಮಿ ಸಂಘಟನೆಗಳನ್ನು ಸೇರಿದ್ದಾರೆ. ಇವರೆಲ್ಲ ಸಾವಿನ ಭೀತಿಯನ್ನೂ ಮೆಟ್ಟಿ ನಿಲ್ಲುವುದರ ಹಿಂದೆ ಬಲವಾದ ಪ್ರಲೋಭನೆ ಇರಲೇ ಬೇಕು. ಹಾಗೆಂದು ನಾವು ಕೈಚೆಲ್ಲುವ, ನಿರಾಶರಾಗುವ ಅಗತ್ಯವಿಲ್ಲ. ಅಭಿವೃದ್ಧಿ ಎಂಬ ರಾಜಮಾರ್ಗದ ಮೂಲಕ ಕಾಶ್ಮೀರವನ್ನು ಮತ್ತೆ ಸರಿದಾರಿಗೆ ತರುವ ಪ್ರಯತ್ನವನ್ನು  ಮುಂದುವರಿಸಬೇಕು. ಕಾಶ್ಮೀರದ ಬಹುಪಾಲು ಜನಕ್ಕೆ ಹಿಂಸೆ ಸಾಕಾಗಿದೆ; ಶಾಂತಿ, ನೆಮ್ಮದಿ ಬೇಕಾಗಿದೆ. ಅವರಿಗೆ ಶಕ್ತಿ ತುಂಬುವ, ದನಿಯಾಗುವ ಕೆಲಸಗಳು ನಡೆಯಬೇಕು. ಸಂವಾದ  ಮತ್ತು ರಾಜಕೀಯ ಪರಿಹಾರದ ಮೂಲಕ   ಬಗೆಹರಿಯದ ಸಮಸ್ಯೆಗಳೇ ಇಲ್ಲ. ಕಾಶ್ಮೀರ ಬಿಕ್ಕಟ್ಟಿಗೂ ಅದು ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT