ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹನೆಯ ಕಟ್ಟೆ ಒಡೆದಿದೆ:ಅಮೆರಿಕ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪನ್ಮುಂಜೊಮ್ (ದಕ್ಷಿಣ ಕೊರಿಯಾ): ಉತ್ತರ ಕೊರಿಯಾದ ನೀತಿಗಳ ವಿರುದ್ಧ ತೀಕ್ಷ್ಣವಾಗಿ ಕಿಡಿಕಾರಿರುವ ಅಮೆರಿಕ, ‘ನಮ್ಮ ಸಹನೆಯ ಕಟ್ಟೆ ಒಡೆದಿದೆ’ ಎಂದು ಎಚ್ಚರಿಕೆ ನೀಡಿದೆ.

ಹತ್ತು ದಿನಗಳ ಏಷ್ಯಾ ಪ್ರವಾಸ ಕೈಗೊಂಡಿರುವ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರು,  ಸೋಮವಾರ ಉತ್ತರ ಕೊರಿಯಾಗೆ ಹೊಂದಿಕೊಂಡಿರುವ ದಕ್ಷಿಣ ಕೊರಿಯಾದ ಗಡಿ ಪ್ರದೇಶಕ್ಕೆ ಭೇಟಿ ನೀಡಿದರು.   ಉದ್ವಿಗ್ನ ಪ್ರದೇಶದಲ್ಲಿ ಉತ್ತರ ಕೊರಿಯಾದ ನಿಲುವುಗಳ ವಿರುದ್ಧ ತೀವ್ರ ಕಿಡಿ ಕಾರಿದರು.
ಉತ್ತರ ಕೊರಿಯಾ  ನಿರಂತರವಾಗಿ ನಡೆಸುತ್ತಿರುವ ಕ್ಷಿಪಣಿ  ಹಾಗೂ ಅಣ್ವಸ್ತ್ರ ಪರೀಕ್ಷೆ ಬಗ್ಗೆ ಅವರು ಅಸಹನೆ ವ್ಯಕ್ತಪಡಿಸಿದರು.

ಗಡಿ ರೇಖೆ ಸಮೀಪ ಮಾತನಾಡುತ್ತಿದ್ದ ಪೆನ್ಸ್‌ ಅವರನ್ನು  ಉತ್ತರ ಕೊರಿಯಾದ ಇಬ್ಬರು ಸೈನಿಕರು ಸಮೀಪದಿಂದಲೇ ವೀಕ್ಷಿಸಿ ಅವರ  ಚಿತ್ರಗಳನ್ನು ಸೆರೆ ಹಿಡಿದರು.

‘ಕ್ಷಿಪಣಿಗಳನ್ನು ನಾಶಪಡಿಸಲು ಚೀನಾವು ಉತ್ತರ ಕೊರಿಯಾದ ಮೇಲೆ ಒತ್ತಡ ಹೇರಬೇಕು. ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಆರಂಭಿಸಿದ ದಿನದಿಂದಲೂ  ಅಮೆರಿಕ ತಾಳ್ಮೆಯಿಂದ ನೋಡುತ್ತಿದೆ. ಈಗ  ತಾಳ್ಮೆ ಮಿತಿ ಮೀರಿದೆ’ ಎಂದು ಹೇಳಿದರು.

‘ನಾವು ಬದಲಾವಣೆ ಬಯಸುತ್ತಿದ್ದೇವೆ. ಅಣ್ವಸ್ತ್ರಗಳ ಮೂಲಕ ಅಭಿವೃದ್ಧಿ ಮಾರ್ಗ ಕಂಡುಕೊಂಡಿರುವ ಉತ್ತರಕೊರಿಯಾದ ತನ್ನ ಮಾರ್ಗವನ್ನು ಬದಲಾಯಿಸಿಕೊಳ್ಳಬೇಕು.  ಖಂಡಾಂತರ ಕ್ಷಿಪಣಿ ಪ್ರಯೋಗವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.
‘ಉತ್ತರ ಕೊರಿಯಾ ವಿರುದ್ಧ ಕ್ರಮಕೈಗೊಳ್ಳಲು ಎಲ್ಲ ಆಯ್ಕೆಗಳು ಮುಕ್ತವಾಗಿವೆ. ಉತ್ತರ ಕೊರಿಯಾ ಅಣ್ವಸ್ತ್ರಗಳನ್ನು ಪ್ರಯೋಗಿಸಿದರೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡಲಾಗುವುದು’ ಎಂದು ಪೆನ್ಸ್‌ ಎಚ್ಚರಿಸಿದರು.

‘ದಕ್ಷಿಣ ಕೊರಿಯಾದ ಜತೆ ಅಮೆರಿಕ  ಸಂಬಂಧವು ಗಟ್ಟಿಯಾಗಿದೆ’ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಸಿರಿಯಾ ಹಾಗೂ ಆಪ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ಬಗ್ಗೆ ಉಲ್ಲೇಖಿಸಿದ ಅವರು, ‘ಉತ್ತರ ಕೊರಿಯಾ ತನ್ನ ಕ್ಷಿಪಣಿ ಪ್ರಯೋಗಗಳನ್ನು ನಿಲ್ಲಿಸಬೇಕು. ಇದರಿಂದ ಈ ಪ್ರದೇಶದಲ್ಲಿ ಅಮೆರಿಕ ಸೇನೆ ದಾಳಿ ನಡೆಸಲು ಅವಕಾಶ ಕಲ್ಪಿಸಬಾರದು’ ಎಂದು ತಿಳಿಸಿದರು. ಉತ್ತರ ಕೊರಿಯಾ ಭಾನುವಾರ ನಡೆಸಿದ ಕ್ಷಿಪಣಿ ಪರೀಕ್ಷೆ ವಿಫಲ ಗೊಂಡಿತ್ತು. ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಭೂಮಿಗೆ ಅಪ್ಪಳಿಸಿತ್ತು.

ಶಾಂತಿಯುತ ಮಾತುಕತೆ ಮತ್ತು ಒಪ್ಪಂದವನ್ನು ಅಮೆರಿಕ ಬಯಸುತ್ತದೆ. ಆದರೆ, ಎಲ್ಲ ಆಯ್ಕೆಗಳು ಮುಕ್ತವಾಗಿದ್ದು, ದಕ್ಷಿಣ ಕೊರಿಯಾಗೆ ನೇರಾನೇರ ಉತ್ತರ ನೀಡಲು ಸಹ ಸಿದ್ಧ
ಮೈಕ್‌ ಪೆನ್ಸ್‌,
ಅಮೆರಿಕ ಉಪಾಧ್ಯಕ್ಷ

ಏಕಪಕ್ಷೀಯ ದಾಳಿ ಬೇಡ: ರಷ್ಯಾ ಎಚ್ಚರಿಕೆ

ಮಾಸ್ಕೊ (ಎಎಫ್‌ಪಿ):‘ಉತ್ತರ ಕೊರಿಯಾ ವಿರುದ್ಧ ಅಮೆರಿಕ ಏಕಪಕ್ಷೀಯವಾಗಿ ದಾಳಿ ಮಾಡಬಾರದು’ ಎಂದು ರಷ್ಯಾ ಸೋಮವಾರ ಎಚ್ಚರಿಕೆ ನೀಡಿದೆ.

ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ ಅವರು ಉತ್ತರ ಕೊರಿಯಾ ಕುರಿತು ನೀಡಿದ ಹೇಳಿಕೆಗೆ ರಷ್ಯಾ ಈ ಪ್ರತಿಕ್ರಿಯೆ ನೀಡಿದೆ.
‘ಇದು ತುಂಬಾ ಅಪಾಯಕಾರಿ ಮಾರ್ಗ’ ಎಂದು ರಷ್ಯಾದ ವಿದೇಶಾಂಗ ಇಲಾಖೆ ಸಚಿವ ಸರ್ಜೈ ಲವ್ರೊ ಅವರು ತಿಳಿಸಿದ್ದಾರೆ.
‘ ಉತ್ತರ ಕೊರಿಯಾ ವಿಶ್ವ
ಸಂಸ್ಥೆಯ ನಿರ್ಣಯಗಳನ್ನು ಉಲ್ಲಂಘಿಸಿ ಕ್ಷಿಪಣಿ ಪ್ರಯೋಗಗಳನ್ನು ನಡೆಸುವುದನ್ನು ರಷ್ಯಾ ಒಪ್ಪುವುದಿಲ್ಲ. ಆದರೆ,  ಅಮೆರಿಕ ಸಹ ಅಂತರರಾಷ್ಟ್ರೀಯ ನಿಯಮಗಳನ್ನ ಉಲ್ಲಂಘಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT