ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗಟೇರಿ ಶಿವನಾರದಮುನಿಗೆ ₹2 ಕೋಟಿ ವೆಚ್ಚದ ನೂತನ ರಥ ಸಮರ್ಪಣೆ; ಅದ್ದೂರಿ ರಥೋತ್ಸವಕ್ಕೆ ಭಕ್ತಸಾಗರ

Last Updated 21 ಏಪ್ರಿಲ್ 2017, 14:52 IST
ಅಕ್ಷರ ಗಾತ್ರ
ಹರಪನಹಳ್ಳಿ:  ತಾಲ್ಲೂಕಿನ ಚಿಗಟೇರಿ ಶಿವನಾರದಮುನಿ ನೂತನ ರಥವನ್ನು ಶ್ರೀಮದುಜ್ಜಯನಿ ಸದ್ಧರ್ಮ ಪೀಠಾಧೀಶರಾದ ಸಿರಿಗೆರೆಯ ತರಳ ಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಲೋಕಾರ್ಪಣೆ ಮಾಡಿದರು.
 
ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಹಾದ್ವಾರದ ಉದ್ಘಾಟನೆ ನೆರವೇರಿಸಿದರು. ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ರಥದ ಕಳಸಾರೋಹಣ ನೆರವೇರಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಉಪಸ್ಥಿತರಿದ್ದರು. ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಗರದೋಪಾದಿಯಲ್ಲಿ ಹರಿದುಬಂದ ಭಕ್ತರು ಸಾಕ್ಷಿಯಾದರು.
 
ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಭಾಗವಹಿಸಿದ್ದರು.
ಸುಮಾರು ₹ 2 ಕೋಟಿ ವೆಚ್ಚದಲ್ಲಿ ಈ ರಥವನ್ನು ನಿರ್ಮಿಸಿದ ಚನ್ನಗಿರಿ ತಾಲ್ಲೂಕಿನ ಗೊಪ್ಪೇನಹಳ್ಳಿಯ ಎ.ಚಂದ್ರಚಾರ್‌, ಜಗನ್ನಾಥಾಚಾರ್‌, ವೀರಾಚಾರ್‌ ಹಾಗೂ 12 ಸಂಗಡಿಗರನ್ನು ಸನ್ಮಾನಿಸಲಾಯಿತು. 
 
ಆರು ಚಕ್ರಗಳಿದ್ದು, 6 ಟನ್‌ಗಿಂತ ಹೆಚ್ಚು ತೂಕವಿರುವ ಈ ರಥದ ಗಾಲಿಗಳಿಗೆ ಬ್ರೇಕ್‌ ಮತ್ತು ಸ್ಟೇರಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಳೆಹಣ್ಣು, ಉತ್ತತ್ತಿಯನ್ನು ಎಸೆಯುವುದು ಮತ್ತು  ರಥದ ಗಾಲಿಗಳಿಗೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿತ್ತು. ರಥಕ್ಕೆ ಭಕ್ತರು ನಾರನ್ನು ಭಕ್ತಿಯಿಂದ ಅರ್ಪಿಸಿ, ‘ನಾರು ಹುಣ್ಣು ಬರದಿರಲಿ’ ಎಂದು ಬೇಡಿಕೊಂಡರು.
 
ತತ್ರಾಂಶ ಶೀಘ್ರ ಬಿಡುಗಡೆ: ರೈತರು ಬೆಳೆದ ಬೆಳೆಯನ್ನು ಸ್ವತಃ ತಮ್ಮ ಮೊಬೈಲ್‌ ಮೂಲಕ  ಪಹಣಿಯಲ್ಲಿ ನಮೂದಿಸುವ ತತ್ರಾಂಶವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ  ಸ್ವಾಮೀಜಿ ಹೇಳಿದರು.
 
ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಶಿವನಾರದಮುನಿ ನೂತನ ಬ್ರಹ್ಮರಥೋತ್ಸವ ಲೋಕಾರ್ಪಣೆ ಮತ್ತು ರಥೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
 
ಭೂಮಿ ಆನ್‌ಲೈನ್‌ ತಂತ್ರಾಂಶದ ಮೂಲಕ ರಾಜ್ಯದ ರೈತರಿಗೆ ₹ 671 ಕೋಟಿ ಬೆಳೆ ವಿಮೆ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್‌ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡದೇ ಇರುವ ರೈತರಿಗೆ ಹಣ ಸಂದಿಲ್ಲ ಎಂದರು.
 
ಈ ತಂತ್ರಾಂಶ ಇಡೀ ದೇಶಕ್ಕೇ ಮಾದರಿ ಯಾಗಿದೆ.  ರೈತರು ಬೆಳೆದ ಬೆಳೆಗಳನ್ನು ತಮ್ಮ ಪಹಣಿಯಲ್ಲಿ ನಮೂದಿಸಲು ಗ್ರಾಮ ಲೆಕ್ಕಾಧಿಕಾರಿಗಳನ್ನು ಅವಲಂಬಿ ಸುವಂತಿಲ್ಲ. ಇದರಿಂದ ಬರಪೀಡಿತ ತಾಲ್ಲೂಕು ಎಂದು ಘೋಷಿಸುವ ಬದಲು ಆಯಾ ಗ್ರಾಮಗಳನ್ನು ಬರಪೀಡಿತ ಗ್ರಾಮ ಎಂದು ಘೋಷಿಸುವ ವ್ಯವಸ್ಥೆಯನ್ನು ಜಾರಿಗೆ ತರಬಹುದಾಗಿದೆ ಎಂದು ಹೇಳಿದರು. 
 
ರೈತರ ಸಾಲ ಮನ್ನಾ ಮಾಡುವಂತೆ ಶಾಮನೂರು ಶಿವಶಂಕರಪ್ಪ ಮುಖ್ಯ ಮಂತ್ರಿಯವರನ್ನು ಒತ್ತಾಯಿಸಬೇಕು. ಸಂಸದ ಜಿ.ಎಂ.ಸಿದ್ದೇಶ್ವರ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನವನ್ನು ರಾಜ್ಯಕ್ಕೆ ತರಬೇಕು. ಇದರಿಂದಷ್ಟೇ ರೈತರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಸಲಹೆ ನೀಡಿದರು. 
 
ಮೈಸೂರಿನ ಸುತ್ತೂರು ಮಠದ  ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಶಿವನಾರದಮುನಿಗೆ ನಿರ್ಮಿತವಾಗಿರುವ ಏಕೈಕ ದೇವಸ್ಥಾನ ಈ ಚಿಗಟೇರಿಯಲ್ಲಿದೆ. ದೇವರನ್ನು ನಂಬದ ಸಾಹಿತಿ ಶಿವರಾಮ ಕಾರಂತರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶಿವನಾರದಮುನಿ ಕುರಿತು ಸಂಶೋಧನೆ ನಡೆಯಬೇಕಿದೆ’ ಎಂದರು. 

ಬ್ಯಾಂಕ್ ಖಾತೆಗೆ ಬೆಳೆ ವಿಮೆ ಮೊತ್ತ ಜಮಾ ಆಗಲು ನೂತನ ತಂತ್ರಾಂಶ  ಅಭಿವೃದ್ಧಿಪಡಿಸಿದ ಸಿರಿಗೆರೆ  ಶ್ರೀಗಳು ರೈತರಿಗೆ ಮಾದರಿಯಾಗಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ನ್ಯಾಯದಾನ ಮಾಡುತ್ತಾ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಇಬ್ಬರೂ ಸ್ವಾಮೀಜಿಗಳನ್ನು ಹೊಗಳಿದರು. 
 
ಶಾಸಕ ಎಂ.ಪಿ.ರವೀಂದ್ರ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌, ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ, ಅಣಬೇರು ರಾಜಣ್ಣ, ಡಾ.ಮಂಜುನಾಥ್‌ ಉತ್ತಂಗಿ. ಎಂ.ರಾಜಶೇಖರ್‌, ಜಿ. ನಂಜನಗೌಡ,  ಚನ್ನಬಸವನಗೌಡ್‌, ಎಸ್‌.ಬಸವನಗೌಡ್‌, ಕೆ.ಎನ್‌ ರವೀಗೌಡ, ಕೆ.ರಾಜೇಶ್ವರಿ  ಇದ್ದರು.
 
ರಸ್ತೆ ವಿಸ್ತರಣೆ ಅಗತ್ಯ:  ಚಿಗಟೇರಿ ಗ್ರಾಮದಿಂದ ಶಿವನಾರದಮುನಿ ದೇವಸ್ಥಾನಕ್ಕೆ ಹೋಗುವ ರಸ್ತೆ ಅತ್ಯಂತ ಕಿರಿದಾಗಿದ್ದು, ವಾಹನಗಳು ಮತ್ತು ಭಕ್ತರು ಸಂಚರಿಸಲು ಪರದಾಡು ವಂತಾಯಿತು. ವಾಹನಗಳನ್ನು ಒಂದು ಕಿ.ಮಿ. ದೂರವೇ ನಿಲ್ಲಿಸಿ, ದೇವಸ್ಥಾನಕ್ಕೆ ತೆರಳಬೇಕಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT