ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಡಾವಣೆಗಳ ತನಿಖೆ ಮಾಡಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ, ಹಜ್‌ ಸಚಿವ ರೋಷನ್‌ ಬೇಗ್‌ ಸೂಚನೆ
Last Updated 18 ಏಪ್ರಿಲ್ 2017, 3:44 IST
ಅಕ್ಷರ ಗಾತ್ರ
ದಾವಣಗೆರೆ: ‘ಪೇಪರ್‌ನಲ್ಲಿ ಪ್ರಗತಿ ತೋರಿಸಬೇಡ್ರಿ, ಜನರಿಗೆ ಕುಡಿಯಲು ನೀರು ಕೊಟ್ಟಿದ್ದೀರಾ, ಶೌಚಾಲಯ ವ್ಯವಸ್ಥೆ ಮಾಡಿಕೊಟ್ಟಿದ್ದೀರಾ, ಹಂದಿಗಳ ಸ್ಥಳಾಂತರಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಮೊದಲು ಆ ಬಗ್ಗೆ ತಿಳಿಸಿ....’
 
ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ  ಮತ್ತು ಹಜ್‌ ಸಚಿವ ಆರ್‌.ರೋಷನ್‌ ಬೇಗ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.
 
ನಿಗದಿತ ಸಮಯಕ್ಕೆ ಸಭೆ ಆರಂಭವಾಗುತ್ತಿದ್ದಂತೆ ನೇರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೋಷನ್‌ ಬೇಗ್‌, ‘ಮೂಲಸೌಲಭ್ಯಗಳಿಲ್ಲದೇ ಹತ್ತಾರು ಖಾಸಗಿ ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ ಎನ್ನುವ ಬಗ್ಗೆ ದೂರುಗಳಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಅನಧಿಕೃತ ಖಾಸಗಿ ಬಡಾವಣೆಗಳಿವೆ ಹಾಗೂ ಮೂಲಸೌಲಭ್ಯಗಳಿಲ್ಲದೇ ಇರುವ ಬಡಾವಣೆಗಳು ಎಷ್ಟು ? ಈ ಬಗ್ಗೆ ತನಿಖೆ ನಡೆಸಿ, ತಕ್ಷಣ ವರದಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
 
‘ಪಾಲಿಕೆ ವ್ಯಾಪ್ತಿಯಲ್ಲಿ 3,000 ಎಕರೆ ಪ್ರದೇಶದಲ್ಲಿ ಖಾಸಗಿ ಬಡಾವಣೆಗಳ ನಿರ್ಮಾಣ ಮಾಡಲಾಗಿದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ ಸಚಿವರ ಗಮನಕ್ಕೆ ತಂದರು. ‘ದೂಡಾ’ ಸಹಾಯಕ ನಿರ್ದೇಶಕ ರೇಣುಕಾ ಪ್ರಸಾದ್‌ ಮಾತನಾಡಿ, ‘ಪಾಲಿಕೆ ವ್ಯಾಪ್ತಿಯಲ್ಲಿ 160 ಖಾಸಗಿ ಬಡಾವಣೆಗಳಿವೆ’ ಎಂದು ಹೇಳಿದರು.
 
ಇದರಿಂದ ಗರಂ ಆದ ಸಚಿವರು, ‘ಖಾಸಗಿ ಬಡಾವಣೆಗಳು ಎಷ್ಟಿವೆ ಎನ್ನುವ ಬಗ್ಗೆ ಅಧಿಕಾರಿಗಳಲ್ಲಿಯೇ ಸ್ಪಷ್ಟ ಮಾಹಿತಿ ಇಲ್ಲ. ಬೇಕಾಬಿಟ್ಟಿಯಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿ, ಮೂಲಸೌಲಭ್ಯ ಕಲ್ಪಿಸಿಕೊಡದೇ ನಾಗರಿಕರಿಗೆ ವಂಚನೆ ಮಾಡಲಾಗುತ್ತಿದೆ’ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
 
‘ಉತ್ತಮ್‌ಚಂದ್‌ ಬಡಾವಣೆಯ ನಿವಾಸಿಗಳಿಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ಬೀದಿ ದೀಪಗಳ ಸೌಲಭ್ಯ ಸೇರಿದಂತೆ ಯಾವುದೇ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಅಧಿಕಾರಿಗಳು ಕಣ್ಮುಚ್ಚಿಕೊಂಡು ಪರವಾನಗಿ ನೀಡಿದ್ದಾರೆ’ ಎಂದು ಪಾಲಿಕೆ ಸದಸ್ಯ ಎಚ್‌.ಜಿ.ಉಮೇಶ್‌ ದೂರಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ‘ಖಾಸಗಿ ಬಡಾವಣೆ ನಿರ್ಮಾಣವಾಗುತ್ತಿದ್ದಂತೆ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ, ಮನೆಗಳು ನಿರ್ಮಾಣವಾಗುವುದು ತಡವಾದದ್ದರಿಂದ ಒಳಚರಂಡಿ, ಬೀದಿ ದೀಪಗಳು ಹಾಳಾಗಿವೆ. ಈ ಬಗ್ಗೆ ಗಮನ ಹರಿಸಲಾಗುವುದು’ ಎಂದು ಹೇಳಿದರು.
 
‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ನಗರಾಭಿವೃದ್ಧಿ ಸಚಿವರು ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದರು.
‘ಕುಂದವಾಡ ಕೆರೆ ಹಾಗೂ ಟಿವಿ ಸ್ಟೇಷನ್‌ ಕೆರೆಯಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದ್ದು, 25 ದಿನಗಳ ಕಾಲ ಮಾತ್ರ ಜನರಿಗೆ ನೀರು ಪೂರೈಕೆ ಮಾಡ ಬಹುದು’ ಎಂದು ಪಾಲಿಕೆ ಆಯುಕ್ತರು, ಸಚಿವರ ಗಮನಕ್ಕೆ ತಂದರು.
 
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮಧ್ಯ ಪ್ರವೇಶಿಸಿ, ‘ತುಂಗಭದ್ರಾ ನದಿ ಪಾತ್ರದ ಬಳಿ ₹ 80 ಕೋಟಿ ವೆಚ್ಚದಲ್ಲಿ ಬೃಹತ್‌ ಬ್ಯಾರೇಜ್‌ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು, ಬ್ಯಾರೇಜ್‌ ನಿರ್ಮಾಣದಿಂದ ಹರಿಹರ ಹಾಗೂ ದಾವಣಗೆರೆ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ತುರ್ತು ಯೋಜನೆ ತಯಾರಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
 
200 ಟನ್‌ ತ್ಯಾಜ್ಯ ಸಂಗ್ರಹ: ‘ಪಾಲಿಕೆ ವ್ಯಾಪ್ತಿಯಲ್ಲಿ 140 ಟನ್‌ ಹಾಗೂ ಹರಿಹರದಲ್ಲಿ 50 ಟನ್‌ ತ್ಯಾಜ್ಯ ಸೇರಿದಂತೆ ‘ದೂಡಾ’ ವ್ಯಾಪ್ತಿಯಲ್ಲಿ ನಿತ್ಯ ಒಟ್ಟು 200 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ.

ನಗರದ ದಕ್ಷಿಣ ಭಾಗದಲ್ಲಿ 33 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹ ಕೇಂದ್ರವಿದೆ. ದಾವಣಗೆರೆಯ ಉತ್ತರ ಭಾಗದಲ್ಲಿಯೂ ಮತ್ತೊಂದು ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸುವ ಚಿಂತನೆ ಇದ್ದು, ನಿವೇಶನದ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಆಯುಕ್ತ ನಾರಾಯಣಪ್ಪ ಸಭೆಯ ಗಮನಕ್ಕೆ ತಂದರು.
 
‘ನಗರದ ಜನರಿಗೆ 24X7 ನೀರು ಪೂರೈಕೆ ಮಾಡುವ ಉದ್ದೇಶದಿಂದ ₹ 480 ಕೋಟಿ ವೆಚ್ಚದಲ್ಲಿ ಜಲಸಿರಿ ಯೋಜನೆ ಕೈಗೊಳ್ಳಲಾಗಿದೆ. ಇದರೊಂದಿಗೆ ಅಮೃತ್‌ ಯೋಜನೆ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ, ಶಾಶ್ವತ ರಸ್ತೆ ನಿರ್ಮಾಣ, ಅಲಂಕಾರಿಕ ಬೀದಿ ದೀಪಗಳ ಅಳವಡಿಕೆ ಹಾಗೂ ಒಳಚರಂಡಿ ವ್ಯವಸ್ಥೆ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ’ ಎಂದು ಸಚಿವ ಮಲ್ಲಿಕಾರ್ಜುನ ಅವರು ರೋಷನ್‌ ಬೇಗ್‌ ಗಮನಕ್ಕೆ ತಂದರು.
 
ಗೃಹಭಾಗ್ಯ ಯೋಜನೆ ಅನುಷ್ಠಾನಗೊಳಿಸಿ: ‘ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಇರುವ ಗೃಹಭಾಗ್ಯ ಯೋಜನೆಯ ಅನುದಾನವನ್ನು ಏನು ಮಾಡಿದಿರಿ’ ಎಂದು ಆಯುಕ್ತರನ್ನು ನಗರಾಭಿವೃದ್ಧಿ ಸಚಿವರು ಪ್ರಶ್ನಿಸಿದರು. 
 
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ‘ಕಾಯಂ ಪೌರ ಕಾರ್ಮಿಕರಿಗೆ ಜಿ+1 ಮಾದರಿಯಲ್ಲಿ ಮನೆಯನ್ನು ನಿರ್ಮಿಸಿಕೊಡುವ ಚಿಂತನೆ ಇದ್ದು, ಶೀಘ್ರದಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದು’ ಎಂದರು.
 
‘ಸರ್ಕಾರದ ಅವಧಿ ಒಂದು ವರ್ಷವಿದೆ. ಮನೆ ಕಟ್ಟಿಸಿಕೊಡಲು ಇನ್ನೂ ಎಷ್ಟು ದಿನಗಳು ಬೇಕು? ಬರೀ ಸಮಯ ಕೇಳುವುದೇ ಆಗಿದೆ’ ಎಂದು ಸಚಿವ ಮಲ್ಲಿಕಾರ್ಜುನ ಅಸಮಾಧಾನ ವ್ಯಕ್ತಪಡಿಸಿದರು.
 
ಸ್ಥಳ ಪರಿಶೀಲನೆ: ತ್ಯಾಜ್ಯ ನೀರು ನಿರ್ವಹಣೆ, ತ್ಯಾಜ್ಯ ಸಂಸ್ಕರಣೆ, ಒಳಚರಂಡಿ ಕಾಮಗಾರಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ಪತ್ರದಲ್ಲಿ ತೋರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇನೆ’ ಎಂದು ಬೇಗ್‌ ಎಚ್ಚರಿಸಿದರು.
 
‘ನಗರದಲ್ಲಿ 23 ಸಾರ್ವಜನಿಕ ಶೌಚಾಲಯಗಳಿದ್ದವು. ಇವುಗಳಲ್ಲಿ 13 ದುರಸ್ತಿ ಹಂತದಲ್ಲಿವೆ ಎಂದು ಪಾಲಿಕೆ ಆಯುಕ್ತರು ಸಭೆಯ ಗಮನಕ್ಕೆ ತಂದರು. ‘ಜನರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಿಕೊಡಲು ಆದ್ಯತೆ ನೀಡಿ’ ಎಂದು ರೋಷನ್‌ ಬೇಗ್‌ ಸೂಚಿಸಿದರು.
 
ಸ್ಮಾರ್ಟ್‌ ಯೋಜನೆ ಅಡಿಯಲ್ಲಿ ಮಂಡಕ್ಕಿ ಭಟ್ಟಿಗಳ ಅಭಿವೃದ್ಧಿ, ಮಂಡಿಪೇಟೆಯಲ್ಲಿ ವಿಶಾಲವಾದ ಸಿಮೆಂಟ್‌ ರಸ್ತೆಗಳ ನಿರ್ಮಾಣ, ಮಕ್ಕಳ ಹಾಗೂ ಮಹಿಳಾ ಆಸ್ಪತ್ರೆಯ ಅಭಿವೃದ್ಧಿ, ₹ 25 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಹಳೆ ಬಸ್‌ ನಿಲ್ದಾಣದ ಪ್ರಗತಿ, ದುರ್ಗಾಂಬಿಕಾ ದೇವಸ್ಥಾನದ ಪ್ರದೇಶದ ಪಾರಂಪರಿಕ ಸ್ಥಾನಮಾನ, ನಗರದೆಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಸೈಕಲ್‌ ಟ್ರ್ಯಾಕ್‌ ನಿರ್ಮಾಣ... ಹೀಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾಮಗಾರಿಗಳ ಬಗ್ಗೆ ಶೀಘ್ರದಲ್ಲಿಯೇ ಟೆಂಡರ್‌ ಕರೆಯಲಾಗುವುದು’ ಎಂದು ಯೋಜನೆ ಅನುಷ್ಠಾನ ಕಾರ್ಯದರ್ಶಿ ಅನಿರುದ್ಧ ಶ್ರವಣ್‌ ಹೇಳಿದರು.
 
‘ಸಾರ್ವಜನಿಕ ಸ್ಥಳ ಹಾಗೂ ಶಾಲೆ–ಕಾಲೇಜು ಆವರಣದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಎಂದು ಸಚಿವರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್‌ ಎಸ್‌.ಗುಳೇದ ಅವರಿಗೆ ಸೂಚಿಸಿದರು.
 
ಮೇಯರ್‌ ಅನಿತಾ ಬಾಯಿ, ಉಪ ಮೇಯರ್‌ ಮಂಜಮ್ಮ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ‘ದೂಡಾ’ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
***
‘ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ....’
ನಗರದಲ್ಲಿ ₹ 32 ಕೋಟಿ ವೆಚ್ಚದಲ್ಲಿ ಉಪ ರಾಜಕಾಲುವೆ ಮಾರ್ಗಗಳ ನಿರ್ಮಾಣಕ್ಕಾಗಿ ಗುತ್ತಿಗೆ ನೀಡಲಾಗಿದೆ. ಆದರೆ, ಗುತ್ತಿಗೆದಾರ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಕೆಯುಐಡಿಎಫ್‌ಸಿನ ಎಇಇ ಸಿದ್ಧನಗೌಡ, ಸಚಿವರ ಗಮನಕ್ಕೆ ತಂದರು. ಇದಕ್ಕೆ ಆಕ್ರೋಶಗೊಂಡ ರೋಷನ್‌ಬೇಗ್‌, ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ’ ಎಂದು ಸೂಚಿಸಿದರು.
****
‘ಇದ್ಯಾವ  ಸ್ಮಾರ್ಟ್‌ ಸಿಟಿ ರೀ’
‘ಕುಡಿಯುವ ನೀರು ಪೂರೈಕೆ, ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ, ಹಂದಿಗಳ ನಿಯಂತ್ರಣ ಆಗಲೇಬೇಕು. ಹಂದಿಗಳನ್ನು ನಗರದಾಚೆಗೆ ಸ್ಥಳಾಂತರ ಮಾಡಿ. ಹೋಟೆಲ್‌ಗಳಲ್ಲಿ ಉಳಿಯುವ ತ್ಯಾಜ್ಯ/ ಆಹಾರವನ್ನು ಸಂಗ್ರಹಿಸಿ, ಹಂದಿಗಳಿಗೆ ನೀಡುವ ವ್ಯವಸ್ಥೆ ಮಾಡಬಹುದು.

ಹಂದಿಗಳ ನಿಯಂತ್ರಣ ವಾಗದಿದ್ದಲ್ಲಿ ಇದ್ಯಾವ ಸ್ಮಾರ್ಟ್‌ ಸಿಟಿ ಎಂದು ಜನರು ಟೀಕಿಸುತ್ತಾರೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ನಗರಾಭಿವೃದ್ಧಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT