ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ ಮಾಡುವಂತೆ ರೈತರ ಪ್ರತಿಭಟನೆ

ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿ, ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಮುಕ್ತಾಯಕ್ಕೆ ಒತ್ತಾಯ
Last Updated 18 ಏಪ್ರಿಲ್ 2017, 4:15 IST
ಅಕ್ಷರ ಗಾತ್ರ
ಹೊಸದುರ್ಗ: ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಾಲ್ಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
 
‘ಜಿಲ್ಲೆಗೆ 10 ವರ್ಷಗಳಿಂದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಸರ್ಕಾರಗಳು ಹೇಳುತ್ತಲೇ ಇವೆ. ಆದರೆ, ಒಂದು ಕೆರೆಗೂ ನೀರು ಹರಿಸಿಲ್ಲ. ಎಂದೂ ಕಂಡಿರದಂತಹ ಭೀಕರ ಬರಗಾಲವಿದ್ದರೂ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸರ್ಕಾರವು ರೈತರ ಹಿತ ಕಾಪಾಡಲು ಕಿಂಚಿತ್ತೂ  ಕಾಳಜಿ ವಹಿಸುತ್ತಿಲ್ಲ’ ಎಂದು ಆರೋಪಿಸಿದರು.
 
‘ಗಣಿ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ಮರಳುಗಳ್ಳರಿಂದ, ಕಲ್ಲು ಗಣಿ ಮಾಲೀಕರಿಂದ, ಮತ್ತೋಡಿನ ಸಿಮೆಂಟ್ ಕಾರ್ಖಾನೆಯಿಂದ ಲಂಚ ಪಡೆಯುತ್ತಿದ್ದಾರೆ. ಜೀವಜಲ ನೀಡುವ ವೇದಾವತಿ ನದಿಪಾತ್ರದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಮರಳುಗಳ್ಳರು ಅಕ್ರಮ ಮಾಡುತ್ತಿದ್ದರೂ ತಾಲ್ಲೂಕು ಆಡಳಿತ ಕಣ್ಮುಚಿ ಕುಳಿತಿದೆ’ ಎಂದು ಆರೋಪಿಸಿದರು.
 
‘ಮುಂಗಾರು ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಿ ಸಕಾಲಕ್ಕೆ ಒದಗಿಸಬೇಕು. ರೈತ ಕುಟುಂಬಗಳಿಗೆ ಉಚಿತವಾಗಿ ಪಡಿತರ ದಾಸ್ತಾನು ಕೊಡ
ಬೇಕು. ಅರಣ್ಯದಲ್ಲಿರುವ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
 
ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಲಿಂಗರಾಜು, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕರಿಸಿದ್ದಯ್ಯ, ಕಾರ್ಯಾಧ್ಯಕ್ಷ ಬಯಲಪ್ಪ, ಎಚ್‌.ಎಸ್‌.
ಸ್ವಾಮಿ, ದೇವೇಂದ್ರಪ್ಪ ಇದ್ದರು.
 
ಚಳ್ಳಕೆರೆರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ತಾಲ್ಲೂಕು ಘಟಕದ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಕಚೇರಿ ಆವಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
 
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ‘ರಾಜ್ಯದಲ್ಲಿ ಭೀಕರ ಬರದಿಂದಾಗಿ ರೈತರು ತೀವ್ರ ಸಮಸ್ಯೆಯಲ್ಲಿದ್ದಾರೆ. ಮಳೆ ಹಾಗೂ ನೀರಾವರಿ ಆಧಾರಿತ ಕೃಷಿಕರು ಸಾಲ ಮಾಡಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಆದರೂ ರಾಜ್ಯ ಸರ್ಕಾರ ರೈತರಿಗೆ ಬೆಳೆವಿಮೆ, ಬೆಳೆನಷ್ಟ ಪರಿಹಾರ ನೀಡದೆ ಅನಗತ್ಯ ಕಾಲಹರಣ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
‘ಬರಪೀಡಿತ ಪ್ರದೇಶಗಳ ರೈತರಿಗೆ ಪ್ರತಿ ಎಕರೆಗೆ ₹ 20 ಸಾವಿರ ಪರಿಹಾರ, ರೈತ ಕುಟುಂಬಗಳಿಗೆ ಉಚಿತ ಪಡಿತರ ವಿತರಿಸಬೇಕು. ಪಂಪ್‌ಸೆಟ್‌ಗಳಿಗೆ 12 ಗಂಟೆ ವಿದ್ಯುತ್‌ ಸರಬರಾಜು ಮಾಡಬೇಕು. ಗೋಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಗುಣಮಟ್ಟದ ಮೇವು ಒದಗಿಸಬೇಕು’ ಎಂದು ಆಗ್ರಹಿಸಿದರು.
 
ರೈತ ಸಂಘದ ಮುಖಂಡರಾದ ಬಯಲಪ್ಪ, ಎಂ.ಎಸ್‌.ಕರಿಸಿದ್ದಯ್ಯ, ಗಾಳಪ್ಪನವರ ತಿಮ್ಮಣ್ಣ, ಎಂ.ಎಸ್‌.ಚನ್ನಕೇಶವಮೂರ್ತಿ, ಡಿ.ಉಪ್ಪಾರಹಟ್ಟಿ ಈರಣ್ಣ, ತಳಕು ನಾಗರಾಜಪ್ಪ, ಶ್ರೀಕಂಠಮೂರ್ತಿ, ರುದ್ರಪ್ಪ ರೆಡ್ಡಿ, ಓಬಣ್ಣ, ರೆಡ್ಡಿನಾಯ್ಕ, ಅಪ್ಸರ್‌ ರೆಡ್ಡಿ, ಡಿ.ರಾಜಣ್ಣ, ನಗರಂಗೆರೆ ಸುರೇಶ್‌, ಶಶಿಕುಮಾರ್‌ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT