ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಸದುಪಯೋಗಪಡಿಸಲು ಸಲಹೆ

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಅಭಿನಂದನಾ ಸಮಾರಂಭ 
Last Updated 18 ಏಪ್ರಿಲ್ 2017, 4:30 IST
ಅಕ್ಷರ ಗಾತ್ರ
ಕಲಬುರ್ಗಿ:  ಕರ್ನಾಟಕ ಸರ್ಕಾರದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧಕರಿಗೆ ಕೊಡ ಮಾಡುವ ಡಾ. ರಾಜಾರಾಮಣ್ಣ ಪ್ರಶಸ್ತಿಗೆ (2015–16) ಭಾಜನರಾಗಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಅವರು ಪ್ರಶಸ್ತಿಯ ಮೊತ್ತ ₹75 ಸಾವಿರ ಅನ್ನು ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ‘ಚಿನ್ನದ ಪದಕ’ ಅನುಷ್ಠಾನಕ್ಕೆ ನೀಡಿದರು.
 
ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕುಲಸಚಿವರಾದ ಪ್ರೊ.ದಯಾನಂದ ಅಗಸರ ಹಾಗೂ ಡಾ. ಸಿ.ಎಸ್.ಪಾಟೀಲ ಅವರಿಗೆ ಚೆಕ್ ಅನ್ನು ಹಸ್ತಾಂತರಿಸಿದರು. 
 
ಜವಾಬ್ದಾರಿ ಹೆಚ್ಚಿಸಿದ ಪ್ರಶಸ್ತಿ:
ಬಳಿಕ ಮಾತನಾಡಿದ ನಿರಂಜನ, ‘ಡಾ.ರಾಜಾರಾಮಣ್ಣ ಪ್ರಶಸ್ತಿ ಲಭಿಸಿರುವುದಕ್ಕೆ ತುಂಬ ಖುಷಿಯಾಗಿದೆ. 10 ವರ್ಷಗಳ ಹಿಂದೆ ನನಗೆ ಡಾ. ಸಿ.ವಿ.ರಾಮನ್ ಪ್ರಶಸ್ತಿ ದೊರಕಿತ್ತು. ಆ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದ ಪರಿಣಾಮ, ಇಂದು ಈ ಪ್ರಶಸ್ತಿ ಒಲಿದು ಬಂದಿದೆ.

ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಪಡೆಯುವ ವಿದ್ಯಾರ್ಥಿಗೆ ಪ್ರತಿ ವರ್ಷ ಚಿನ್ನದ ಪದಕ ನೀಡುವ ಉದ್ದೇಶದಿಂದ ಪ್ರಶಸ್ತಿಯ ಮೊತ್ತವನ್ನು ವಿಶ್ವವಿದ್ಯಾಲಯಕ್ಕೆ ನೀಡುತ್ತಿದ್ದೇನೆ’ ಎಂದು ಹೇಳಿದರು.
 
‘ಪತ್ನಿ ಭಾರತಿ ಯಾವ ಕಾರ್ಯಕ್ರಮಗಳಲ್ಲೂ ನನ್ನೊಂದಿಗೆ ವೇದಿಕೆ ಹಂಚಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ನಾವಿಬ್ಬರೂ ಇಲ್ಲಿ ಸೇರಿದ್ದೇವೆ. ಅವಳನ್ನು ನಾನು ಹೆಚ್ಚಾಗಿ ಎಲ್ಲಿಯೂ ಕರೆದುಕೊಂಡು ಹೋಗಿಲ್ಲ. ಕಾರಣ ಇಷ್ಟೆ, ನನಗೆ ಓಡುವ ಧಾವಂತ, ಗುರಿ ಮುಟ್ಟುವ ತವಕ ಇತ್ತು. ಹೀಗಾಗಿ ನನ್ನ ಪಾಡಿಗೆ ನಾನು ಓಡುತ್ತಲೇ ಇದ್ದೆ, ಪತ್ನಿ ಮನೆಯಲ್ಲಿ ಉಳಿದುಕೊಂಡು ನಾನು ಗುರಿ ತಲುಪಲು ನೆರವಾದಳು’ ಎಂದು ಭಾವುಕರಾಗಿ ನುಡಿದರು.
 
‘ಚಿತ್ರದುರ್ಗ ಜಿಲ್ಲೆಯ ಬಹದ್ದೂರಘಟ್ಟದ ಕೃಷಿ ಕುಟುಂಬದಿಂದ ಬಂದ ನಾನು, ಪಿಎಚ್.ಡಿ ಅಧ್ಯಯನ ಮಾಡಿದ್ದು, ವಿಜ್ಞಾನಿಯಾಗಿದ್ದು ದೊಡ್ಡ ಸಾಧನೆಯೇ. ನಾನು ಕನಸು ಕಟ್ಟಿಕೊಂಡು ಬಂದವನಲ್ಲ. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದೆ ಬಂದವನು.
 
ಆದ್ದರಿಂದ ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.  ಹಿರಿಯ ವೈದ್ಯ ಡಾ. ಪಿ.ಎಸ್.ಶಂಕರ, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಲಕ್ಷ್ಮಣ ರಾಜನಾಳಕರ್, ಸಿಂಡಿಕೇಟ್ ಸದಸ್ಯ ವಾಹಿದ್ ಅಲಿ, ವಿದ್ಯಾ ವಿಷಯಕ್ ಪರಿಷತ್ ಸದಸ್ಯ ಯಂಕಪ್ಪ ಓಂಕಾರ ಇದ್ದರು.
***
ಕುಲಪತಿ ನಿರಂಜನ ಹೇಳಿದ್ದು..
ವಿ.ವಿಗೆ ದ್ವಿತೀಯ ರ್‍ಯಾಂಕ್: ‘ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಉನ್ನತ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರವು ನೇಮಿಸಿದ್ದ ಐಕೇರ್ ರೇಟಿಂಗ್ ಏಜೆನ್ಸಿಯು ರಾಜ್ಯದ 40 ವಿಶ್ವವಿದ್ಯಾಲಯಗಳಿಗೆ ರ್‍ಯಾಂಕ್‌ಗಳನ್ನು ನೀಡಿದ್ದು, ಅದರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ದ್ವಿತೀಯ ರ್‍ಯಾಂಕ್ ಪಡೆದಿದೆ.

‘₹1 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ’ : ಸಂಶೋಧನಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ₹1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಲಾಗುವುದು.

‘ಕ್ರಾಪ್ ಕ್ಲಿನಿಕ್‌’ ಗೆ ಚಿಂತನೆ: ರೈತರಿಗೆ ಮಾಹಿತಿ ನೀಡುವ ಕ್ರಾಪ್ ಕ್ಲಿನಿಕ್ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಕ್ಲಿನಿಕ್‌ನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಬಳಕೆ ವಿಧಾನ ಸೇರಿದಂತೆ ರೈತರಿಗೆ ಎಲ್ಲ ರೀತಿಯ ಮಾಹಿತಿ ನೀಡಬಹುದಾಗಿದೆ.
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT