ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಶುದ್ಧ ಕುಡಿವ ನೀರು: ರೋಗ ಭೀತಿ

ತರನಳ್ಳಿ ಗ್ರಾಮದಲ್ಲಿ ಮೂಲ ಸೌಕರ್ಯದ್ದೇ ಕೊರತೆ l ಅಧಿಕಾರಗಳ ನಿರ್ಲಕ್ಷ್ಯ; ಗ್ರಾಮಸ್ಥರ ಆರೋಪ
Last Updated 18 ಏಪ್ರಿಲ್ 2017, 4:45 IST
ಅಕ್ಷರ ಗಾತ್ರ
ಭಾಲ್ಕಿ: ಅಸಮರ್ಪಕ ಚರಂಡಿ, ಹದಗೆಟ್ಟ ರಸ್ತೆ. ನೀರು ಶುದ್ಧೀಕರಣ ಘಟಕ ಇದ್ದರೂ ಸಿಗದ ಶುದ್ಧ ಕುಡಿಯುವ  ನೀರು. ಶೌಚಾಲಯ ಕಾಣದ ಗ್ರಾಮ. ಸಾಂಕ್ರಾಮಿಕ ರೋಗಗಳ ಭಯದಲ್ಲಿ ಗ್ರಾಮಸ್ಥರು.
 
ಇದು ತಾಲ್ಲೂಕು ಕೇಂದ್ರದಿಂದ 18 ಕಿಲೋ ಮೀಟರ್‌ ದೂರದಲ್ಲಿರುವ ತರನಳ್ಳಿ ಗ್ರಾಮದ ಚಿತ್ರಣ. ‘ಹಲಬರ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ ಈ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಜನಸಂಖ್ಯೆ ಇದೆ. ಆದರೆ ಮೂಲ ಸೌಕರ್ಯ ಇಲ್ಲ. ಇದರಿಂದ ಸಮಸ್ಯೆಗಳಲ್ಲಿಯೇ ಗ್ರಾಮಸ್ಥರು ಜೀವನ ಸಾಗಿಸುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
 
‘ಊರಿನ ಬಹುತೇಕ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಿಲ್ಲ. ರಾತ್ರಿ ಸಮಯದಲ್ಲಿ ಓಡಾಡಲು ತೊಂದರೆಯಾಗುತ್ತದೆ. ಅನೇಕ ಸಾರಿ ಮಕ್ಕಳು, ವಯೋವೃದ್ಧರು ಕೆಸರಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ’ ಎಂದು ದೂರುತ್ತಾರೆ ರೇಷ್ಮಾಬಾಯಿ ರೇವಣಪ್ಪ ಚಳಕಾಪೂರೆ.
 
‘ಮನೆಗಳ ಹೊಲಸು ನೀರು ಹರಿದು ಹೋಗಲು ಚರಂಡಿ ಇಲ್ಲ. ಇದರಿಂದ ಕೊಳಚೆ ನೀರು ಮನೆ, ಕೊಳವೆ ಬಾವಿ ಸುತ್ತ ಸಂಗ್ರಹವಾಗುತ್ತದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಿದ್ದು, ಡೆಂಗಿ, ಕಾಲರಾ, ಮಲೇರಿಯಾ ರೋಗಗಳ ಭೀತಿ ಆವರಿಸಿದೆ. ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ.

ಆರು ತಿಂಗಳ ಹಿಂದೆ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಆದರೆ, ಇಲ್ಲಿಯವರೆಗೆ ಶುದ್ಧ ನೀರಿನ ಭಾಗ್ಯ ಲಭಿಸಿಲ್ಲ. ಶುದ್ಧ ನೀರಿನ ಘಟಕ ಉದ್ಘಾಟನೆ ಕಂಡಿಲ್ಲ. ಇದರಿಂದ ಘಟಕ ಹಾಳು ಬಿದ್ದಿದೆ’ ಎಂದು ದೂರುತ್ತಾರೆ ಗ್ರಾಮಸ್ಥರು.
 
ಗ್ರಾಮದಲ್ಲಿ ಸಮರ್ಪಕ ರಸ್ತೆ ಇರದ ಕಾರಣ ಓಡಾಡುವುದು ದುಸ್ತರವಾಗಿದೆ. ಅಸಮರ್ಪಕ ರಸ್ತೆಯಿಂದ ರಾತ್ರಿ ವೇಳೆ ಹಲವರು ಬಿದ್ದು ಗಾಯಗೊಂಡಿದ್ದಾರೆ ಎನ್ನುತ್ತಾರೆ ಗ್ರಾಮದ ವೀರಶೆಟ್ಟಿ.
 
‘ಗ್ರಾಮದ ಸಮಸ್ಯೆ ಬಗ್ಗೆ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕಿದ್ದರೂ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಹೊಲಸು ನೀರು ಹರಿಯುವ ಕಡೆಗಳಲ್ಲಿ  ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲೂ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ಆರೋಪಿಸುತ್ತಾರೆ ವೀರಶೆಟ್ಟಿ, ಮಲ್ಲಿಕಾರ್ಜುನ ಚಳಕಾಪೂರೆ.
 
ಶೌಚಾಲಯ ಸಮಸ್ಯೆ: ‘ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. ಮನೆಗೊಂದು ಶೌಚಾಲಯ ನಿರ್ಮಾಣಕ್ಕೂ ಉತ್ತೇಜನ ನೀಡಿಲ್ಲ. ಬಯಲು ಶೌಚಾಲಯದಿಂದ ಸುತ್ತಲಿನ ವಾತಾವರಣ ಕಲುಷಿತಗೊಂಡಿದ್ದು, ಹೆಣ್ಣು ಮಕ್ಕಳ ಪಾಡು ಹೇಳತೀರದಾಗಿದೆ’ ಎಂದು ದೂರುತ್ತಾರೆ ಮಹಿಳೆಯರು.
 
ಗ್ರಾಮದ ಶಾಲೆಯಲ್ಲಿ ಆಟದ ಮೈದಾನ ಇಲ್ಲ. ಶಾಲೆಗೆ ಕಾಂಪೌಂಡ್‌ ಇಲ್ಲ. ಇದರಿಂದ ನಾಯಿ, ಜಾನುವಾರುಗಳ ಉಪಟಳ ಹೆಚ್ಚಾಗಿದೆ ಎನ್ನುತ್ತಾರೆ ಪಾಲಕರು.
 
ಗ್ರಾಮದ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟವರು ಶೀಘ್ರ ಪರಿಹರಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಬಸವರಾಜ್‌ ಎಸ್‌. ಪ್ರಭಾ
***
ಗ್ರಾಮದಲ್ಲಿನ ಸಮಸ್ಯೆಗಳಿಂದ ಜನರಿಗೆ ತೊಂದರೆ ಆಗುತ್ತಿದೆ. ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಗಿದೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಶೀಘ್ರ ಕೈಗೊಳ್ಳಲಾಗುವುದು
ಪ್ರಭು ಮೇಳಕುಂದೆ ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT