ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ಧರಣಿ

ವಿವಿಧೆಡೆ ಪ್ರತಿಭಟನೆ: ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 18 ತಾಸು ವಿದ್ಯುತ್‌ ನೀಡಲು ಒತ್ತಾಯ
Last Updated 18 ಏಪ್ರಿಲ್ 2017, 4:59 IST
ಅಕ್ಷರ ಗಾತ್ರ
ರಾಯಚೂರು: ರೈತರ ಕೃಷಿ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.
 
ರೈತರು ಬೆಳೆಯುವ ಬೆಳೆಗಳಿಗೆ ಯೋಗ್ಯ ಬೆಲೆ ನಿಗದಿಪಡಿಸಬೇಕು. ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು ಸಮರ್ಪಕ ಸಮೀಕ್ಷೆ ನಡೆದಿಲ್ಲ. ಕೂಡಲೇ ಸಮೀಕ್ಷೆ ನಡೆಸಿ ಬರ ಪರಿಹಾರ ವಿತರಿಸಬೇಕು.
 
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಶೇ 80ರಷ್ಟು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದರ ಸಮೀಕ್ಷೆಯನ್ನೂ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
 
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಜನ ಜಾನುವಾರು ಸಂಕಷ್ಟ ಪಡುವಂತಾಗಿದೆ. ಕೂಡಲೇ ಕೆರೆಗಳಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಬೇಕು ಎಂದು ಮನವಿ ಮಾಡಿದರು.
 
70 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲವಾಗುವಂತೆ ಯೋಜನೆಗಳು ರೂಪಿಸದೆ ಬಂಡವಾಳ ಶಾಹಿಗಳ ಹಣದ ಆಮಿಷಕ್ಕೆ ಕೆಲಸ ಮಾಡುತ್ತಾ ಬಂದಿವೆ. ದೇಶದ ಕೃಷಿ ಉತ್ಪನ್ನ ಹೆಚ್ಚಳ ಮಾಡಲು ಸರ್ಕಾರಗಳು ಏನೆಲ್ಲಾ ಮಾಡುತ್ತವೆ.
 
ರೈತರಿಗೆ ಸಾಲ ನೀಡುವ ಮೂಲಕ ಸಾಲಗಾರರನ್ನಾಗಿ ಮಾಡುವ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸುತ್ತಿಲ್ಲ. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಆರೋಪಿಸಿದರು.
 
ಜಿಲ್ಲಾ ಘಟಕ ಅಧ್ಯಕ್ಷ ಸೂಗೂರಯ್ಯ ಆರ್.ಎಸ್.ಮಠ, ಸದಸ್ಯರಾದ ಎಚ್.ಶಂಕರಪ್ಪ ದೇವತಗಲ್, ತಿಪ್ಪಣ್ಣ ಬಾಗಲವಾಡ, ಶಿವರಾಜ, ನಾರಾಯಣ ಕಡಗಂದೊಡ್ಡಿ, ಮಲ್ಲಿಕಾರ್ಜುನ ದಿನ್ನಿ, ಅಮರಯ್ಯ, ತಿಮ್ಮಯ್ಯ ಇದ್ದರು.
 
ಲಿಂಗಸುಗೂರು ವರದಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸಾಂಕೇತಿಕ ಧರಣಿ ನಡೆಸಿದರು.
 
ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಅವರು, ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಕೈಗೆ ಸಿಗದೆ ಕಂಗಾಲಾಗಿ ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಸಾವಿನ ಮೇಲೆ ಕೂಡ ರಾಜಕಾರಣ ಮಾಡಲಾಗುತ್ತಿದೆ ಎಂದು ಖಂಡಿಸಿದರು.
 
ರೈತರೆ ಬೆಳೆಯ ಬೆಲೆ ನಿಗದಿ ಮಾಡುವಂಥ ವಿಶೇಷ ಕಾನೂನು ಜಾರಿಗೆ ತರಬೇಕು. ನಾರಾಯಣಪುರ ಬಲದಂಡೆ ನಾಲೆ ಮತ್ತು ರಾಂಪುರ ಏತ ನೀರಾವರಿ ಯೋಜನೆ ಕಾಲುವೆಗಳ ಅಧುನೀಕರಣಗೊಳಿಸಬೇಕು. ಈಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ರಮೇಶ ಕುರಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ, ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ನೀಡುವಂತೆ ಆಗ್ರಹಿಸಿದರು.
 
ಪ್ರತಿಭಟನೆ ನೇತೃತ್ವವನ್ನು ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗೇಶ್ವರ ಗೌಡ ಪಾಟೀಲ, ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪ ಮಳ್ಳಿ, ಕಾರ್ಯದರ್ಶಿ ಬಸವರಾಜ ಗೋಡಿಹಾಳ, ತಾಲ್ಲೂಕು ಅಧ್ಯಕ್ಷ ಅಮರಯ್ಯಸ್ವಾಮಿ ಗೋನಾಳಮಠ. ಮುಖಂಡರಾದ ಹನುಮಂತಪ್ಪ ಕಿಲ್ಲಾರಹಟ್ಟಿ, ತಿಪ್ಪಣ್ಣ ದೇವರಭೂಪುರ, ಬಸನಗೌಡ, ಮಲ್ಲಪ್ಪ ನಾಯಕ, ಬಸಣ್ಣ ಜಾಂತಾಪುರ, ಬೋದು ನಾಯ್ಕ, ಶರಣಗೌಡ ಹುಲಿಗುಡ್ಡ, ಮಯೂರ, ಶರಣಪ್ಪ ಕಟಗಿ, ಶಿವಪ್ಪ ಆಶಿಹಾಳ ಭಾಗವಹಿಸಿದ್ದರು.
 
ಮಾನ್ವಿ ವರದಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಬಣ) ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
 
ಪಟ್ಟಣದ ಬಸವ ವೃತ್ತದಿಂದ ತಹಶೀಲ್ದಾರ್‌ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಪರಶುರಾಮ ಅವರಿಗೆ ಸಲ್ಲಿಸಿದರು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು.
 
ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನಿಗದಿ ಮಾಡಬೇಕು. ತಾಲ್ಲೂಕಿನಲ್ಲಿ ಬರ ಸಮೀಕ್ಷೆ ಸಮರ್ಪಕವಾಗಿ ನಡೆಸಿ ಪರಿಹಾರ ನೀಡಬೇಕು. ಗ್ರಾಮೀಣ ಭಾಗಗಳಲ್ಲಿ ಜನತೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ತಾಲ್ಲೂಕಿನ ನಂದಿಹಾಳ ಹಳ್ಳ, ಪೋತ್ನಾಳ ಹಳ್ಳ ಮತ್ತು ಕಪಗಲ್‌ ಹಳ್ಳಗಳಿಗೆ ಕಾಲುವೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
 
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟರೆಡ್ಡಿ ರಾಜಲಬಂಡಾ, ಚಾಮರಸ ಪಾಟೀಲ ಜಾನೇಕಲ್, ಬಸವರಾಜ ಕೊಟ್ನೇಕಲ್, ಶಂಭನಗೌಡ, ಬಸವಲಿಂಗಪ್ಪ ಉಟಕನೂರು, ರಮೇಶ ಉಟಕನೂರು, ಹನುಮಂತ ರಾಜಲಬಂಡಾ, ಹನುಮಂತ ಪಾತಾಪುರ, ಮಲ್ಲಯ್ಯ ಉಟಕನೂರು, ಹನುಮೇಶ ಬೆಳವಾಟ ಭಾಗವಹಿಸಿದ್ದರು.
****
ವಿವಿಧ ಬೇಡಿಕೆ: ರೈತ ಸಂಘ ಮನವಿ
ಮಸ್ಕಿ:
ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಇಲ್ಲಿಯ ಶಾಸಕರ ಕಚೇರಿ ಮುಂದೆ ವಿಶೇಷ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ವಿಶೇಷ ತಹಶೀಲ್ದಾರ್‌ ಅನೀಲಕುಮಾರ, ಶಾಸಕರ ಸರ್ಕಾರಿ ಆಪ್ತ ಸಹಾಯಕ ಪಂಪನಗೌಡ ಪಾಟೀಲ ಮನವಿ ಸ್ವೀಕರಿಸಿದರು.

ಜಿಲ್ಲೆಯಾದ್ಯಂತ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಅಧಿಕಾರಿಗಳು ಒಕ್ಕಲೆಬ್ಬಿಸುವ ಮೂಲಕ ಸರ್ಕಾರದ ಆದೇಶ ಗಾಳಿಗೆ ತೂರಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
 
ಸತತ ಬರಗಾಲ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಾಲ ಮಾನ್ನಾ ಮಾಡಬೇಕು.

ಜಾನುವಾರುಗಳಿಗೆ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಹೋಬಳಿ ಮಟ್ಟದಲ್ಲಿ ಮೇವು ಬ್ಯಾಂಕ್‌ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ರೈತ ಮುಖಂಡ ಚನ್ನಪ್ಪ ಕೊಟ್ರಕಿ, ಗಂಗಪ್ಪ ತೋರಣದಿನ್ನಿ, ರಾಮಚಂದ್ರಪ್ಪ, ಕೆ.ನಾಗಲಿಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT