ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಮಟ್ಟದಲ್ಲೇ ಅನುದಾನ ಬಿಡುಗಡೆಗೆ ಕ್ರಮ

Last Updated 18 ಏಪ್ರಿಲ್ 2017, 5:22 IST
ಅಕ್ಷರ ಗಾತ್ರ

ಹಾವೇರಿ: ‘ತ್ವರಿತಗತಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳುವ ಸಲುವಾಗಿ ಟಾಸ್ಕ್‌ಫೋರ್ಸ್‌ ಅನುದಾನವನ್ನು ಜಿಲ್ಲಾ ಮಟ್ಟದಲ್ಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಂಚಾಯತ್‌ರಾಜ್ ಮತ್ತು  ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು. ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ‘ಬರ ಪರಿಸ್ಥಿತಿ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

‘ಸಮಸ್ಯಾತ್ಮಕ ಹಳ್ಳಿಗಳ ಆಧಾರದಲ್ಲಿ ತಾಲ್ಲೂಕಿಗೆ ಹಣ ಬಿಡುಗಡೆ ಮಾಡಬೇಕು’ ಎಂದು ಶಾಸಕ ಬಸವರಾಜ ಶಿವಣ್ಣನವರ ಹಾಗೂ ಮನೋಹರ್ ತಹಸೀಲ್ದಾರ್‌ ಸಚಿವರನ್ನು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಚಿವರು,    ‘ಟಾಸ್ಕ್‌ಫೋರ್ಸ್‌ಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇಂತಹ ಹಳ್ಳಿಗಳಿಗ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ’ ಎಂದರು.

ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕಿನ ಅಧಿಕಾರಿಗಳ ವರದಿಯಲ್ಲೇ ವ್ಯತ್ಯಾಸ ಪತ್ತೆ ಹಚ್ಚಿದ ಸಚಿವರು, ‘ಇದು ಬರಗಾಲ. ಸಮರ್ಪಕ­ವಾಗಿ ಕೆಲಸ ಮಾಡಿ. ತಪ್ಪು ಮಾಹಿತಿ ನೀಡಬೇಡಿ’ ಎಂದು ಸೂಚಿಸಿದರು.‘ಕುಡಿಯುವ ನೀರಿನ ಬಗ್ಗೆ ಸಹಾಯವಾಣಿಗೆ ಬಂದ ಕರೆಗಳು, ಮಾಧ್ಯಮ ವರದಿಗಳು, ಜನರ ದೂರುಗಳನ್ನು ದಾಖಲಿಸಿಕೊಂಡು ತಕ್ಷಣವೇ ಕ್ರಮಕೈಗೊಳ್ಳಬೇಕು. ಇವೆಲ್ಲ­ವನ್ನೂ ದಾಖಲಿಸಿಕೊಂಡ ಪ್ರತಿ ತಿಂಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಆಯುಕ್ತರಿಗೆ ವರದಿ ನೀಡಬೇಕು’ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.‘ಕೊಳವೆಬಾವಿಗಳ ಸ್ಥಿತಿಗತಿ ಬಗ್ಗೆ ವಿವರ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕದ ಕೊಳವೆಬಾವಿಗಳು ಬತ್ತಿ ಹೋದರೆ, ಟ್ಯಾಂಕರ್ ಮೂಲಕ ನೀರು ಪೂರೈಸಬೇಕು’ ಎಂದು ಸೂಚನೆ ನೀಡಿದರು.

ನರೇಗಾ: ‘ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಪ್ರತಿ ಪಂಚಾಯ್ತಿಯಲ್ಲಿ ಒಂದು ಸಾಮು­ದಾಯಿಕ ಕಾಮಗಾರಿ ಕೈಗೆತ್ತಿಕೊಳ್ಳ­ಬೇಕು. ಕೃಷಿ ಇಲಾಖೆಯು ಹೊಲ, ಬದುಗಳಲ್ಲಿ ‘ನರೇಗಾ’ ಮೂಲಕ ಕಾಮಗಾರಿ ನಡೆಸಬೇಕು’ ಎಂದು ಸೂಚನೆ ನೀಡಿದರು. ‘ನರೇಗಾ ಕೂಲಿ ಪಾವತಿಯು 15 ದಿನಕ್ಕಿಂತ ಹೆಚ್ಚು ವಿಳಂಬವಾದರೆ ಅಧಿಕಾರಿಗಳೇ ನೇರ ಹೊಣೆಗಾರರು. ದಂಡ ಹಾಕಲಾಗುವುದು’ ಎಂದ ಅವರು, ‘ಹುರುಳಿಕೊಪ್ಪಿ ಮತ್ತು ಹತ್ತಮತ್ತೂರಿನಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಬಗ್ಗೆ ವರದಿ ನೀಡಬೇಕು’ ಎಂದರು.

‘ಸಿಎಜಿ ವರದಿಯಲ್ಲಿ ಆಕ್ಷೇಪಿಸ­ಲಾಗಿದ್ದ ₹ 684 ಕೋಟಿಯ ಹಗರಣ­ವನ್ನು ಸರ್ಕಾರವು ಲೋಕಾ­ಯುಕ್ತಕ್ಕೆ ಒಪ್ಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಹಲವು ಪಿಡಿಓಗಳಿಗೆ ನೋಟಿಸ್‌ ಜಾರಿ ಮಾಡಿದೆ. ಇದರಿಂದ ಹಲವರು ವಿಚಲಿತರಾಗಿದ್ದಾರೆ. ಆದರೆ, ಪ್ರಮಾಣಿಕ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಬದ್ಧ’ ಎಂದರು.‘ಸಿಇಓ ಅವರು ಪಿಡಿಓಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದ ಪರಿಣಾಮ ನರೇಗಾ ಪಾವತಿ ವಿಳಂಬವಾಗುತ್ತಿದೆ’ ಎಂದು ಶಾಸಕ ಯು.ಬಿ. ಬಣಕಾರ ಆರೋಪಿಸಿದರು.

‘ಕೆರೆ ಸಂಜೀವಿನಿ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ಶಾಸಕ ತಹಸೀಲ್ದಾರ್‌ ಮಾಡಿದರು. ‘ಸಿ.ಎಂ. ರಾಜ್ಯದ ಎಲ್ಲ ಸಿಇಓಗಳ ಜೊತ ವೀಡಿಯೊ ಕಾನ್ಫರೆನ್ಸ್‌ ನಡೆಸಲಿದ್ದಾರೆ. ಆಗ ಗಮನಕ್ಕೆ ತರುತ್ತೇನೆ’ ಎಂದು ಸಚಿವರು ಹೇಳಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಉಪಾಧ್ಯಕ್ಷೆ ಮಮತಾಜಬಿ ತಡಸ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಎಚ್.ಸಿ. ಪ್ರಕಾಶ್, ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಉದಯ ಪ್ರತಾಪ್ ಸಿಂಗ್, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ, ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಬಿ.ಆಂಜನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT