ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಸ್ಪತ್ರೆ ಸೆಡ್ಡು

ಹೆರಿಗೆ ಪ್ರಕರಣಗಳಲ್ಲಿ ಗಮನಾರ್ಹ ಸಾಧನೆ; ವೈದ್ಯಕೀಯ ಸೇವೆಯಲ್ಲಿ ಸುಧಾರಣೆ
Last Updated 18 ಏಪ್ರಿಲ್ 2017, 5:47 IST
ಅಕ್ಷರ ಗಾತ್ರ
ಕೋಲಾರ: ಸರ್ಕಾರಿ ಆಸ್ಪತ್ರೆ ಎಂದರೆ ಸಮಸ್ಯೆಗಳ ಆಗರ ಎಂಬ ಭಾವನೆ ಜನರಲ್ಲಿ ಆಳವಾಗಿ ಬೇರೂರಿದ್ದು, ಈ ಆಸ್ಪತ್ರೆಗಳಿಗೆ ಬರಲು ರೋಗಿಗಳು ಹಿಂದೇಟು ಹಾಕುವುದು ಸಹಜ. ಆದರೆ, ಇದಕ್ಕೆ ಅಪವಾದ ಎಂಬಂತೆ ನಗರದ ಶ್ರೀ ನರಸಿಂಹರಾಜ (ಎಸ್‌ಎನ್ಆರ್‌) ಜಿಲ್ಲಾ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ.
 
ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್‌ ಅವರಿಂದ 1937ರಲ್ಲಿ ಲೋಕಾರ್ಪಣೆಯಾದ ಈ ಆಸ್ಪತ್ರೆಯು 80 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ಒಂದು ಕಾಲಕ್ಕೆ ಸರ್ಕಾರಿ ಆಸ್ಪತ್ರೆಗಳಂತೆಯೇ ಹದಗೆಟ್ಟಿದ ಈ ಆಸ್ಪತ್ರೆಯು ಮೂರ್‌್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.
 
ಗುಣಮಟ್ಟದ ವೈದ್ಯಕೀಯ ಸೇವೆ, ಸ್ವಚ್ಛತೆ, ಔಷಧಗಳ ಲಭ್ಯತೆ, ವೈದ್ಯಕೀಯ ಸಿಬ್ಬಂದಿ, ಸುಸಜ್ಜಿತ ವಾರ್ಡ್‌ಗಳು ಹಾಗೂ ಮೂಲಸೌಲಭ್ಯದ ವಿಷಯದಲ್ಲಿ ಆಸ್ಪತ್ರೆಯು ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುತ್ತಿದೆ. ನಗರ ಹಾಗೂ ಜಿಲ್ಲೆಯ ವಿವಿಧ ಭಾಗದ ರೋಗಿಗಳು ಖಾಸಗಿ ಆಸ್ಪತ್ರೆಗಳ ಬದಲಿಗೆ ಎಸ್‌ಎನ್‌ಆರ್‌ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.
 
ಮುಖ್ಯವಾಗಿ ಹೆರಿಗೆಗಳ ಪ್ರಮಾಣದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಈ ಹಿಂದೆ ಇಲ್ಲಿನ ವೈದ್ಯಕೀಯ ಸಿಬ್ಬಂದಿಯು ಗರ್ಭಿಣಿಯರನ್ನು ಬೇರೆ ಆಸ್ಪತ್ರೆಗಳಿಗೆ ಹೆರಿಗೆಗೆ ಕಳುಹಿಸುತ್ತಿದ್ದರು ಎಂಬ ಆರೋಪವಿತ್ತು. ಆದರೆ, ಈಗ ವ್ಯವಸ್ಥೆ ಬದಲಾಗಿದೆ. ಗರ್ಭಿಣಿಯರು ಖಾಸಗಿ ಆಸ್ಪತ್ರೆಗಳಿಂದ ಹೆರಿಗೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಆಸ್ಪತ್ರೆಗೆ ಬರುತ್ತಿದ್ದಾರೆ.
 
ಹೆರಿಗೆ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ವೆಚ್ಚದ ನೆಪದಲ್ಲಿ ನಡೆಸುತ್ತಿದ್ದ ಬಡ ಜನರ ಸುಲಿಗೆಗೆ ಎಸ್‌ಎನ್‌ಆರ್‌ ಆಸ್ಪತ್ರೆಯು ಪರೋಕ್ಷವಾಗಿ ಕಡಿವಾಣ ಹಾಕಿದೆ. ಈ ಆಸ್ಪತ್ರೆಯಲ್ಲಿ 2015ರ ಏಪ್ರಿಲ್‌ ತಿಂಗಳಲ್ಲಿ 157 ಹೆರಿಗೆಗಳಾಗಿದ್ದವು.
 
ಆಸ್ಪತ್ರೆಯ ಸ್ಥಿತಿಗತಿ ಸುಧಾರಣೆಯಾದಂತೆ ಹೆರಿಗೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ ಮಾರ್ಚ್‌ನಲ್ಲಿ 446 ಹೆರಿಗೆಗಳಾಗಿವೆ. ಇದರಲ್ಲಿ 240 ಸಹಜ ಹೆರಿಗೆ ಹಾಗೂ 206 ಪ್ರಕರಣಗಳು ಶಸ್ತ್ರಚಿಕಿತ್ಸೆ ಮೂಲಕ ಮಾಡಿದ ಹೆರಿಗೆಗಳಾಗಿವೆ.
 
ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳಿಂದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಬರುವ ಸೂಚಿತ (ರೆಫರ್‌್ಡ) ಹೆರಿಗೆ ಪ್ರಕರಣಗಳ ಸಂಖ್ಯೆಯು ಏರಿಕೆಯಾಗಿದೆ. ಮಾರ್ಚ್‌ ತಿಂಗಳಲ್ಲಿ 137 ಹೆರಿಗೆ ಪ್ರಕರಣಗಳು ಈ ಆಸ್ಪತ್ರೆಗೆ ಸೂಚಿತವಾಗಿ ಬಂದಿವೆ.
 
ಅದೇ ರೀತಿ ಈ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗಳಿಗೆ ಸೂಚಿತವಾಗುವ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಮಾರ್ಚ್‌ನಲ್ಲಿ 6 ಪ್ರಕರಣಗಳನ್ನು ಮಾತ್ರ ಬೇರೆಡೆಗೆ ಕಳುಹಿಸಲಾಗಿದೆ.
 
ಸೌಕರ್ಯಗಳು: 400 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 24 ತಾಸು ಕಾರ್ಯನಿರತವಾಗಿರುವ ರಕ್ತನಿಧಿ ಕೇಂದ್ರವಿದೆ. ಹೊರ ರೋಗಿಗಳ ಪ್ರತಿ ವಾರ್ಡ್‌ನಲ್ಲೂ ಸ್ನಾನಕ್ಕೆ ಬಿಸಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಪ್ರತಿ ರೋಗಿಗೂ ಪ್ರತ್ಯೇಕ ಫ್ಯಾನ್‌ ಸೌಲಭ್ಯ ಒದಗಿಸಲಾಗಿದೆ.
 
ಈ ಹಿಂದೆ ರೋಗಿಗಳು ಅಗತ್ಯ ಸಂದರ್ಭಗಳಲ್ಲಿ ರಕ್ತಕ್ಕಾಗಿ ಖಾಸಗಿ ಆಸ್ಪತ್ರೆಗಳು ಅಥವಾ ರಕ್ತನಿಧಿ ಕೇಂದ್ರಗಳಿಗೆ ಅಲೆಯುವ ಪರಿಸ್ಥಿತಿ ಸ್ಥಿತಿ. ಆದರೆ, ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ. ಆಸ್ಪತ್ರೆಯಲ್ಲಿ ಸುಮಾರು ₹ 85 ಲಕ್ಷ ವೆಚ್ಚದಲ್ಲಿ ರಕ್ತ ವಿದಳನ ಘಟಕ ಆರಂಭಿಸುವ ಪ್ರಯತ್ನ ಮುಂದುವರಿದಿದೆ.
 
ಎನ್‌ಎನ್‌ಎಫ್ ಮಾನ್ಯತೆ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹಾಗೂ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ಬೆಂಗಳೂರಿನ ಸೆಂಟ್‌ ಜಾನ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆಗಾಗಿ ಸುಸಜ್ಜಿತ ತೀವ್ರ ನಿಗಾ ಘಟಕ ಆರಂಭಿಸಲಾಗಿದೆ. ಈ ಘಟಕದಲ್ಲಿ ತಾಯಿ ಮತ್ತು ಮಗುವಿನ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
 
ನವಜಾತ ಶಿಶುಗಳ ಆರೈಕೆಗಾಗಿ ಆಸ್ಪತ್ರೆಯಲ್ಲಿ ಕಾಂಗರೊ ಮದರ್ ಕೇರ್‌ ಘಟಕ ತೆರೆಯಲಾಗಿದೆ. ಆಸ್ಪತ್ರೆಯು ಮಕ್ಕಳ ಆರೈಕೆ ಮತ್ತು ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಆಸ್ಪತ್ರೆಯ ಮಕ್ಕಳ ಘಟಕಕ್ಕೆ ಮಾರ್ಚ್‌ ತಿಂಗಳಲ್ಲಿ ರಾಷ್ಟ್ರೀಯ ನವಜಾತ ಶಿಶುಪಾಲನಾ ಸಂಸ್ಥೆಯ (ಎನ್‌ಎನ್‌ಎಫ್) ಮಾನ್ಯತೆ ಸಿಕ್ಕಿದೆ.
***
ಗಣನೀಯ ಏರಿಕೆ
‘ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೆರಿಗೆ ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. ಅದೇ ರೀತಿ ಆಸ್ಪತ್ರೆಯ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಆರ್‌.ಶಿವಕುಮಾರ್‌ ತಿಳಿಸಿದರು.

‘ಇದರಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳ ಬದಲಿಗೆ ಎಸ್‌ಎನ್‌ಆರ್‌ ಆಸ್ಪತ್ರೆಗೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆಗೆ ಮತ್ತಷ್ಟು ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಪ್ರಯತ್ನ ಮಾಡುತ್ತೇವೆ’

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT