ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಮ್ಮದೇವಿ ಪ್ಲೇಗಿನಮ್ಮದೇವಿ ರಥೋತ್ಸವ

Last Updated 18 ಏಪ್ರಿಲ್ 2017, 6:01 IST
ಅಕ್ಷರ ಗಾತ್ರ
ತಿಪಟೂರು: ತಾಲ್ಲೂಕಿನ ಬೆನ್ನಾಯಕನಹಳ್ಳಿ ಗ್ರಾಮದೇವತೆ ಕೆಂಪಮ್ಮದೇವಿ ಮತ್ತು ಪ್ಲೇಗಿನಮ್ಮದೇವಿ ರಥೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.
 
ಜಾತ್ರೆಯ ಆರಂಭ ದಿನವಾದ ಗುರುವಾರ ಕಂಕಣಧಾರಣೆ, ಧ್ವಜಾರೋಹಣ ಮತ್ತು ಕೆಂಪಮ್ಮದೇವಿ ಮತ್ತು ಪ್ಲೇಗಿನಮ್ಮದೇವಿ ಅವರಿಗೆ ಮದುವಣಗಿತ್ತಿ ಶಾಸ್ತ್ರ ನೇರವೇರಿತು. 
 
ನಂತರ  ಕನ್ಯೇಕಳಶ ಸ್ಥಾಪನೆಯೊಂದಿಗೆ ದೇವಿಯವರಿಗೆ ಆರತಿ ಬಾನ ನೆರವೇರಿಸಿ, ಬೆನ್ನಾಯಕನಹಳ್ಳಿ, ಗೊಲ್ಲರಹಟ್ಟಿ, ಕಲ್ಲೆಗೌಡನಪಾಳ್ಯ, ದೊಡ್ಡಮಾರ್ಪನಹಳ್ಳಿ ಸೇರಿದಂತೆ ಸುತ್ತಮುತ್ತಲ 7 ಗ್ರಾಮಗಳ ಗ್ರಾಮಸ್ಥರು ಸೇರಿ ದೇವಿಯವರಿಗೆ ತಂಬಿಟ್ಟು ಆರತಿ ಸೇವೆ ಮಾಡಿದರು. ನಂತರ ಡೊಳ್ಳು ಕುಣಿತ, ನಾಸೀಕ್ ಡೋಲ್, ಸೋಮನಕುಣಿತ  ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಗಂಗಾಸ್ನಾನ ನೆರವೇರಿತು.
 
ರಥಕ್ಕೆ ಹೂವು, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಾತ್ರಿ  ಸಂಪ್ರದಾಯಿಕವಾಗಿ ಹನುಮನಕಾಸೆ ಕಾರ್ಯಕ್ರಮ ನಡೆಯಿತು. ಹನುಮನಪಟಹೊತ್ತ ಅರ್ಚಕರು ಗ್ರಾಮದೇವತೆ ಕೆಂಪಮ್ಮದೇವಿ ಮತ್ತು ಪ್ಲೇಗಿನಮ್ಮದೇವಿ, ಚಿಕ್ಕಮ್ಮದೇವಿ ಉತ್ಸವ ಮೂರ್ತಿಗಳೊಂದಿಗೆ ಸಂಚರಿಸಿ ಗ್ರಾಮಪ್ರದಕ್ಷಣೆ ಮಾಡಿ ಬೀಳ್ಕೊಡುಗೆ ಸೇವೆ ಮಾಡಿದರು.
 
ಸಾಗಸಂದ್ರ ಅಮ್ಮನವರ ಜಾತ್ರೆ
ಗುಬ್ಬಿ: ತಾಲ್ಲೂಕು ನಿಟ್ಟೂರು ಹೋಬಳಿಯ ಸಾಗಸಂದ್ರ ಗ್ರಾಮದ ಕೆಂಪಮ್ಮದೇವಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ನಸುಕಿನಲ್ಲಿ ರಥೋತ್ಸವ ನಡೆಯಿತು.  
 
ಸಾಗಸಂದ್ರ, ಅಳಿಲುಘಟ್ಟ, ಎಂ.ಎನ್.ಕೋಟೆ ಹಾಗೂ ಚೇಳೂರು ಭಾಗದ ಭಕ್ತರು ದೇವರ ಜಾತ್ರೆಯಲ್ಲಿ ಭಾಗವಹಿಸಿದ್ದರು. ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ವಿದ್ಯುತ್ ದೀಪಾಲಂಕಾರ, ಹೂವು, ಬಣ್ಣಬಣ್ಣದ ಬಟ್ಟೆಗಳಿಂದ ಅಲಂಕರಸಿದ್ದ ಕಲ್ಲುಗಾಲಿ ರಥೋತ್ಸವ ವೈಭವಯುತವಾಗಿ ಜರುಗಿತು. 
 
ಭಾನುವಾರ ಬೆಳಿಗ್ಗೆ ನಡೆದ ಕೊಂಡೋತ್ಸವದ ಮುನ್ನ ಸಾವಿರಾರು ಮಹಿಳೆಯರು ಮಡಿಯುಟ್ಟು ಆರತಿಯೊಂದಿಗೆ ಕೊಂಡ ತುಳಿದರು. ಆರತಿ, ಮಡೆ, ದೇವಿಯ ಮೆರವಣಿಗೆಯನ್ನು ಬಸವನ ಮೇಲೆ ನಗಾರಿ ಹೊತ್ತು, ಕಹಳೆ ವಾದನದೊಂದಿಗೆ ಕರೆತರಲಾಯಿತು. 
 
ಆರತಿಗಳೊಂದಿಗೆ ದೇವಾಲಯಕ್ಕೆ ಬಂದ ಮಹಿಳೆಯರು ರಾತ್ರಿಯಿಡಿ ತಂಬಿಟ್ಟು ಆರತಿ ಅಲಂಕರಿಸಿದರು. ಭಕ್ತರು ಕೆಂಪಮ್ಮದೇವಿಗೆ ಮಡಿಲು ತುಂಬಿದರು. ಊರಿನ ಬಸವ ನಗಾರಿ ಹೊತ್ತು ಮೊದಲು ಅಗ್ನಿಕೊಂಡ ಪ್ರವೇಶಿತು. ನಂತರ ಸಾವಿರಾರು ಭಕ್ತರು ತಮ್ಮ ಹರಕೆ ತಿರಿಸಿಕೊಳ್ಳಲು ಕೊಂಡ ತುಳಿದು ನಂತರ ದೇವಿಯ ದರ್ಶನ ಪಡೆದರು. 
 
ಬಸವೇಶ್ವರಸ್ವಾಮಿ ಬ್ರಹ್ಮರಥೋತ್ಸವ
ಹುಳಿಯಾರು: ಸಮೀಪದ ತೊರೆಸೂರಗೊಂಡನಹಳ್ಳಿಯ ಬಸವೇಶ್ವರಸ್ವಾಮಿ ಹಾಗೂ ಚೌಡಮ್ಮನವರ ಜಾತ್ರಾಮಹೋತ್ಸವದ ಅಂಗವಾಗಿ ಬಸವೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಸೋಮವಾರ ಸಡಗರದಿಂದ ನಡೆಯಿತು.
 
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಗ್ರಾಮಸ್ಥರೆಲ್ಲ ಸೇರಿ ರಥವನ್ನು ವಿವಿಧ ಹೂಹಾರ, ಬಣ್ಣಬಣ್ಣದ ಬಾವುಟಗಳಿಂದ ಅಲಂಕರಿಸಿದ್ದರು. ಅಗ್ನಿಕೊಂಡದ ನಂತರ ಚೌಡಮ್ಮದೇವಿಯನ್ನು ನಡೆಮುಡಿಯಲ್ಲಿ ದೇಗುಲಕ್ಕೆ ಕರೆದೊಯ್ದು ಪೂಜೆಸಲ್ಲಿಸಲಾಯಿತು. 
 
ನಂತರ ದೇವಿಯೊಂದಿಗೆ ಬಸವಣ್ಣನ ಗದ್ದಿಗೆಗೆ ಪೂಜೆ ಸಲ್ಲಿಸಿ ಅಲಂಕೃತಗೊಂಡಿದ್ದ ರಥದಲ್ಲಿ ಸ್ವಾಮಿ ಮೂರ್ತಿ ಇಟ್ಟು ಭಕ್ತರು ಜೈಕಾರ ಹಾಕುತ್ತಾ ರಥವನ್ನು ಎಳೆದು ಪಾವನರಾದರು. ರಥೋತ್ಸವದ ನಂತರ ಪಾನಕ, ಪನಿವಾರ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. 
****
ಉಡುಸಲಮ್ಮ ದೇವಿ ಜಾತ್ರೆ
ತುಮಕೂರು:
ತಿಪಟೂರು ತಾಲ್ಲೂಕಿನ ಬಳುವನೇರಲು ಗ್ರಾಮದ ಉಡುಸಲಮ್ಮ ದೇವಿ ರಥೋತ್ಸವ ಮತ್ತು ಬನ್ನಿ ಮರ (ಈಚಲು ಮರ) ಹತ್ತುವ ಆಚರಣೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ತಳಿರು ತೋರಣ, ಬಾಳೆ ಕಂದು ಮತ್ತು ವಿವಿಧ ಹೂವುಗಳಿಂದ ಅಲಂಕರಿಸಿದ್ದ ರಥವನ್ನು ಮಧ್ಯಾಹ್ನ 12.30ಕ್ಕೆ ಭಕ್ತರು ಜಯಘೋಷಗಳೊಂದಿಗೆ ಎಳೆದರು. ಬಾಳೆಹಣ್ಣನ್ನು ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.

ನಂತರ ಬಾವಿಹಟ್ಟಿಯ ಮನೆ ಬಾವಿಯ ಬಳಿಗೆ ಬಂದ ಉಡುಸಲಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು. ಮೂಲಸ್ಥಾನಕ್ಕೆ ದೇವರನ್ನು ಕರೆದೊಯ್ಯಲಾಯಿತು. ಗ್ರಾಮದ ಯುವಕರು ಓಕುಳಿ ಆಡಿದರು.

ಮಧ್ಯಾಹ್ನ 2ಕ್ಕೆ ದೊಡ್ಡನಪಾಳ್ಯದ ಸ್ವಾಮಿ ಬನ್ನಿ ಮರ (ಈಚಲು ಮರ) ಹತ್ತಿದರು. ಈ ವೇಳೆ ಭಕ್ತರು ಕೇಕೆ ಹಾಗೂ ಜಯಘೋಷ ಹಾಕುವ ಮೂಲಕ ಮತ್ತಷ್ಟು ಸಂಭ್ರಮಿಸಿದರು. ನಂತರ ಉಯ್ಯಾಲೆ ಸೇವೆ ಜರುಗಿತು.

ಮುದ್ದೇನಹಳ್ಳಿ, ಬಿ.ಹೊಸೂರು, ಬಿ.ಹೊಸಳ್ಳಿ, ದೊಡ್ಡನಪಾಳ್ಯ, ಮಲ್ಲಿದೇವಿಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT