ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಮ್‌ ಕಂಪೆನಿಯಿಂದ ವಂಚನೆ– ಆರೋಪ

Last Updated 18 ಏಪ್ರಿಲ್ 2017, 6:16 IST
ಅಕ್ಷರ ಗಾತ್ರ

ಇಳಕಲ್‌: ‘ಕಂದಾಯ ಇಲಾಖೆ, ಗಣಿ ಇಲಾಖೆ, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ ಚನ್ಹೈ ಮೂಲದ ಜೆಮ್‌ ಕಂಪೆನಿ ಬಲಕುಂದಿ ಗ್ರಾಮದ ಸರ್ವೆ ನಂಬರ್‌ 292, 293 ಹಾಗೂ 296 ರ ಜಮೀನುಗಳಲ್ಲಿ ನ್ಯಾಯಾಲಯ ಆದೇಶ ಹಾಗೂ ಸರ್ಕಾರದ ನಿಯಮ ಗಾಳಿಗೆ ತೂರಿ ಅಕ್ರಮ ಗಣಿಗಾರಿಕೆ ಮಾಡಿ, ಸರ್ಕಾರಕ್ಕೆ ಸಾವಿರಾರು ಕೋಟಿ ವಂಚನೆ ಮಾಡಿದೆ’ ಎಂದು ಜೆಡಿಎಸ್‌ ಹುನಗುಂದ ತಾಲ್ಲೂಕು ಘಟಕದ ಅಧ್ಯಕ್ಷ ಜಬ್ಬಾರ್‌ ಕಲಬುರ್ಗಿ ಆರೋಪಿಸಿದರು.

ಇಲ್ಲಿಗೆ ಸಮೀಪದ ಬಲಕುಂದಿಯಲ್ಲಿ ಜೆಮ್‌ ಕಂಪೆನಿ ನಡೆಸಿದ ಅಕ್ರಮಗಳ ತನಿಖೆಯಾಗಬೇಕು ಹಾಗೂ ಕಂಪೆನಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.ಬಲಕುಂದಿಯಲ್ಲಿ ಕೆಂಪು ಶಿಲೆಯ ಗಣಿಗಾರಿಕೆ ನಡೆಸುವ ಜೆಮ್‌ ಕಂಪೆನಿಯು ಸರ್ಕಾರದ ಸ್ವತ್ತನ್ನು ಕಬಳಿಸಿ, ಗಂಭೀರ ಪ್ರಮಾಣದ ಅಕ್ರಮ ನಡೆಸಿದೆ. ಈ ಬಗ್ಗೆ ಮಾಹಿತಿ ಇದ್ದರೂ ಜಿಲ್ಲಾಡಳಿತ ಮೌನ ವಹಿಸಿದೆ ಎಂದು ಅವರು ಆರೋಪಿಸಿದರು.

1989ರಲ್ಲಿಯೇ ಬಲಕುಂದಿಯ 292, 296 ಮತ್ತು 293 ಸರ್ವೆ ನಂಬರ್‌ನ ಜಮೀನುಗಳ ಮೇಲಿನ ಜೆಮ್‌ ಕಂಪೆನಿಯ ಸ್ವಾಧೀನವನ್ನು ಹಾಗೂ ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ಸರ್ಕಾರ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಹಾಗೂ ಜೆಮ್‌ ಕಂಪೆನಿ ಸಲ್ಲಿಸಿದ ಅರ್ಜಿಯನ್ನು ವಿವಿಧ ಹಂತದ ನ್ಯಾಯಾಲಯಗಳು ತಿರಸ್ಕರಿಸಿ, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿವೆ ಎಂದು ತಿಳಿಸಿದರು.

292ರ ಸರ್ವೆ ನಂಬರ್‌ನ 49 ಏಕರೆ ಜಮೀನಿನಲ್ಲಿ  ಮಾತ್ರ ಗಣಿಗಾರಿಕೆಯ ಅವಧಿಯ ಮುಕ್ತಾಯದವರೆಗೆ ಹಲವು ಷರತ್ತುಗಳಿಗೆ ಒಳಪಟ್ಟು ಗಣಿಗಾರಿಕೆ ಮಾಡಲು ಸುಪ್ರೀಂಕೋರ್ಟ್‌ ಮಧ್ಯಂತರ ಆದೇಶದಲ್ಲಿ ಅವಕಾಶ ನೀಡಿತ್ತು. ಇದೇ ಸಂದರ್ಭದಲ್ಲಿ ಈ ಜಮೀನಿಗೆ ಹೊಂದಿಕೊಂಡಿರುವ ಸರ್ಕಾರಿ ಜಮೀನಿನ ಎಲ್ಲ ರೀತಿಯ ಬಳಕೆಯನ್ನು ನಿರ್ಬಂದಿಸಿತ್ತು. ಆದರೆ, ನೂರಾರು ಏಕರೆ ಸರ್ಕಾರಿ ಜಮೀನಿನಲ್ಲಿ ಜೆಮ್‌ ಅಕ್ರಮ ಗಣಿಗಾರಿಕೆ ಮಾಡುತ್ತಿದೆ ಎಂದು ದೂರಿದರು.

49 ಎಕರೆಯಿಂದ ತೆಗೆದ ಗಣಿ ಗಾರಿಕೆಯ ತ್ಯಾಜ್ಯವನ್ನು ಸರ್ಕಾರಿ ಜಮೀನಿನಲ್ಲಿ ವಿಸರ್ಜಿಸಿದೆ. ಆದರೆ, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇತರ ಇಲಾಖೆಗಳು ಸರ್ಕಾರಿ ಜಮೀನಿನಲ್ಲಿರುವ ಖನಿಜ ಸಂಪತ್ತಿನ ರಕ್ಷಣೆಗೆ ಮುಂದಾಗಿಲ್ಲ ಎಂದು ದೂರಿದರು.ಜಿಲ್ಲಾಧಿಕಾರಿಗೆ ಪತ್ರವನ್ನು ತಹಶೀಲ್ದಾರ್‌ ಮೂಲಕ ಸಲ್ಲಿಸಲಾಯಿತು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ತುಂಬದ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶರಣಪ್ಪ ರಾಠೋಡ, ಹನಮಗೌಡ ಗೌಡರ, ಬಸನಗೌಡ ಪಾಟೀಲ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT