ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ, ಮಳೆ: ಮನೆ, ತೋಟಗಳಿಗೆ ಹಾನಿ

ಬುಡ ಸಹಿತ ಬಿದ್ದ ಅರಳಿ ಮರ
Last Updated 18 ಏಪ್ರಿಲ್ 2017, 6:30 IST
ಅಕ್ಷರ ಗಾತ್ರ
ಶ್ರೀರಂಗಪಟ್ಟಣ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಹಾನಿ ಸಂಭವಿಸಿದೆ.
 
ತಾಲ್ಲೂಕಿನ ಮಹದೇವಪುರ ತೋಟದ ಬಳಿ ಶಾಂತಿಕೊಪ್ಪಲು ಗ್ರಾಮದ ರಾಘವೇಂದ್ರ ಅವರ ಮನೆ ಮತ್ತು ಹೋಟೆಲ್‌ ಮೇಲೆ ಅರಳಿ ಮರ ಬುಡ ಸಹಿತ ಬಿದ್ದಿದೆ. ಇದರಿಂದ ಮನೆಯ ಒಂದು ಪಾರ್ಶ್ವ ಕುಸಿದಿದೆ. ಹತ್ತಾರು ಸೀಟುಗಳು ಮುರಿದಿವೆ. ಮನೆಯ ಒಳಗಿದ್ದ ಫ್ರಿಜ್‌್‌, ದವಸ, ಧಾನ್ಯ, ಪಾತ್ರೆ, ಬಟ್ಟೆ ಸೇರಿದಂತೆ ಹಲವು ವಸ್ತುಗಳು ಹಾನಿಗೀಡಾಗಿವೆ. 
 
ತಾಲ್ಲೂಕಿನ ಎಂ.ಶೆಟ್ಟಹಳ್ಳಿಯಲ್ಲಿ ನಾಗರತ್ನಮ್ಮ ಪುಟ್ಟಸ್ವಾಮಿ ಅವರ ಮನೆಯ ಮೇಲೆ ದೊಡ್ಡ ತೆಂಗಿನ ಮರ ಬಿದ್ದಿದೆ. ನೂರಾರು ಹೆಂಚುಗಳು ಉದುರಿವೆ. ಹತ್ತಾರು ಜಂತಿಗಳು ಮತ್ತು ಗುಜ್ಜು ಮುರಿದು ಬಿದ್ದಿವೆ. ಗೋಡೆ ಸಹ ಬಿರುಕು ಬಿಟ್ಟಿದೆ.
 
ತಾಲ್ಲೂಕಿನ ಚಿನ್ನೇನಹಳ್ಳಿ ಬಳಿ ಕುಮಾರ್‌ ಅವರ ತೋಟದಲ್ಲಿ ನುಗ್ಗೆ, ಪಪ್ಪಾಯಿ ಹಾಗೂ ಇತರ ಗಿಡಗಳು ಮುರಿದಿವೆ. ಫಲ ಬಿಡುವ ಹಂತದಲ್ಲಿದ್ದ ಸುಮಾರು 120ಕ್ಕೂ ಹೆಚ್ಚು ಮರಗಳು ನೆಲ ಕಚ್ಚಿವೆ. 
 
ಇದೇ ಗ್ರಾಮದ ಲಕ್ಷ್ಮಮ್ಮ ದಾಸಪ್ಪ ಅವರ ತೋಟದಲ್ಲಿ ಗೊನೆ ಬಿಟ್ಟಿದ್ದ ಬಾಳೆಗಿಡಗಳು ನೆಲಕ್ಕೊರಗಿವೆ. ಚಂದ್ರಪ್ಪ ಅವರ ಬೀನ್‌್ಸ ಬೆಳೆ ನೆಲ ಕಚ್ಚಿದೆ. ಶಿವಣ್ಣ ಅವರ ಆಲೆಮನೆಯ ಚಾವಣಿ ಭಾಗಶಃ ಜಖಂಗೊಂಡಿದೆ. ವಿಶ್ವೇಶ್ವರಯ್ಯ ಅವರ ರೇಷ್ಮೆ ಹುಳು ಸಾಕಣೆ ಮನೆಗೂ ಹಾನಿಯಾಗಿದೆ ಎಂದು ಕಂದಾಯ ನಿರೀಕ್ಷಕ ಅನಂತಪದ್ಮನಾಭ ತಿಳಿಸಿದ್ದಾರೆ.
 
ಮಲ್ಲೇಗೌಡನಕೊಪ್ಪಲು ಗ್ರಾಮದ ಎಂ.ಸಿ.ರಮೇಶ ಅವರ ಮನೆಯ ಚಾವಣಿಯ 20ಕ್ಕೂ ಹೆಚ್ಚು ಕಲ್ನಾರ್‌ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ತಾಲ್ಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ ಕರಿಯಯ್ಯ ಅವರ ಮನೆ ಭಾಗಶಃ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
 
ಇದೇ ಗ್ರಾಮದ ಬಸವರಾಜು ಅವರ ಆಲೆಮನೆಯ ಒಂದು ಪಾರ್ಶ್ವ ಕುಸಿದಿದೆ. ಪಟ್ಟಣದ ಪುರಸಭೆ ವೃತ್ತದ ಬಳಿ ಎರಡು ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ. ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೆ ವಿದ್ಯುತ್ ಕಡಿತವಾಗಿತ್ತು.
****
ಉರುಳಿದ ತೆಂಗು, ಅಡಿಕೆ ಮರಗಳು
ಪಾಂಡವಪುರ:
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಾಕಷ್ಟು ಹಾನಿಯಾಗಿದೆ.

ಚಿಕ್ಕಾಡೆ ಗ್ರಾಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಅವರಿಗೆ ಸೇರಿದ ತೆಂಗು ಮತ್ತೆ ಅಡಿಕೆ ಮರಗಳು ಬಿರುಗಾಳಿಗೆ ಧರೆಗುರುಳಿವೆ. 4 ತೆಂಗಿನ ಮರಗಳು ಹಾಗೂ 20ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುರುಳಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 
 
ಇದೇ ಗ್ರಾಮದ ಕೋಮಲಾ ಎಂಬುವರಿಗೆ ಸೇರಿದ 20ಕ್ಕೂ ಹೆಚ್ಚು ಅಡಿಕೆ ಮರಗಳು ಉರುಳಿವೆ. ರಾಮು ಎಂಬುವರಿಗೆ ಸೇರಿದ ಆಲೆಮನೆ ಮತ್ತು ಪಕ್ಕದಲ್ಲೇ ಇದ್ದ ಮನೆಯ ಚಾವಣಿ ಕುಸಿದು ಮನೆಯ ಸಾಮಗ್ರಿಗಳು ಮತ್ತು ಬೆಲ್ಲ ನಷ್ಟವಾಗಿದೆ.

ಪಟ್ಟಣದ ಕೋಲಪ್ಪನಬೀದಿಯ ನಿವಾಸಿ ಲಕ್ಷ್ಮಮ್ಮ ಅವರಿಗೆ ಸೇರಿದ ಮನೆಯ ಕಲ್ನಾರ್‌ಶೀಟ್‌ನ ಚಾವಣಿ ಕುಸಿದಿದೆ. ಪಟ್ಟಣದ ಹಳೇ ಅಂಚೇಕಚೇರಿ ಹತ್ತಿರದ ಜಯರಾಮು ಅವರಿಗೆ ಸೇರಿದ ಭೈರವೇಶ್ವರ ಕಂಫರ್ಟ್ಸ್‌ನ ಚಾವಣಿ ಕುಸಿದು ಮನೆಯೊಳಗಿದ್ದ ಟಿವಿ, ಗೃಹಬಳಕೆಯ ವಸ್ತುಗಳು ಸಂಪೂರ್ಣ ನಾಶವಾಗಿ ₹ 1 ಲಕ್ಷಕ್ಕೂ ಹೆಚ್ಚು ನಷ್ಟವಾಗಿವೆ.

ಕನಗನಮರಡಿ ಗ್ರಾಮವೊಂದರಲ್ಲೇ ಸುಮಾರು 4 ಆಲೆಮನೆಗಳು, 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ಗ್ರಾಮದಲ್ಲಿ ಬೋರೇಗೌಡ ಅವರ ಎರಡು ಆಲೆಮನೆಗಳ ಚಾವಣಿ ಕುಸಿದು ಒಳಗಿದ್ದ ಬೆಲ್ಲ ನೀರಿನಲ್ಲಿ ನೆನೆದು ನಾಶವಾಗಿದೆ.  ಚಂದ್ರಶೇಖರ್, ಪುಟ್ಟಸ್ವಾಮಿ, ವಾಸುದೇವ ಅವರಿಗೆ ಸೇರಿದ ಆಲೆಮನೆಗಳ ಚಾವಣಿ ಕುಸಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಇದೇ ಗ್ರಾಮದ ಸ್ವಾಮಿ, ನಾಗರಾಜು, ತುಳಿಸಿ ಚನ್ನೇಗೌಡ ಸೇರಿದಂತೆ ಹಲವು ಮಂದಿಯ 20ಕ್ಕೂ ಹೆಚ್ಚು ಮನೆಗಳ ಕಲ್ನಾರ್ ಶೀಟ್‌, ಹೆಂಚುಗಳು ಕುಸಿದಿವೆ. ಯೋಗಣ್ಣ ಅವರ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಬಾಳೆ ಗೊನೆ ಎರಡು ತಿಂಗಳಲ್ಲಿ ಕಟಾವು ಮಾಡುವ ಹಂತದಲ್ಲಿತ್ತು, ಆದರೆ, ಬಿರುಗಾಳಿಗೆ ಸಿಲುಕಿ ಸುಮಾರು 1.5 ಎಕರೆಯಷ್ಟು ಗೊನೆಗಳು ಧರೆಗುರುಳಿವೆ.

ರಾಧಾ ಅವರಿಗೆ ಸೇರಿದ 1 ಎಕರೆ ಬೀನ್ಸ್ ಬೆಳೆಯೂ ಕೂಡ ಕೆಳಗೆ ಬಿದ್ದು ನಷ್ಟವಾಗಿದೆ. ಪದ್ಮಮ್ಮ ಎಂಬುವರಿಗೆ ಸೇರಿದ 1 ಎಕರೆ ಬೀನ್ಸ್, ಪುಟ್ಟಸ್ವಾಮಿ ಎಂಬುವರಿಗೆ ಸೇರಿದ 1 ಎಕರೆ ಮೆಣಸಿನ ಬೆಳೆಯೂ ನಷ್ಟವಾಗಿದೆ. ಉಪ್ಪರಕ್ಕನ ಅಂಕೇಗೌಡ ಅವರ ಮಾವು ಬೆಳೆಯೂ ನಷ್ಟವಾಗಿದೆ. ಸುಮಾರು 25ಕ್ಕೂ ಹೆಚ್ಚು ಮಾವು ಮರಗಳು ಧರೆಗುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT