ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಪಾತ್ರೆ ಬರಿದು: ಬತ್ತಿದ ಬಾವಿಗಳು

Last Updated 18 ಏಪ್ರಿಲ್ 2017, 6:31 IST
ಅಕ್ಷರ ಗಾತ್ರ

ಶಿರಸಿ: ಬಿರು ಬೇಸಿಗೆಯಲ್ಲೂ ನೂರಾರು ಮನೆಗಳಿಗೆ ನೀರ ನೆಮ್ಮದಿ ನೀಡುತ್ತಿದ್ದ ದೇವಿಕೆರೆ ಬರಿದಾಗುತ್ತಿದೆ. ನಾಲ್ಕೈದು ಪಂಪ್‌ಸೆಟ್‌ಗಳು ಸತತ ಹತ್ತು ದಿನಗಳಿಂದ ಕೆರೆಯ ನೀರನ್ನು ಖಾಲಿ ಮಾಡುತ್ತಿದ್ದರೆ, ಸುತ್ತಲಿನ ಬಾವಿಗಳು ಸೊರಗಲಾರಂಭಿಸಿವೆ.ಕಸಕಡ್ಡಿ, ತ್ಯಾಜ್ಯ, ಚರಂಡಿ ನೀರು ಸೇರಿಕೊಂಡು ನಿರುಪಯುಕ್ತವಾಗಿದ್ದ ನಗರದ ಹೃದಯ ಭಾಗದಲ್ಲಿರುವ ದೇವಿ­ಕೆರೆಯ ಹೂಳೆತ್ತಿ ಕೆರೆ ಅಭಿವೃದ್ಧಿಪಡಿಸಲು ನಗರಸಭೆ ಮುಂದಾಗಿದೆ. ಹೂಳೆತ್ತುವ ಕಾಮಗಾರಿಯ ಪೂರ್ವಭಾವಿಯಾಗಿ ನೀರನ್ನು ಖಾಲಿ ಮಾಡಿ ಕೆರೆಯನ್ನು ಒಣಗಿಸಲು ಕೈಗೊಂಡಿರುವ ಪ್ರಯತ್ನ ಸತತ 10ನೇ ದಿನಕ್ಕೆ ಕಾಲಿಟ್ಟಿದೆ.

‘ಪ್ರತಿದಿನ 10 ಎಚ್‌.ಪಿ, 12 ಎಚ್‌.ಪಿ, 2 ಎಚ್‌.ಪಿ.ಯ ಮೂರು ಪಂಪ್‌­ಸೆಟ್‌ಗಳು ನಿರಂತರ 15 ತಾಸು ಕೆರೆಯ ನೀರನ್ನು ಎತ್ತುವ ಕೆಲಸ ಮಾಡು­ತ್ತಿವೆ. ಆದರೂ ಗುಂಡಿಯಲ್ಲಿ ನೀರಿನ ಸೆಲೆ ಬತ್ತುತ್ತಿಲ್ಲ. ಸಮೃದ್ಧ ಜಲಧಾರೆಯಿರುವ ಕೆರೆಯ ಮಧ್ಯದಲ್ಲಿ ಮಳೆಗಾಲದಲ್ಲಿ ಎದ್ದಂತೆ ವರತೆಗಳು ಏಳುತ್ತವೆ. ಕೆರೆಯ ನೀರು ಪೂರ್ಣ ಖಾಲಿ ಮಾಡಿದ ನಂತರ ಒಂದು ವಾರ ಒಣಗಲು ಬಿಟ್ಟು ಕಾಮಗಾರಿ ಪ್ರಾರಂಭಿ­ಸುತ್ತೇವೆ’ ಎನ್ನು­ತ್ತಾರೆ ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ.

ಕೆರೆಯಲ್ಲಿ ನೀರು ಖಾಲಿಯಾಗು­ತ್ತಿರುವ ನೇರ ಪರಿಣಾಮ ಸುತ್ತಲಿನ ಮನೆಗಳ ಬಾವಿಗಳಲ್ಲಿ ಕಾಣಿಸತೊಡಗಿದೆ. ‘ನಾವು ಇಲ್ಲಿ ಮನೆ ಕಟ್ಟಿಕೊಂಡು 14 ವರ್ಷಗಳು ಕಳೆದಿವೆ. ಒಮ್ಮೆಯೂ ನೀರಿನ ತೊಂದರೆ ಎದುರಾಗಿದ್ದೇ ಇಲ್ಲ. ಹೀಗಾಗಿ ನಗರಸಭೆಯ ನಳ ಸಂಪರ್ಕವನ್ನೂ ಪಡೆದಿಲ್ಲ. ಈ ವರ್ಷ ದೇವಿಕೆರೆ ನೀರು ಖಾಲಿ ಆಗಿದ್ದೇ ತಡ ನಮ್ಮ ಬಾವಿಗಳಲ್ಲಿ ಜಲಮಟ್ಟ ಕುಸಿದಿದೆ. ಜಲ ಸಂಕಟವನ್ನೇ ಕಾಣದ ನಾವು ಅಕ್ಕಪಕ್ಕದವರು ಈಗ ನೀರ ಚಿಂತೆಯಲ್ಲಿ ಸಿಲುಕಿದ್ದೇವೆ. ಬೇಸಿಗೆ ರಜೆಯಲ್ಲಿ ಮನೆಗೆ ಮಕ್ಕಳು, ಮೊಮ್ಮ­ಕ್ಕಳು ಬರುತ್ತಾರೆ. ಈಗಿನಿಂದಲೇ ಲೆಕ್ಕಾ­ಚಾರ ಮಾಡಿ ನೀರು ಬಳಸುತ್ತಿದ್ದೇವೆ’ ಎನ್ನುತ್ತಾರೆ ಲಲಿತಾ ಮೇಸ್ತ.

‘32 ಅಡಿ ಆಳವಿರುವ ನಮ್ಮ ಬಾವಿಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲೂ 15 ರಿಂಗ್ ನೀರು ಇರುತ್ತಿತ್ತು. ಕಳೆದ ನಾಲ್ಕೈದು ದಿನಗಳಲ್ಲಿ 12 ರಿಂಗ್ ನೀರು ಕಡಿಮೆಯಾಗಿದೆ. ಬಾವಿಯಲ್ಲಿ ನೀರು ಇಷ್ಟು ತಳ ಕಂಡಿದ್ದು ಇದೇ ಮೊದಲು’ ಎಂದು ದೇವಿಕೆರೆ ಹಿಂಭಾಗದ ನಿವಾಸಿ ಡಿ.ಆರ್.ಭಟ್ಟ ಹೇಳಿದರು.‘ಮನೆಯ ಸದಸ್ಯರೆಲ್ಲ ಊರಿಗೆ ಹೋಗಿದ್ದಾರೆ. ನೀರಿನ ಬಳಕೆ ಕಡಿಮೆ­ಯಾದರೂ ಬಾವಿಯಲ್ಲಿ ನಾಲ್ಕೈದು ಅಡಿ ನೀರು ಕೆಳಗೆ ಹೋಗಿದೆ. ನಮ್ಮ ಮನೆ ಮಾತ್ರವಲ್ಲ ಈ ಭಾಗದ ಬಹಳಷ್ಟು ಮನೆಗಳ ಬಾವಿಗಳಲ್ಲಿ ಇದೇ ಪರಿಸ್ಥಿತಿ ಇದೆ’ ಎಂದು ಮೀನಾಕ್ಷಿ ನಾಯ್ಕ ಹೇಳಿದರು. ‘ಬೆಳಿಗ್ಗೆ ಎದ್ದು ಬಾವಿ ನೀರೆತ್ತಿದ್ರೆ ಅರ್ಧ ಕೊಡ ನೀರು ಬರದಿಲ್ರಿ. ಅದೂ ಕೆಂಪು ರಾಡಿ ನೀರು ಬರ್ತದೆ. ನೀರಿಂದೇ ದೊಡ್ಡ ಚಿಂತೆ ಆಗಿದೆ’ ಎಂದರು ರೇಖಾ ಮಡ್ಡಿಕರ.

ಕೆರೆ ಸರಹದ್ದಿನಲ್ಲಿ ಜೀವಜಲ
‘ಕಳೆದ ವರ್ಷ ಕೆರೆಯ ಒಂದು ಪಾರ್ಶ್ವದ ಹೂಳು ತೆಗೆಯಲಾಗಿತ್ತು. ಇಲ್ಲಿ ಸಂಗ್ರಹಗೊಂಡಿರುವ ನೀರನ್ನು ಖಾಲಿ ಮಾಡಲು ನಗರಸಭೆ ಹರಸಾಹಸಪ­ಡುತ್ತಿದೆ. ನಾವು ಭೂಮಿಯನ್ನು ಸೈಟ್‌­ಗಳನ್ನಾಗಿ ಮಾಡಿಕೊಂಡು ನಮ್ಮ ಒಡೆತನ ಸಾಧಿಸಿದ್ದೇವೆ. ಆದರೆ ಭೂಮಿಯೊಳಗಿನ ಶಿಲಾಪದರ ಒಟ್ಟಾಗಿ ನೀರಿನ ಸಂಬಂಧ ಉಳಿಸಿಕೊಂಡಿದೆ.

ಒಂದು ಕೆರೆ ತನ್ನ ಸರಹದ್ದಿನಲ್ಲಿ ಎಷ್ಟು ಬಾವಿಗಳಿಗೆ ಜೀವಜಲ ಕೊಡುತ್ತದೆ ಎಂಬುದಕ್ಕೆ ದೇವಿಕೆರೆ ಕಣ್ಣೆದುರಿನ ನಿದರ್ಶನವಾಗಿದೆ. ಹೂಳೆತ್ತುವಾಗನೀರು ಕಡಿಮೆಯಾಗಿ ಸಣ್ಣಪುಟ್ಟ ತೊಂದರೆ­ಗಳಾಗಬಹುದು. ಒಮ್ಮೆ ಕೆರೆ ಅಭಿವೃದ್ಧಿ­ಹೊಂದಿ ನೀರು ಸಂಗ್ರಹ­ಗೊಂಡರೆ ಚೌಕಿಮಠದವರೆಗಿನ ಸಾವಿ­ರಾರು ಮನೆಗಳಿಗೆ ಲಾಭವಾಗು­ತ್ತದೆ’ ಎನ್ನುತ್ತಾರೆ ಜಲ ಕಾರ್ಯಕರ್ತ ಶಿವಾ ನಂದ ಕಳವೆ. ಕೆರೆಯನ್ನು ಒಣಗಿಸಿ ಹೂಳೆತ್ತು­ವುದರಿಂದ ಜನದಟ್ಟಣಿ ಪ್ರದೇಶಗಳಲ್ಲಿ ರಸ್ತೆಯ ಮೇಲೆ ಮಣ್ಣು ಬಿದ್ದು ಜನರಿಗೆ ಆಗುವ ತೊಂದರೆ ತಪ್ಪಿ­ಸಬಹುದು. ಹೆಚ್ಚು ಕ್ಯೂಬಿಕ್ ಮೀಟರ್ ಮಣ್ಣು ತೆಗೆದರೆ ಕೆರೆಯಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯವೂ ಹೆಚ್ಚುತ್ತದೆ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT