ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಟೊ ಮೀಟರ್‌ ತಿಂಗಳಲ್ಲಿ ಕಡ್ಡಾಯ’

Last Updated 18 ಏಪ್ರಿಲ್ 2017, 6:43 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ಮೂರು ವರ್ಷಗಳ ಹಿಂದೆಯೇ ನಗರದಲ್ಲಿ ಆಟೊ ಮೀಟರ್‌ ಕಡ್ಡಾಯಗೊಳಿಸಿ ಆದೇಶ ಹೊರಡಿಸಿ ದ್ದರೂ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎನ್‌. ಜಯರಾಮ್‌, ‘ಇನ್ನೊಂದು ತಿಂಗಳಿನಲ್ಲಿ ಮೀಟರ್‌ ಅಳವಡಿಕೆ  ಕಡ್ಡಾಯಗೊಳಿಸಿ’ ಎಂದು ಅಧಿಕಾರಿಗಳಿಗೆ ಪುನರ್‌ ಎಚ್ಚರಿಕೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.

‘ಪ್ರಯಾಣಿಕರನ್ನು ಆಟೊ ಚಾಲಕರು ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಹಲವು ದೂರುಗಳು ತಮಗೆ ಬಂದಿವೆ. ಬೆಂಗಳೂರಿನಿಂದ ₹500 ನೀಡಿ ಬೆಳಗಾವಿಗೆ ಬಂದರೆ, ಇಲ್ಲಿಂದ ತಮ್ಮ ಮನೆಗೆ ಹೋಗಲು ಆಟೊದವರು ₹800 ಕೇಳುತ್ತಾರೆ ಎನ್ನುವ ದೂರುಗಳು ಕೇಳಿಬಂದಿವೆ. ಆಟೊದವರನ್ನು ಏಕೆ ನಿಯಂತ್ರಿಸಲಾಗುತ್ತಿಲ್ಲ ಎಂದು ನನ್ನನ್ನು ಜನರು ಕೇಳುತ್ತಿದ್ದಾರೆ’ ಎಂದರು.

ಪೊಲೀಸ್‌ ಇಲಾಖೆ ಮತ್ತುಆರ್‌ಟಿಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆಟೊ ಮೀಟರ್‌ ಅಳವಡಿಸಲು ಹಾಗೂ ಅನಧಿಕೃತ ಆಟೊಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.ಡಿ.ಸಿ.ಪಿ. ಅಮರನಾಥ ರೆಡ್ಡಿ ಮಾತನಾಡಿ, ಆಟೊ ಮೀಟರ್ ಹಾಕದ ಚಾಲಕರ ವಿರುದ್ಧ ದೂರು ನೀಡಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ. ಪ್ರಯಾಣಿಕರು ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಪ್ರಿಪೇಯ್ಡ್‌ ಆಟೊ ಕೇಂದ್ರ ಪುನರ್‌ ಆರಂಭಿಸಲು ಸೂಚನೆ: ನಗರದಲ್ಲಿ ಇರುವ ಮೂರು ಪ್ರಿಪೇಯ್ಡ್‌ ಆಟೊ ಕೇಂದ್ರಗಳನ್ನು ಪುನರ್‌ ಆರಂಭಿಸಬೇಕು. ಕೇಂದ್ರಗಳಲ್ಲಿ ಆಪರೇಟರ್‌ ಅವರನ್ನು ನೇಮಿಸುವುದು ಸೇರಿದಂತೆ ಎಲ್ಲ ಸೌಕರ್ಯಗಳನ್ನು ಪೊಲೀಸರು ಮಾಡ ಬೇಕು ಎಂದು ಸೂಚನೆ ನೀಡಿದರು.

ಶಾಲಾ ಆಟೊಗಳ ಮೇಲೆ ನಿಗಾ: ಸುಪ್ರೀಂ ಕೋರ್ಟ್‌್ ನಿರ್ದೇಶನದಂತೆ ಆರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಆಟೊದಲ್ಲಿ ಕೂರಿಸುವ ಹಾಗಿಲ್ಲ. ಈ ನಿಯಮವನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಆರೋಪ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಯಾರಾದರೂ ಪಾಲಕರು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದರೆ, ಆಟೊ ಚಾಲಕ ಜೈಲಿಗೆ ಹೋಗಬೇಕಾದೀತು ಎಂದು ಜಯರಾಮ್‌ ಎಚ್ಚರಿಕೆ ನೀಡಿದರು.

ಆಗ ಸಭೆಯಲ್ಲಿ ಹಾಜರಿದ್ದ ಕೆಲವು ಆಟೊ ಚಾಲಕರು, ‘ವಿದ್ಯಾರ್ಥಿಗಳ ಪೋಷಕರು ಕೇವಲ ₹300 ಬಾಡಿಗೆ ಕೊಡುತ್ತಾರೆ. ನಮಗೆ ಸಾಕಾಗುವು ದಿಲ್ಲ. ಅದಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳನ್ನು ಹಾಕುತ್ತೇವೆ’ ಎಂದರು.ವಿದ್ಯಾರ್ಥಿಗಳಿಗೂ ಅವಕಾಶ ನೀಡಿ: ‘ಜೆ–ನರ್ಮ್‌ ಯೋಜನೆಯಡಿ ಖರೀದಿಸ ಲಾಗಿರುವ ಹೊಸ ‘ಮಿಡಿ’ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೂ ಪ್ರಯಾಣಿಸಲು ಅವಕಾಶ ನೀಡಿ’ ಎಂದು ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಅವರು ಕೆಎಸ್‌ಆರ್‌ ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಪಾಸ್‌ ಬಳಸುವ ವಿದ್ಯಾರ್ಥಿಗಳು ಪ್ರಯಾಣಿಸಿದರೆ ಸಂಸ್ಥೆಗೆ ನಷ್ಟ ಉಂಟಾಗುವುದಿಲ್ಲ. ಇತರ ಪ್ರಯಾಣಿಕರ ಜೊತೆ ಅವರಿಗೂ ಅವಕಾಶ ಕಲ್ಪಿಸಿಕೊಡಿ’ ಎಂದು ಸೂಚನೆ ನೀಡಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಬಿ. ನಲ್ವಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಆರ್. ಮಂಜು ನಾಥ, ನಾಲ್ವತವಾಡಮಠ ಮತ್ತು ಆಟೊ ಸಂಘಗಳ ಪದಾಧಿಕಾರಿಗಳು, ಸಾರ್ವ ಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT