ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಂಬಳ ಮಸೂದೆಗೆ ಶೀಘ್ರದಲ್ಲಿ ರಾಷ್ಟ್ರಪತಿ ಅನುಮೋದನೆ’

Last Updated 18 ಏಪ್ರಿಲ್ 2017, 6:44 IST
ಅಕ್ಷರ ಗಾತ್ರ
ಉಡುಪಿ: ‘ರಾಜ್ಯ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ಕರ್ನಾ ಟಕ ಕಂಬಳ ಮಸೂದೆಗೆ ಶೀಘ್ರದಲ್ಲಿಯೇ ರಾಷ್ಟ್ರಪತಿಗಳ ಅನುಮೋದನೆ ದೊರಕುವ ಸಾಧ್ಯತೆಗಳಿವೆ’ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. 
 
ಸೋಮವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಪ್ರಸ್ತಾಪಿಸಿದರು. ‘ರಾಜ್ಯ ಸರ್ಕಾರ ಸಲ್ಲಿಸಿ ರುವ ಮಸೂದೆಯಲ್ಲಿ ನಿಯಮಗಳನ್ನು ಯಾರು ರೂಪಿಸಬೇಕೆಂಬುದು ಸ್ಪಷ್ಟವಾಗಿರಲಿಲ್ಲ ಮತ್ತು ನಿರೂಪಿಸಿರಲಿಲ್ಲ ಎನ್ನುವುದನ್ನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವಾಲಯ ತಿಳಿಸಿತ್ತು.
 
ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದಂತೆ ಆ ರಾಜ್ಯವೇ ನಿಯಮಗಳನ್ನು ರೂಪಿಸಿತ್ತು. ಅದರಂತೆ ಕರ್ನಾಟಕದ ಕಂಬಳ ಮಸೂದೆಯಲ್ಲೂ ಅದನ್ನು ಉಲ್ಲೇಖಿಸಬೇಕು ಎಂದು ಸಚಿವಾಲಯ ಸೂಚಿಸಿತ್ತು.
 
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಲ್ಲಿ ಚರ್ಚಿಸಿದಾಗ ಅವರು, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾನೂನು ಕಾರ್ಯದರ್ಶಿಗಳ ಸಭೆಯನ್ನು ನಡೆಸುವ ಸಲಹೆ ನೀಡಿದ್ದರು. ಅದರಂತೆ ಸಭೆ ನಡೆದಿದೆ. ಮಂಗಳವಾರ ನಾನು ದೆಹಲಿಗೆ ಹೊರಡುತ್ತಿದ್ದು, ಈ ಬಗ್ಗೆ ಎಲ್ಲವೂ ಸರಿಯಾಗಿದ್ದಾರೆ ರಾಷ್ಟ್ರಪತಿ ಅಂಕಿತಕ್ಕೆ ಮಸೂದೆಯನ್ನು ಕಳಿಸುತ್ತೇವೆ’ ಎಂದು ಅವರು ಹೇಳಿದರು.
 
ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಒಂದು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಇರುವ ಅರ್ಹತೆಗಳ ಬಗ್ಗೆ ವರದಿ ನೀಡಲು ರಚಿಸಿದ ಸಮಿತಿಯು ತುಳುಭಾಷೆಯ ಜತೆಗೆ ಇತರ ಮೂರ್ನಾಲ್ಕು ಭಾಷೆಗಳು ಅರ್ಹವಾಗಿವೆ ಎಂದು ವರದಿ ನೀಡಿದೆ. ಆದರೆ, ದೇಶದ ವಿವಿಧ ಭಾಗಗಳ ನೂರಾರು ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಒತ್ತಡ ಹೇರಿದ್ದರಿಂದ ಈ ಪ್ರಕ್ರಿಯೆ ಮುಂದುವರಿದಿಲ್ಲ’ ಎಂದರು. 
 
‘ಎತ್ತಿನಹೊಳೆ ಯೋಜನೆಯ ಕುರಿತು ಕರಾವಳಿ ಭಾಗದ ಜನತೆಗೆ ಸರ್ಕಾರ ಮತ್ತು ನೀರಾವರಿ ಇಲಾಖೆ ಸಮರ್ಪಕ ಮಾಹಿತಿಯನ್ನು ಕೊಡಬೇಕು. ಇಲ್ಲಿ ಮಳೆಗಾಲದಲ್ಲಿ ಹರಿಯುವ ಸಾಕಷ್ಟು ಪ್ರಮಾಣದ ನೀರನ್ನು ಬಯಲುಸೀಮೆಗೆ ಕೊಂಡೊಯ್ದರೆ ಯಾವುದೇ ಸಮಸ್ಯೆ ಇಲ್ಲ.
 
ಇಲ್ಲವಾದರೆ ನೂರಾರು ಟಿಎಂಸಿ ಯಷ್ಟು ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. ಈ ನೀರನ್ನು ಸಂಗ್ರಹಿಸಿ ಬಯಲು ಸೀಮೆಯ ಜನರಿಗೆ ಕುಡಿಯಲು ಕೊಡುವುದರಲ್ಲಿ ಯಾವುದೇ ಸಮಸ್ಯೆ ಆಗಲಾರದು. ಆದರೆ, ಈ ಮಾಹಿತಿ ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಇಲ್ಲದಿರುವುದರಿಂದ ಸಮಸ್ಯೆ ಉದ್ಭವಿಸಿದೆ’ ಎಂದು ತಿಳಿಸಿದರು. 
****
ಈಗಾಗಲೇ ಜಲ್ಲಿಕಟ್ಟು ಮಸೂದೆಗೆ ರಾಷ್ಟ್ರಪತಿ ಅಂಕಿತ ಸಿಕ್ಕಿದೆ. ಹಾಗಾಗಿ, ಕಂಬಳ ಮಸೂದೆಗೆ ಯಾವುದೇ ಸಮಸ್ಯೆ ಆಗಲಾರದು.
ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT