ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ‘ಬೇಸಿಗೆ ಸಂಭ್ರಮ’ಕ್ಕೆ ಚಾಲನೆ

Last Updated 18 ಏಪ್ರಿಲ್ 2017, 6:50 IST
ಅಕ್ಷರ ಗಾತ್ರ

ಬಾಗಲಕೋಟೆ: ರಜೆಯಲ್ಲಿ ‘ಸ್ವಲ್ಪ ಓದು, ಸ್ವಲ್ಪ ಮೋಜು’ ಪರಿಕಲ್ಪನೆಯಡಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ‘ಬೇಸಿಗೆ ಸಂಭ್ರಮ’ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಗಿದೆ.
ಪ್ರತಿ ವರ್ಷ ಬರಪೀಡಿತ ತಾಲ್ಲೂಕುಗಳ ಶಾಲೆಗಳಲ್ಲಿ ಸರ್ಕಾರ ಬಿಸಿಯೂಟದ ವ್ಯವಸ್ಥೆ ಮಾಡುತ್ತಿತ್ತು. ಆದರೆ ಈ ಬಾರಿ ಊಟದ ಜೊತೆಗೆ ಮಕ್ಕಳ ಕಲಿಕೆ, ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಲು ಶಿಬಿರದಲ್ಲಿರಜೆಯ ಅವಧಿಯನ್ನು ಮಕ್ಕಳು ಅರ್ಥಪೂರ್ಣವಾಗಿ ಕಳೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಬೇಸಿಗೆಯ ಸಂಭ್ರಮ ಆಯೋಜಿಸಿದ್ದು, ಪ್ರಸ್ತಕ ಸಾಲಿನಲ್ಲಿ 6 ಮತ್ತು 7ನೇ ತರಗತಿಗಳಿಗೆ ಸೇರ್ಪಡೆಯಾಗಲಿರುವ ಮಕ್ಕಳು ಇದರಲ್ಲಿ ಭಾಗಿಯಾಗಲಿದ್ದಾರೆ.

‘ಕುಟುಂಬ, ನೀರು, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಪರಿಸರ ವಿಷಯಗಳ ಬಗ್ಗೆ ಮಾಹಿತಿ ಮತ್ತು ಕಲಿಕೆಯನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತಿದೆ. ಪ್ರತಿ ವಿಷಯಕ್ಕೆ ಒಂದು ವಾರದಂತೆ ಐದು ವಾರಗಳ ಕಾಲ (ಏಪ್ರಿಲ್‌ 17ರಿಂದ 27) ಶಿಬಿರವನ್ನು ನಡೆಸಲಾಗುತ್ತಿದೆ.ಶಿಕ್ಷಕರಿಗೂ ತರಬೇತಿ, ಪೋಷಕರಿಗೆ ಮಾಹಿತಿ ಶಿಬಿರದಲ್ಲಿ ಮಕ್ಕಳಿಗೆ ಕಲಿಕೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಮಕ್ಕಳಿಗೆ ಶಿಬಿರದ ಅಗತ್ಯದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ರಜೆಯ ಅವಧಿಯಲ್ಲಿ ಅವರನ್ನು ಬೇರೆ ಊರುಗಳಿಗೆ ಕಳುಹಿಸದಂತೆ ಮನವೊಲಿಸಲು ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಜೊತೆಗೆ ಭಿತ್ತಿಪತ್ರ, ಕರಪತ್ರಗಳ ಮೂಲಕವೂ ಮಾಹಿತಿ ನೀಡಲಾಗಿದೆ.ಶಿಬಿರದಲ್ಲಿ ತಲಾ 25 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಬಿಸಿಯೂಟದ ನಿರ್ವಹಣೆಯ ಜವಾಬ್ದಾರಿಯನ್ನು ಶಿಕ್ಷಕರೊಬ್ಬರಿಗೆ ವಹಿಸಲಾಗುತ್ತಿದೆ.

ನಿತ್ಯದ ಚಟುವಟಿಕೆ: ಶಿಬಿರದಲ್ಲಿ ಚಟುವಟಿಕೆ ಆಧಾರಿತ ವೈಯಕ್ತಿಕ ಮತ್ತು ಗುಂಪಿನಲ್ಲಿ ಕಲಿಕೆಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಗುಂಪಿನಲ್ಲಿ ಐದು ಮಕ್ಕಳನ್ನು ಸೇರಿಸಿ ದಿನಕ್ಕೆ ಐದು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕಾಗಿ ತಲಾ 15ರಿಂದ 45 ನಿಮಿಷಗಳ ಅವಧಿ ನೀಡಲಾಗುತ್ತದೆ.ವೈಯಕ್ತಿಕ ಚಟುವಟಿಕೆಯಲ್ಲಿ ಓದುವ ಅಭ್ಯಾಸ, ಗಣಿತ ಕಲಿಸಲಾಗುವುದು. ಗುಂಪು ಚಟುವಟಿಕೆಯಲ್ಲಿ ಓದಿ ಚರ್ಚಿಸುವುದು, ಮಾಡಿ ಕಲಿಯುವುದು ಹಾಗೂ ಸಮಸ್ಯೆ ಬಿಡಿಸುವುದನ್ನು ಹೇಳಿಕೊಡಲಾಗುತ್ತಿದೆ. ಈ ವೇಳೆ ಗುಂಪಿನಲ್ಲಿನ ಗೆಳೆಯರ ನಡುವೆ ಸಮನ್ವಯ ಹಾಗೂ ಸಹಕಾರ ಇರಲಿದೆ. ಇಲ್ಲಿ ಭಾಷೆ ಮತ್ತು ಗಣಿತ ವಿಷಯಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕೊನೆಗೆ ಮಕ್ಕಳ ಮೌಲ್ಯಮಾಪನವನ್ನೂ ಮಾಡಲಾಗುತ್ತದೆ. ಇದನ್ನು ಬೇಸಿಗೆ ಸಂಭ್ರಮದ ಸಂಪನ್ಮೂಲ ಶಿಕ್ಷಕರು ಹಾಗೂ ಕ್ಲಸ್ಟರ್ ಹಂತದ ಸಂಪನ್ಮೂಲ ಅಧಿಕಾರಿಗಳು, ತಾಲ್ಲೂಕು ಹಂತದಲ್ಲಿ ಸಮನ್ವಯಾಧಿಕಾರಿಗಳು ನಿರ್ವಹಣೆ ಮಾಡಲಿದ್ದಾರೆ.ಅಧಿಕಾರಿಗಳ ಮೇಲ್ವಿಚಾರಣೆ: ಬೇಸಿಗೆ ಸಂಭ್ರಮದ ಶಿಬಿರಕ್ಕಾಗಿಯೇ ಮೊಬೈಲ್ ಆ್ಯಪ್‌ ರೂಪಿಸಲಾಗಿದೆ. ಅದನ್ನು ಬಳಸಿ ಪ್ರತೀ ಹಂತದ ಚಟುವಟಿಕೆ ಹಾಗೂ ಮಕ್ಕಳ ಕಲಿಕೆಯ ಪ್ರಗತಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಆಯಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರು ತಮ್ಮ ನೋಡಲ್ ತಾಲ್ಲೂಕಿನ ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿ ದಿನ ಕನಿಷ್ಠ ಒಂದು ಶಾಲೆಗೆ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT