ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಪಕ್ಷಗಳಿಗೆ ಚುನಾವಣೆ ಚಿಂತೆ

ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ ಲೇವಡಿ
Last Updated 18 ಏಪ್ರಿಲ್ 2017, 6:53 IST
ಅಕ್ಷರ ಗಾತ್ರ
ಪಡುಬಿದ್ರಿ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ವರ್ಷಗಳಲ್ಲಿ ಎಲ್ಲವನ್ನು ಕನಸಿನಲ್ಲಿಯೇ ಕಟ್ಟಿಕೊಟ್ಟಿದ್ದಾರೆ. ಜನರಿಗೆ ನೇರವಾಗಿ ಏನನ್ನೂ ಕೊಟ್ಟಿಲ್ಲ. ಮೈಕ್ ಸಿಕ್ಕರೆ ಭರವಸೆ ನೀಡುತ್ತಾರೆ ಹೊರತು, ರಾಷ್ಟ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
 
ಕಾಪು ನಾರಾಯಣಗುರು ಸಭಾಭವ ನದಲ್ಲಿ ಸೋಮವಾರ ನಡೆದ ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾ ವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಬೆಳೆನಷ್ಟದ ಬಗ್ಗೆ ಕೇಂದ್ರಕ್ಕೆ ವರದಿ ನೀಡಿದರೂ ಏನು ಮಾಡಿಲ್ಲ. 2.5 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದರೂ, ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ.
 
ಉದ್ಯೋಗಗಳಲ್ಲಿದ್ದ ಯುವಕರು ಉದ್ಯೋಗವಿಲ್ಲದೆ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಿನ 2018ರ ವಿಧಾನಸಭಾ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ತಂತ್ರವನ್ನು ಮಾಡುತ್ತದೆ. ಕೇವಲ ಚುನಾವಣೆ ಗೆಲ್ಲುವ ಆಸಕ್ತಿ ಹೊಂದಿವೆಯೇ ಹೊರತು, ಜನಸಾಮಾನ್ಯರ ತೊಂದರೆ ಪರಿಹರಿಸುವ ಕಾಳಜಿ ಹೊಂದಿಲ್ಲ’ ಎಂದು ದೂರಿದರು.
 
‘ಹಿಂದೆ ಯುಪಿಎ ಸರ್ಕಾರ ಆಧಾರ್ ಕಾರ್ಡ್‌ ಜಾರಿಗೆ ತಂದಾಗ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ಇದೀಗ ಆಧಾರ್ ಕಾರ್ಡನ್ನೇ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಉಪಯೋಗಿಸುವಂತೆ ಮಾಡಿದೆ. ಅದೇ ರೀತಿ ಯುಪಿಎ ಸರ್ಕಾರ ಜಿಎಸ್ಟಿಯನ್ನು ಮಾಡಲು ಹೊರಟಾಗ ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ವಿರೋಧಿಸಿದ್ದರು.
 
ಆದರೆ, ಇದೀಗ ಪ್ರಧಾನ ಮಂತ್ರಿ ಯಾದಾಗ ಅದಕ್ಕೆ ಅವಕಾಶ ಮಾಡುವ ಮೂಲಕ ಇಬ್ಬಗೆ ನೀತಿ ಅನುಸರಿಸು ತ್ತಿದ್ದಾರೆ. ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಪರಿಹಾರಕ್ಕೆ ಮುಂದಾಗಿಲ್ಲ’ ಎಂದು ಟೀಕಿಸಿದರು.‘ರಾಜ್ಯ ಸರ್ಕಾರವು ಬರಗಾಲ ಹಾಗೂ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ’ ಎಂದರು.
 
ಕಾಪು, ಬೈಂದೂರು ಗುರಿ: ‘ಕರಾವಳಿ ಯಲ್ಲಿ ಜೆಡಿಎಸ್ ಶಕ್ತಿ ಕಡಿಮೆ ಇರಬಹುದು. ಪಕ್ಷ ಸಂಘಟನೆಗೆ ಒತ್ತು ನೀಡಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲಾಗುವುದು. ಪಕ್ಷವನ್ನು ಸಂಘಟಿಸಿ ಉಡುಪಿ ಜಿಲ್ಲೆಯ ಕಾಪು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಗುರಿಯಿಟ್ಟುಕ್ಕೊಳ್ಳಲಾಗಿದೆ’ ಎಂದು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್‌ ಹೇಳಿದರು.
 
‘ಕರಾವಳಿ ಸೌಹಾರ್ದತೆ  ತಾಣ. ಆದರೆ, ಇತ್ತೀಚಿನ ದಿನಗಳಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಅಲ್ಲಲ್ಲಿ ಸಭೆ ನಡೆಸಿ, ಹಳ್ಳಿ ಹಳ್ಳಿಗಳಿಗೆ ತೆರಳಿ ಶಾಂತಿ ಸೌಹಾರ್ದತೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಈ ಮೂಲಕ ಜಾತ್ಯತೀತತೆಯನ್ನು ಕರಾವಳಿ ಯಲ್ಲಿ ಭದ್ರಪಡಿಸುವ ಕೆಲಸ ಕಾರ್ಯಕ ರ್ತರಿಂದ ಆಗಬೇಕಾಗಿದೆ’ ಎಂದರು. 
 
ಸಮಾವೇಶದಲ್ಲಿ ನೂರಾರು ಕಾರ್ಯ ಕರ್ತರು ಪಾಲ್ಗೊಂಡಿದ್ದು, ಹಲವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಜೆಡಿಎಸ್‌ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಕಾರ್ಯದರ್ಶಿ ಜಯರಾಮ ಆಚಾರ್ಯ, ಕಾಪು ಕ್ಷೇತ್ರಾ ಧ್ಯಕ್ಷ ಸುಧಾಕರ ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು, ಯುವ ಜೆಡಿಎಸ್ ಅಧ್ಯಕ್ಷ ರೋಹಿತ್ ಕರಂಬಳ್ಳಿ, ಮುಖಂಡರಾದ ಎಂ.ಬಿ. ಸದಾಶಿವ, ಇಕ್ಬಾಲ್ ಅಹಮ್ಮದ್, ತಾರಾ ನಾಥ್ ಶೆಟ್ಟಿ, ಜಯಕುಮಾರ್ ಪರ್ಕಳ, ಎಂ.ಎಚ್. ಮಹಮ್ಮದ್, ಸಚಿನ್, ಮನ್ಸೂರ್, ದಕ್ಷತ್ ಶೆಟ್ಟಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT