ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

ಚಿಕ್ಕಮಗಳೂರು: ಅಂತರರಾಷ್ಟ್ರೀಯ ಹುತಾತ್ಮ ರೈತ ದಿನಾಚರಣೆ– ರೈತರ ಸಾಲ ಮನ್ನಾಕ್ಕೆ ಆಗ್ರಹ
Last Updated 18 ಏಪ್ರಿಲ್ 2017, 7:03 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
 
ಅಂತರರಾಷ್ಟ್ರೀಯ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ರಾಜ್ಯದಾದ್ಯಂತ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲೂ ರೈತರು ಪ್ರತಿಭಟಿಸಿದರು.

‘ಸತತ ಮೂರು ವರ್ಷಗಳಿಂದ ಜಿಲ್ಲೆ ಬರಗಾಲಕ್ಕೆ ತುತ್ತಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು. ಜಿಲ್ಲೆಯಲ್ಲಿ ವಾಡಿಕೆ ಮಳೆ ಶೇ 60ರಿಂದ 70 ಕಡಿಮೆಯಾಗಿದೆ. ಕೆರೆ ಕಟ್ಟೆಗಳು ಒಣಗಿವೆ. ಮಲೆನಾಡಿನ ನದಿಗಳು ಬತ್ತಿಹೋಗುವ ಹಂತದಲ್ಲಿವೆ’ ಎಂದರು. 
 
‘ಜನಜಾನುವಾರು ಕುಡಿಯುವ ನೀರಿಗೆ ಪರದಾಡುವಂತಾ ಗಿದೆ. ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ನೂಕುವ ಪರಿಸ್ಥಿತಿ ಬಂದಿದೆ. ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಯೂ ಕೈಗೆ ಸಿಗದಂತಾಗಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಮನ್ನಾ ಮಾಡಿ ರೈತರನ್ನು ಉಳಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 
ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಮಾತನಾಡಿ, ‘ಪಶ್ಚಿಮಘಟ್ಟ ಭಾಗದಲ್ಲಿ ಕೆರೆಕಟ್ಟೆಗಳು ಒತ್ತುವರಿಯಾಗಿದ್ದು, ಕೆಲ ಕೆರೆಗಳು ಹೂಳಿನಿಂದ ಮುಚ್ಚಿಹೋಗಿವೆ. ಕೆರೆಗಳ ಹೂಳೆತ್ತಿ, ಮಳೆಯ ನೀರು ಬಸಿದು ಹೋಗದಂತೆ ದುರಸ್ತಿಪಡಿಸಬೇಕು. ಬಯಲುಸೀಮೆ ಭಾಗದ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ಜಲಮೂಲ ಮತ್ತು ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳಬೇಕು’ ಎಂದರು.
 
ಸಂಘಟನೆ ಮುಖಂಡರಾದ ನಿರಂಜನಮೂರ್ತಿ, ಕೆ.ಎಸ್.ನಾಗರಾಜ್, ಬಿ.ಸಿ.ದಯಾಕರ್, ಎಂ.ಮಹೇಶ್, ಬಸವರಾಜಪ್ಪ, ಆರ್.ಮಂಜೇಗೌಡ, ಪಿ.ಕೆ.ನಾಗೇಶ್, ಹಸಿರುಸೇನೆ ಸಂಚಾಲಕ ಓಂಕಾರಪ್ಪ, ಅಣ್ಣಪ್ಪಸ್ವಾಮಿ, ಸವಿಂಜಯ್ ಜೈನ್ ಇದ್ದರು.
****
ಕುರಿ ಕಸಾಯಿಖಾನೆಗೆ ಜಾಗ: ಜೆಡಿಎಸ್‌ ಆಗ್ರಹ
ಚಿಕ್ಕಮಗಳೂರು: ನಗರದ ಅಂಬೇಡ್ಕರ್‌ ರಸ್ತೆಯಲ್ಲಿದ್ದ ಕುರಿ ಕಸಾಯಿಖಾನೆಯನ್ನು ನಗರಸಭೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ. 15 ದಿನಗಳಲ್ಲಿ ಕುರಿ ಕಸಾಯಿಖಾನೆಗೆ ನಗರಸಭೆ ಜಾಗ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್, ಎಸ್‌ಡಿಪಿಐ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾಕಾರರು ಬಿಜೆಪಿ ಹಾಗೂ ನಗರಸಭೆ ವಿರುದ್ಧ ಘೋಷಣೆ ಕೂಗಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಚ್‌. ದೇವರಾಜ್‌ ಮಾತನಾಡಿ, ‘ರಾಜ್ಯದಲ್ಲಿ ಶೇ 95 ಜನರು ಮಾಂಸ ತಿನ್ನುತ್ತಾರೆ. ಕೇವಲ ಶೇ 5 ಜನರು ಮಾಂಸ ತಿನ್ನದವರಿದ್ದಾರೆ. ಮಾಂಸ ಮಾರಾಟ ಮಾಡಿ ಬದುಕುತ್ತಿರುವ ಜನರ ಜೀವನದ ಜತೆ ನಗರಸಭೆ ಚೆಲ್ಲಾಟ ಆಡುತ್ತಿದೆ’ ಎಂದು ಕಿಡಿಕಾರಿದರು.

‘ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದ್ದು, ಅನೇಕ ವರ್ಷಗಳಿಂದ ಮಾರ್ಕೆಟ್ ರಸ್ತೆಯಲ್ಲಿ ಕುರಿ ಕಸಾಯಿಖಾನೆ ಅಸ್ತಿತ್ವದಲ್ಲಿತ್ತು. ನಗರಸಭೆ ಆಡಳಿತ ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ಕಸಾಯಿಖಾನೆಯನ್ನು ತೆರವುಗೊಳಿಸಿದೆ.
 
ಇದರಿಂದ ಕುರಿ ಮಾಂಸ ಮಾರಾಟ ಗಾರರಿಗೆ ಬಹಳ ತೊಂದರೆಯಾಗಿದೆ. 15 ದಿನಗಳ ಒಳಗಾಗಿ ಕುರಿ ಸ್ಥಳ ನೀಡದಿದ್ದರೆ ನಗರ ಸಭೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ಮುಖಂಡ ಎಚ್‌.ಎಸ್‌.ಮಂಜಪ್ಪ, ಮುನೀರ್‌, ರೆಹಮಾನ್, ನಮ್ಮ ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾ ಅಧ್ಯಕ್ಷ ನೂರುಲ್ಲಾ ಖಾನ್, ರಾಧಾ ಸುಂದರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT