ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಷಭಾವತಿ ಒಡಲಲ್ಲೇ ಇದೆ ವಿಷದ ಜ್ವಾಲೆ!

ಕಾಲುವೆಯ ಸುತ್ತಲಿನ ಮರಗಳು ನಾಶ; ಮಣ್ಣು ಸೇರುತ್ತಿರುವ ರಾಸಾಯನಿಕ
Last Updated 18 ಏಪ್ರಿಲ್ 2017, 7:23 IST
ಅಕ್ಷರ ಗಾತ್ರ
ರಾಮನಗರ: ವೃಷಭಾವತಿ ಕಣಿವೆ ಪ್ರದೇಶದಲ್ಲಿ ನದಿಗೆ ನಿರಂತರವಾಗಿ ವಿಷಪೂರಿತ ರಾಸಾಯನಿಕಗಳ ಮಿಶ್ರಣ ಕಾರ್ಯವು ನಡೆಯುತ್ತಲಿದ್ದು, ಕಾಲಕ್ರಮೇಣ ಇಡೀ ನದಿಯೇ ವಿಷಮಯವಾಗಿದೆ. ಎಚ್ಚರ ವಹಿಸಲಿದ್ದರೆ ಇಲ್ಲಿಯೂ ಮೈಸೂರು ಮಾದರಿಯಲ್ಲಿಯೇ ಅನಾಹುತವೊಂದು ಸಂಭವಿಸಬಹುದು ಎನ್ನುವ ಆತಂಕ ಇಲ್ಲಿನ ಪರಿಸರಪ್ರಿಯರದ್ದು.
 
ವೃಷಭಾವತಿ ನದಿಗೆ ಸುತ್ತಲಿನ ಕೈಗಾರಿಕೆಗಳಿಂದ ನಿರಂತರ ರಾಸಾಯನಿಕ ವಿಷದ ಮಿಶ್ರಣವಾಗುತ್ತಿದೆ. ಇದರ ಪರಿಣಾಮವು ಈಗಾಗಲೇ ಸುತ್ತಲಿನ ಪರಿಸರ ಹಾಗೂ ಜನ ಸಮುದಾಯದ ಮೇಲೆ ಉಂಟಾಗಿದೆ. ಸುತ್ತಲಿನ ಅಂತರ್ಜಲ ಕುಡಿಯಲೂ ಯೋಗ್ಯವಲ್ಲ ಎಂಬಂತಾಗಿದೆ. ಮತ್ತೊಂದೆಡೆ ಜನರು ಚರ್ಮ ಸಂಬಂಧಿ ಸೋಂಕುಗಳಿಂದ ಬಳಲುವಂತಾಗಿದೆ.
 
ಬೈರಮಂಗಲ ಕೆರೆಯಿಂದ ಕಾಲುವೆಗಳ ಮೂಲಕ ಹೊಲಗಳಿಗೆ ಹರಿಯುತ್ತಿರುವ ನೀರು ಪೂರ್ತಿ ಕಪ್ಪು ಬಣ್ಣಕ್ಕೆ ತಿರುಗಿದೆ. ಮಾತ್ರವಲ್ಲ  ಕಾಲುವೆಯ ಸುತ್ತಲಿನ ಮರಗಿಡಗಳು ಒಂದೊಂದಾಗಿ ಜೀವ ಕಳೆದುಕೊಳ್ಳುತ್ತಿವೆ.
 
ಕಾಲುವೆಯ ಎಡಬಲಕ್ಕೆ ಅರ್ಧ ಸುಟ್ಟ ಕಳೇಬರದಿಂತೆ ಈ ಮರಗಳು ಗೋಚರವಾಗುತ್ತಿವೆ. ಕೊಳಕು ನೀರು ಆಚೀಚೆ ತುಳುಕುವ ಸಂದರ್ಭ ದಡದಲ್ಲಿ ರಾಸಾಯನಿಕಗಳ ಗುಡ್ಡೆಗಳು ನಿರ್ಮಾಣವಾಗತೊಡಗಿವೆ. ಇವುಗಳಿಗೆ ಬೆಂಕಿಕಡ್ಡಿ ಗೀರಿದರೆ ಬೆಂಕಿ ಹೊತ್ತಿಕೊಳ್ಳುವಂತೆ ಇದೆ. ಆದಾಗ್ಯೂ ಈ ಮಾಲಿನ್ಯವನ್ನು ನಿಯಂತ್ರಿಸುವ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ.
 
‘ವರ್ಷಗಳಿಂದ ಈಚೆಗೆ ವೃಷಭಾವತಿ ನೀರು ವಿಪರೀತ ಕಲುಷಿತವಾಗಿದೆ. ವ್ಯವಸಾಯಕ್ಕೂ ಈ ನೀರು ಯೋಗ್ಯವಲ್ಲ  ಎಂಬಂತೆ ಆಗಿದೆ. ಕೆರೆಯ ದಡದಲ್ಲಂತೂ ಕೆಟ್ಟ ವಾಸನೆ, ದಟ್ಟವಾದ ನೊರೆ ತುಂಬುತ್ತಲಿರುತ್ತದೆ. ಹೀಗಾಗಿ ಅತ್ತ ಸುಳಿಯುವುದೇ ಕಷ್ಟವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಬೈರಮಂಗಲ ನಿವಾಸಿ ಕೃಷ್ಣಪ್ಪ.
 
‘ಈಚೆಗೆ ಕೆಲವರು ಕೆರೆಯ ಒಳಗೆ ಹುಲ್ಲು ಕುಯ್ದು ಕೊಂಡೊಯ್ಯುತ್ತಿದ್ದಾರೆ. ಇದೇ ನೀರನ್ನು ಬಳಸಿಕೊಂಡು ನೂರಾರು ಎಕರೆಯಷ್ಟು ಹಸಿರು ಮೇವು ಬೆಳೆಯಲಾಗಿದೆ. ಬರದ ಕಾರಣ ಸುತ್ತಲಿನ ರೈತರೆಲ್ಲ ಇದೇ ಮೇವು ಒಯ್ಯುತ್ತಿದ್ದಾರೆ. ಈ ಮೂಲಕ ರಾಸಾಯನಿಕಗಳು ಹಸುವಿನ ದೇಹ ಸೇರಿ, ನಾವು ಕುಡಿಯುವ ಹಾಲು ವಿಷಮಯವಾಗುತ್ತಿದೆ’ ಎಂದು ವಿವರಿಸುತ್ತಾರೆ. 
 
ಕಾರ್ಖಾನೆಗಳ ಕೊಡುಗೆ: ವೃಷಭಾವತಿಗೆ ಕೇವಲ ಬೆಂಗಳೂರಿನ ಚರಂಡಿ ನೀರು ಹರಿದಿಲ್ಲ. ಅಲ್ಲಿನ ಕೈಗಾರಿಕೆಗಳ ವಿಷವೂ ತುಂಬಿಕೊಳ್ಳುತ್ತಲಿದೆ. ಈ ಕೈಗಾರಿಕೆಗಳಲ್ಲಿ ಉಳಿಯುವಂತಹ ರಾಸಾಯನಿಕ ತ್ಯಾಜ್ಯಗಳನ್ನು ನಿತ್ಯ ನಾಲ್ಕಾರು ಟ್ಯಾಂಕರ್‌ಗಳಲ್ಲಿ ತುಂಬಿಕೊಂಡು ಜನವಸತಿ ರಹಿತ ಪ್ರದೇಶಗಳಲ್ಲಿ ಪೈಪ್‌ಲೈನ್‌ ಮೂಲಕ ನೇರವಾಗಿ ನದಿಗೆ ಚೆಲ್ಲಲಾಗುತ್ತಿದೆ.
 
ತಿಂಗಳುಗಳ ಹಿಂದೆ ಇಂತಹದ್ದೇ ಒಂದು ಘಟನೆಗೆ ಅಧಿಕಾರಿಗಳು, ಮಾಧ್ಯಮಗಳ ಕಣ್ಣಿಗೆ ಬಿದ್ದು, ಸಂಬಂಧಿಸಿದ ಟ್ಯಾಂಕರ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಆದಾದ ನಂತರವೂ ಯಾವುದೇ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂಬ ಆಕ್ಷೇಪ ಸ್ಥಳೀಯರದು.
 
ಬಿಡದಿ, ರಾಮನಗರದ ಸುತ್ತಮುತ್ತ ಬಟ್ಟೆಗೆ ಬಣ್ಣ ಹಾಕುವ ಹತ್ತಾರು ಅನಧಿಕೃತ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಲಿವೆ. ಇವುಗಳಲ್ಲಿ ಎಲ್ಲಿಯೂ ತ್ಯಾಜ್ಯ ಶುದ್ಧೀಕರಣ ಘಟಕಗಳಿಲ್ಲ. ಬದಲಾಗಿ ಎಲ್ಲ ರಾಸಾಯನಿಕಗಳನ್ನು ನೇರ ನದಿಗೆ ಚೆಲ್ಲಿ ಕೈತೊಳೆದು ಕೊಳ್ಳಲಾಗುತ್ತಿದೆ.
 
ಆಗಾಗ್ಗೆ ನೆಪಮಾತ್ರಕ್ಕೆ ಎಂಬಂತೆ ದಾಳಿಗಳು ನಡೆಯುತ್ತಲಿವೆ. ನದಿಗೆ ರಾಸಾಯನಿಕ ಚೆಲ್ಲುವ ಕಾರ್ಖಾನೆಗಳ ವಿರುದ್ಧ ಜಿಲ್ಲಾಡಳಿತವಾಗಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆಗಲಿ ನೇರ ಕ್ರಮಕ್ಕೆ ಮುಂದಾಗಿಲ್ಲ ಎಂಬ ದೂರು ಕೇಳಿಸಿದೆ. 
 
ಈ ಕುರಿತು ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಬಣ್ಣ ಹಾಕುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಚೆಗೆ ಬಿಡದಿ, ತಿಮ್ಮೇಗೌಡನ ದೊಡ್ಡಿ, ದೊಂಬರದೊಡ್ಡಿ ಮೊದಲಾದ ಕಡೆ ದಾಳಿ ನಡೆಸಲಾಗಿದ್ದು, ಸಂಬಂಧಿಸಿದ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
 
‘ನದಿಗೆ ರಾಸಾಯನಿಕ ಚೆಲ್ಲುವ ಕಾರ್ಖಾನೆಗಳ ಮೇಲೆ ನಿಗಾ ವಹಿಸುವುದು ಕಷ್ಟ. ಅಂತಹ ಘಟನೆಗಳು ವರದಿಯಾದಾಗ ಸಂಬಂಧಿಸಿದ ಕೈಗಾರಿಕೆಗಳ ಪರನಾನಗಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು’ ಎಂದು ಅವರು ಹೇಳಿದರು. 
****
ನದಿಯಲ್ಲಿನ ಮಾಲಿನ್ಯದ ವಸ್ತುಸ್ಥಿತಿ ಅರಿಯಲು ತಂಡವೊಂದನ್ನು ಕಳುಹಿಸಲಾಗುವುದು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಚಿಂತನೆ ನಡೆದಿದೆ
ಬಿ.ಆರ್‌. ಮಮತಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT