ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕೂರು; ಮಾರಮ್ಮನ ಅಗ್ನಿಕೊಂಡ ಮಹೋತ್ಸವ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ – ಗ್ರಾಮದಲ್ಲಿ ಊರ ಹಬ್ಬದ ಸಂಭ್ರಮ -
Last Updated 18 ಏಪ್ರಿಲ್ 2017, 7:25 IST
ಅಕ್ಷರ ಗಾತ್ರ
ಕೂಟಗಲ್‌ (ರಾಮನಗರ): ಅಕ್ಕೂರು ಗ್ರಾಮದ ಪುರಾಣ ಪ್ರಸಿದ್ಧ ಮಾರಮ್ಮದೇವಿಯ ಅಗ್ನಿಕೊಂಡ ಇದೇ 18ರಂದು ಬೆಳಿಗ್ಗೆ 6 ಗಂಟೆಗೆ ನಡೆಯಲಿದೆ. ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ಹಾಗೂ ಅಗ್ನಿಕೊಂಡ ವಿಜೃಂಭಣೆಯಿಂದ ನಡೆಯಲಿದೆ.
 
ಅಕ್ಕೂರು ಸೇರಿದಂತೆ ಬಾಳಲಿಂಗೇಗೌಡನದೊಡ್ಡಿ, ತಿರುಮಲೇಗೌಡನದೊಡ್ಡಿ, ಕಾಂಚಿದೊಡ್ಡಿ, ದೊಡ್ಡಗಂಗವಾಡಿ, ಜಾಲಮಂಗಲ, ಬೆಳಗವಾಡಿ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಿಂದ ಅಗ್ನಿಕೊಂಡ ಮಹೋತ್ಸವಕ್ಕೆ ಸೌದೆಯನ್ನು ಎತ್ತಿನಗಾಡಿ, ಟ್ರಾಕ್ಟರ್‌ಗಳ ಮೂಲಕ ಸೋಮವಾರ ಸಂಜೆಯಿಂದ ಜನರು ತಂದು ಅಗ್ನಿಕೊಂಡಕ್ಕೆ ಹಾಕುತ್ತಿದ್ದರು. 
 
ಸಂಜೆ ಜಾನಪದ ಕಲಾ ತಂಡಗಳಿಂದ ಅಕ್ಕೂರಿನಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ನಗಾರಿ, ತಮಟೆ ವಾದ್ಯ ಸೇರಿದಂತೆ ಹಲವು ಜಾನಪದ ಕಲಾ ತಂಡಗಳಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಆಡುಗಳು ಹಾಗೂ ಮಕ್ಕಳ ಮೂಲಕ ಕೊಂಡಕ್ಕೆ ಸೌದೆಯನ್ನು ತಂದು ಹಾಕುತ್ತಿದ್ದ ದೃಶ್ಯ ಗಮನ ಸೆಳೆಯಿತು. 
 
‘ಇಲ್ಲಿನ ದೇವಿಗೆ ನೂರಾರು ವರ್ಷಗಳ ಇತಿಹಾಸವಿದೆ. ದೇವಿಯು ಭಕ್ತರ ಕೋರಿಕೆಗಳನ್ನು ಈಡೇರಿಸಿ ಹೆಚ್ಚಿನ ಭಕ್ತ ಸಮೂಹವನ್ನು ಹೊಂದಿದ್ದಾಳೆ. ಶೀಘ್ರ ಅಭಯ ಪ್ರದಾಯಿನಿ ಎಂದು ಇಲ್ಲಿನ ದೇವಿ ಖ್ಯಾತಿ ಪಡೆದಿದ್ದಾಳೆ’ ಎಂದು ಅರ್ಚಕ ದಿವಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಭಾನುವಾರ ಆರಂಭವಾಗಿ  ಬುಧವಾರದವರೆಗೆ ಅಕ್ಕೂರು ಗ್ರಾಮದಲ್ಲಿ ಊರ ಹಬ್ಬ ನಡೆಯಲಿದೆ. ಪ್ರತಿದಿನವೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಗ್ರಾಮದಲ್ಲಿ ಕಿರಂಗೂರಮ್ಮ, ಹಳೆವೂರಮ್ಮ ದೇವಿ, ಮಾರಮ್ಮ ದೇವಿ, ಆಂಜನೇಯಸ್ವಾಮಿ ದೇವಾಲಯಗಳಿವೆ. ಪ್ರತಿ ವರ್ಷವೂ ಒಂದೊಂದು ದೇವರ ಅಗ್ನಿಕೊಂಡ ಮಹೋತ್ಸವ ನಡೆಯುತ್ತಿದೆ. ಈ ಬಾರಿ ‘ಮಾರಮ್ಮದೇವಿ’ ಅಗ್ನಿಕೊಂಡ ನಡೆಯುತ್ತಿದೆ’ ಎಂದರು. 
 
ಜನಸಾಗರ: ಜಿಲ್ಲೆಯೂ ಒಳಗೊಂಡಂತೆ ರಾಜ್ಯ ವಿವಿಧ ಭಾಗಗಳಿಂದ ಬಂದಿದ್ದ ದೇವಿಯ ಆರಾಧಕರ ಹರ್ಷೋದ್ಗಾರ ಉತ್ಸವಕ್ಕೆ ಸಾಕ್ಷಿಯಾಯಿತು. ಸೋಮವಾರ ಬೆಳಿಗ್ಗೆಯಿಂದ ಗ್ರಾಮದತ್ತ ಹರಿದು ಬರಲಾರಂಭಿಸಿದ ಭಕ್ತರು ಅಲಂಕಾರಗೊಂಡಿದ್ದ ದೇವಿಯನ್ನು ಕಂಡು ಕೃತಾರ್ಥರಾದರು. ಮಹಿಳೆಯರು, ಮಕ್ಕಳು ದೇವಸ್ಥಾನದತ್ತ ಧಾವಿಸಿ ಸರದಿ ಸಾಲಿನಲ್ಲಿ ನಿಂತು, ಹಣ್ಣು ಕಾಯಿ ಅರ್ಪಿಸಿ ದೇವಿಯ ದರ್ಶನ ಪಡೆದರು. 
 
ಭಕ್ತರ ದಂಡು ಅಲಂಕೃತಗೊಂಡ ಎತ್ತಿನಗಾಡಿಗಳಲ್ಲಿ ಸೌದೆಗಳನ್ನು ಇರಿಸಿಕೊಂಡು ಮೆರವಣಿಗೆ ಮೂಲಕ ತಂದು ದೇವಿಗೆ ಹಾಗೂ ಕೊಂಡಕ್ಕೆ ಒಪ್ಪಿಸಿ ಹರಕೆ ತೀರಿಸುತ್ತಿದ್ದರು. ಪೂರ್ಣಕುಂಭ ಹೊಂದಿದ ಮಹಿಳೆಯರ ಮೆರವಣಿಗೆ ರಸ್ತೆಗಳಲ್ಲಿ ಸಂಚರಿಸಿತ್ತು.
 
ಜಾತ್ರೋತ್ಸವದ ಅಂಗವಾಗಿ ದೇವಿ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿಸಿ, ಅಲಂಕಾರ ಮಾಡಲಾಗಿತ್ತು. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಶಿವಣ್ಣ ಹಾಗೂ ರವಿ ಮಾರಮ್ಮದೇವಿಯ ಅಗ್ನಿಕೊಂಡವನ್ನು ಹಾಯಲಿದ್ದಾರೆ.
 
‘ನಾನು ಚಿಕ್ಕಂದಿನಿಂದಲೂ ಮಾರಮ್ಮದೇವಿ ಜಾತ್ರೆಯನ್ನು ನೋಡುತ್ತಿದ್ದೇನೆ. ಮೊದಲು ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಿದ್ದರು. ಆದರೆ ಈಗ ರಾಜ್ಯದ ನಾನಾ ಕಡೆಯಿಂದ ಭಕ್ತಾದಿಗಳು ಬರುತ್ತಿದ್ದಾರೆ’ ಎಂದು ಗ್ರಾಮಸ್ಥ ಗಾಂಧಿ ತಿಳಿಸಿದರು.
 
‘ಅಕ್ಕೂರಿನ ಮಾರಮ್ಮನ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಅನೇಕ ಶಾಸನಗಳಿವೆ. ಆದರೆ ಅವುಗಳನ್ನು ಇಲ್ಲಿಯವರೆವಿಗೂ ಯಾರೂ ಓದಿಲ್ಲ. ವಿದ್ವಾಂಸರು ಓದಿದರೆ ದೇವಿಯ ಬಗ್ಗೆ ತಿಳಿಯುತ್ತದೆ’ ಎಂದು ಉಪನ್ಯಾಸಕ ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT