ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಂದು ಗೀತಾ ಮತ್ತು ವಿನೋದ್‌ರಿಗೆ ಜಗಳ. ಕೇಳಿದವರಿಗೆ ಅದು ಕ್ಷುಲ್ಲಕ ಕಾರಣಕ್ಕಾಗಿ ಎನ್ನಿಸಬಹುದೇನೋ. ವಿನೋದನಿಗೂ ಹಾಗೇ ಅನ್ನಿಸಿದ್ದು ನಿಜ. ಆದರೆ ಗೀತಾಳಿಗಂತೂ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಕಾರಣ ಇಷ್ಟೇ. ಅಂದೂ ಕೂಡ ಗೀತಾ ತನ್ನ ಪತಿ ವಿನೋದ್ ಜೊತೆಗೂಡಿ ಮದುವೆಗೆ ಹೋಗಿದ್ದು. ಮದುವೆಯಲ್ಲಿ ಇವರ ಕುಟುಂಬ ಸ್ನೇಹಿತರು ಸಿಕ್ಕಿದ್ದರು.

ಗೀತಾಳನ್ನು ನೋಡಿದ್ದೇ, ಅವರ ಬಾಯಿಯಲ್ಲಿ ಮೊದಲ ವಾಕ್ಯ – “ಅಯ್ಯೋ, ಎಷ್ಟು ದಪ್ಪವಾಗಿದ್ದೀರಿ ನೀವು” ಎಂದು. ನಂತರ ವಿನೋದ್‌ನನ್ನೂ ನೋಡಿ “ನಿಮ್ಮ ಯಜಮಾನರು ಎಷ್ಟು ಸಣ್ಣಗಾಗಿದ್ದಾರೆ, ನೀವು ಊಟವೇ ಹಾಕುತ್ತಿಲ್ಲವೇನೋ” ಎನ್ನಬೇಕೇ?

ವಿನೋದ್‌ನೇನೋ ನಗುತ್ತಾ ಏನೂ ಮಾತನಾಡದೇ, ತಲೆಯೂ ಕೆಡಿಸಿಕೊಳ್ಳದೇ ಬೇರೆ ವಿಷಯಕ್ಕೆ ಮಾತನ್ನು ತಿರುಗಿಸಿದ. ಗೀತಾಳ ಮುಖ ಮಾತ್ರ ಸಣ್ಣಗಾಯಿತು. ಮದುವೆಯಲ್ಲೇನೋ ಭಾಗವಹಿಸಿ, ಊಟ ಮಾಡಿಯಾಯಿತು. ಮನೆಗೆ ಬರುವಾಗ ಗೀತಾಳ ಮುಖ ಮಂಕಾದುದನ್ನು ವಿನೋದ ಗಮನಿಸಿದ. ಮನೆಗೆ ಬಂದಾಕ್ಷಣ ಗೀತಾ ತನ್ನ ಮನದಾಳದ ಬೇಸರವನ್ನು ಗಂಡನ ಬಳಿ ತೋಡಿಕೊಂಡಳು.

ವಿನೋದ ಎಂದಿನಂತೆ – ‘ಪಾಪ, ಅವರು ಯಾವ ಉದ್ದೇಶದಿಂದ ಹೇಳಿದರೋ ಏನೋ? ನೀನು ಸುಮ್ಮಸುಮ್ಮನೆ ತಲೆಕೆಡಿಸಿಕೊಳ್ಳುತ್ತೀಯಾ’ ಎಂದ. ಆಗಂತೂ ಗೀತಾಳಿಗೆ ಅದುಮ್ಮಿಟ್ಟುಕೊಂಡಿದ್ದ ದುಃಖ ಕಣ್ಣೀರಾಗಿ ದಳದಳ ಹರಿಯಲಾರಂಭಿಸಿತು.

ಗೀತಾಳ ಸ್ಥಿತಿಯನ್ನು ಸಾಮಾನ್ಯವಾಗಿ ಬಹಳಷ್ಟು ಮಹಿಳೆಯರಲ್ಲಿ ಕಾಣುತ್ತೇವೆ. ಮನುಷ್ಯನ ಸ್ವಭಾವವನ್ನು ವಿಶ್ಲೇಷಿಸಿದಾಗ, ಪುರುಷನಿಗಿಂತ ಮಹಿಳೆ ತನ್ನ ಸುತ್ತಮುತ್ತಲಿನ ಜಗತ್ತಿನೊಂದಿಗೆ ಹೆಚ್ಚು ಭಾವನಾತ್ಮಕವಾಗಿ ಸ್ಪಂದಿಸುತ್ತಾಳೆ ಎಂದು ತಿಳಿಯುತ್ತದೆ. ‘ನನಗೇನನ್ನಿಸುತ್ತದೆ’ ಎನ್ನುವುದಕ್ಕಿಂತ ‘ಪರರು ಏನು ತಿಳಿದಾರು?’ ಎಂಬ ಚಿಂತೆಯೇ ಜಾಸ್ತಿ. ಈ ಗುಣಲಕ್ಷಣದಿಂದಾಗಿ ಮಹಿಳೆ ಇತರರ ಟೀಕೆಗೆ ಗುರಿಯಾದಾಗ, ಹೆಚ್ಚು ನೋವಿಗೆ  ಒಳಗಾಗುತ್ತಾಳೆ.

ನೀವು ಮಾಡುವ ಮುನ್ನ...
ಎಲ್ಲರ ಸ್ವಭಾವವೂ ಒಂದೇ ರೀತಿ ಇರುವುದಿಲ್ಲ. ಕೆಲವರು ಟೀಕೆಗಳನ್ನು ಹಾಸ್ಯಮಯವಾಗಿ ತೆಗೆದುಕೊಳ್ಳಬಹುದು. ಇನ್ನು ಕೆಲವರು ಅಲಕ್ಷ್ಯ ಮಾಡಬಹುದು. ಮತ್ತೆ ಕೆಲವರು ತಿರುಗಿ ಉತ್ತರ ನೀಡಬಹುದು. ಇನ್ನಷ್ಟು ಜನ ನೊಂದುಕೊಳ್ಳಬಹುದು.

ಯಾರ ಸ್ವಭಾವ ಹೇಗೆ ಇದ್ದರೂ, ಇನ್ನೊಬ್ಬರ External appearance ಬಗ್ಗೆ ಟೀಕಿಸುವುದು ಸರಿಯಲ್ಲ. ನಿಜವಾದ ಕಾಳಜಿ, ಪ್ರೀತಿ ಇದ್ದರೆ ಹೇಳುವುದಕ್ಕೆ ರೀತಿಯಿದೆ/ ಕ್ರಮವಿದೆ. ಇನ್ನೊಬ್ಬ ವ್ಯಕ್ತಿಯನ್ನು ನೋಡಿದಾಕ್ಷಣ, ‘ನೀನು ದಪ್ಪ ಆಗಿರುವೆ, ಸಣ್ಣ ಆಗಿರುವೆ’ ಎಂದು ಮಾತು ಪ್ರಾರಂಭ ಮಾಡುವ ಅಗತ್ಯವಿಲ್ಲ.

ಬೇರೆ ಮಾತನಾಡಿ, ಅವರೊಬ್ಬರನ್ನೇ ಕರೆದು, ಕಾಳಜಿಯಿಂದ ‘ನೀನು ತುಂಬ ತೆಳ್ಳಗಾಗಿರುವೆ, ಅರೋಗ್ಯ ನೋಡಿಕೋ’ ಅಥವಾ ‘ನಿನ್ನ ತೂಕ ಜಾಸ್ತಿಯಾಗಿದೆ, ವ್ಯಾಯಾಮದ ಅಗತ್ಯವಿದೆಯೇನೋ, ಆರೋಗ್ಯದ ಕಡೆ ಗಮನವಹಿಸು’ ಎಂದು ಕಿವಿಮಾತು ಹೇಳಬಹುದು. ಅದು ಬಿಟ್ಟು ‘ನಿನ್ನ ಹೆಂಡತಿ ಊಟ ಹಾಕುತ್ತಿಲ್ಲವೇನೋ’ ಎಂಬ ಕುಹಕ ಮಾತು ಆಡಿದರೆ ಯಾರಿಗೆ ತಾನೇ ಬೇಸರವಾಗದಿರದು?

ನಾವು ಸೂಕ್ಷ್ಮವಾಗಿದ್ದರೆ, ಇನ್ನೊಬ್ಬರಿಗೆ ಯಾವುದರಿಂದ ನೋವಾಗುತ್ತದೆ ಎಂಬುದನ್ನು ತಿಳಿದು, ತಡೆಯಲು ಸಾಧ್ಯ. ಹಾಸ್ಯ ಎನ್ನುವಂತದ್ದು, ಇನ್ನೊಬ್ಬರಿಗೆ ನೋವುಂಟು ಮಾಡಿ ನಗುವುದಲ್ಲ, ನಗಿಸುವುದೂ ಅಲ್ಲ. ಹಾಸ್ಯಪ್ರಜ್ಞೆಯನ್ನು ಆರೋಗ್ಯಕರವಾಗಿ ಬಳಸಿಕೊಳ್ಳುವುದು ಅಗತ್ಯ.
ಟೀಕೆಗಳನ್ನು ಎದುರಿಸುವುದು ಹೇಗೆ?

ನಮ್ಮ ವರ್ತನೆಗಳು, ಭಾವನೆಗಳು, ನಮ್ಮ ಯೋಚನಾಶೈಲಿಯ ಮೇಲೆ ಅವಲಂಬಿತವಾಗಿವೆ. ಇತರರ ಟೀಕೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದೂ ಯೋಚನಾ ಶೈಲಿಯಿಂದ ನಿರ್ಧರಿತವಾಗುತ್ತದೆ. ಬೇರೆಯವರು ಟೀಕೆ ಮಾಡಿದಾಗ ಮನಸ್ಸು ನೊಂದುಕೊಳ್ಳುವುದಕ್ಕೆ ಕಾರಣ ಈ ಯೋಚನಾ ಶೈಲಿಯೇ.

‘ನೀನು ದಪ್ಪಗಾಗಿದ್ದೀಯಾ’ ಎಂದು ಯಾರಾದರೂ ಹೇಳಿದಾಗ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಪುಟಿದೇಳುತ್ತವೆ. ‘ನನ್ನನ್ನು ಅವಮಾನಿಸಲೆಂದೇ ಈ ವ್ಯಕ್ತಿ ಪ್ರತೀಬಾರಿ ಹೀಗೆ ಹೇಳುತ್ತಾಳೆ!’, ‘ನಾನು ದಪ್ಪವಾಗಿ, ಅಸಹ್ಯವಾಗಿ ಕಾಣುತ್ತಿದ್ದೇನೆ’, ‘ಇವರಿಗೆ ನನ್ನ ಕಂಡರೆ ಹೊಟ್ಟೆಕಿಚ್ಚು’ ಇತ್ಯಾದಿ ಯೋಚನೆಗಳು. ಇಂಥ ಆಲೋಚನೆಗಳು ನಮಗೆ ನೋವುಂಟು ಮಾಡುತ್ತವೆ.

ಅದರ ಬದಲು ‘ಈ ವ್ಯಕ್ತಿಯ ಸ್ವಭಾವವೇ ಹೀಗೆ’, ‘ನಾನು ದಪ್ಪವಿದ್ದರೂ, ಆರೋಗ್ಯವಾಗಿದ್ದೇನೆ, ವ್ಯಾಯಾಮ ಮಾಡುತ್ತಿದ್ದೇನೆ, ಅವರು ಏನು ಹೇಳಿದರೂ ಆಗಬೇಕಾದ್ದೇನು?’, ‘ದಾರಿಯಲ್ಲಿ ಹೋಗುವವರು ಹೇಳಿದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕೇ?’ ಎಂದು ಯೋಚಿಸಿದರೆ ಮನಸ್ಸಿಗೆ ನೋವಾಗುವುದಿಲ್ಲ.

ಇದು ನಮ್ಮ ಯೋಚನಾಶೈಲಿ ಬದಲಾಯಿಸುವುದಾಯಿತು. ಆ ಕ್ಷಣದಲ್ಲಿ, ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದು ಬಹಳ ಮುಖ್ಯ. ಟೀಕೆಯನ್ನು ಅಲಕ್ಷ್ಯ ಮಾಡಿ, ಬೇರೆ ವಿಷಯದೆಡೆ ಗಮನ ಹರಿಸಬಹುದು. ಇಲ್ಲವೇ, ತಿರುಗಿ ಅವರದೇ ಭಾಷೆಯಲ್ಲಿ ಉತ್ತರ ಹೇಳುವ ಸಾಮರ್ಥ್ಯವಿದ್ದರೆ ಕೂಡ ಹೇಳಬಹುದು.

ಉದಾಹರಣೆಗೆ: ‘ನೀವು ನಿಮ್ಮ ಗಂಡನಿಗೆ ಊಟ ಹಾಕುತ್ತಿಲ್ಲವೇನೋ’ ಎಂದಾಗ ‘ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿ, ನಿಮಗೆ ಅಷ್ಟು ಕಾಳಜಿ ಇದ್ದರೆ’ ಎನ್ನಬಹುದು. ಅದೂ ಆಗದಿದ್ದರೆ ನೇರವಾಗಿ – ‘ನೀವು ಪ್ರತೀ ಬಾರಿ ಈ ರೀತಿ ಮಾತನಾಡುವುದು ನನಗೆ ಇಷ್ಟವಿಲ್ಲ. ದಯವಿಟ್ಟು ಹಾಗೆ ಮಾತನಾಡಬೇಡಿ’ ಎನ್ನಲೂಬಹುದು.

ಒಟ್ಟಿನಲ್ಲಿ  ನಮ್ಮ ಟೀಕೆಗಳು ಇತರರ ಮನಸ್ಸಿಗೆ ನೋವುಂಟು ಮಾಡದ ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅಂತೆಯೇ ಇತರರು ಟೀಕಿಸಿದಾಗ, ಅದನ್ನು ಸಮರ್ಥವಾಗಿ ಎದುರಿಸಿ ಅಥವಾ ಅಲಕ್ಷಿಸಿ, ನಮ್ಮ ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳುವುದೂ ನಮ್ಮ ಕರ್ತವ್ಯವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT