ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ: ‘457 ವೀಸಾ’ ನೀತಿ ರದ್ದು; ಭಾರತೀಯರಿಗೆ ಕಂಟಕ

Last Updated 18 ಏಪ್ರಿಲ್ 2017, 17:28 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ/ಮೆಲ್ಬರ್ನ್  (ಐಎಎನ್ಎಸ್/ಪಿಟಿಐ):  ವಿದೇಶಿ ಉದ್ಯೋಗಿಗಳಿಗೆ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತಿದ್ದ ‘457 ವೀಸಾ’ ನೀತಿಯನ್ನು ಆಸ್ಟ್ರೇಲಿಯಾ ಸರ್ಕಾರ ರದ್ದುಪಡಿಸಿದೆ.

ಈ ವೀಸಾವನ್ನು ಪಡೆಯುತ್ತಿರುವವರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದ್ದು, ಇನ್ನು ಮುಂದೆ ಆಸ್ಟ್ರೇಲಿಯಾದ ಉದ್ಯೋಗ ವೀಸಾ ಪಡೆಯುವ ಪ್ರಕ್ರಿಯೆ  ಕಠಿಣವಾಗಲಿದೆ.

ಈಗ ಒಟ್ಟು 95,758 ಮಂದಿ ‘457 ವೀಸಾ’ ಪಡೆದು  ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಭಾರತೀಯರ ಪ್ರಮಾಣ ಶೇ 24.6, ಬ್ರಿಟನ್‌ ಪ್ರಜೆಗಳ ಪ್ರಮಾಣ ಶೇ 19.5 ಮತ್ತು ಚೀನಾ ಪ್ರಜೆಗಳದ್ದು ಶೇ 5.8. ಈ ವೀಸಾ ಪಡೆದವರು ಆಸ್ಟ್ರೇಲಿಯಾದಲ್ಲಿ ಗರಿಷ್ಠ ನಾಲ್ಕು ವರ್ಷ ಇರಬಹುದು.

‘ಈಗಾಗಲೇ ಈ ವೀಸಾ ಪಡೆದಿರುವವರು ತಮ್ಮ ಅವಧಿ ಮುಗಿಯುವವರೆಗೆ ಇರಲು ಯಾವುದೇ ಅಡ್ಡಿ ಇಲ್ಲ’ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.

‘ಕೌಶಲ ಬೇಕಿರದ ಉದ್ಯೋಗಗಳಿಗೂ ವಿದೇಶಿಯರನ್ನೇ ಕರೆತರುತ್ತಿರುವುದರಿಂದ, ಆಸ್ಟ್ರೇಲಿಯನ್ನರಿಗೆ ಉದ್ಯೋಗ ಸಿಗುತ್ತಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ಕ್ರಮವಾಗಿ ಉದ್ಯೋಗ ವೀಸಾ ನೀತಿಯನ್ನು ರದ್ದು ಮಾಡಲಾಗಿದೆ. ಇದರ ಬದಲಿಗೆ ‘ಆಸ್ಟ್ರೇಲಿಯನ್ನರೇ ಮೊದಲು’ ಎಂಬ ನೀತಿಯನ್ನು ರೂಪಿಸಲಾಗಿದೆ’ ಎಂದು ಆಸ್ಟ್ರೇಲಿಯ ಪ್ರಧಾನಿ ಮಾಲ್ಕಂ ಟರ್ನ್‌ಬುಲ್‌ ಅವರು ಘೋಷಿಸಿದ್ದಾರೆ.

‘1996–97ರಲ್ಲಿ ಜಾನ್ ಹೊವಾರ್ಡ್‌ ಸರ್ಕಾರ ‘457 ವೀಸಾ’ ನೀತಿ ಜಾರಿಗೆ ತಂದಿತ್ತು. 2012ರಲ್ಲಿ ಈ ನೀತಿಯಲ್ಲಿ ಕೆಲವು ಬದಲಾವಣೆ ತರಲಾಗಿತ್ತು.  ಆದರೆ, ಈ ವೀಸಾವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ  ಆರಂಭದಿಂದಲೂ ಇದೆ. ‘457 ವೀಸಾ’ ನೀತಿ ರದ್ದುಪಡಿಸಬೇಕು ಎಂದು ವಿರೋಧ ಪಕ್ಷಗಳೂ ಒತ್ತಾಯಿಸುತ್ತಲೇ ಇದ್ದವು’ ಎಂದು ಮೂಲಗಳು ತಿಳಿಸಿವೆ.

ಪಟ್ಟಿಯಿಂದ ಹಲವು ಕೆಲಸ ಹೊರಕ್ಕೆ: ‘651 ಸ್ವರೂಪದ ಉದ್ಯೋಗಗಳಿಗೆ ‘457 ವೀಸಾ’ ನೀಡಲಾಗುತ್ತಿತ್ತು. ಕೌಶಲ ಬೇಕಿರದ 216 ಸ್ವರೂಪದ ಕೆಲಸಗಳನ್ನು ಈ ಪಟ್ಟಿಯಿಂದ ತೆಗೆಯಲಾಗಿದೆ. ಹೀಗಾಗಿ, ಹೊಸ ನೀತಿ ಅಡಿ ಉದ್ಯೋಗ ವೀಸಾ ಪಡೆಯಲು ಕಡಿಮೆ ಅವಕಾಶ ಇರಲಿದೆ. ಅತಿ ಹೆಚ್ಚು ಕೌಶಲ ಬೇಡುವ ಉದ್ಯೋಗಗಳಿಗಷ್ಟೇ ವೀಸಾ ಸಿಗಲಿದೆ. ಆದರೆ ಇಂತಹ ಉದ್ಯೋಗ ಪ್ರಮಾಣ ತೀರಾ ಕಡಿಮೆ. ಹೀಗಾಗಿ ಆಸ್ಟ್ರೇಲಿಯನ್ನರಿಗೇ ಹೆಚ್ಚು ಉದ್ಯೋಗ ಸಿಗಲಿದೆ’ ಎಂದು ಸರ್ಕಾರ ಹೇಳಿದೆ.

‘457 ವೀಸಾ ಪಡೆದವರಲ್ಲಿ ಬಹುತೇಕ ಮಂದಿ ರೆಸ್ಟೋರೆಂಟ್‌ಗಳಲ್ಲಿ ಸಹಾಯಕ, ಕ್ಯಾಶಿಯರ್‌, ವ್ಯವಸ್ಥಾಪಕ ಮತ್ತು ಕಾಲ್‌ಸೆಂಟರ್‌ ಸಿಬ್ಬಂದಿಯಾಗಿ ದುಡಿಯುತ್ತಿದ್ದಾರೆ. ಈ ಉದ್ಯೋಗಗಳಿಗೆ ಕೌಶಲ ಬೇಕಿಲ್ಲ. ವಿದೇಶಿ ಕೆಲಸಗಾರರಿಗೆ ಸ್ಥಳೀಯರಿಗಿಂತ ಕಡಿಮೆ ವೇತನ ನೀಡಬೇಕಾಗುತ್ತದೆ. ಹೀಗಾಗಿ ಕಂಪೆನಿಗಳು, ಸಂಸ್ಥೆಗಳು ವಿದೇಶಿಯರಿಗೇ ಆದ್ಯತೆ ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಮ್ಮೆದುರು ಹಲವಾರು ದಾರಿಗಳಿವೆ’ ಎಂದು ಆಸ್ಟ್ರೇಲಿಯಾದ ವಲಸೆ ಖಾತೆ ಸಚಿವ ಪೀಟರ್‌ ಡಟ್ಟಾನ್ ಹೇಳಿದ್ದಾರೆ.

**

ನಮ್ಮದು ವಲಸಿಗರ ದೇಶವೇ ಹೌದು. ಆದರೆ ಆಸ್ಟ್ರೇಲಿಯಾದ ಕೆಲಸಗಳಲ್ಲಿ ಆಸ್ಟ್ರೇಲಿಯನ್ನರಿಗೇ ಆದ್ಯತೆ ಸಿಗಬೇಕು. ಆಸ್ಟ್ರೇಲಿಯನ್ನರೇ ಮೊದಲು.
-ಮಾಲ್ಕಂ ಟರ್ನ್‌ಬುಲ್, ಆಸ್ಟ್ರೇಲಿಯಾ ಪ್ರಧಾನಿ

**

ಈಗ ಎರಡು ವರ್ಷದ ಅವಧಿಗೆ ವೀಸಾ ಪಡೆದಿದ್ದರೆ, ಅದು ಮತ್ತೆರಡು ವರ್ಷಕ್ಕೆ ವಿಸ್ತರಣೆ ಆಗಬಹುದು. ಆದರೆ ಈ ವೀಸಾಗಳಿಗೆ ಶಾಶ್ವತ ಪೌರತ್ವ  (‘187 ವೀಸಾ’) ಸಿಗುವುದಿಲ್ಲ

-ಪೀಟರ್‌ ಡಟ್ಟಾನ್, ಆಸ್ಟ್ರೇಲಿಯಾದ ವಲಸೆ ಖಾತೆ ಸಚಿವ

**

ಹೊಸ ವೀಸಾ ಸಿಗುವುದು ಕಠಿಣ

‘ಆಸ್ಟ್ರೇಲಿಯನ್ನರೇ ಮೊದಲು’ ನೀತಿ ಜಾರಿಗೆ ತರಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಎರಡು ತಾತ್ಕಾಲಿಕ ವೀಸಾ ನೀತಿಗಳು ಜಾರಿಯಲ್ಲಿರಲಿವೆ. ಆ ನೀತಿಗಳ ಅಡಿ ಉದ್ಯೋಗ ವೀಸಾ ನೀಡಲು ಹಲವು ಕಠಿಣ ಪರೀಕ್ಷೆಗಳನ್ನು ನಡೆಸಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಉದ್ಯೋಗ ವೀಸಾ ಪಡೆಯಲು ಕೆಲವಾರು ಕನಿಷ್ಠ ಅರ್ಹತೆಗಳನ್ನು ಸರ್ಕಾರ  ನಿಗದಿಪಡಿಸಿದೆ.

* ಸರಾಗವಾಗಿ ಇಂಗ್ಲಿಷ್ ಮಾತನಾಡಲು ಬರಬೇಕು
* ಕೌಶಲ ಹೊಂದಿರುವವರಿಗೆ ಮಾತ್ರ ವೀಸಾ
* ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಅನುಭವ ಇರಬೇಕು
* ಯಾವುದೇ ಅಪರಾಧ ಹಿನ್ನೆಲೆ ಇರಬಾರದು

**

ಅಂಕಿ ಅಂಶ

95,758: ‘457 ವೀಸಾ’ ಪಡೆದು, ಆಸ್ಟ್ರೇಲಿಯಾದಲ್ಲಿ ನೆಲೆಸಿರುವವರ ಸಂಖ್ಯೆ

24.6 %: ಈ ವೀಸಾ ಪಡೆದವರಲ್ಲಿ ಭಾರತೀಯರ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT