ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌–1ಬಿ ವೀಸಾ: ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಸನ್ನಿಹಿತ

Last Updated 18 ಏಪ್ರಿಲ್ 2017, 17:40 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಎಚ್‌–1ಬಿ ವೀಸಾಗಳನ್ನು  ಹೆಚ್ಚಿನ ಕೌಶಲ ಹೊಂದಿರುವ ಹಾಗೂ ದೊಡ್ಡ ಮೊತ್ತದ ವೇತನ ಪಡೆಯುವವರಿಗೆ ಮಾತ್ರ ನೀಡುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಣಿಯಾಗಿದ್ದಾರೆ.

‘ಅಮೆರಿಕದ ಉತ್ಪನ್ನಗಳನ್ನೇ ಖರೀದಿಸಿ, ಅಮೆರಿಕದವರಿಗೇ ಉದ್ಯೋಗ ಕೊಡಿ’ ಎಂಬ ಹೆಸರಿನ ಆದೇಶಕ್ಕೆ ಸಹಿ ಮಾಡಲು ಟ್ರಂಪ್ ಅವರು, ವಿಸ್ಕಾನ್ಸಿನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಕೌಶಲ ಹಾಗೂ ಪ್ರತಿಭೆ ಆಧರಿಸಿದ ವಲಸೆ ನೀತಿಯ ಅನುಷ್ಠಾನಕ್ಕಾಗಿ ಈ ಕ್ರಮ ಎಂದು ಅಮೆರಿಕ ಹೇಳಿಕೊಂಡಿದೆ.

ಅಮೆರಿಕ ಪ್ರತಿವರ್ಷ 65,000 ಎಚ್‌–1ಬಿ ವೀಸಾಗಳನ್ನು ನೀಡುತ್ತದೆ. 2018ನೇ ಆರ್ಥಿಕ ವರ್ಷಕ್ಕಾಗಿ ಈ ವೀಸಾ ಬಯಸಿ 1.99 ಲಕ್ಷ ಅರ್ಜಿಗಳು ಬಂದಿವೆ. ಗಣಕೀಕೃತ ವ್ಯವಸ್ಥೆಯ ಅಡಿ ಲಾಟರಿ ಮೂಲಕ ವೀಸಾ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಿದ್ಧತೆ ಪೂರ್ಣಗೊಂಡಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ ಪ್ರಕಟಿಸಿದ ಮಾರನೆಯ ದಿನವೇ ಟ್ರಂಪ್ ಅವರು ಆದೇಶಕ್ಕೆ ಸಹಿ ಹಾಕಲು ಮುಂದಾಗಿದ್ದಾರೆ.

ಸಾಂಪ್ರದಾಯಿಕ ಲಾಟರಿ ವ್ಯವಸ್ಥೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಹಿರಿಯ ಅಧಿಕಾರಿಯೊಬ್ಬರು, ‘ಈ ವ್ಯವಸ್ಥೆಯನ್ನು ಕಂಪೆನಿಗಳು ವಿದೇಶಗಳಿಂದ ನೌಕರರನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಬಳಸುತ್ತಿದ್ದವು. ಆಗ ಅಮೆರಿಕದ ನೌಕರರಿಗೆ ತೊಂದರೆ ಆಗುತ್ತಿತ್ತು’ ಎಂದು ವರದಿಗಾರರ ಬಳಿ ಹೇಳಿದರು.

ಹೊಸ ಆದೇಶ ಜಾರಿಯಾದ ನಂತರ, ಅಮೆರಿಕದೊಳಕ್ಕೆ ವಿದೇಶದ ನೌಕರರನ್ನು ಬಿಟ್ಟುಕೊಳ್ಳುವ ವಿಚಾರದಲ್ಲಿ ಎಲ್ಲ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗುತ್ತದೆ. ಆಗ ಹೊರಗಿನಿಂದ ಬರುವ ಕೌಶಲಯುಕ್ತ ನೌಕರರಿಗೆ ಹೆಚ್ಚಿನ ವೇತನ ದೊರೆಯುತ್ತದೆ, ಅಮೆರಿಕದ ನೌಕರರಿಗೆ ಉದ್ಯೋಗಾವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ ಎಂದು ಅವರು ವಿವರಿಸಿದರು.

**

‘ಹೊರಗುತ್ತಿಗೆ ಕಂಪೆನಿಗಳು’

ವಾಷಿಂಗ್ಟನ್: ‘ಕೆಲವು ಕಂಪೆನಿಗಳನ್ನು ಹೊರಗುತ್ತಿಗೆ ಕಂಪೆನಿಗಳು ಎಂದೇ ಕರೆಯಲಾಗುತ್ತಿದೆ. ಎಚ್–1ಬಿ ವೀಸಾಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವ ಕಂಪೆನಿಗಳು ಇವು. ಈ ಕಂಪೆನಿಗಳು ತಮಗೆ ಸಿಗುವ ವೀಸಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತವೆ’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದರು.

ಎಚ್–1ಬಿ ವೀಸಾ ಎಂದರೆ: ಆರಂಭದಲ್ಲಿ ಮೂರು ವರ್ಷಗಳ ಅವಧಿಗೆ ಎಚ್‌–1ಬಿ ವೀಸಾ ನೀಡಲಾಗುತ್ತದೆ. ನಂತರ ಆರು ವರ್ಷಗಳ ಅವಧಿಗೆ ಇದನ್ನು ವಿಸ್ತರಿಸಲೂ ಅವಕಾಶ ಇದೆ. ಎಚ್‌–1ಬಿ ವೀಸಾ ಹೊಂದಿರುವ ವಿದೇಶಿ ವೃತ್ತಿಪರರನ್ನು ವಿಶೇಷ ಕೌಶಲ ಬೇಡುವ ಉದ್ಯೋಗಗಳಿಗೆ ಅಮೆರಿಕದ ಕಂಪೆನಿಗಳು ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಬಹುದು. ಪದವೀಧರ ಅಲ್ಲದಿದ್ದರೆ ಈ ವೀಸಾ ಪಡೆಯಲು ಸಾಧ್ಯವಿಲ್ಲ.

**

ಟಿಸಿಎಸ್‌, ಇನ್ಫೊಸಿಸ್‌ ಮತ್ತು ಕಾಗ್ನಿಸೆಂಟ್‌ ಕಂಪೆನಿಗಳು ಎಚ್–1ಬಿ ವೀಸಾಗಳನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವ ಕಂಪೆನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT