ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪಿಎಸ್‌ ಸಾಧನ: ಆ್ಯಪ್‌ಗಿಂತಲೂ ಮುಂದೆ!

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳು ಬಂದ ಮೇಲೆ ಜನರು ಬಳಸುತ್ತಿದ್ದ ಹಲವು ವಸ್ತುಗಳು, ಉಪಕರಣಗಳು ಹಿನ್ನೆಲೆಗೆ ಸರಿದಿವೆ. ಕ್ಯಾಮೆರಾಗಳು, ಟೇಪ್‌ ರೆಕಾರ್ಡರ್‌, ನೋಟು ಪುಸ್ತಕಗಳು… ಹೀಗೆ ಹಲವು ಸಾಧನಗಳನ್ನು ಉದಾಹರಣೆಯಾಗಿ ಕೊಡಬಹುದು.

ಆದರೆ, ಜಿಪಿಎಸ್‌ಗೆ (GPS-Global Positioning System) ಈ ಮಾತು ಅನ್ವಯವಾಗುವುದಿಲ್ಲ. ಸ್ಮಾರ್ಟ್‌ ಫೋನ್‌ಗಳಲ್ಲಿ ಜಿಪಿಎಸ್‌ ಆ್ಯಪ್‌ಗಳು ಲಭ್ಯವಿದ್ದರೂ, ಮೊಬೈಲ್‌ ಬಳಕೆದಾರರು ತಮ್ಮ ಕಾರು ಅಥವಾ ಇನ್ಯಾವುದೇ ವಾಹನಗಳಿಗೆ ಪ್ರತ್ಯೇಕ ಜಿಪಿಎಸ್‌ ಸಾಧನ ಅಳವಡಿಸಿಕೊಂಡಿರುತ್ತಾರೆ.

ಜಿಪಿಎಸ್‌ಗೆ ಸಂಬಂಧಿಸಿದಂತೆ ಸ್ಮಾರ್ಟ್ ಫೋನ್‌ಗಳಲ್ಲಿ ಹಲವಾರು ಆ್ಯಪ್‌ಗಳು ಇವೆ. ಆಂಡ್ರಾಯ್ಡ್‌ ಹಾಗೂ ಇತರ ಕಾರ್ಯನಿರ್ವಹಣಾ ತಂತ್ರಾಂಶದ ಫೋನ್‌ಗಳು ಕೂಡ ಗೂಗಲ್‌ ಮ್ಯಾಪ್‌ ಹಾಗೂ ಇತರ ನಕ್ಷೆಯ ತಂತ್ರಾಂಶಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿರುತ್ತವೆ. ಹಾಗಿದ್ದರೂ ಬಹುತೇಕ ಎಲ್ಲ ವಾಹನಗಳು ಜಿಪಿಎಸ್‌ ಸಾಧನ ಹೊಂದಿರುತ್ತವೆ  ಇಲ್ಲವೇ, ವಾಹನ ಮಾಲೀಕರು ತಮ್ಮ ಕಾರುಗಳಿಗಾಗಿ ಪ್ರತ್ಯೇಕ ಜಿಪಿಎಸ್‌ ಸಾಧನ ಖರೀದಿಸುತ್ತಾರೆ.


ಸ್ಮಾರ್ಟ್‌ಫೋನ್‌ಗಳಲ್ಲೇ ಜಿಪಿಎಸ್‌ ಇರುವಾಗ, ವಾಹನಗಳಲ್ಲಿ ಇದರ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ‘ಹೌದು, ಅಗತ್ಯವಿದೆ’ ಎಂದು ಉತ್ತರಿಸುತ್ತಾರೆ ತಜ್ಞರು. ಮೊಬೈಲ್‌ಗಳಲ್ಲಿರುವ ಜಿಪಿಎಸ್‌ ಬಗ್ಗೆ ಅವರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರೂ, ವಾಹನಗಳಲ್ಲಿ ಪ್ರತ್ಯೇಕ ಜಿಪಿಎಸ್‌ ಸಾಧನ ಅಳವಡಿಸುವುದರಿಂದ ಆಗುವ ಲಾಭವನ್ನು ಪಟ್ಟಿ ಮಾಡುತ್ತಾರೆ.

‘ಫೋನ್‌ಗಳಲ್ಲಿರುವ ನಕ್ಷೆಗೆ ಸಂಬಂಧಿಸಿದ ಆ್ಯಪ್‌ಗಳೆಲ್ಲವೂ ಉತ್ತಮವಾಗಿವೆ. ಹೋಗಬೇಕಾದ ಮಾರ್ಗ ಮತ್ತು ಅಲ್ಲಿರುವ ಸಂಚಾರ ದಟ್ಟಣೆಯ ಬಗ್ಗೆ ಅವು ನಿಖರ ಮಾಹಿತಿ ನೀಡಬಲ್ಲವು. ನಗರ ಅಥವಾ ಪಟ್ಟಣಗಳಲ್ಲಿ ಪ್ರಯಾಣಿಸುವಾಗ ನಾನು ಕೂಡ ಮೊಬೈಲ್‌ ಆ್ಯಪ್‌ಗಳನ್ನೇ ಬಳಸುತ್ತೇನೆ.
ಆದರೆ, ದೂರದ ಪ್ರಯಾಣಕ್ಕೆ ಕಾರಿನಲ್ಲಿರುವ ಜಿಪಿಎಸ್‌ ಸಾಧನವನ್ನೇ ಬಳಸುತ್ತೇನೆ’ ಎಂದು ಹೇಳುತ್ತಾರೆ.

‘ದ ವೈರ್‌ಕಟ್ಟರ್‌’ ಎಂಬ ವಿವಿಧ ಉತ್ಪನ್ನಗಳ ಬಗ್ಗೆ ವಿಮರ್ಶೆ ನಡೆಸುವ  ಅಂತರ್ಜಾಲ ತಾಣದ ವಾಹನ ವಿಭಾಗದ ಸಂಪಾದಕ ರಿಕಿ ಪಾಲ್‌. ವಾಹನಗಳಲ್ಲಿ ಅಳವಡಿಸುವ ಜಿಪಿಎಸ್‌ ಸಾಧನದಿಂದ ಹಲವು ಪ್ರಯೋಜನಗಳಿವೆ ಎಂಬುದು ಅವರು ನೀಡುವ ಸಮರ್ಥನೆಯಾಗಿದೆ.

ವಿವರಣೆ
‘ಜಿಪಿಎಸ್‌ ಸಾಧನಗಳಿಗೆ ಇಂಟರ್‌ನೆಟ್‌ ಸಂಪರ್ಕ ಅಗತ್ಯವಿಲ್ಲ. ಮಾರ್ಗ ನಕ್ಷೆಗಳ ದತ್ತಾಂಶವನ್ನು ಈ ಮೊದಲೇ ಅದರಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಗ್ರಾಮೀಣ ಭಾಗ ಅಥವಾ ಮೊಬೈಲ್‌ ಸಂಪರ್ಕ ಸರಿಯಾಗಿ ಸಿಗದ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ನಕ್ಷೆಯ ಆ್ಯಪ್‌ಗಳನ್ನು ನೆಚ್ಚಿಕೊಂಡಿರಲು ಆಗದು. ಕಾರಿನಲ್ಲಿ ಅಳವಡಿಸಿರುವ ಜಿಪಿಎಸ್‌ ಸಾಧನ ಆಗ ಉಪಯೋಗಕ್ಕೆ ಬರುತ್ತದೆ.

‘ಅಂದ ಮಾತ್ರಕ್ಕೆ, ಎಲ್ಲ ಮೊಬೈಲ್‌ ಆ್ಯಪ್‌ಗಳಿಗೂ ಇಂಟರ್‌ನೆಟ್‌ ಬೇಕು ಎಂದಲ್ಲ. ನಕ್ಷೆಗಳನ್ನು ಮೊದಲೇ ಡೌನ್‌ಲೋಡ್‌ ಮಾಡಿಕೊಂಡು ಸಂಗ್ರಹಿಸಿಟ್ಟುಕೊಳ್ಳುವ ಆ್ಯಪ್‌ಗಳು ಹಲವು ಇವೆ. ಇವುಗಳಿದ್ದರೆ ಏನೂ ಸಮಸ್ಯೆ ಇಲ್ಲ. ಆದರೆ, ಇಂತಹ ಸಂದರ್ಭದಲ್ಲಿ ನಮ್ಮ ಪ್ರಯಾಣದ ಬಗ್ಗೆ ಮೊದಲೇ ಯೋಜನೆ ರೂಪಿಸಿ, ನಕ್ಷೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುತ್ತದೆ. ಜಿಪಿಎಸ್‌ ಸಾಧನದಲ್ಲಿ ಈ ತಲೆ ನೋವು ಇರುವುದಿಲ್ಲ.

‘ಕಾರಿನಲ್ಲಿ ಪ್ರತ್ಯೇಕ ಜಿಪಿಎಸ್‌ ಇದ್ದರೆ, ಫೋನ್‌ಗಳನ್ನು ಇತರ ಉದ್ದೇಶಕ್ಕೆ ಅಂದರೆ, ಕರೆ ಮಾಡುವುದಕ್ಕೋ ಅಥವಾ ಹಾಡು/ಸಂಗೀತ ಆಲಿಸುವುದಕ್ಕೋ ಬಳಸಬಹುದು’ ಎಂದು ರಿಕಿ ಅಭಿಪ್ರಾಯಪಡುತ್ತಾರೆ.

ನವ ನವೀನ
ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಜಿಪಿಎಸ್‌ ಸಾಧನಗಳು ಅತ್ಯಾಧುನಿಕವಾಗಿದ್ದು, ಹಲವು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿವೆ. ಸ್ಮಾರ್ಟ್‌ಫೋನ್‌ಗಳಲ್ಲಿರುವ ಪಥದರ್ಶಕ ಆ್ಯಪ್‌ಗಳಿಗೆ ಇವುಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದು ರಿಕಿ ಅಂಬೋಣ. ಕೆಲವು ಜಿಪಿಎಸ್‌ ಸಾಧನಗಳನ್ನು ಬ್ಯಾಕ್‌ಅಪ್‌ ಕ್ಯಾಮೆರಾಗಳಿಗೆ ಸಂಪರ್ಕಿಸಬಹುದು.

ಇನ್ನೂ ಕೆಲವು  ಉಪಕರಣಗಳನ್ನು ಡ್ಯಾಷ್‌ಕ್ಯಾಮ್‌ಗಳಿಗೆ (ಅಪಘಾತ ಹೇಗಾಯಿತು ಎಂಬ ವಿವರಗಳನ್ನು ದಾಖಲಿಸುವುದಕ್ಕಾಗಿ ವಾಹನದ ಮುಂಭಾಗದಲ್ಲಿ ಡ್ಯಾಷ್‌ಬೋರ್ಡ್‌ ಅಥವಾ ಗಾಜಿಗೆ ಅಳವಡಿಸುವ ಕ್ಯಾಮೆರಾ) ಸಂಪರ್ಕಿಸಬಹುದಾಗಿದೆ.

‘ಇನ್ನೂ ಕೆಲವು ಹೊಸ ಜಿಪಿಎಸ್‌ ಮಾದರಿಗಳು, ಅಪಘಾತ ಮುನ್ಸೂಚನೆ ನೀಡುವುದು, ಪಥ (ಲೇನ್‌) ತಪ್ಪಿದ ಸಂದರ್ಭದಲ್ಲಿ ಚಾಲಕನನ್ನು ಎಚ್ಚರಿಸುವುದು, ಅಪಘಾತವಾದಾಗ ಸ್ವಯಂ ಚಾಲಿತವಾಗಿ ಸಂದೇಶ ರವಾನಿಸುವಂತಹ ಹಲವು ಸುರಕ್ಷತಾ ಗುಣಲಕ್ಷಣಗಳನ್ನು ಹೊಂದಿವೆ’ ಎಂದು ವಿವರಿಸುತ್ತಾರೆ ರಿಕಿ ಪಾಲ್‌.

ಆದರೆ, ಇಂತಹ ನವೀನ ಮಾದರಿಯ ಜಿಪಿಎಸ್‌ ಸಾಧನಗಳನ್ನು ಇನ್ನೂ ಮಾರುಕಟ್ಟೆಗೆ ಬರಲಿರುವ ಹೊಸ ಕಾರುಗಳಲ್ಲಿ ನಿರೀಕ್ಷಿಸಬಹುದು. ಆದರೆ, ಹಳೆಯ ಕಾರುಗಳಲ್ಲಿ ಹೊಸ ವ್ಯವಸ್ಥೆ ಅಳವಡಿಸುವುದು ಕಷ್ಟ. ಕ್ಯಾಮೆರಾ ಆಧಾರಿತ ಆಧುನಿಕ ಜಿಪಿಎಸ್‌ ದುಬಾರಿಯೂ ಹೌದು ಎಂದು ಅವರು ಪ್ರತಿಪಾದಿಸುತ್ತಾರೆ.
–ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT