ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವೈ.ಜೆ. ಪ್ರಶಾಂತ್‌, ಕುಂದೂರು, ದಾವಣಗೆರೆ ಜಿಲ್ಲೆ
*ನಾನು ಆಟೊಮೊಬೈಲ್‌ ಅಂಗಡಿ ಪ್ರಾರಂಭಿಸಬೇಕೆಂದಿದ್ದೇನೆ. ₹1.5 ರಿಂದ ₹ 2 ಲಕ್ಷ ಬಂಡವಾಳ ಹಾಕಬಯಸುತ್ತೇನೆ. ನಾನು ಯಾರಿಂದ ಲೈಸೆನ್ಸ್‌ ಪಡೆಯಬೇಕು. ಟಿನ್‌ ನಂಬರ್‌ ಮಾಡಿಸಬೇಕೆ ತಿಳಿಸಿ.

ಉತ್ತರ: ನೀವು ಸ್ವಂತ ಉದ್ಯೋಗ ಮಾಡುವುದು ನಿಜವಾಗಿ ನನಗೆ ಖುಷಿ ತಂದಿದೆ. ದಾವಣಗೆರೆ ಡಿಸ್ಟ್ರಿಕ್ಟ್‌ ಇಂಡಸ್ಟ್ರೀಸ್‌ ಆಫೀಸ್‌ನಲ್ಲಿ ಹಾಗೂ ಸೇಲ್ಸ್ ಟ್ಯಾಕ್ಸ್ ಆಫೀಸ್‌ನಲ್ಲಿ ಲೈಸೆನ್ಸ್ ಪಡೆಯುವ, ಜಿ.ಎಸ್‌.ಟಿ ನೋಂದಾಯಿಸುವ ವಿಚಾರದಲ್ಲಿ ವಿವರಣೆ ಪಡೆಯಿರಿ. ಈಗ ಹಳೆಯ ಕಾನೂನು ಬದಲಾಗಿದೆ. ಜಿಎಸ್‌ಟಿಯಲ್ಲಿ ನೋಂದಾಯಿಸಬೇಕು. ಅದಕ್ಕೂ ಮುನ್ನ ಇಂತಹ ವ್ಯಾಪಾರ–ವ್ಯವಹಾರ ಮಾಡುವ ಅಂಗಡಿಗಳಲ್ಲಿ ಸ್ವಲ್ಪ ಮಟ್ಟಿನ ತರಬೇತಿ ಪಡೆಯುವುದೇ ಲೇಸು. ಕೆಲವೊಂದು ವಿಚಾರಗಳು ಬರೀ ಓದಿದರೆ ತಿಳಿದು ಬರುವುದಿಲ್ಲ.  ಕಾರ್ಯನಿರ್ವಹಣೆಯಲ್ಲಿ ಒಳಿತು ಕೆಡುಕು ಅರಿವಿಗೆ ಬರುತ್ತದೆ. ಹಾಗೂ ಒಳಿತನ್ನೇ ಆರಿಸಿಕೊಳ್ಳುವ ಮಾರ್ಗ ಕೂಡಾ ಕಲಿಯಬಹುದು. ಒಟ್ಟಿನಲ್ಲಿ ನಿಮ್ಮ ಈ ಹೊಸ ಕೆಲಸ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.

ಎಸ್‌.ಬಿ.ಭಟ್‌, ಗೇರುಸೊಪ್ಪ, ಹೊನ್ನಾವರ
*ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ನಷ್ಟದಲ್ಲಿರುವುದಾದರೆ ನಿರೀಕ್ಷಿತ ಹಣ ಹೂಡಲು ಯಾವ ಸಂಸ್ಥೆ ಇದೆ? ನನ್ನ ಕುಟುಂಬಕ್ಕೆ ಆರೋಗ್ಯ ವಿಮೆ ಬೇಕಾಗಿದೆ. ನಾನು, ಪತ್ನಿ, ಮಗ–ಸೊಸೆ ಹೀಗೆ ನಾಲ್ವರಿಗೂ ಅನ್ವಯಿಸುವ ಒಂದು ಆರೋಗ್ಯ ವಿಮೆ ಪಾಲಿಸಿ ಎಲ್ಲಿ ಮಾಡಿಸಲಿ. ನನ್ನ ವಯಸ್ಸು 70, ಪತ್ನಿಗೆ 60, ಮಗನಿಗೆ 36, ಸೊಸೆ ವಯಸ್ಸು 33.

ಉತ್ತರ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ನಷ್ಟದಲ್ಲಿರುವುದು ತಾತ್ಕಾಲಿಕವಾಗಿದ್ದು, ಈ ಬ್ಯಾಂಕ್‌ಗಳನ್ನು ಸರ್ಕಾರವೇ ನೋಡಿಕೊಳ್ಳುತ್ತಿರುವುದರಿಂದ ಇಲ್ಲಿ ಹಣ ಠೇವಣಿ ಇಡಲು ಭಯ ಪಡುವ ಅಗತ್ಯವಿಲ್ಲ. ಈ ಎಲ್ಲಾ ಬ್ಯಾಂಕ್‌ಗಳೂ ಲಾಭದಲ್ಲಿದ್ದರೂ ವಸೂಲಿಯಾಗದ ಸಾಲಗಳಿಗೆ ಪ್ರತ್ಯೇಕವಾಗಿ ಹಣ ತೆಗೆದು ಇಡಬೇಕಾಗಿದ್ದರಿಂದ ಹೊರ ನೋಟಕ್ಕೆ ನಷ್ಟದಲ್ಲಿರುವಂತೆ ಕಾಣುತ್ತವೆ. ಜತೆಗೆ ಸಾಲ ವಸೂಲಾದಂತೆ ನಷ್ಟ ಕಡಿಮೆ ಆಗಿ ಪುನಃ ಲಾಭದ ಹಾದಿಗೆ ಬರುತ್ತವೆ. ಇನ್ನು, ಆರೋಗ್ಯ ವಿಮೆ ವಿಚಾರದಲ್ಲಿ, ನಿಮಗೆ 70 ವರ್ಷ ವಾದ್ದರಿಂದ ಸಿಂಡ್‌ ಆರೋಗ್ಯ ವಿಮೆ ಅನ್ವಯಿಸುವುದಿಲ್ಲ. ಅದೇ ರೀತಿ ಆರೋಗ್ಯ ವಿಮೆ ಕೆನರಾ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ಹಾಗೂ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಬ್ಯಾಂಕ್‌ಗಳಲ್ಲಿ ತಮ್ಮ ಖಾತೆದಾರರಿಗೆ 70 ವರ್ಷ ದಾಟಿದ ವ್ಯಕ್ತಿಗಳಿಗೂ ಆರೋಗ್ಯ ವಿಮೆ ಇಳಿಸುತ್ತಾರೆ. ನೀವು 4 ಜನರೂ ಸೇರಿ ಒಂದು ಫ್ಲೋಟರ್‌ ಪಾಲಿಸಿ ಮಾಡಿ.

ಬಿ.ಎಂ. ರಂಗನಾಥ, ಚಿಕ್ಕಮಗಳೂರು
*ನಾನು ಕೃಷಿಕ, ನನ್ನ ಮಗ ಎಂಬಿಬಿಎಸ್‌ ಮಾಡಿದ್ದಾನೆ. ನನ್ನ ಇದುವರೆಗಿನ ಉಳಿತಾಯ ಇವನ ಓದುವಿಕೆಗೆ ಖರ್ಚಾಗಿದೆ. ಎಂಬಿಬಿಎಸ್‌ ಆದವರಿಗೆ ಗ್ರಾಮೀಣ ಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಸಿಗುತ್ತದೆ ಎಂದು ಕೇಳಿದ್ದೇನೆ. ನಂತರ ಅವರೇ ಪಿ.ಜಿ. ಮಾಡಿಸುತ್ತಾರೆ ಎಂದು ಯಾರೋ ಹೇಳಿದರು. ಪಿಜಿ ಮಾಡಲು ಬ್ಯಾಂಕ್‌ ಸಾಲ ದೊರೆಯಬಹುದೇ ?

ಉತ್ತರ: ಗ್ರಾಮೀಣ ಭಾಗದಲ್ಲಿ ಎಂಬಿಬಿಎಸ್‌ ಆದವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಕರ್ನಾಟಕ ಸರ್ಕಾರ ತೆಗೆದುಕೊಳ್ಳುವುದು ನಿಜ. ಆದರೆ, ಅರ್ಜಿದಾರರ ಸಂಖ್ಯೆ ಹಾಗೂ ಅವಕಾಶ ಇವೆರಡರ ಮೇಲೆ ಇದು ಅವಲಂಬಿಸಿರುತ್ತದೆ. ಪ್ರಯತ್ನ ಮಾಡಿ, ನಿಮ್ಮ ಆಸೆ ಸಫಲಗೊಳ್ಳಲಿ ಎಂದು ಆಶಿಸುತ್ತೇನೆ. ಹೀಗೆ ಕೆಲಸ ಮಾಡುವ ವೈದ್ಯರನ್ನು ಸರ್ಕಾರ ಪಿ.ಜಿ. ಕೋರ್ಸಿಗೆ ನೇಮಕ ಮಾಡುವಾಗ ಪ್ರವೇಶ ಪರೀಕ್ಷೆ ಇರುತ್ತದೆ. ಇಲ್ಲಿಯೂ ರಿಸರ್ವ್‌ವೇಷನ್‌ ಕೂಡಾ ಇದೆ. ಒಟ್ಟಿನಲ್ಲಿ ಅವಕಾಶ ಇರುವುದು ನಿಜ. ಸರ್ಕಾರವೇ ಪಿ.ಜಿ.ಗೆ ಕಳಿಸಿದರೆ, ಸಂಬಳ ಕೂಡಾ ದೊರೆಯುತ್ತದೆ, ಜೊತೆಗೆ ಅವಶ್ಯವಿದ್ದಲ್ಲಿ, ಬ್ಯಾಂಕ್‌ ಸಾಲ ಕೂಡಾ ದೊರೆಯುತ್ತದೆ.

ಹೆಸರು, ಊರು ಬೇಡ
*ನನ್ನ ಮತ್ತು ತಂಗಿಯ ಒಟ್ಟು ಆದಾಯ ₹26,000. ಇದರಲ್ಲಿ ಆರ್‌.ಡಿ., ಎಲ್‌ಐಸಿ ಹಾಗೂ ಇತರೆ ಖರ್ಚು ಕಳೆದು ₹1,600 ಉಳಿಯುತ್ತದೆ. ನಾವು ₹3 ರಿಂದ ₹4 ಲಕ್ಷ ಕಾರು ಕೊಳ್ಳಬೇಕೆಂದಿದ್ದೇವೆ. ಸಲಹೆ ನೀಡಿ.
ಉತ್ತರ:
ನಿಮಗಿಬ್ಬರಿಗೂ ಮದುವೆ ಆಗಿಲ್ಲವೆಂದು ಕಾಣುತ್ತದೆ. ಜೀವನದಲ್ಲಿ ಒಮ್ಮೆ ನೆಲೆಗೊಂಡ ನಂತರ ಕೆಲವೊಂದು ವಿಚಾರಗಳಿಗೆ ಆದ್ಯತೆ ಕೊಡುವುದೇ ಲೇಸು. ನೀವು ಕಾರು ಕೊಳ್ಳಬೇಕು ಅಥವಾ ನಿಮಗೆ ಕಾರಿನ ನಿಜವಾದ ಅವಶ್ಯಕತೆ ಇರುವಲ್ಲಿ ₹3 ರಿಂದ ₹4 ಲಕ್ಷದೊಳಗೆ ಕಾರು ಕೊಂಡುಕೊಳ್ಳಿ. ಕಾರನ್ನು ಯಾರಾದರೊಬ್ಬರ ಹೆಸರಿನಲ್ಲಿ ಕೊಂಡು ಕೊಳ್ಳಬೇಕಾಗುತ್ತದೆ. ಬ್ಯಾಂಕ್‌ನಲ್ಲಿ ನಿಮ್ಮಿಬ್ಬರ ಆದಾಯ ಪುರಾವೆ ಹಾಗೂ ಸಾಲ ಮರುಪಾವತಿಸುವ ಸಾಮರ್ಥ್ಯದ ವಿಚಾರದಲ್ಲಿ ಮನವರಿಕೆ ಮಾಡಿ. 60 ರಿಂದ 80 ಕಂತುಗಳ ಸಾಲ ಪಡೆಯಿರಿ. ಬಡ್ಡಿದರ ಶೇ 9 ಇರಬಹುದು.   ಪ್ರತಿ ತಿಂಗಳು  ಸಾಲ  ಮರುಪಾವತಿಸಬೇಕಾದೀತು. ಯಾವುದೇ ಕೆಲಸ ಮಾಡುವ ಮುನ್ನ ಸರಿಯಾಗಿ ಆಲೋಚಿಸಿ. ಹಿರಿಯರನ್ನು ಕೇಳಿ, ದುಡುಕಬೇಡಿ.

ಹೆಸರು–ಊರು ಬೇಡ
*ನಿವೃತ್ತ ಶಿಕ್ಷಕಿ ವಯಸ್ಸು 68. ಪಿಂಚಣಿ ₹ 18,125 ನನ್ನ ಪತಿಯ ಮರಣಾನಂತರ, ಕುಟುಂಬ ವೇತನ (Fami*y Pension)
₹ 15,178 ನನಗೆ ಬರುತ್ತದೆ. ಇದರಿಂದಾಗಿ ನನ್ನ ವಾರ್ಷಿಕ ಆದಾಯ ₹ 3,99,636 ಆಗುತ್ತದೆ. ಈ ಮೊತ್ತಕ್ಕೆ ತೆರಿಗೆ ಕೊಡಬೇಕೇ ತಿಳಿಸಿ. ನನ್ನ ಪತಿಯವರು ನಮ್ಮ ಇಬ್ಬರು ಹೆಣ್ಣು ಮೊಮ್ಮಕ್ಕಳಿಗೆ ಜೀವವಿಮೆ ಮಾಡಿಸಿರುತ್ತಾರೆ. ಈ ಮಕ್ಕಳು ಅಮೆರಿಕದಲ್ಲಿ ಜನಿಸಿರುತ್ತಾರೆ. ಆದರೆ ಅವರ ತಂದೆ ತಾಯಿ ಭಾರತದಲ್ಲಿ ಕೆಲಸ ಮಾಡುತ್ತಾರೆ. ಏನಾದರೂ ಸಮಸ್ಯೆ ಇದೆಯೇ ?
ಉತ್ತರ:
ನೀವು ಈಗಲೇ ಪಿಂಚಣಿ ಪಡೆಯುತ್ತಿದ್ದು, ಕುಟುಂಬ ವೇತನ ಕೂಡಾ ನಿಮಗೆ ಬರುವುದರಿಂದ, ಇವೆರಡೂ ಸೇರಿಸಿ ಹಾಗೂ ಬೇರಾವ ಆದಾಯವಿದ್ದರೂ ಸೇರಿಸಿ, ಒಟ್ಟು ಆದಾಯದಲ್ಲಿ ₹ 3 ಲಕ್ಷ ಕಳೆದು ತೆರಿಗೆ ಸಲ್ಲಿಸಬೇಕು. ಒಟ್ಟಿನಲ್ಲಿ ಕುಟುಂಬ ವೇತನಕ್ಕೆ ಆದಾಯ ತೆರಿಗೆ ವಿನಾಯತಿ ಇರುವುದಿಲ್ಲ. ಮೊಮ್ಮಕ್ಕಳು ಅಮೆರಿಕದಲ್ಲಿ ಜನಿಸಿದರೂ, ಅವರ ಹೆಸರಿನಲ್ಲಿ, ಭಾರತದಲ್ಲಿ ವಿಮೆ ಇಳಿಸಬಹುದು. ಈ ವಿಚಾರ, ಮಕ್ಕಳ ತಂದೆ ತಾಯಿಗಳು, ತೆರಿಗೆ ಇಲಾಖೆಗೆ ತಿಳಿಯಪಡಿಸಬೇಕಾಗುತ್ತದೆ.

ಬಸವರಾಜಪ್ಪ, ಮೈಸೂರು
*ನಾನು ಸ್ವತಃ ಐ.ಟಿ. ರಿಟರ್ನ್‌ ತುಂಬುತ್ತಿದ್ದೇನೆ. ಇದು ಸರಿನಾ ತಿಳಿಸಿ. ನನ್ನ ವಾರ್ಷಿಕ ಆದಾಯ: ಪಿಂಚಣಿ ₹ 4,81,620, ಠೇವಣಿ ಬಡ್ಡಿ
₹ 45,000 ಮನೆ ಬಾಡಿಗೆಯಿಂದ ₹ 96,000. ನಾನು ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು ಬೇರೆ ಮನೆಯನ್ನು ₹ 7,000 ತಿಂಗಳ ಬಾಡಿಗೆಗೆ ತೆಗೆದುಕೊಂಡಿದ್ದೇನೆ. ನನಗೆ ಎಷ್ಟು ತೆರಿಗೆ ಬರುತ್ತದೆ. ನನ್ನ ಮಗ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಎರಡು ವರ್ಷಗಳಿಂದ ಪಿ.ಓ. ಆಗಿ ಕೆಲಸ ಮಾಡುತ್ತಾನೆ. ಅವನಿಗೆ ಚಿಕಿತ್ಸೆ ವೆಚ್ಚ ಬ್ಯಾಂಕ್‌ ಭರಿಸುತ್ತದೆಯೇ? ನನ್ನ ಮಗನ ಹೆಸರಿನಲ್ಲಿ ಮನೆ ಸಾಲ ತೆಗೆಯಬಹುದಾ? ಎಷ್ಟು ಸಾಲ ಸಿಗಬಹುದು ಬಡ್ಡಿ ದರ ತಿಳಿಸಿ.
ಉತ್ತರ:
ಐ.ಟಿ. ರಿಟರ್ನ್‌  ಅನ್ನು ಅಡಿಟರ್‌ ಮುಖಾಂತರವೇ ತುಂಬುವ ಅವಶ್ಯವಿಲ್ಲ. ನೀವು ತುಂಬಿರುವುದು ಸರಿ ಇರುತ್ತದೆ. ₹ 5 ಲಕ್ಷ ಆದಾಯ ದಾಟಿದಾಗ  ಆನ್‌ಲೈನ್‌ ನಲ್ಲಿಯೇ ರಿಟರ್ನ್‌ ಸಲ್ಲಿಸಬೇಕು ತಿಳಿದಿರಲಿ. ಮನೆ ಬಾಡಿಗೆ ಆದಾಯದಲ್ಲಿ (₹ 96,000) ಶೇ 30, ಸೆಕ್ಷನ್‌ 24(ಎ) ಆಧಾರದ ಮೇಲೆ ಕಡಿತ ಮಾಡಿ ತೆರಿಗೆ ಸಲ್ಲಿಸಬಹುದು.

ಇದರಿಂದಾಗಿ ನಿಮ್ಮ ವಾರ್ಷಿಕ ಆದಾಯ ₹ 5,93,820. ನೀವು ಹಿರಿಯ ನಾಗರಿಕರಾದ್ದರಿಂದ ಪ್ರಥಮ ₹ 3 ಲಕ್ಷ ಆದಾಯದಿಂದ ಕಳೆದು ₹ 5 ಲಕ್ಷಗಳ ತನಕ ಶೇ 10 ಹಾಗೂ ₹ 5 ಲಕ್ಷ ದಾಟಿದ ಮೊತ್ತಕ್ಕೆ ಶೇ 20 ತೆರಿಗೆ ಬರುತ್ತದೆ ಹಾಗೂ ಬರುವ ತೆರಿಗೆ ಮೇಲೆ ಶೇ 3 ಎಜ್ಯುಕೇಷನ್‌ ಸೆಸ್‌ ಕೊಡಬೇಕಾಗುತ್ತದೆ.

ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನೌಕರರ ಹುದ್ದೆ ಕಾಯಂ ಆದನಂತರ, ಗೃಹ ಸಾಲ ದೊರೆಯುತ್ತದೆ. ಸಾಲದ ಮೊತ್ತ ಮೊತ್ತ ಬಡ್ಡಿ ದರ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಬ್ಯಾಂಕ್‌ ನೌಕರರಿಗೆ ಆರೋಗ್ಯವಿಮೆ ಸೌಲತ್ತು ಕೂಡಾ ಇದೆ. ಈ ವಿಚಾರದಲ್ಲಿ ಪ್ರತೀ ಬ್ಯಾಂಕ್‌ ಸುತ್ತೋಲೆ ಕಳಿಸುತ್ತದೆ. ಬ್ಯಾಂಕಿನಲ್ಲಿ ಸಿಗುವ ಸೌಲತ್ತಿನ ಬಗ್ಗೆ ನಿಮ್ಮ ಮಗನನ್ನೇ ವಿಚಾರಿಸಿ.

ಡಿ. ಗೋರೂರ, ಬಸವನಗುಡಿ, ಬೆಂಗಳೂರು
*ನನ್ನ ವಯಸ್ಸು 86, ಪತ್ನಿಗೆ 81 ವಯಸ್ಸು. ಇತ್ತೀಚೆಗೆ ನನ್ನ ಪತ್ನಿ ನಿಧನರಾದರು. ನನ್ನ ಹಾಗೂ ಪತ್ನಿಯ ಖಾತೆಯಲ್ಲಿರುವ ₹ 20 ಲಕ್ಷ ನನ್ನ ಮಗಳಿಗೆ, ತಾಯಿಯ ಆಸೆಯಂತೆ, ವರ್ಗಾಯಿಸಬೇಕಾಗಿದೆ. ಮಗಳು ಕೆಲಸಕ್ಕೆ ಹೋಗುತ್ತಾಳೆ. ಇದುವರೆಗೆ ಅವಳಿಗೆ ತೆರಿಗೆ ಬಂದಿಲ್ಲ. ನಿಮ್ಮ ಸಲಹೆ ಬೇಕಾಗಿದೆ.
ಉತ್ತರ:
ತಂದೆ ತಾಯಿಗಳು ಮಗಳಿಗೆ ಇನಾಮಾಗಿ ಎಷ್ಟು ಹಣ ಆಸ್ತಿ ಕೊಟ್ಟರೂ, ಕೊಡುವವರಿಗೆ ಹಾಗೂ ತೆಗೆದುಕೊಳ್ಳುವವರಿಗೆ ತೆರಿಗೆ ಬರುವುದಿಲ್ಲ. ಧೈರ್ಯ ಮಾಡಿ ಮಗಳ ಹೆಸರಿಗೆ ₹ 20 ಲಕ್ಷ ವರ್ಗಾಯಿಸಿರಿ. ನಿಮ್ಮ ಮಗಳ ವಾರ್ಷಿಕ ಆದಾಯ ಹಾಗೂ ₹ 20 ಲಕ್ಷ ಠೇವಣಿಯಿಂದ ಬರುವ ಬಡ್ಡಿ, ₹ 2.50 ಲಕ್ಷ ದಾಟಿದಲ್ಲಿ ಮಾತ್ರ ಹಾಗೆ ದಾಟಿದ ಹಣಕ್ಕೆ ಅವರು ತೆರಿಗೆ ಕೊಡಬೇಕಾಗುತ್ತದೆ.

ಹೆಸರು–ಊರು ಬೇಡ
*ನಾನು ಅರ್ಚಕ, ವಯಸ್ಸು 40, ಅವಿವಾಹಿತ, ನನಗೆ ತಾಯಿ ತಂದೆ ಇದ್ದಾರೆ. ತಿಂಗಳ ಸಂಬಳ ₹ 6,500. ತಟ್ಟೆ ಹಣ ಸ್ವಲ್ಪ ಬರುತ್ತದೆ. ನಾನು ಅಪ್ಪ ಅಮ್ಮನಿಗೆ ₹ 8000 ಕಳಿಸುತ್ತೇನೆ. ಕಳೆದ 10 ವರ್ಷಗಳಿಂದ ನಾನು ಬ್ಯಾಂಕಿನಲ್ಲಿ ಕೂಡಿಟ್ಟ ಹಣ ₹ 5 ಲಕ್ಷ ಎನ್‌.ಪಿ.ಎಸ್‌. ಕೂಡಾ ಮಾಡಿದ್ದೇನೆ. ಎಸ್‌.ಬಿ.ಯಲ್ಲಿ ₹ 1ರಿಂದ ₹ 2 ಲಕ್ಷವಿದೆ. ಮುಂದೆ ನನಗೆ ತೆರಿಗೆ ಬರುತ್ತಿದೆಯೇ, ತೆರಿಗೆ ಉಳಿಸಲು ತಂದೆ ತಾಯಿ ಹೆಸರಿನಲ್ಲಿ ಠೇವಣಿ ಮಾಡಬೇಕೇ ತಿಳಿಸಿರಿ. ಎಸ್‌.ಬಿ.ಯಲ್ಲಿ ಎಷ್ಟು ಹಣ ಇಟ್ಟರೆ ತೆರಿಗೆ ಬರುತ್ತದೆ. ನಾನು ಆದಾಯ ತೆರಿಗೆ ರಿಟರ್ನ್‌ ತುಂಬಬೇಕೇ ತಿಳಿಸಿ.
ಉತ್ತರ:
ನೀವು ಆದಾಯ ತೆರಿಗೆಯ ಭಯದಿಂದ ಬಳಲುತ್ತಿರುವುದು ಸೋಜಿಗ, ನಿಮ್ಮ ವಾರ್ಷಿಕ ಒಟ್ಟು ಆದಾಯ, ಬ್ಯಾಂಕ್‌ ಠೇವಣಿ ಬಡ್ಡಿ ಸೇರಿಸಿ,  ₹ 2.50 ಲಕ್ಷ ದಾಟಿದಲ್ಲಿ ಮಾತ್ರ ನಿಮಗೆ ತೆರಿಗೆ ಬರುತ್ತದೆ. ತೆರಿಗೆ ಭಯದಿಂದ ಹಣ ಉಳಿಸದೆ, ಖರ್ಚು ಮಾಡಬೇಡಿ. ನನ್ನ ಪ್ರಕಾರ ನಿಮಗೆ ಮುಂದೆ ಕೂಡಾ ಆದಾಯ ತೆರಿಗೆ ಕಟ್ಟುವ ಪ್ರಮೇಯ ಬರುವುದಿಲ್ಲ. ಧೈರ್ಯವಾಗಿ ಬಾಳಿರಿ. ಎಸ್‌.ಬಿ.ನಲ್ಲಿ ಬಂದ ಹಣ ಶೇಖರಿಸಿ, ₹ 5000 ಆದಾಗ ಅವಧಿ ಠೇವಣಿ ಮಾಡಿರಿ.

ಎಸ್‌.ಬಿ. ಖಾತೆಯಲ್ಲಿ ವಾರ್ಷಿಕ ₹ 10,000 ಬಡ್ಡಿ ಬಂದರೂ ಅದು ತೆರಿಗೆ ವಿನಾಯಿತಿಗೆ ಒಳಗಾಗಿದೆ.   ನಿಮ್ಮ ತಿಂಗಳ ಆದಾಯ ₹ 10000–12000 ಇರಬಹುದು. ತಿಂಗಳ ಆದಾಯ ₹ 20,000 ದಾಟುವವರೆಗೆ ತೆರಿಗೆ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ಉಳಿತಾಯ ಖಾತೆಯಲ್ಲಿ ಎಷ್ಟು ಬೇಕಾದರೂ ತೊಡಗಿಸಬಹುದು. ಆದರೆ ಇಲ್ಲಿ ಬರುವ ಬಡ್ಡಿ ಬರೇ ಶೇ 4 ಆದ್ದರಿಂದ ಹೆಚ್ಚಿನ ಹಣ ಇಲ್ಲಿ ಇರಿಸುವುದು ಜಾಣತನವಲ್ಲ.

ಮನು, ಶಿವಮೊಗ್
*ನಾನೊಬ್ಬ ವಿದ್ಯಾರ್ಥಿ, ಡಿಗ್ರಿ ಮುಗಿಯಲು ಇನ್ನೂ 5 ಸೆಮಿಸ್ಟರ್‌ ಉಳಿದಿದೆ. ನನ್ನೊಡನೆ, ಮನೆಯವರು ಕೊಟ್ಟ ₹ 25,000 ಸಿಂಡಿಕೇಟ್‌ ಬ್ಯಾಂಕಿನಲ್ಲಿ ಇರಿಸಿಕೊಂಡಿದ್ದೇನೆ. ನನ್ನ ಖರ್ಚಿನಲ್ಲಿ ಉಳಿತಾಯ ಮಾಡಿ ಹಣ ಉಳಿಸಬೇಕೆಂದಿದ್ದೇನೆ. ಮಾರ್ಗದರ್ಶನ ಮಾಡಿ.
ಉತ್ತರ:
ವಿದ್ಯಾರ್ಥಿಯಾದ ನೀವು ಉಳಿತಾಯಕ್ಕೆ ಚಿಂತಿಸುತ್ತಿರುವುದು ನನಗೆ ಸಂತಸ ತಂದಿದೆ. ನೀವು ನಿಮ್ಮ ಗೆಳೆಯರಿಗೆ ಮಾರ್ಗದರ್ಶನ ನೀಡಿದಂತಾಗಿದೆ. ₹ 25000, ನಿಮ್ಮ ಮುಂದಿನ ಖರ್ಚಿಗೆ ಮನೆಯವರು ಬ್ಯಾಂಕಿನಲ್ಲಿ ಜಮಾ ಇಟ್ಟಿರಬೇಕು.

ಈ ಹಣ ಅವಧಿ ಠೇವಣಿ ಮಾಡಿ ಹೆಚ್ಚಿನ ಬಡ್ಡಿ ಪಡೆಯಲು ನಿಮಗೆ ಅವಕಾಶವಿಲ್ಲ. ಸಾಧ್ಯವಾದರೆ ₹ 500 ಆರ್‌.ಡಿ. 3 ವರ್ಷಗಳ ಅವಧಿಗೆ ಮಾಡಿ. ಆರ್‌.ಡಿ. ಒಂದು ಉತ್ತಮ ಠೇವಣಿ. ₹ 500 ಪ್ರತೀ ತಿಂಗಳೂ ತುಂಬಬೇಕಾಗುತ್ತದೆ. ಈ ವಿಚಾರದಲ್ಲಿ ಬ್ಯಾಂಕಿಗೆ ಸ್ಟ್ಯಾಂಡಿಂಗ್‌ ಇನ್‌್ಸಟ್ರಕ್ಷನ್‌ ಕೊಡಿ. ಇದರಿಂದಾಗಿ ನೀವು ಪ್ರತೀ ತಿಂಗಳೂ ಬ್ಯಾಂಕಿಗೆ ಹೋಗಿ ಕಟ್ಟುವ ಕೆಲಸ ಹಾಗೂ ಸಮಯ ಉಳಿಯುತ್ತದೆ. 

ರಾಜು ಮಾದೇಶ್‌, ಊರು ಬೇಡ
*ವಯಸ್ಸು 34. ಖಾಸಗಿ ಕಂಪೆನಿಯಲ್ಲಿ ಕೆಲಸ. ತಿಂಗಳ ಸಂಬಳ ₹ 26,000.   ಖರ್ಚು ಹೋಗಿ ₹ 15,000 ಉಳಿಯುತ್ತದೆ. ನಾನು 2 ಬಿಎಚ್‌ಕೆ ಮನೆ–ಫ್ಲ್ಯಾಟ್‌ ಕೊಳ್ಳಲು ಸಾಧ್ಯವೇ? ಸಾಲ, ಕಂತು ವಿಚಾರದಲ್ಲಿ ಸಲಹೆ ನೀಡಿ.
ಉತ್ತರ:
ಬ್ಯಾಂಕುಗಳಲ್ಲಿ ಸಾಲ ಕೊಡುವ ಮುನ್ನ ವ್ಯಕ್ತಿಯ ಸಾಲದ ಮರು ಪಾವತಿಸುವ ಸಾಮರ್ಥ್ಯ ನೋಡುತ್ತಾರೆ. 2 ಬಿಎಚ್‌ಕೆ ಮನೆ ಅಥವಾ ಫ್ಲ್ಯಾಟ್‌ ಕೊಳ್ಳಲು ಕನಿಷ್ಠ ₹ 50 ಲಕ್ಷ ಹಣ ಸಾಲ ಬೇಕಾಗುತ್ತದೆ. ನಿಮಗೆ ಗರಿಷ್ಠ ₹ 15 ಲಕ್ಷ ಸಾಲ ದೊರೆಯಬಹುದು.

ನಿಮ್ಮ ಸದ್ಯದ ಪರಿಸ್ಥಿತಿಯಲ್ಲಿ ಮನೆ ಸಾಲ ಪಡೆಯುವುದಕ್ಕಿಂತ, ಉಳಿಸಬಹುದಾದ ಹಣ ₹ 15,000. 10 ವರ್ಷಗಳ ಆರ್‌.ಡಿ. ಮಾಡಿರಿ. ಅವಧಿ ಮುಗಿಯುತ್ತಲೇ ಸಮೀಪದಲ್ಲಿ ₹ 30 ಲಕ್ಷ ಪಡೆಯುವಿರಿ.

ಆ ಸಮಯದಲ್ಲಿ ಸ್ವಲ್ಪ ಬ್ಯಾಂಕ್‌ ಸಾಲ ಹಾಗೂ ಈ ಉಳಿತಾಯದಿಂದ ಮನೆ ಮಾಡಿಕೊಳ್ಳಿ, ಒಟ್ಟಿನಲ್ಲಿ ನೀವು ಉಳಿಸಬಹುದಾದ ₹ 15,000 ತಕ್ಷಣ ಆರ್‌.ಡಿ. ಮಾಡಲು ಮರೆಯದಿರಿ. ಹೀಗೆ ಮಾಡಿದಲ್ಲಿ ಮುಂದಿನ ಭವಿಷ್ಯಕ್ಕೆ ದಾರಿಯಾಗುತ್ತದೆ, ಜೊತೆಗೆ ಬೇಡವಾದ ಖರ್ಚಿಗೆ ತಡೆಹಿಡಿದಂತಾಗುತ್ತದೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ, ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ; ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು –560001
ಇ–ಮೇಲ್‌: businessdesk@prajavani.co.in   –ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT