ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿನೋಟಕ್ಕೆ ನಿಲುಕುವ ‘ಮೈ ಸಿಟಿ’

ಕಲಾಪ
Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಗರೀಕರಣ, ಆಧುನಿಕತೆಯ ಪ್ರಭಾವದಿಂದ ಹಳತಾದ ಕಟ್ಟಡಗಳ ಜಾಗದಲ್ಲಿ ಭವ್ಯತೆ ಸ್ಥಾಪಿಸಿ ನಿರ್ಮಾಣವಾಗುವ ಗಗನಚುಂಬಿ ಕಟ್ಟಡಗಳು, ರಸ್ತೆಗಳ ಅಗಲೀಕರಣ ಇವೆಲ್ಲಾ ನಗರಗಳ ಮೂಲಸ್ವರೂಪವನ್ನು ಮರೆಯಾಗಿಸುತ್ತಿವೆ.

ಅಭಿವೃದ್ಧಿಯ ರಹದಾರಿಯಲ್ಲಿ ಓಡುತ್ತಿರುವವರಿಗೆ ರಸ್ತೆಗಳ ಬದಿಯಲ್ಲಿನ ಹಸಿರು ಸಂಪತ್ತಿನ ಕಡೆಗೆ ಗಮನವೇ ಇಲ್ಲದಂತಾಗಿದೆ. ದಣಿದಾಗ ನೆರಳಿನ ಆಶ್ರಯ ಅವಶ್ಯವಾಗಬಹುದು ಎಂದು ಯೋಚಿಸಲೂ ಪುರಸೊತ್ತಿಲ್ಲದಂತೆ ಯಾವುದೋ ಗಮ್ಯದ ಬೆನ್ನಟ್ಟಿ ಸಾಗುತ್ತಿದೆ ಇಂದಿನ ಜನಜೀವನ.

ಉದ್ಯಾನ ನಗರಿಯಾಗಿದ್ದ ಬೆಂಗಳೂರು ಈಗ ಅಕ್ಷರಶಃ ತಾಪಮಾನದ ಬೇಗೆಯಲ್ಲಿ ಬೇಯುತ್ತಿದೆ. ನಗರೀಕರಣದ ಭರಾಟೆಯಲ್ಲಿ ಮುಂದೆ ಸಾಗುತ್ತಾ ಇದೇ ನಿಜವಾದ ಪ್ರಗತಿ ಎಂದು ಜನ ಭಾವಿಸಿದಂತಿದೆ. ಇಂತಹ ಸಂಕ್ರಮಣ ಕಾಲಕ್ಕೆ ಸೃಜನಶೀಲ ಮನಸ್ಸೊಂದು ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸಿದೆ.

ಕಲಾವಿದ, ಬನ್ನೇರುಘಟ್ಟದ ಎಸ್.ಎ. ವಿಮಲನಾಥನ್ ಅವರು ‘ಮೈ ಸಿಟಿ’ ಎನ್ನುವ ಏಕೈಕ ವಿಷಯ ಕೇಂದ್ರೀಕರಿಸಿ ರಚಿಸಿರುವ ಸರಣಿಯ ಒಂದೊಂದು ಕಲಾಕೃತಿಗಳೂ ಅವರ ಚಿಂತನೆಗಳ, ಕಲ್ಪನೆಗಳ ಮೂರ್ತರೂಪದಂತಿವೆ.

ಈ ಸರಣಿಯ ಚಿತ್ರಗಳು ಬೆಂಗಳೂರನ್ನು ಕೇಂದ್ರೀಕರಿಸಿ ರೂಪುಗೊಂಡಿದ್ದರೂ, ನಗರೀಕರಣಗೊಳ್ಳುತ್ತಿರುವ ಜಗತ್ತಿನ ಯಾವುದೇ ಪ್ರದೇಶವನ್ನೂ ಪ್ರತಿನಿಧಿಸುವಷ್ಟು ಪರಿಣಾಮಕಾರಿಯಾಗಿವೆ. ಪ್ರದರ್ಶನದಲ್ಲಿರುವ ಬಹುತೇಕ ಚಿತ್ರಗಳು  ಕಳೆದ ಆರು ತಿಂಗಳಲ್ಲಿ ರಚನೆಯಾಗಿರುವುದು ಎಂದು ವಿಮಲನಾಥನ್‌ ಹೇಳುತ್ತಾರೆ.

ನಗರದ ಚಿತ್ರಣಗಳನ್ನು ಪಕ್ಷಿನೋಟದ ಮೂಲಕ ಕಟ್ಟಿಕೊಡುವ ಈ ಕಲಾಕೃತಿಗಳಲ್ಲಿ ವಾಸ್ತವಾಂಶಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಆಕ್ರಿಲಿಕ್ ಮಾಧ್ಯಮದಲ್ಲಿ ಮೂಡಿರುವ ಈ ಚಿತ್ರಗಳ ವಿಶೇಷತೆ ಎಂದರೆ ಢಾಳಾಗಿರುವ ಬಣ್ಣಗಳ ಸಂಯೋಜನೆ.

ವಿಶಾಲವಾದ ಕ್ಯಾನ್‌ವಾಸಿನಲ್ಲಿ ಬಣ್ಣಗಳ ಮೇಳವನ್ನೇ ಕಟ್ಟಿಕೊಡುವ ಈ ಚಿತ್ರಗಳಲ್ಲಿ ಹಸಿರು ಬಣ್ಣದ ಬಳಕೆ ಇರುವುದು ಮಾತ್ರ ಅಲ್ಲಲ್ಲಿ. ಈ ಹಸಿರು ಬಣ್ಣ ಹಲವು ಹೊಳಹುಗಳನ್ನು ಮೂಡಿಸುವ ಸಾಧ್ಯತೆಗಳಿವೆ.

ಒಂದೆಡೆ ಇದು ಬೆಂಗಳೂರಿನಲ್ಲಿ ಕಣ್ಮರೆಯಾಗುತ್ತಿರುವ ಮರಗಳ ಪ್ರಮಾಣಕ್ಕೆ ಸಂಕೇತದಂತೆ ಕಾಣಿಸಿದರೆ, ಇನ್ನೊಂದೆಡೆ ಆಧುನಿಕತೆಯ ರಹದಾರಿಯಲ್ಲಿ ವೇಗವಾಗಿ ಸಾಗಲು ದೊರಕಿಸಿಕೊಂಡಿರುವ ಹಸಿರು ನಿಶಾನೆಯನ್ನು ಸೂಚಿಸುತ್ತಿರಬಹುದೇ ಎಂದೂ ಅನಿಸುತ್ತದೆ.

ಕೆಲವು ಚಿತ್ರಗಳನ್ನು ಫಕ್ಕನೆ ಕಂಡಾಗ ವಿವಿಧ ವರ್ಣ, ವಿನ್ಯಾಸಗಳ ಬಟ್ಟೆ ಚೂರುಗಳನ್ನು ಸೇರಿಸಿ ತಯಾರಿಸಿದ ಕೌದಿಯೇನೋ ಎನ್ನುವಂತೆ ಭಾಸವಾಗುತ್ತದೆ. ಇನ್ನೊಂದು ನೋಟಕ್ಕೆ ಅಲ್ಲಿ ಗೋಚರಿಸುವುದೇ ಬೇರೆ. ಢಾಳು ಬಣ್ಣಗಳ ನಡುವೆ ಓರೆಕೋರೆಯಾಗಿ ಎದ್ದು ಕಾಣುವ ಬಂಗಾರದ ಬಣ್ಣದ ರೇಖೆಗಳು ಝಗಮಗಿಸುವ ನಗರದ ಸಂಜೆಯ ಪರಿಸರಕ್ಕೆ ರೂಪಕವೂ ಆಗಬಹುದು. ವಿಶಾಲ ಹರವಿನ ಕ್ಯಾನ್‌ವಾಸ್‌ನಲ್ಲಿ ಒತ್ತೊತ್ತಾಗಿ ಇರುವ ರೇಖೆಗಳ ಸ್ವರೂಪ, ನಗರದಲ್ಲಿ ವಿಜೃಂಭಿಸುತ್ತಿರುವ ಭಾರೀ ಕಟ್ಟಡಗಳ ಪ್ರತಿರೂಪದಂತೆ ತೋರುತ್ತದೆ.

ಇನ್ ಸರ್ಚ್ ಆಫ್ ಮೈ ನೆಸ್ಟ್:  ಹದ್ದಿನ ಮೇಲ್ಭಾಗ ಹೊಂದಿರುವ ಮನುಷ್ಯನ ಆಕೃತಿಯೊಂದು ಆಕಾಶದಿಂದ ನಗರವನ್ನು ಗಾಢವಾಗಿ ವೀಕ್ಷಿಸುತ್ತಿರುವ ಚಿತ್ರವೊಂದು ಪ್ರದರ್ಶನದಲ್ಲಿದೆ. ಈ ಚಿತ್ರ ಮಾತ್ರ 2009ರಲ್ಲಿಯೇ ರಚನೆಯಾಗಿದ್ದು.

‘ಪಕ್ಷಿಗಳ ಆಶ್ರಯಧಾಮವಾಗಿರುವ ಮರಗಳು ಮಾಯವಾಗುತ್ತಿವೆ. ಮುಂಜಾನೆ ಗೂಡು ಬಿಟ್ಟು ಹಾರಿಹೋದ ಪಕ್ಷಿಯೊಂದು ಸಂಜೆ ಮರಳುವ ಸಮಯಕ್ಕೆ, ಗೂಡಿನ ಸಮೇತ ಮರವೇ ಇಲ್ಲವಾಗಿರುತ್ತದೆ. ತನ್ನ ಆಶ್ರಯ ಕಳೆದುಕೊಂಡ ಪಕ್ಷಿ ಆತಂಕ, ಅಸಹಾಯಕತೆಯಿಂದ ನೆಲೆಗಾಗಿ ಹುಡುಕಾಡುತ್ತದೆ.

ಇದೇ ರೀತಿಯ ಸ್ಥಿತಿ ಅನುಭವಿಸುವ ಅಸಂಖ್ಯಾತ ಪಕ್ಷಿಗಳ ಏಕರೂಪವಾಗಿ ನನ್ನನ್ನೇ ಒಳಗೊಂಡಂತೆ ಈ ಆಕೃತಿಯನ್ನು ಚಿತ್ರಿಸಿದ್ದೇನೆ ಎಂದು ‘ಇನ್‌ಸರ್ಚ್ ಆಫ್ ಮೈ ನೆಸ್ಟ್’ ಶೀರ್ಷಿಕೆಯುಳ್ಳ ಚಿತ್ರದ ಕುರಿತು ವಿವರಿಸುತ್ತಾರೆ ಕಲಾವಿದ ವಿಮಲನಾಥನ್.

ಈ ಚಿತ್ರದ ಬಳಿಕವೇ ನನ್ನ ‘ಮೈ ಸಿಟಿ’ ಸರಣಿಯ ಕಲಾಕೃತಿಗಳು ರೂಪು ತಳೆದದ್ದು. ನಗರದಿಂದ ಪಕ್ಷಿ ದೂರ ದೂರ ಹಾರಿಹೋದಂತೆಲ್ಲಾ ವಾಸ್ತವ ಮರೆಯಾಗುತ್ತದೆ. ವಾಸ್ತವ ನೆಲೆಗಟ್ಟು ಸಮಷ್ಟಿ ರೂಪದಲ್ಲಿ ಅಮೂರ್ತವೂ ಆಗುತ್ತದೆ ಎನ್ನುವುದು ನನ್ನ ಭಾವನೆ.

ಈ ಭಾವನೆ, ವಾಸ್ತವದ ಅನುಭವಗಳು, ಭವಿಷ್ಯದ ಒಂದಿಷ್ಟು ಕಲ್ಪನೆಗಳನ್ನು ಮಿಳಿತಗೊಳಿಸಿ ರಚಿಸಿರುವ ಈ ಚಿತ್ರಗಳೆಲ್ಲಾ ಅಮೂರ್ತವಾದವು ಎನ್ನುವುದು ಪ್ರದರ್ಶನದ ಕಲಾಕೃತಿಗಳ ಕುರಿತು ವಿಮಲನಾಥನ್ ನೀಡುವ ವಿವರಣೆ. 

ಕಲಾಪ
ಕಲಾವಿದ: ಎಸ್‌.ಎ.ವಿಮಲನಾಥನ್‌
ಪ್ರಕಾರ: ಆಕ್ರಿಲಿಕ್
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಸಮಯ: ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ.
ಅವಧಿ: ಏಪ್ರಿಲ್ 23ರತನಕ
ಪ್ರವೇಶ: ಉಚಿತ
ಸಂಪರ್ಕ:  99640 81152
ಇ–ಮೇಲ್ rvcreativespace@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT