ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ

Last Updated 18 ಏಪ್ರಿಲ್ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು/ ಹುಬ್ಬಳ್ಳಿ: ‘ವಿಧಾನಸಭೆ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೇ ಎದುರಿಸಲಾಗುವುದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌  ಸ್ಪಷ್ಟಪಡಿಸಿದರು.

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಬಳಿಕ ಮುಂದಿನ ಚುನಾವಣೆಯ ನೇತೃತ್ವ ಕುರಿತು ಎದ್ದಿರುವ ವಿವಾದಗಳಿಗೆ ರಾಜ್ಯದ ಉಸ್ತುವಾರಿ ಹೊತ್ತಿರುವ ಸಿಂಗ್‌ ಅವರು ಸದ್ಯಕ್ಕೆ ತೆರೆ ಎಳೆದಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಚುನಾವಣೆ ಬಳಿಕ ಪಕ್ಷದ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ’ ಎಂದರು.

‘ಕಾಂಗ್ರೆಸ್‌ಗೆ ಮೇಲ್ಜಾತಿಯವರ ಬೆಂಬಲ ಇಲ್ಲ ಎಂಬ ಮಾತು ಇತ್ತು. ಆದರೆ, ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಇದನ್ನು ಸುಳ್ಳಾಗಿಸಿದೆ’ ಎಂದು ತಿಳಿಸಿದರು.

ಪರಮೇಶ್ವರ್ ಬದಲಾವಣೆ ಸದ್ಯಕ್ಕಿಲ್ಲ: ‘ಕೆಪಿಸಿಸಿ ಅಧ್ಯಕ್ಷರಾಗಿ ಜಿ. ಪರಮೇಶ್ವರ್‌ ಅಕ್ಟೋಬರ್‌ವರೆಗೂ ಮುಂದುವರಿಯಲಿದ್ದಾರೆ’ ಎಂದೂ ಸಿಂಗ್‌ ಇದೇ ಸಂದರ್ಭದಲ್ಲಿ ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಹಾಗೂ ವಿವಿಧ ಘಟಕಗಳಿಗೆ ಚುನಾವಣೆ ನಡೆದ ನಂತರವೇ ಅಧ್ಯಕ್ಷರ ನೇಮಕ ಕುರಿತು ಚರ್ಚಿಸಲಾಗುವುದು ಎಂದು ಸಿಂಗ್‌ ತಿಳಿಸಿದರು.
‘ಅಧ್ಯಕ್ಷರನ್ನು ಆಯ್ಕೆ ಮಾಡಲು ಜಾತಿ ಮತ್ತು ಪ್ರದೇಶವನ್ನು ಮಾನದಂಡವಾಗಿ ಇಟ್ಟುಕೊಳ್ಳುವುದಿಲ್ಲ. ಎಲ್ಲ ವರ್ಗದವರೂ ನಮ್ಮವರೇ. ನಮ್ಮದು ಸಮಗ್ರ ಕರ್ನಾಟಕದ ದೃಷ್ಟಿ’  ಎಂದು ಅವರು ಹೇಳಿದರು.


ಈಗಿನಿಂದಲೇ ಕಾರ್ಯತಂತ್ರ: ರಾಜ್ಯದಲ್ಲಿ  ಮತ್ತೆ ಅಧಿಕಾರದ ಚುಕ್ಕಾಣಿ  ಹಿಡಿಯುವ ಕುರಿತು ಸೋಮವಾರ  ಮಧ್ಯರಾತ್ರಿವರೆಗೂ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದರು.
ದಿಗ್ವಿಜಯ್‌ ಸಿಂಗ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಸಾರಥ್ಯ ಬದಲು, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಾರ್ಯತಂತ್ರ ಕುರಿತು ಗಂಭೀರ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು, ಪರಮೇಶ್ವರ್ ಅವರನ್ನು ಬದಲಾಯಿಸುವ ಅಥವಾ ಮುಂದುವರಿಸುವ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯರ ಅಹವಾಲು ಆಲಿಸುವಂತೆ ಸೂಚಿಸಬೇಕು ಎಂದು ಸಿಂಗ್‌ ಅವರನ್ನು ಆಗ್ರಹಿಸಿದರು.

2018ರ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸುವಂತೆ  ಹಿರಿಯ ನಾಯಕರಿಗೆ ಸಿಂಗ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕ್ಷೇತ್ರಗಳಲ್ಲಿ ಮೊದಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕೆ  ಕ್ಷೇತ್ರವಾರು ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಿಂಗ್‌,  ‘ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ. ಆ ಹುದ್ದೆಗೆ ಸ್ಪರ್ಧಿಗಳೂ ಇಲ್ಲ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

‘ಮಂತ್ರಿಮಂಡಲ ವಿಸ್ತರಣೆ ಮತ್ತು ವಿಧಾನ ಪರಿಷತ್‌ಗೆ ಸದಸ್ಯರ ನಾಮನಿರ್ದೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ
ಬಿಟ್ಟ ವಿಚಾರ’ ಎಂದೂ ಅವರು ತಿಳಿಸಿದರು.  

ಅಳಲು ತೋಡಿಕೊಂಡ ಡಿಕೆಶಿ: ‘ನಾನು ಮುಂಗೋಪಿ, ಕೋಪಿಷ್ಟ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ’ ಎಂದು ದಿಗ್ವಿಜಯ್ ಸಿಂಗ್ ಬಳಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ಬೆಳಿಗ್ಗೆ ಸಿಂಗ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾದ ಶಿವಕುಮಾರ್‌, ಕೆಲಹೊತ್ತು ಮಾತುಕತೆ ನಡೆಸಿದರು.
‘ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರಾದರೆ ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇಲ್ಲ ಎಂದು ಬಿಂಬಿಸಲಾಗುತ್ತಿದೆ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ಹೈಕಮಾಂಡ್‌ ತೀರ್ಮಾನಿಸಲಿದೆ’: ‘ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನೇತೃತ್ವವನ್ನು ಯಾರು ವಹಿಸಲಿದ್ದಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನಿಲಿದೆ’ ಎಂದು  ಪರಮೇಶ್ವರ್ ಅವರು ಪುನರುಚ್ಚರಿಸಿದರು. ‘ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ. ಜೆಡಿಎಸ್ ಜತೆ ಚುನಾವಣಾ ಮೈತ್ರಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆ ಪ್ರಸ್ತಾವವೂ ಇಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು.

ಬಿಜೆಪಿಯವರು ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಜಾಣ್ಮೆಯಿಂದ ದುರ್ಬಳಕೆ  ಮಾಡುತ್ತಾರೆ. ಆದರೆ, ಇಲ್ಲಿನ ಉಪ ಚುನಾವಣೆಯಲ್ಲಿ ಅದು ಸಾಧ್ಯವಾಗಿಲ್ಲ.
ದಿಗ್ವಿಜಯ್‌ ಸಿಂಗ್‌
ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

ಆ್ಯಂಟನಿ ವರದಿ ಬಳಿಕ ಕ್ರಮ

ಪಕ್ಷದ ನಾಯಕರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದ ಬಿ. ಜನಾರ್ದನ ಪೂಜಾರಿ ಹಾಗೂ ಎಚ್.ವಿಶ್ವನಾಥ್‌ ಅವರ ಕುರಿತು ಎ.ಕೆ. ಆ್ಯಂಟನಿ ನೇತೃತ್ವದ ಸಮಿತಿ ವಿಚಾರಣೆ ನಡೆಸುತ್ತಿದೆ. ವರದಿ ಬಂದ ನಂತರ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ದಿಗ್ವಿಜಯ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT