ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕ, ತಂಗಿಯರ ಸಂಭ್ರಮದ ಭೇಟಿ

ಬರಗೇರಮ್ಮ, ತಿಪ್ಪಿನಘಟ್ಟಮ್ಮ ಶಕ್ತಿದೇವತೆಗಳ ಪ್ರೀತಿ ವಾತ್ಸಲ್ಯದ ಆಲಿಂಗನ
Last Updated 19 ಏಪ್ರಿಲ್ 2017, 3:33 IST
ಅಕ್ಷರ ಗಾತ್ರ
ಚಿತ್ರದುರ್ಗ: ಐತಿಹಾಸಿಕ ಕೋಟೆನಾಡಿನ ಶಕ್ತಿದೇವತೆಗಳಲ್ಲಿ ಪ್ರಮುಖರಾದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಅಮ್ಮನವರು ಒಂದು ಹೆಜ್ಜೆ ಮುಂದಕ್ಕೆ, ಎರಡು ಹೆಜ್ಜೆ ಹಿಂದಕ್ಕೆ ಇಡುತ್ತಾ, ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಾ, ಉರುಮೆ ನಾದಕ್ಕೆ ತಕ್ಕಂತೆ ಕುಣಿಯುತ್ತಾ ರಾಜಬೀದಿ ದೊಡ್ಡಪೇಟೆಯಲ್ಲಿ ಮಂಗಳವಾರ ಭೇಟಿಯಾದರು!
 
ನಗರದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ಬರಗೇರಮ್ಮ ದೇವತೆ ಹಾಗೂ ಪೂರ್ವ ಭಾಗದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ದೇವತೆಯ ಭೇಟಿ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ರಾತ್ರಿ 9.20ಕ್ಕೆ ಅಕ್ಕ ತಂಗಿಯರು ಭೇಟಿಯಾದರು. ವರ್ಷ ಕ್ಕೊಮ್ಮೆ ನಡೆಯುವ ಅಪರೂಪದ ಈ ಸುಂದರ ಕ್ಷಣಕ್ಕಾಗಿ ಸುಮಾರು ಎರಡು ಗಂಟೆವರೆಗೂ ಭಕ್ತರು ಕಾದು ಕುಳಿತಿದ್ದರು. 
 
ಅಕ್ಕ, ತಂಗಿಯರ ಐತಿಹಾಸಿಕ ಭೇಟಿ ಮಹೋತ್ಸವ ಎಂದೇ ಜನಜನಿತ ವಾಗಿರುವ ಈ ಉತ್ಸವ ಜನಪದ ಸೊಗಡಿನ ಹಿನ್ನೆಲೆ ಹೊಂದಿದೆ. ಸೋಮನ ಕುಣಿತ, ಡೊಳ್ಳು ಕುಣಿತ, ದೀವಟಿಗೆಧಾರಿಗಳು, ಉರುಮೆನಾದ, ತಮಟೆಗಳ ಸದ್ದು, ಡೊಳ್ಳುವಾದನಗಳು ಭೇಟಿಯ ಉತ್ಸವಕ್ಕೆ ಮೆರುಗು ನೀಡಿದವು.
 
ವಿವಿಧ ಪುಷ್ಪಗಳಿಂದ ಅಲಂಕೃತ ಗೊಂಡಿದ್ದ ದೇವತೆಗಳಾದ ಅಕ್ಕ–ತಂಗಿಯರು ಪರಸ್ಪರ ಭೇಟಿಗಾಗಿ ತವಕಿಸುವ ದೃಶ್ಯ ಅತ್ಯಂತ ಸೊಗಸಾಗಿತ್ತು. ‘ಏಕನಾಥೇಶ್ವರಿ, ಬರಗೇರಮ್ಮ, ತಿಪ್ಪನಘಟ್ಟಮ್ಮ ಉಧೋ ಉಧೋ’ ಎಂಬ ಹರ್ಷೋದ್ಗಾರ ಭಕ್ತರಿಂದ ಮೊಳಗಿದವು. ಭೇಟಿಗಾಗಿ ನಗರಸಭೆ ಯಿಂದ ಅಗತ್ಯ ಸಿದ್ಧತೆ ಮಾಡಲಾಗಿತ್ತು.
 
ಭೇಟಿಯ ಹಿನ್ನೆಲೆ: ಅಕ್ಕ, ತಂಗಿಯರಾದ ಬರಗೇರಮ್ಮ ಮತ್ತು ತಿಪ್ಪಿನಘಟಮ್ಮ ದೇವತೆಯ ಭೇಟಿ ಉತ್ಸವಕ್ಕೂ ಕುತೂಹಲಕಾರಿ ಕಥೆಯೊಂದಿದೆ. ನವದುರ್ಗೆಯರಾದ ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಕಣಿವೆಮಾರಮ್ಮ, ಚೌಡಮ್ಮ, ಗೌರಸಂದ್ರಮಾರಮ್ಮ, ಕುಕ್ಕವಾಡೇಶ್ವರಿ, ಕಾಳಿ ದೇವತೆಗಳು ಚಿತ್ರದುರ್ಗದ ರಕ್ಷಕ ದೇವತೆಗಳು ಎಂದು ಭಕ್ತರು ನಂಬಿದ್ದಾರೆ.
 
ಅಕ್ಕ, ತಂಗಿ ದೂರವಾದ ಪರಿಣಾಮ ಊರಿನ ಜನರ ಉಲ್ಲಾಸ ಕುಗ್ಗುತ್ತದೆ. ಏನಾದರೂ ಮಾಡಿ ಅಕ್ಕ, ತಂಗಿಯರನ್ನು ಪುನಃ ಭೇಟಿ ಮಾಡಿಸಬೇಕೆಂದು ನವದುರ್ಗೆಯರಲ್ಲಿ ಹಿರಿಯಳಾದ ಏಕನಾಥೇಶ್ವರಿಗೆ ಮೊರೆಹೋಗುತ್ತಾರೆ.
 
ಏಕನಾಥೇಶ್ವರಿ ಊರಿನ ಒಳಿತಿಗಾಗಿ, ಭಕ್ತರ ಸಂತೋಷಕ್ಕಾಗಿ ವರ್ಷಕ್ಕೊಮ್ಮೆ ಯಾದರೂ ನಿಶ್ಚಿತ ಸ್ಥಳದಲ್ಲಿ ತನ್ನ ಸಮ್ಮುಖದಲ್ಲಿ ಅಕ್ಕ, ತಂಗಿಯರ ಭೇಟಿಯಾಗಬೇಕೆಂದು ಆದೇಶಿಸುತ್ತಾಳೆ.

ಹಿರಿಯಕ್ಕನ ಆಣತಿಯಂತೆ ಪ್ರತಿ ವರ್ಷ ಅಕ್ಕ, ತಂಗಿಯರು ನಗರದ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರ ಮನೆಗಳಲ್ಲಿ ಎಂಟು ದಿನಗಳ ಕಾಲ ಪೂಜೆ ಸ್ವೀಕರಿಸಿ ಆನಂದದಿಂದ ಭಕ್ತರ ಮೊರೆಗೆ ಮನಸೋತು ಅಪಾರ ಭಕ್ತರ ನಡುವೆ ನಗರದ ದೊಡ್ಡಪೇಟೆಯಲ್ಲಿ ಭೇಟಿಯಾಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT