ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಚಘಟ್ಟ ವೀರಭದ್ರಸ್ವಾಮಿ ಕೆಂಡಾರ್ಚನೆ ಸಂಭ್ರಮ

ಹಲಗೆ ದೇವರಿಂದ ಕತ್ತಿ ಪವಾಡ, ಗುಗ್ಗಳದ ಮಡಕೆ ಹೊತ್ತು ಹರಕೆ ತೀರಿಸಿದ ಭಕ್ತರು
Last Updated 19 ಏಪ್ರಿಲ್ 2017, 4:01 IST
ಅಕ್ಷರ ಗಾತ್ರ
ಹೊಳಲ್ಕೆರೆ: ತಾಲ್ಲೂಕಿನ ಈಚಘಟ್ಟದಲ್ಲಿ ಮಂಗಳವಾರ ವೀರಭದ್ರಸ್ವಾಮಿ ಕೆಂಡಾರ್ಚನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವವಾಗಿ ನಡೆಯಿತು.
ದೇವಾಲಯದ ಆವರಣದಲ್ಲಿ ಇರುವ ಕೆಂಡದ ಗುಂಡಿಯಲ್ಲಿ ಬಿಲ್ವ, ಬನ್ನಿ, ಗಂಧದ ಕಟ್ಟಿಗೆಗಳನ್ನು ಸುಟ್ಟು ಕೆಂಡ ತಯಾರಿಸಲಾಗಿತ್ತು.

ಬೆಳಿಗ್ಗೆ ದೇವರಿಗೆ ಪೂಜಾ ವಿಧಿವಿಧಾನಗಳು ಮುಗಿದ ನಂತರ ಕೆಂಡದ ಗುಂಡಿಗೂ ಪೂಜೆ ಸಲ್ಲಿಸಲಾಯಿತು. ಮೊದಲು ಹಲಗೆ ಸ್ವಾಮಿಯನ್ನು ಹಿಡಿದ ಪೂಜಾರಿ ಕೆಂಡ ಹಾಯ್ದರು. ನಂತರ ವೀರಭದ್ರ ಸ್ವಾಮಿಯನ್ನು ಕೂರಿಸಿದ ಪಲ್ಲಕ್ಕಿಯನ್ನು ಹೊತ್ತ ಭಕ್ತರು ಅವರ ಹಿಂದೆಯೇ ಕೆಂಡ ತುಳಿದರು.

ಕೆಂಡ ತುಳಿಯುವುದಾಗಿ ಹರಕೆ ಹೊತ್ತ ಭಕ್ತರೂ ಕೆಂಡ ಹಾಯ್ದು ಭಕ್ತಿ ಭಾವ ಮೆರೆದರು. ನಂತರ ಹಲಗೆ ದೇವರಿಂದ ರೋಚಕ ಕತ್ತಿ ಪವಾಡ ನಡೆಯಿತು. ನೆರೆದಿದ್ದ ಭಕ್ತರಿಗೆ ಪಾನಕ, ಪಲ್ಲಾರ, ಕೋಸಂಬರಿ ನೀಡಲಾಯಿತು.
 
ಉಚ್ಛಾಯ, ಗುಗ್ಗಳ ಸೇವೆ: ಬೆಳಗಿನ ಜಾವ ದೇವರನ್ನು ಸಣ್ಣ ತೇರಿನಲ್ಲಿ ಕೂರಿಸಿ ಎಳೆಯುವ ಮೂಲಕ ಭಕ್ತರು ವೀರಭದ್ರಸ್ವಾಮಿ ಉಚ್ಛಾಯ ಆಚರಿಸಿದರು. ಗುಗ್ಗಳದ ಕುಡಿಕೆಗೆ (ಮಣ್ಣಿನ ಮಡಿಕೆ) ಗಂಧದ ಚಕ್ಕೆ, ಕೊಬ್ಬರಿ, ಎಣ್ಣೆ ಹಾಕಿ ಬೆಂಕಿಯಿಂದ ಉರಿಸಲಾಗುತ್ತದೆ.

ಈ ಕುಡಿಕೆಯನ್ನು ಪೂಜಾರಿಯು ಗುಗ್ಗಳ ಹೊರುತ್ತೇವೆ ಎಂದು ಹರಕೆ ಹೊತ್ತ ಮಕ್ಕಳು, ಮಹಿಳೆಯರ ತಲೆಗೆ ಮುಟ್ಟಿಸುತ್ತಾರೆ. ಸೂರ್ಯೋದಯಕ್ಕೂ ಮುನ್ನ ನಡೆಯುವ ಈ ಆಚರಣೆಯಲ್ಲಿ ಪುರುಷರೂ ಗುಗ್ಗಳದ ಕುಡಿಕೆ ಹೊತ್ತು ದೇವರಿಗೆ ಭಕ್ತಿ ಸಮರ್ಪಿಸಿದರು. 
 
‘ಗುಗ್ಗಳದ ಕುಡಿಕೆ ಹೊರುವುದರಿಂದ ಸಂಕಷ್ಟಗಳು ಪರಿಹಾರವಾಗುತ್ತವೆ. ಇಷ್ಟಾರ್ಥ ಸಿದ್ಧಿಯಾಗುತ್ತದೆ’ ಎಂಬ ನಂಬಿಕೆ ಇಲ್ಲಿನ ಭಕ್ತರದು. ‘ಹರಕೆ ಹೊತ್ತ ಮಹಿಳೆಯರು ಕೆಂಡಾರ್ಚನೆ ಮುಗಿಯುವವರೆಗೆ ಜಡೆ ಹಾಕುವಂತಿಲ್ಲ, ಊಟ ಮಾಡುವಂತಿಲ್ಲ’ ಎಂಬ ನಿಯಮವನ್ನು ಇಲ್ಲಿವೆ.  ಏ.19ರಂದು ವೀರಭದ್ರಸ್ವಾಮಿಯ ರಥೋತ್ಸವ ನಡೆಯಲಿದೆ.
***
ಗುಗ್ಗಳದ ಕುಡಿಕೆ ಹೊರುವುದರಿಂದ ಸಂಕಷ್ಟಗಳು ಪರಿಹಾರವಾಗುತ್ತವೆ. ಇಷ್ಟಾರ್ಥ ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದು.
ತಿಪ್ಪೇಸ್ವಾಮಿ, ಗ್ರಾ.ಪಂ.ಉಪಾಧ್ಯಕ್ಷ, ಈಚಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT