ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡ ಸಂಪೂರ್ಣ ರಕ್ಷಿತ ಪ್ರದೇಶವಾಗಲಿ

Last Updated 19 ಏಪ್ರಿಲ್ 2017, 5:11 IST
ಅಕ್ಷರ ಗಾತ್ರ

ಬೆಳಗಾವಿ: ಅಪರೂಪದ ಸಸ್ಯ ಸಂಕುಲ ಹೊಂದಿರುವ ಗದಗ ಜಿಲ್ಲೆಯ ಕಪ್ಪತಗುಡ್ಡ ಅರಣ್ಯದ 17,000 ಹೆಕ್ಟೇರ್‌ ಪ್ರದೇಶವನ್ನು ಮಾತ್ರ ಸಂರಕ್ಷಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರ, ಬಾಕಿ ಪ್ರದೇಶವನ್ನು ಬಿಟ್ಟಿರುವುದು ಸಂಶಯಕ್ಕೀಡು ಮಾಡಿದೆ ಎಂದು ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಆರೋಪಿಸಿದರು.

ಕಪ್ಪತಗುಡ್ಡ ಅರಣ್ಯವು ಒಟ್ಟು 33,000 ಹೆಕ್ಟೇರ್‌ ಪ್ರದೇಶ ಇದೆ. ಇದರಲ್ಲಿ ಅರ್ಧಭಾಗದಷ್ಟು ಮಾತ್ರ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಇನ್ನುಳಿದ ಪ್ರದೇಶವನ್ನು ಏಕೆ ಕೈಬಿಡಲಾಗಿದೆ? ಮುಂಬರುವ ದಿನಗಳಲ್ಲಿ ಇಲ್ಲೇನಾದರೂ ಗಣಿಗಾರಿಕೆಗೆ ಅವಕಾಶ ನೀಡುವ ಯೋಚನೆ ಇದೆಯೇ? ಎಂದು ಅವರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವಿದೆ. ಕೆಜಿಎಫ್‌ನಲ್ಲಿ ಒಂದು ಟನ್‌ ಮಣ್ಣು ಎತ್ತಿದರೆ ಎರಡು ಗ್ರಾಮ್‌ ಚಿನ್ನ ಸಿಗುತ್ತದೆ. ಆದರೆ, ಇಲ್ಲಿ ನಾಲ್ಕು ಗ್ರಾಮ ಚಿನ್ನ ಸಿಗುತ್ತದೆ. ಚಿನ್ನದ ಆಸೆಗಾಗಿ ಗಣಿಗಾರಿಕೆ ಕಂಪೆನಿಗಳು ಈ ಪ್ರದೇಶದ ಮೇಲೆ ಕಣ್ಣು ಹಾಕಿವೆ. ಇಲ್ಲಿನ ಭೂಮಿಯನ್ನು ಬಗೆದುಹಾಕಲು ತುದಿಗಾಲ ಮೇಲೆ ನಿಂತಿವೆ ಎಂದು ಅವರು ವಿವರಿಸಿದರು.

ಬೆಳಗಾವಿ ಕಂಪೆನಿಯಿಂದ ಗಣಿಗಾರಿಕೆ: ‘ಕಪ್ಪತಗುಡ್ಡದಲ್ಲಿ 1960ರಿಂದಲೂ ಗಣಿಗಾರಿಕೆ ನಡೆದಿತ್ತು. ಒಂದು ವರ್ಷಕ್ಕೆಂದು ಸರ್ಕಾರದಿಂದ ಗುತ್ತಿಗೆ ಪಡೆದಿದ್ದ ಬೆಳಗಾವಿ ಮೂಲದ ಕಂಪೆನಿಯು ನಂತರ 10 ವರ್ಷಗಳವರೆಗೆ ಗಣಿಗಾರಿಕೆ ನಡೆಸಿತ್ತು. ಪುನಃ 30 ವರ್ಷಗಳವರೆಗೆ ಗುತ್ತಿಗೆ ನವೀಕರಿಸಿಕೊಂಡಿತು. ನಂತರ ಒಂದರ ನಂತರ ಮತ್ತೊಂದರಂತೆ ಕಂಪೆನಿಗಳು ಗುತ್ತಿಗೆ ಪಡೆದು ಭೂಮಿ ಅಗೆದಿವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ 2009ರಲ್ಲಿ ಕಪ್ಪತಗುಡ್ಡ ಅರಣ್ಯ ಉಳಿಸಿ ಹೋರಾಟ ಆರಂಭಿಸಿದೇವು. ಗಣಿಗಾರಿಕೆ ನಿಲ್ಲಿಸುವಂತೆ ಅಂದಿನಿಂದಲೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತ ಬಂದಿದ್ದೆವು. ನಮ್ಮ ಹೋರಾಟಕ್ಕೆ ಮನ್ನಣೆ ನೀಡಿದ ಇಂದಿನ ರಾಜ್ಯ ಸರ್ಕಾರವು  2015ರಲ್ಲಿ ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿತು’ ಎಂದರು.

‘ಆದರೆ, ಕಂಪೆನಿಗಳ ಒತ್ತಡಕ್ಕೆ ಮಣಿದು ಒಂದು ವರ್ಷದ ಅವಧಿಯೊಳಗೆ ಸಂರಕ್ಷಿತ ಪ್ರದೇಶವನ್ನು ಹಿಂದಕ್ಕೆ ಪಡೆದಿತ್ತು. ಪುನಃ ನಾವು ಹೋರಾಟ ಆರಂಭಿಸಿದಾಗ ರಾಜ್ಯ ಸರ್ಕಾರವು ಕಳೆದ ವಾರ ಕಪ್ಪತಗುಡ್ಡದ 17,000 ಹೆಕ್ಟೇರ್‌ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದೆ’ ಎಂದು ವಿವರಿಸಿದರು.

ಪ್ರಾಧಿಕಾರ ರಚಿಸಿ: ಇಲ್ಲಿರುವ ಔಷಧೀಯ ಸಸ್ಯಗಳ ಬಗ್ಗೆ ದಾಖಲೀಕರಣ ಮಾಡಲು ಹಾಗೂ ಸಂಶೋಧನೆ ಮಾಡಲು ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಕಪ್ಪತಗುಡ್ಡ ಉಳಿಯಬೇಕು, ಬೆಳೆಯಬೇಕು. ಇಲ್ಲಿಯವರೆಗೆ ನಾವು ಉಳಿಸಿದ್ದೇವು. ಇನ್ನು ಮುಂದಿನ ದಿನಗಳಲ್ಲಿ ಇದನ್ನು ಬೆಳೆಸಲು ಕ್ರಮಕೈಗೊಳ್ಳಬೇಕಾಗಿದೆ ಎಂದರು.

ಕೆರೆ ತುಂಬಿಸಿ: ಕಪ್ಪತಗುಡ್ಡದಲ್ಲಿ ಸುರಿಯುವ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ತಡೆದು, ಭೂಮಿಯೊಳಗೆ ಇಂಗಿಸಲು ಕ್ರಮ ಕೈಗೊಳ್ಳಬೇಕು. ತುಂಗಭದ್ರಾ ನೀರನ್ನು ಬಳಸಿ ಈ ಭಾಗದ 70–80 ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನಾಂದೋಲನ: ಕಪ್ಪತಗುಡ್ಡ ರಕ್ಷಿಸಲು ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜನಾಂದೋಲನ ರೂಪಿಸಲಿದ್ದೇವೆ. ಬೆಳಗಾವಿಯಿಂದ ಆರಂಭಿಸಿದ್ದೇವೆ. ತಕ್ಷಣ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.
ಮುಖಂಡರಾದ ಅಶೋಕ ಪೂಜಾರಿ, ಭೀಮಪ್ಪ ಜಿ.ಗಡಾದ, ವೈ.ಎಚ್‌. ಪಾಟೀಲ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT