ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಂಗಳದಲ್ಲಿ ‘ಪುತ್ತೂರು ಬೆಡಿ’ ಚಿತ್ತಾರ

‘ಹತ್ತೂರ ಒಡೆಯ’ ನ ಬ್ರಹ್ಮರಥೋತ್ಸವಕ್ಕೆ ಹರಿದು ಬಂತು ಭಕ್ತ ಸಾಗರ
Last Updated 19 ಏಪ್ರಿಲ್ 2017, 5:27 IST
ಅಕ್ಷರ ಗಾತ್ರ
ಪುತ್ತೂರು: ಇಲ್ಲಿನ  ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ  ರಾತ್ರಿ ಕಿಕ್ಕಿರಿದು ಸೇರಿದ್ದ ಭಕ್ತ ಸಾಗರದ ನಡುವೆ  ಬ್ರಹ್ಮರಥೋತ್ಸವ ಮತ್ತು ‘ಪುತ್ತೂರು ಬೆಡಿ’ ಎಂದೇ ಖ್ಯಾತಿಯ ಸುಡುಮದ್ದು ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು. 
 
ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಮತ್ತು ‘ಪುತ್ತೂರು ಬೆಡಿ’ ಹಿನ್ನೆಲೆಯಲ್ಲಿ  ಸೋಮವಾರ ರಾತ್ರಿಯಾಗುತ್ತಿದ್ದಂತೆಯೇ ಭಕ್ತರ ದಂಡು ದೇವಾಲಯದ ಎದುರಿನ ದೇವರಮಾರು ಗದ್ದೆಗೆ ಹರಿದು ಬರತೊಡಗಿತು. ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಭಕ್ತ ಸಾಗರವೇ ನೆರೆದಿತ್ತು.

ಪುತ್ತೂರು ತಾಲ್ಲೂಕು ಮಾತ್ರವಲ್ಲದೆ ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕು, ಕಾಸರಗೋಡು ಜಿಲ್ಲೆಯ ಹಾಗೂ ದೂರದ ಊರುಗಳಿಂದ ಭಕ್ತರು ಬಂದಿದ್ದರು.
 
ಸೋಮವಾರ ರಾತ್ರಿ ಸುಮಾರು 8.35 ವೇಳೆಗೆ ದೇವಾಲಯದ ಎದುರಿನ ದೇವರ ಮಾರುಗದ್ದೆಯಲ್ಲಿ ಭವ್ಯವಾಗಿ ಅಲಂಕರಿಸಿ ನಿಲ್ಲಿಸಲಾಗಿದ್ದ ಬ್ರಹ್ಮರಥದಲ್ಲಿ ದೇವರ ರಥಾರೂಢನ ನಡೆಯಿತು. ಹತ್ತೂರ ಒಡೆಯ ಮಹಾಲಿಂಗೇಶ್ವರನಿಗೆ ಜಯಘೋಷ ಮೊಳಗಿತು. ಭಕ್ತಸಾಗರದಲ್ಲಿ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತು. ಬಳಿಕ ಬೆಡಿ ಪ್ರದರ್ಶನ ಆರಂಭಗೊಂಡಿತು. 
 
ಬಾನಂಗಳದಲ್ಲಿ ಬಣ್ಣದ ಚಿತ್ತಾರ: ಇಲ್ಲಿನ ಸುಡುಮದ್ದು ಪ್ರದರ್ಶನ  ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ಧಿ . ಜಾತ್ರೆಯ ವಿಶೇಷ ಆಕರ್ಷಣೆಯೂ ಹೌದು. ಈ ವರ್ಷ ₹ 6 ಲಕ್ಷ ಮೌಲ್ಯದ ಸುಡುಮದ್ದು ಪ್ರದರ್ಶನ ನಡೆದಿದೆ.
 
ಕಾಸರಗೋಡಿನ ಪಿ.ಎಚ್. ಮಹಮ್ಮದ್ ಕುಂಞ ಅವರು ಸುಡು ಮದ್ದು ತಯಾರಿಕಾ ಗುತ್ತಿಗೆ ಪಡೆದು ಕೊಂಡು ಪ್ರದರ್ಶನದ ವ್ಯವಸ್ಥೆ ಮಾಡಿದರು. ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ನಿಗಾದೊಂದಿಗೆ ದೇವರಮಾರು ಗದ್ದೆಯಲ್ಲಿ  ಸಾರ್ವಜ ನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದ ಸ್ಥಳದಲ್ಲಿ ಬೆಡಿ ಪ್ರದರ್ಶನ ನಡೆಯಿತು. 
 
ರಾತ್ರಿ 8.45 ವೇಳೆಗೆ ಆರಂಭ ಗೊಂಡ ಬೆಡಿ ಪ್ರದರ್ಶನ  ನಿರಂತರವಾಗಿ ಒಂದೂ ಕಾಲು ಗಂಟೆಗಳ ಕಾಲ ನಡೆಯಿತು. ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಹಲವು ಬಗೆಯ ಸುಡುಮದ್ದು ಪ್ರದರ್ಶನಗಳು ಪ್ರೇಕ್ಷಕರ ಚಿತ್ತ ಸೂರೆಗೊಂಡವು.
 
ಬಾನಂಗಳದಲ್ಲಿ ಮೂಡಿದ ಬಣ್ಣ ಬಣ್ಣದ ಮಾತಾಪುಗಳು, ಚಿತ್ತಾಪುಗಳು ಹಾಗೂ ಭಾರಿ ಸದ್ದಿನೊಂದಿಗೆ ಸಿಡಿದ ಸುಡುಮದ್ದಿನ ಅಬ್ಬರ ವಿಶೇಷ ಆಕರ್ಷಣೆಯಾಗಿತ್ತು. ಬೆಡಿ ಪ್ರದರ್ಶನದ ಬಳಿಕ ಬ್ರಹ್ಮರಥೋತ್ಸವ ನಡೆಯಿತು. 
 
ಬಂದೋಬಸ್ತ್‌ಗಾಗಿ ಈ ಬಾರಿ 300 ಪೊಲೀಸರ ನಿಯೋಜನೆ ಮಾಡಲಾಗಿತ್ತು. 4 ಸರ್ಕಲ್ ಇನ್‌ಸ್ಪೆಕ್ಟರ್‌, 10 ಎಸ್‍ಐ ಗಳು, 14 ಎಎಸ್‍ಐಗಳು, ಒಂದು ಕೆಎಸ್‌ ಆರ್‌ಪಿ ತುಕಡಿ, ಎರಡು ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಯನ್ನು ಜಾತ್ರಾ ಭದ್ರತೆಗಾಗಿ ನಿಯೋಜಿಸಲಾಗಿತ್ತು.
 
ವಾಹನ ಸಂಚಾರ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿತ್ತು. ಜಾತ್ರೋತ್ಸವಕ್ಕೆ ಬರಲು ಭಕ್ತರಿಗೆ ಅನು ಕೂಲವಾಗುವಂತೆ ಎಲ್ಲ ಬಸ್ ಸಂಚಾರದ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ಓಡಾಟ ವ್ಯವಸ್ಥೆ ಕಲ್ಪಿಸಲಾಗಿತ್ತು. ನಡೆದಾಡಲು ಅಶಕ್ತರಾಗಿರುವ ಮಂದಿಗೆ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಜಾತ್ರಾ ಗದ್ದೆಗೆ ಕರೆದೊಯ್ಯಲು ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
***
50 ಸಿ.ಸಿ ಟಿವಿ ಕ್ಯಾಮೆರಾ
ಜಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡ ಕಾರಣ ಪೊಲೀಸ್ ಇಲಾಖೆ ಈ ಬಾರಿ ವಿಶೇಷ ಭದ್ರತಾ ಹಾಗೂ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು. ಇದೇ ಮೊದಲ ಬಾರಿಗೆ ದೇವಾಲಯದ ಜಾತ್ರಾ ಗದ್ದೆಯಲ್ಲಿ 50 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಅಲ್ಲದೆ ಪೇಟೆಯ ವಿವಿಧ ಕಡೆಗಳಲ್ಲಿ ಮತ್ತು ಜಾತ್ರೆಗೆ ಬರುವ ವಾಹನಗಳ ನಿಲುಗಡೆ ಮಾಡುವ ಸ್ಥಳಗಳಲ್ಲಿ ಸೇರಿದಂತೆ ಒಟ್ಟು 100 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT