ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರದಲ್ಲಿ ಚ್ಯೂಸಿ ನಾನು

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ನನಗೆ ಯಾವ ಕೆಲಸ ಖುಷಿ ಕೊಡುತ್ತದೋ ಅದನ್ನೇ ಮಾಡಬೇಕು ಎಂದು ಸಿನಿಮಾರಂಗ ಆಯ್ದುಕೊಂಡೆ. ಇದು ಜೀವನಾಧಾರಕ್ಕಾಗಿ ಆಯ್ಕೆ ಮಾಡಿಕೊಂಡ ವೃತ್ತಿ ಅಲ್ಲ. ಚಿಕ್ಕಂದಿನಿಂದಲೂ ಬಣ್ಣದ ಲೋಕದ ಸೆಳೆತವಿತ್ತು. ಅಪ್ಪ ಅಮ್ಮನೂ ಬೆನ್ನೆಲುಬಾಗಿ ನಿಂತರು.

ನನ್ನ ಪ್ರತಿ ಸಿನಿಮಾ ಆಯ್ಕೆಯ ಹಿಂದೆಯೂ ಅವರ ಸಲಹೆಗಳಿರುತ್ತವೆ. ತುಂಬಾ ನಿಧಾನವಾಗಿ, ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಒಪ್ಪಿಕೊಳ್ಳುತ್ತಿದ್ದೇನೆ’ ಎಂದು ತಮ್ಮ ನಿರ್ಧಾರ ಪ್ರಕಟಿಸುತ್ತಾರೆ ನಟಿ ರನ್ಯಾ ರಾವ್.

‘ಮಾಣಿಕ್ಯ’ ಚಿತ್ರದ ನಂತರ ತಮಿಳಿನ ‘ವಾಘಾ’ ಸಿನಿಮಾದಲ್ಲಿ ಬ್ಯೂಸಿ ಆಗಿದ್ದ ರನ್ಯಾ ಎರಡೂವರೆ ವರ್ಷಗಳ ಗ್ಯಾಪ್‌ನ ನಂತರ ಕನ್ನಡದ ಪ್ರೇಕ್ಷಕನಿಗೆ ಮತ್ತೆ ದರ್ಶನ ನೀಡುತ್ತಿರುವುದು ‘ಪಟಾಕಿ’ ಮೂಲಕ. 

ಈ ಗ್ಯಾಪ್‌ನಲ್ಲಿ ಸುಮಾರು ಅವಕಾಶಗಳು ಬಂದರೂ ಅದರಲ್ಲಿ ತಮ್ಮನ್ನು ತೃಪ್ತಿಪಡಿಸುವಂಥ ಅಂಶಗಳು ಇಲ್ಲ ಎಂಬ ಕಾರಣಕ್ಕೇ ಅವುಗಳನ್ನೆಲ್ಲ ತಿರಸ್ಕರಿಸಿದ್ದಾರೆ. ಆ ಸಮಯದಲ್ಲಿ ಅನೇಕರು, ‘ಅವಕಾಶ ಸಿಕ್ಕಿಲ್ವಾ?’ ‘ಪಟಾಕಿ ನಿಮಗೆ ಕಮ್‌ಬ್ಯಾಕ್ ಸಿನಿಮಾನಾ’ ಎಂದು ಪ್ರಶ್ನಿಸಿದ್ದಿದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಅವರು ನಾಜೂಕಾಗಿಯೇ ‘ಹಾಗೇನೂ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ತೆಲುಗಿನ ‘ಪಟಾಸ್’ ಚಿತ್ರ ನೋಡಿದ್ದ ರನ್ಯಾ, ಅದರ ಕನ್ನಡ ಅವತರಣಿಕೆ ‘ಪಟಾಕಿ’ ಅವಕಾಶ ಬಂದಾಗ ತಕ್ಷಣ ಒಪ್ಪಿಕೊಂಡಿದ್ದಾರೆ. ‘‘ವಾಘಾ’ ಗಾಢ ಪ್ರೇಮಕಥೆಯ ಸಿನಿಮಾ. ಹಾಗಾಗಿ ನನ್ನ ಅಭಿಮಾನಿಗಳಿಗೆ ಸರಳ ಮನರಂಜನೆ ಕೊಡುವಂಥ, ಆರಾಮಾಗಿ ನೋಡಿಸಿಕೊಂಡು ಹೋಗುವಂಥ ಸಿನಿಮಾ ಮಾಡಬೇಕು ಎಂದು ‘ಪಟಾಕಿ’ಯ ಭಾಗವಾದೆ’ ಎಂದು ಅವರು ಮುಂದುವರಿಯುತ್ತಾರೆ.

ಮೊದಲ ಬಾರಿ ಗಣೇಶ್ ಜೊತೆ ತೆರೆ ಹಂಚಿಕೊಂಡ ಅವರು ಸಖತ್ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಪೊಲೀಸನ ಪ್ರೇಯಸಿಯಾಗಿ ಕಾಣಿಸಿಕೊಳ್ಳುತ್ತಿರುವ ರನ್ಯಾ ನಿಜ ಜೀವನದಲ್ಲೂ ಪೊಲೀಸ್‌ ಮಗಳು.

ನಗು ತುಂಬಾ ಅಗ್ಗವೆನ್ನುವಂತೆ ಮಾತುಮಾತಿಗೂ ನಗುವ, ಅತ್ಯುತ್ಸಾಹದಿಂದ ಪಟಪಟ ಪಟಾಕಿಯಂತೆ ಮಾತನಾಡುವ ರನ್ಯಾ, ‘ಪಟಾಕಿ’ಯಲ್ಲಿ ಪತ್ರಕರ್ತೆ. ‘ಪತ್ರಕರ್ತೆಯಾದರೂ ನನ್ನದು ಬಬ್ಲಿ ಬಬ್ಲಿ, ಹೋಮ್ಲಿ ಅವತಾರ’ ಎನ್ನುತ್ತಾರೆ.

ಪತ್ರಕರ್ತೆ ಹಾಗೆಲ್ಲಾ ಇರ್ತಾರಾ ಎಂದು ಪ್ರಶ್ನಿಸಿದರೆ, ‘ಕೆಲಸದ ಸಮಯದ ಹೊರತಾಗಿ ನಮ್ಮ ಮನೆಯವರ ಜೊತೆ, ನಮ್ಮನ್ನು ಪ್ರೀತಿಸುವವರ ಜೊತೆ ನಾವೆಲ್ಲ ಹಾಗೇ ತಾನೇ ಇರುವುದು?’ ಎಂದು ಮರುಪ್ರಶ್ನೆ ಹಾಕುತ್ತಾರೆ. ಅಷ್ಟಕ್ಕೂ ಅವರಿಲ್ಲಿ ಪತ್ರಕರ್ತೆಗಿಂತ ಹೆಚ್ಚಾಗಿ ನಾಯಕನ ಪ್ರೇಯಸಿಯಾಗಿಯೇ ಗುರ್ತಿಸಿಕೊಳ್ಳುವುದು.



‘ಒಂದು ಸುತ್ತು ಸಣ್ಣಗಾದೆ...
‘ಮಾಣಿಕ್ಯ’ ಚಿತ್ರದಲ್ಲಿ ರನ್ಯಾರನ್ನು ಮೆಚ್ಚಿದ ಪ್ರೇಕ್ಷಕನಿಗೆ ‘ಪಟಾಕಿ’ಯಲ್ಲಿ ಅವರ ಗುರುತು ತಕ್ಷಣಕ್ಕೆ ಹತ್ತಲಿಕ್ಕಿಲ್ಲ. ದೇಹವನ್ನು ಅಷ್ಟು ದಂಡಿಸಿದ್ದಾರೆ ಅವರು. ಆದರೂ ಅವರು ಕಳೆದುಕೊಂಡಿದ್ದು ಬರೀ ಎರಡು ಕಿಲೋ ತೂಕ! ಅದಕ್ಕಾಗಿ ಅವರು ಸಾಕಷ್ಟು ಡಯೆಟ್, ವರ್ಕ್‌ಔಟ್ ಮಾಡಿದ್ದಾರೆ.
‘ಒಂದೇ ಕಡೆ ಕೆಲಸ ಮಾಡುತ್ತೇನೆ ಎಂದು ಸಿನಿಮಾಗಳಿಗಾಗಿ ಕಾದು ಕೂರುವುದರಲ್ಲಿ ಪ್ರಯೋಜನವಿಲ್ಲ.

ಕನ್ನಡದಲ್ಲಿ ನನ್ನನ್ನು ನೋಡಿ ತುಂಬಾ ತೆಳ್ಳಗಿದ್ದೀಯಾ ಎನ್ನುತ್ತಾರೆ. ಬೇರೆ ಭಾಷೆಗಳಿಗೆ ಹೋದಾಗ ದಪ್ಪಗಾದೆ ಎನ್ನುತ್ತಾರೆ. ಇಷ್ಟರ ನಡುವೆ ನಾವು ಸ್ಯಾಂಡ್‌ವಿಚ್ ಆಗಿಬಿಡುತ್ತೇವೆ. ಹಾಗಾಗಿ ಇಮೇಜ್ ಕನ್ಸಲ್ಟಂಟ್‌ ಸಂಸ್ಥೆಗಳನ್ನು ಭೇಟಿ ಆಗಿ, ನನ್ನ ಮುಖ, ದೇಹದ ರಚನೆ ಹೇಗಿದೆ, ಅದಕ್ಕೆ ಯಾವ ರೀತಿ ಉಡುಪು, ಫ್ಯಾಷನ್ ಸೂಕ್ತವಾಗುತ್ತದೆ ಎಂದು ತಿಳಿದುಕೊಂಡೆ’ ಎಂದು ತಾವು ಅನುಸರಿಸುವ ಮಾರ್ಗವನ್ನು ತೆರೆದಿಡುತ್ತಾರೆ.

ಕರ್ನಾಟಕದವರೇ ಆದರೂ ಸ್ಪಷ್ಟ ಕನ್ನಡ ಮಾತನಾಡಲು ತಡವರಿಸುವ ರನ್ಯಾ, ಕನ್ನಡ ಕಲಿಯಲು ತುಂಬಾ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಪ್ರತಿ ಬಾರಿ ಮಾಧ್ಯಮವನ್ನು ಭೇಟಿ ಆಗಲು ಹೊರಡುವ ಮುನ್ನ ಅವರ ಅಮ್ಮನೂ, ‘ಅಲ್ಲಿ ಹೋಗಿ ದಬ ದಬ ಎಂದು ಇಂಗ್ಲಿಷ್‌ನಲ್ಲಿ ಮಾತನಾಡಬೇಡ. ಯೋಚನೆ ಮಾಡಿ ಕನ್ನಡದಲ್ಲೇ ಮಾತನಾಡು’ ಎಂಬ ಕಿವಿಮಾತು ಹೇಳಿಕಳಿಸುತ್ತಾರೆ.

ಹಾಗಾಗಿ ನಿಧಾನವಾದರೂ ಪರವಾಗಿಲ್ಲ, ಪದಗಳನ್ನು ಹೆಕ್ಕಿಹೆಕ್ಕಿ ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸುತ್ತಾರೆ. ಕನ್ನಡ ಕಲಿತರೆ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂಬುದು ಅವರ ಅನುಭವಕ್ಕೂ ಬಂದಿದೆ.

ಸಿನಿಮಾಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಅವರು ಚಿತ್ರೀಕರಣದಿಂದ ಸಾಕಷ್ಟು ಬಿಡುವು ಪಡೆದಿರುತ್ತಾರೆ. ಹಾಗೆಂದು ಖಾಲಿ ಕೂತಿರುತ್ತಾರೆ ಎಂದರ್ಥವಲ್ಲ. ದಿನಕ್ಕೊಂದರಂತೆ ಬೇರೆ ಬೇರೆ ರೀತಿಯ ದೇಹ ದಂಡನೆಯ ವ್ಯಾಯಾಮಗಳಲ್ಲಿ ತೊಡಗಿರುತ್ತಾರೆ. ಅನುಪಮ್ ಖೇರ್, ಮುಖೇಶ್ ಛಾಬ್ರಾ ಅವರೆಲ್ಲ ನಡೆಸುವ ನಟನೆಯ ಕಾರ್ಯಾಗಾರಗಳಲ್ಲೂ ಅವರು ಪಾಲ್ಗೊಳ್ಳುತ್ತಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಹಂಬಲದಲ್ಲಿ ಆಡಿಷನ್‌ಗಳಿಗೂ ಹೋಗುತ್ತಿರುತ್ತಾರೆ.

ಸದ್ಯದಲ್ಲೇ ತಮಿಳಿನ ಮತ್ತೊಂದು ಸಿನಿಮಾಕ್ಕೆ ಸಹಿ ಮಾಡುವ ಸೂಚನೆ ಕೊಡುವ ರನ್ಯಾ ಕನ್ನಡದಲ್ಲಿ ‘ಪಟಾಕಿ’ ಬಿಡುಗಡೆಗೆ ಕಾಯುತ್ತಿದ್ದಾರೆ. ಅಷ್ಟು ಬಿಟ್ಟರೆ ಬೇರೆ ಯಾವ ಸಿನಿಮಾಗಳಿಗೂ ಕಮಿಟ್ ಆಗಿಲ್ಲ. ಯಶ್ ಮತ್ತು ಪುನೀತ್ ಜೊತೆ ನಟಿಸುವ ಕನಸು ನನಸಾಗಲು ಕಾಯುತ್ತಿದ್ದಾರೆ.

ಬೆಳಿಗ್ಗೆ ಎದ್ದ ನಂತರ ಮೊದಲ ಪಾನೀಯ ಎಳನೀರು. ನಂತರ ಹಣ್ಣು, ತರಕಾರಿಯ ಜ್ಯೂಸ್ ಸೇವಿಸುತ್ತಾರೆ. ಅರ್ಧ ಗಂಟೆ ಬಿಟ್ಟು ನಾಲ್ಕರಿಂದ ಐದು ಮೊಟ್ಟೆಗಳನ್ನು ತಿನ್ನುತ್ತಾರೆ. ಮಧ್ಯಾಹ್ನಕ್ಕೆ ಅವರ ಆಹಾರ ಹೆಚ್ಚು ಪ್ರೊಟೀನ್ ಇರುವ ಗ್ರಿಲ್ಡ್‌ ಫಿಶ್, ಗ್ರಿಲ್ಡ್‌ ಚಿಕನ್ ಮತ್ತು ಕಿಣ್ವ. ತಮ್ಮ ದೇಹವನ್ನು ತೆಳ್ಳಗೆ ಮಾಡಲು ಅವರು ನಿರ್ದಿಷ್ಟ ಕ್ರಮದಲ್ಲಿ ಆಹಾರ ಸೇವಿಸುತ್ತಾರೆಯೇ ಹೊರತು ಕಡಿಮೆ ತಿನ್ನುವ ಅಭ್ಯಾಸಕ್ಕೆ ಕಟ್ಟುಬೀಳಲಿಲ್ಲ.

‘ನಾನು ತಿನ್ನುವುದನ್ನು ನೋಡಿದರೆ ನೀವು ಗಾಬರಿ ಬೀಳುತ್ತೀರಿ. ಮನೆಯಲ್ಲಿ ಬಿರಿಯಾನಿ ಮಾಡಿಸಿಕೊಂಡು ತಿನ್ನುತ್ತಲೇ ಇರುತ್ತೇನೆ. ದಕ್ಷಿಣ ಭಾರತದವಳಾಗಿ ನನಗೆ ಅನ್ನ ಮತ್ತು ಮಸಾಲೆ ಪದಾರ್ಥಗಳಿಂದ ದೂರ ಇರಲು ನನಗೆ ಸಾಧ್ಯವೇ ಇಲ್ಲ’ ಎಂದು ತಮ್ಮ ಬಾಯಿ ಚಪಲದ ಮಹಿಮೆಯನ್ನು ಬಿಚ್ಚಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT