ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಹಿಂಡು ದಾಳಿ: ಬಾಳೆ, ತೆಂಗು, ಮಾವು ನಾಶ

Last Updated 19 ಏಪ್ರಿಲ್ 2017, 14:40 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಕಂಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆನೆಗಳ ಹಿಂಡು ದಾಂದಲೆ ನಡೆಸಿದ್ದು, 25 ಎಕರೆಗೂ ಹೆಚ್ಚು ಪ್ರದೇಶದಲ್ಲಿನ ಬಾಳೆ, ತೆಂಗು ಹಾಗೂ ಮಾವಿನ ಬೆಳೆ ನಾಶವಾಗಿದೆ.

ಗ್ರಾಮದ ಬಸವರಾಜು ಎಂಬುವರು ತಮ್ಮ ತಾಯಿ ಗೌರಮ್ಮ ಅವರ ಹೆಸರಿನಲ್ಲಿರುವ ಒಂದೂವರೆ ಎಕರೆ ಜಮೀನಿನಲ್ಲಿ ಕಳೆದ ಜುಲೈನಲ್ಲಿ ಸುಮಾರು 500 ಬಾಳೆ ಗಡ್ಡೆ ನೆಟ್ಟಿದ್ದು, ಇನ್ನೇನು ಫಲ ಕೈಸೇರುವ ಹಂತದಲ್ಲಿತ್ತು. ಆನೆಗಳ ದಾಳಿಯಿಂದಾಗಿ ಜಮೀನಿನಲ್ಲಿನ ಬಾಳೆಗಿಡಗಳು ಸಂಪೂರ್ಣ ನೆಲಕಚ್ಚಿವೆ. ಹೊಲದಲ್ಲಿನ ಪಂಪ್‌ಸೆಟ್‌ ಹಾಗೂ ಪೈಪುಗಳೂ ಧ್ವಂಸವಾಗಿವೆ.

‘₹3 ಲಕ್ಷ ಸಾಲ ಮಾಡಿ ಕೊಳವೆ ಬಾವಿ ಹಾಕಿಸಿದ್ದೆವು. ಬಾಳೆಗೆಂದೇ ₹ 40 ಸಾವಿರ ಸಾಲ ಮಾಡಿದ್ದೆವು. ಇನ್ನೇನು ಬೆಳೆ ಕೈಸೇರುವ ಹಂತದಲ್ಲಿ ಹೀಗಾಗಿದೆ. ಇದರಿಂದ ದಿಕ್ಕೇ ತೋಚದಾಗಿದೆ. ಸುಮಾರು ₹4 ಲಕ್ಷದಷ್ಟು ಬೆಳೆ ನಷ್ಟವಾಗಿದೆ’ ಎಂದು ಬಸವರಾಜು ನಿರಾಸೆಯಿಂದ ನುಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರವನ್ನಾದರೂ ಸಕಾಲಕ್ಕೆ ವಿತರಿಸಿ, ನಮ್ಮ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.

ಸುಮಾರು 7–8 ಆನೆಗಳ ಹಿಂಡು ಈ ದಾಳಿ ನಡೆಸಿದ್ದು, ಜಮೀನುಗಳಲ್ಲಿನ ಕೃಷಿ ಪಂಪ್‌ಸೆಟ್‌ಗಳನ್ನು ಮುರಿದು ಹಾಕಿವೆ. ಸಿದ್ದರಾಜು ಎಂಬುವರಿಗೆ ಸೇರಿದ ಹೊಲ, ಮಲ್ಲೇಶ್‌ ಎಂಬುವರ ತೆಂಗಿನ ತೋಟ, ಶಶಿಧರ್‌ ಅವರ ತೋಟದಲ್ಲಿನ ಮಾವು, ತೆಂಗು ಆನೆಗಳ ದಾಳಿಗೆ ತುತ್ತಾಗಿ ನೆಲಕ್ಕೆ ಒರಗಿದೆ.

ಪರಿಶೀಲನೆ: ‌ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ, ವಲಯ ಅರಣ್ಯಾಧಿಕಾರಿ ದಿನೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಎಂ. ರಾಜು, ಮುತ್ತು ಸ್ವಾಮಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT