ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯರ ಕಾಲದ ಕಥೆಗಳು

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಂಕಿಅಂಶಗಳ ನೆರವಿಯಂತೆ ಕಾಣಿಸುವ ಚರಿತ್ರೆಯ ಪುಸ್ತಕಗಳಿಗೂ ಗಣಿತದ ಪಠ್ಯಪುಸ್ತಕಗಳಿಗೂ ಬಹುತೇಕ ಸಂದರ್ಭದಲ್ಲಿ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲ. ಆ ಕಾರಣದಿಂದಲೇ ಇತಿಹಾಸದ ಬಹುತೇಕ ಕೃತಿಗಳು ನೀರಸವಾಗಿರುತ್ತವೆ. ಹಾಗಿದ್ದರೆ ಚರಿತ್ರೆಯ ನಿರೂಪಣೆಗೆ ಓದಿನಗುಣ ತಂದುಕೊಡುವುದು ಹೇಗೆ? ಅಂಥದೊಂದು ದಾರಿ – ಕಥನರೂಪದ ನಿರೂಪಣೆ.

ಕಥೆಗಳ ಮೂಲಕ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನಗಳು ಸಾಕಷ್ಟು ನಡೆದಿವೆ, ಯಶಸ್ವಿಯೂ ಆಗಿವೆ. ಆದರೆ, ಇಂಥ ಕಥೆಗಳು ಬಹುತೇಕ ಸಂದರ್ಭದಲ್ಲಿ ಇತಿಹಾಸದ ಹೆಸರಿನಲ್ಲಿ ಕಲ್ಪನೆಗೇ ಹೆಚ್ಚು ಒತ್ತು ನೀಡಿರುವುದನ್ನೂ ಮರೆಯಬಾರದು. ಇದರಿಂದಾಗಿ, ರಂಜಕ ಕಥನಗಳೇ ಇತಿಹಾಸದ ರೂಪದಲ್ಲಿ ಸಹೃದಯರಿಗೆ ತಲುಪುವ ಅಪಾಯವೂ ಇದೆ. ಹಾಗಾಗಿ ಇತಿಹಾಸ ಯಾವುದು, ಕಲ್ಪನೆ ಯಾವುದು ಎನ್ನುವುದನ್ನು ಓದುಗರು ಎಚ್ಚರದಿಂದ ಗಮನಿಸಬೇಕು.

ಇತಿಹಾಸವನ್ನು ಕಥೆಗಳ ಮೂಲಕ ನಿರೂಪಿಸುವ ಒಂದು ವಿಶಿಷ್ಟ ಪ್ರಯತ್ನದ ರೂಪದಲ್ಲಿ ‘ಒಡೆಯರ ಕಾಲದ ಕಥೆಗಳು’ ಕೃತಿಯನ್ನು ಗಮನಿಸಬಹುದು. ಮೈಸೂರು ಒಡೆಯರ ಕಾಲದ ಚರಿತ್ರೆಯನ್ನು ಜನರ ನಡುವೆ ಪ್ರಚಲಿತದಲ್ಲಿದ್ದ ಕೆಲವು ಕಥೆಗಳ ಮೂಲಕ ನಿರೂಪಿಸುವ ಪ್ರಯತ್ನ ಇಲ್ಲಿದೆ. ಕಂದಾಡೆ ಕೃಷ್ಣಯ್ಯಂಗಾಚಾರ್ಯ ಅವರು ಸಂಗ್ರಹಿಸಿರುವ ಈ ಕೃತಿಯನ್ನು ಬೆಂಗಳೂರಿನ ‘ಕರ್ನಾಟಕ ಸಾಹಿತ್ಯ ಪ್ರಕಟನ ಮಂದಿರ’ ಪ್ರಕಟಿಸಿದೆ.

ಇಲ್ಲಿನ 28 ಕಥೆಗಳು, ‘ಒಡೆಯರ ವಂಶದ ಚರಿತ್ರೆಯನ್ನು ಓದುವವರಿಗೆ ಕಾಲಚಕ್ರ ಸೂಚಿಸುವ ಸಹಾಯ ಮಾಡುತ್ತವೆ’ ಎಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಚರಿತ್ರೆ ಓದುವವರಿಗೆ ಅನುಕೂಲಕರ ಆಗಬಹುದಾದ ಈ ಕೃತಿಯನ್ನು, ಚರಿತ್ರೆಯ ಪಠ್ಯವು ಆಸಕ್ತಿಕರವಾಗಿಯೂ ಇರುವಂತೆ ಲೇಖಕರು ರೂಪಿಸಿದ್ದಾರೆ.

ಕಥೆಗಳಲ್ಲಿನ ಅಂಶಗಳಿಗೆ ಆಧಾರಗಳು ದೊರೆಯದೆ ಇದ್ದಾಗ, ಅಂಥವುಗಳನ್ನು ಕೈಬಿಟ್ಟಿರುವುದಾಗಿ ಸಂಪಾದಕರು ಹೇಳಿಕೊಂಡಿದ್ದಾರೆ. ಸಾಹಿತ್ಯ–ಇತಿಹಾಸದ ವಿದ್ಯಾರ್ಥಿಗಳ ಜೊತೆಗೆ, ಒಂದು ಪ್ರಯೋಗಶೀಲ ಓದಿನ ರೂಪದಲ್ಲಿ ಗಮನಿಸಬಹುದಾದ ಈ ಪುಸ್ತಕವನ್ನು goo.gl/cCO0fd ಕೊಂಡಿ ಬಳಸಿ ಓದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT