ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ ವುಮನ್‌ ಇನ್‌ ಬರ್ಲಿನ್‌

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮನುಷ್ಯ ನಡೆಸುವ ಬಹುತೇಕ ಎಲ್ಲ ಸಾಮೂಹಿಕ ಹಿಂಸೆಗಳಿಗೆ ಮೂಲಕಾರಣ ಪುರುಷ ಅಹಂಕಾರವೇ ಆಗಿರುತ್ತದೆ ಮತ್ತು ಆ ಹಿಂಸಾಚಾರದ ತಕ್ಷಣದ ಮತ್ತು ದೀರ್ಘಕಾಲೀನ ಭೀಕರ ಪರಿಣಾಮವನ್ನು ಅನುಭವಿಸುವವಳು ಬಹುತೇಕ ಹೆಣ್ಣೇ ಆಗಿರುತ್ತಾಳೆ.

ರಕ್ತಸಿಕ್ತವಾಗಿರುವ ಮನುಷ್ಯನ ಯುದ್ಧಚರಿತೆಯನ್ನು ಗಮನಿಸಿದರೆ ಈ ಮಾತಿಗೆ ಹೇರಳವಾಗಿ ಉದಾಹರಣೆಗಳು ಸಿಗುತ್ತವೆ. ಆದರೆ ಬಹಳ ಸಲ ಯುದ್ಧಗಳನ್ನು ಸೋಲು ಗೆಲುವುಗಳು, ಆಕ್ರಮಣ, ಅತಿಕ್ರಮಣಗಳು, ಯುದ್ಧದಲ್ಲಿ ಮೃತಪಟ್ಟವರ ಅಂಕಿಸಂಖ್ಯೆಗಳ ಮೂಲಕವೇ ಅಳೆಯುತ್ತಿರುತ್ತೇವೆ. ಆದರೆ ಯುದ್ಧಕ್ಕೆ ಇದಕ್ಕಿಂತ ಅಮಾನುಷವಾದ ಇನ್ನೊಂದು ಮುಖವಿದೆ.

ಅದು ಬಹಳ ಸಲ ದಾಖಲಾತಿಯ ಆಚೆಗೇ ಉಳಿದುಬಿಡುತ್ತದೆ. ಯುದ್ಧಸಂದರ್ಭದಲ್ಲಿ ನಾಗರಿಕರು ಮತ್ತು ನಾಗರಿಕ ಬದುಕಿನ ಮೇಲಾಗುವ ಪರಿಣಾಮಗಳನ್ನು ನಾವು ಗಣನೆಗೆ ತೆಗೆದುಕೊಳ್ಳುವುದು ಕಮ್ಮಿಯೇ.

ಯುದ್ಧಕ್ಕಿರುವ ಎದೆನಡುಗಿಸುವ ಈ ಆಯಾಮವನ್ನು ಕ್ಲೋಸ್‌ಅಪ್‌ ಎನ್ನುವಷ್ಟು ಸ್ಪಷ್ಟವಾಗಿ ತೋರಿಸುವ ಜರ್ಮನ್‌ ಸಿನಿಮಾ ‘ಅ ವುಮನ್‌ ಇನ್‌ ಬರ್ಲಿನ್‌’.

2008ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಮ್ಯಾಕ್ಸ್‌ ಫಾರ್‌ಬೆರ್ಬೊಕ್‌ ನಿರ್ದೇಶಿಸಿದ್ದಾರೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾ ಬರ್ಲಿನ್‌ ಮೇಲೆ ವಿಜಯ ಸಾಧಿಸಿದ ಸಂದರ್ಭದಲ್ಲಿನ ಒಂದು ದಾರುಣ ಚಿತ್ರಣ ಈ ಸಿನಿಮಾದ ಕಥಾವಸ್ತು. ಬಹುತೇಕ ಇಡೀ ಸಿನಿಮಾ ಒಂದು ಕಟ್ಟಡದೊಳಗೇ ನಡೆಯುತ್ತದೆ.

ಇದು 1959ರಲ್ಲಿ ಜರ್ಮನಿಯಲ್ಲಿ ಪ್ರಕಟಿತವಾದ ಅನಾಮಿಕಳೊಬ್ಬಳ ಆತ್ಮಚರಿತ್ರೆಯನ್ನು ಆಧರಿಸಿದೆ. ಈ ಕಥನ ನಡೆಯುವುದು ಬರ್ಲಿನ್‌ನಲ್ಲಿ. ಜರ್ಮನಿಯ ಕೊನೆಯ ಸೈನ್ಯ ತುಕಡಿಯನ್ನು ನಾಶಗೊಳಿಸುವ ಆ ನಗರಕ್ಕೆ ಬರುವ ರಷ್ಯಾದ ರೆಡ್‌ ಆರ್ಮಿಯ ಸೈನಿಕರು ಬರ್ಲಿನ್‌ನ ನಾಗರಿಕರ ಮೇಲೆ ಅಮಾನುಷವಾಗಿ ದಾಳಿ ನಡೆಸುತ್ತಾರೆ. ವಯಸ್ಸನ್ನೂ ನೋಡದೇ ಎಲ್ಲ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಾರೆ. ಸಿಕ್ಕ ಸಿಕ್ಕ ಬರ್ಲಿನ್‌ ನಾಗರಿಕರನ್ನು ಹಿಂಸಿಸಿ ಕೊಲೆ ಮಾಡುತ್ತಾರೆ.

ಈ ಸಂದರ್ಭದಲ್ಲಿ ರಷ್ಯನ್‌ ಭಾಷೆ ಬಲ್ಲ ಜರ್ಮನ್‌ ಪತ್ರಕರ್ತೆಯೊಬ್ಬಳು ಈ ಹಿಂಸೆಯನ್ನು ನಿಲ್ಲಿಸಲು ನಡೆಸುವ ಪ್ರಯತ್ನದ ಮೂಲಕ ಸಿನಿಮಾ ತೆರೆದುಕೊಳ್ಳುತ್ತ ಹೋಗುತ್ತದೆ. ಅವಳು ರಷ್ಯನ್‌ ಸೈನ್ಯಾಧಿಕಾರಿಯ ಬಳಸಿ ರಕ್ಷಣೆ ನೀಡುವಂತೆ ಕೋರುತ್ತಾಳೆ.

ಆರಂಭದಲ್ಲಿ ಅವಳ ಕೋರಿಕೆಯನ್ನು ನಿರಾಕರಿಸುವ ಕಮಾಂಡರ್‌ ಆ್ಯಂಡ್ರಿ ರೈಬ್ಕಿನ್‌ ನಂತರ ಅವಳ ಮೋಹಕ್ಕೆ ಒಳಗಾಗಿ ರಕ್ಷಣೆಯ ಭರವಸೆ ನೀಡುತ್ತಾನೆ. ಇದರಿಂದ ಅವನು ತನ್ನದೇ ದೇಶದ ಸೈನ್ಯದ ಅನೇಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ಒಂದು ಕಟ್ಟಡದೊಳಗೆ ಒಂದಿಷ್ಟು ಜನರ ಮುಖಭಾವವನ್ನೇ ಕನ್ನಡಿಯಾಗಿಸಿಕೊಂಡು ಯುದ್ಧದ ಕ್ರೌರ್ಯಗಳನ್ನು ಪ್ರತಿಫಲಿಸಿದ್ದಾರೆ ನಿರ್ದೇಶಕ ಮ್ಯಾಕ್ಸ್‌ ಫಾರ್‌ಬೆರ್ಬೊಕ್‌. ಯೂಟ್ಯೂಬ್‌ನಲ್ಲಿ goo.gl/m7VlXH ಕೊಂಡಿ ಬಳಸಿ ಈ ಸಿನಿಮಾ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT