ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ರೇಸ್‌ಮೊ ರೇಸಿಂಗ್‌ ಕಾರ್‌ ತಯಾರಿಕೆಗೂ ಪದಾರ್ಪಣೆ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಕಾನ್ಸೆಪ್ಟ್‌ ವೆಹಿಕಲ್‌’ಗಳನ್ನು ರಚಿಸುವಲ್ಲಿ ಮಾರುತಿ ಸುಜುಕಿ ಹಿಂದಿನಿಂದಲೂ ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತದೆ. ಆದರೆ, ಈಚಿನ ದಿನಗಳಲ್ಲಿ ಸಂಪೂರ್ಣ ದೇಸೀಯ ಕಂಪೆನಿಯಾದ ಟಾಟಾ ಮೋಟಾರ್ಸ್‌ ‘ಕಾನ್ಸೆಪ್ಟ್‌ ವೆಹಿಕಲ್‌’ಗಳನ್ನು ತಯಾರಿಸುವಲ್ಲಿ ಮಾರುತಿ ಸುಜುಕಿಯನ್ನೂ ಮೀರಿಸಿದ್ದು, ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.

‘ಟಾಟಾ ರೇಸ್‌ಮೊ’ ಎಂಬ ಹೊಸ ರೇಸಿಂಗ್‌ ಕಾರಿನ ಮಾದರಿಯೊಂದನ್ನು ರಚಿಸಿ ಅತಿ ಶೀಘ್ರವೇ ವಾಣಿಜ್ಯ ತಯಾರಿಕೆ ಮಾಡುವುದಾಗಿ ಪ್ರಕಟಿಸಿದೆ!

ವಾಸ್ತವದಲ್ಲಿ ಭಾರತದ ಯಾವ ಕಾರ್‌ ಕಂಪೆನಿಯೂ ಇದುವರೆಗೆ ಪರಿಪೂರ್ಣ ರೇಸಿಂಗ್ ಕಾರ್‌ ಅನ್ನು ತಯಾರಿಸಿಲ್ಲ. ಮಾರುತಿ ಸುಜುಕಿಯ ಕೆಲವು ಉತ್ತಮ ಕಾರ್‌ಗಳನ್ನೇ ರೇಸಿಂಗ್‌ಗೆ ಬಳಸಿಕೊಳ್ಳಲಾಗಿದೆ. ಮಾರುತಿ ಸುಜುಕಿಯ ‘ಎಸ್‌ಎಕ್ಸ್–4’ ಕಾರ್‌ ಅನ್ನು ಹಿಂದೊಮ್ಮೆ ರೇಸಿಂಗ್‌ಗಾಗಿ ಕೊಂಚ ಮಾರ್ಪಾಟು ಮಾಡಿ ಬಿಡಲಾಗಿತ್ತು. ಆದರೆ, ಅದು ಮಾರಾಟಕ್ಕೆ ಲಭ್ಯವಿರಲಿಲ್ಲ.

ಅದು ಕೇವಲ ರೇಸಿಂಗ್‌ ಉತ್ಸಾಹಿಗಳಿಗೆ ಕಂಪೆನಿಯಿಂದಲೇ ನೀಡುತ್ತಿದ್ದ ವಾಹನವಾಗಿತ್ತು. ಅಂತೆಯೇ, ಟಾಟಾ ಮೋಟಾರ್ಸ್‌ನ ‘ಸಫಾರಿ’ ವಾಹನವನ್ನು ಕೆಲವು ರೇಸಿಂಗ್‌ ಉತ್ಸಾಹಿಗಳು ರೇಸಿಂಗ್‌ಗೆ ಬಳಸಿಕೊಂಡಿದ್ದು ಉಂಟು. ಆದರೆ, ಈ ಯಾವ ಕಾರ್‌ಗಳೂ ಮೂಲತಃ ರೇಸಿಂಗ್‌ಗಾಗಿ ತಯಾರಾಗಿಯೇ ಇಲ್ಲ. ಇದೀಗ ಮೊದಲ ಪರಿಪೂರ್ಣ ರೇಸಿಂಗ್‌ ಕಾರ್‌ನ ತಯಾರಿಗೆ ಸಿದ್ಧತೆ ನಡೆಸಿದೆ.


ಏನಿದು ‘ರೇಸ್‌ಮೊ’?
ಟಾಟಾ ಮೋಟಾರ್ಸ್‌ ಅನ್ನು ಇನ್ನು ಕೇವಲ ಟ್ರಕ್‌ ತಯಾರಿಕಾ, ಕಡಿಮೆ ಬೆಲೆಯ ಕಾರುಗಳ ಕಂಪೆನಿ ಎಂದು ಕರೆಯಲು ಕೊಂಚ ಕಷ್ಟವಾದೀತು. ಏಕೆಂದರೆ, ಈ ಹೊಸ ‘ರೇಸ್‌ಮೊ’ ಕಾರು ಬರೋಬ್ಬರಿ ಕನಿಷ್ಠ ₹22 ಲಕ್ಷ ಬೆಲೆ ಹೊಂದಲಿದೆ. ವಾಸ್ತವದಲ್ಲಿ ‘ರೇಸ್‌ಮೊ’ ಎಂಬುದು ಟಾಟಾ ಮೋಟಾರ್ಸ್‌ನ ವಿಡಿಯೊ ಗೇಮ್‌ ಆಗಿತ್ತು. 12ರಿಂದ 14 ವರ್ಷದ ಮಕ್ಕಳು ಆಡಲು ರೂಪಿಸಿದ್ದ ಕಂಪ್ಯೂಟರ್‌ ಅಪ್ಲಿಕೇಷನ್‌ ಅದು. ಆ ಗೇಮ್‌ನಲ್ಲಿ ಇದ್ದ ಕಾರನ್ನು ತಯಾರಿಕೆಗೆ ಅಳವಡಿಸಲು ಈಗ ಕಂಪೆನಿ ಮನಸು ಮಾಡಿದೆ.

ಕಂಪೆನಿಯು ಈ ವಿಡಿಯೊ ಗೇಮ್‌ ಅನ್ನು ವೀಕ್ಷಿಸುತ್ತಿದ್ದಾಗ, ಇದನ್ನು ತಯಾರಿಸಿ ಮಾರಿದರೆ ಒಳಿತಲ್ಲವೇ ಎಂಬ ಚಿಂತನೆ ಬಂದಿತಂತೆ. ಅದರಂತೆ, ₹10 ಕೋಟಿಯನ್ನು ಈ ಕಾರಿನ ವಿನ್ಯಾಸ ಹಾಗೂ ಅಭಿವೃದ್ಧಿಗಾಗಿ ವಿನಿಯೋಗಿಸಿ ‘ಕಾನ್ಸೆಪ್ಟ್’ ಕಾರೊಂದನ್ನು ತಯಾರಿಸೇಬಿಟ್ಟಿದೆ. ಈ ಹೊಸ ರೇಸಿಂಗ್‌ ಕಾರು ಸಂಪೂರ್ಣ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಯಾರಾಗಿದೆ.

‘ಮೋಫ್ಲೆಕ್ಸ್‌’ ಎಂಬ ತಂತ್ರಜ್ಞಾನ ಇರುವ ಬಹು ಸಾಮಗ್ರಿ ಬಳಕೆಯ ಮೂಲಕ ಕಾರಿನ ಚೌಕಟ್ಟನ್ನು ತಯಾರಿಸಲಾಗಿದೆ. ಸಾಮಾನ್ಯವಾಗಿ ರೇಸಿಂಗ್‌ ಕಾರ್‌ಗಳು ಉಕ್ಕಿನಿಂದ ತಯಾರಾಗಿರುತ್ತವೆ. ‘ರೇಸ್‌ಮೊ’ದಲ್ಲೂ ಉಕ್ಕಿನ ಚೌಕಟ್ಟಿದೆ. ಆದರೆ, ಈ ಚೌಕಟ್ಟಿನ ನಡುವೆ ಇರುವ ಖಾಲಿ ಜಾಗಗಳಲ್ಲಿ ರಾಸಾಯನಿಕ ವಸ್ತುಗಳುಳ್ಳ ‘ಫೋಂ’ (ನೊರೆ) ಅನ್ನು ತುಂಬಲಾಗಿದೆ. ಇದು ಕಾರಿಗೆ ಹೆಚ್ಚು ಗಡಸುತನವನ್ನು ನೀಡಿದೆ. ಅಲ್ಲದೇ, ‘ಫೋಂ’ ತುಂಬಿರುವ ಕಾರಣ ಕಾರಿಗೆ ಹೆಚ್ಚುವರಿ ತೂಕವೇನೂ ಸೇರ್ಪಡೆಯಾಗಿಲ್ಲ.

ವಿನ್ಯಾಸವೇ ಅದ್ಭುತ: ಪರಿಪೂರ್ಣ ಹೊಸ ಚೌಕಟ್ಟಿನ ಮೇಲೆ ‘ರೇಸ್‌ಮೊ’ ನಿರ್ಮಾಣವಾಗಿದ್ದು, ಸಂಪೂರ್ಣ ನವೀನ ವಿನ್ಯಾಸ ಸಿಕ್ಕಿದೆ. ಇದು ಯಾವುದೇ ಇತರ ಕಾರಿನ ಮೇಲ್ದರ್ಜೆಯಲ್ಲ, ವಿನ್ಯಾಸದ ಸ್ಫೂರ್ತಿಯೂ ಸಿಕ್ಕಿಲ್ಲ. ಏರೊಡೈನಮಿಕ್‌ ವಿನ್ಯಾಸವು ಕಾರಿಗೆ ಇದ್ದು, ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುತ್ತದೆ. ವೇಗವರ್ಧನೆಗೆ ಇದು ಪೂರಕವಾಗಿದೆ. ಅಲ್ಲದೇ, ಇದು ಮೈಲೇಜ್‌ ಅನ್ನು ಸಹ ಹೆಚ್ಚಿಸುತ್ತದೆ.

ಕಾರಿಗೆ ‘ಬಟರ್‌ಫ್ಲೈ’ ಬಾಗಿಲುಗಳಿದ್ದು, ಮೇಲಕ್ಕೆ ತೆರೆದುಕೊಳ್ಳುತ್ತವೆ. ಹಿಂಭಾಗದಲ್ಲೂ ಕಾರಿಗೆ ವೇಗವನ್ನು ತಡೆದುಕೊಂಡು ಕಾರನ್ನು ನೆಲಕ್ಕೆ ಕಚ್ಚಿಕೊಂಡು ಇರುವಂತೆ ವಿನ್ಯಾಸವಾಗಿದೆ. ಕಾರು ಹೆಚ್ಚು ವೇಗ ತಲುಪಿದಾಗ ಗಾಳಿಗೆ ತೂರಾಡದಂತೆ ಇದು ನೋಡಿಕೊಳ್ಳುತ್ತದೆ.



ಒಳಾಂಗಣವೂ ವಿಶೇಷ: ಕಾರಿನ ಒಳಾಂಗಣವು ಭವಿಷ್ಯತ್‌ ವಿನ್ಯಾಸವನ್ನು ಹೊಂದಿದೆ. ಸ್ಟೀರಿಂಗ್‌ ವ್ಹೀಲ್‌ನಲ್ಲಿ ಬಹು ನಿಯಂತ್ರಣ ಸೌಲಭ್ಯವನ್ನು ನೀಡಲಾಗಿದೆ. ಅಂದರೆ, ಕೇವಲ ಧ್ವನಿ ಸೇವೆಗಳ ನಿಯಂತ್ರಣವಲ್ಲ. ಹಠಾತ್‌ ವೇಗ ಹೆಚ್ಚಿಸುವ ಬೂಸ್ಟರ್ ಬಟನ್‌, ಕ್ರೂಸ್‌ ಕಂಟ್ರೋಲ್‌, ಗಿಯರ್‌ ಬದಲಾವಣೆ ಬಟನ್‌ಗಳಿವೆ. ಇದು ಭಾರತೀಯ ಕಾರಿನಲ್ಲಿ ಇದೇ ಮೊದಲ ಬಾರಿಗೆ ಸಿಗುತ್ತಿರುವ ಸೌಲಭ್ಯ.

ಇದರ ಜತೆಗೆ, ಎರಡು ಬಣ್ಣಗಳ ಡ್ಯಾಷ್‌ ಬೋರ್ಡ್‌ ಇದೆ. ಇದೇ ಮೊದಲ ಬಾರಿಗೆ ಕ್ರೀಂ ಹಾಗೂ ಮರದ ವಿನ್ಯಾಸ ಇರುವ ವಿನ್ಯಾಸ ನೀಡಲಾಗಿದೆ. ಅಲ್ಲದೇ, ಇದು ಗಿಯರ್‌ಲೆಸ್‌ ವಾಹನ. ಹಾಗಾಗಿ, ಗಿಯರ್‌ ಶಿಫ್ಟರ್‌ ಜಾಗವು ಖಾಲಿ ಇದೆ. ಅದನ್ನು ವಿನ್ಯಾಸಕ್ಕೆ ಬಳಸಿಕೊಂಡಿದ್ದು, ಕೆಲವು ಉಪಯೋಗಕಾರಿ ಸೌಲಭ್ಯವನ್ನೂ ನೀಡಲಾಗಿದೆ. ಅಂದರೆ, ಹೆಚ್ಚುವರಿ ಬಾಟೆಲ್‌ ಹೋಲ್ಡರ್‌ ಇರಲಿದೆ. ಹವಾನಿಯಂತ್ರಣದ ವೆಂಟ್ (ಕಿಂಡಿ) ಸಹ ಸೆಂಟ್ರಲ್‌ ಕನ್ಸೋಲ್‌ನ ಬಳಿಯೇ ಇರಲಿದೆ.

ಎಂಜಿನ್‌ ತೀರಾ ಅದ್ಭುತವೇನಲ್ಲ: ರೇಸಿಂಗ್‌ ಕಾರ್‌ಗಳಿಗೆ ಇರಬೇಕಾದ ಅತ್ಯದ್ಭುತ ಎಂಜಿನ್‌ ಇದರಲ್ಲೇನೂ ಇಲ್ಲ. 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಇದೆ. ಇದು ಕೊಂಚ ಕಡಿಮೆಯಾಯಿತು. 6,500 ಆರ್‌ಪಿಎಂನಲ್ಲಿ 190 ಎಚ್‌ಪಿ ಶಕ್ತಿ ಬಿಡುಗಡೆಯಾಗುತ್ತದೆ.

6 ಸ್ಪೀಡ್‌ ‘ಆಟೊಮ್ಯಾಟಿಕ್‌ ಮ್ಯಾನ್ಯುಯಲ್‌ ಸಸ್ಪೆನ್ಷನ್‌’ (ಎಎಂಟಿ) ವ್ಯವಸ್ಥೆ ಇದೆ. ಆದರೆ, ರೇಸಿಂಗ್‌ ಕಾರ್‌ಗಳಿಗೆ ‘ಎಎಂಟಿ’ ಸೂಕ್ತವಲ್ಲ ಎನ್ನುವುದು ವಾಹನತಜ್ಞರ ಅನುಭವದ ಮಾತು. 2,500 ಆರ್‌ಪಿಎಂನಲ್ಲಿ 210 ಎನ್‌ಎಂ ಟಾರ್ಕ್‌ ಇರುವುದು ಸಮಾಧಾನದ ಸಂಗತಿ. 6 ಸೆಕೆಂಡ್‌ ಒಳಗೆ ಗಂಟೆಗೆ 100 ಕಿಲೋಮೀಟರ್‌ ವೇಗ ಮುಟ್ಟಬಲ್ಲ ಸಾಮರ್ಥ್ಯ ಇದೆ.

ಲ್ಯಾಂಬೋರ್ಗಿನಿಯ ‘ಅವೆಂಟಡೋರ್‌’ ಕಾರ್‌ನಲ್ಲಿ ಅವರದೇ ಆದ ‘ಎಎಂಟಿ’ ತಂತ್ರಜ್ಞಾನ ಬಳಸಲಾಗಿದೆ. ‘ಎಎಂಟಿ’ ಬದಲಿಗೆ ಸಂಪೂರ್ಣ ಏಕ ಗಿಯರ್‌ ‘ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌’ ಇರಬೇಕು ಎನ್ನುವುದು ತಜ್ಞರ ಸಲಹೆ.

ಅತ್ಯುತ್ತಮ ಎನ್ನಬಹುದಾದ ಮುಂಭಾಗದಲ್ಲಿ 17 ಇಂಚಿನ 207/50, ಹಿಂಭಾಗದಲ್ಲಿ 18 ಇಂಚಿನ 235/45 ಟೈರ್‌ ಉಳ್ಳ ಚಕ್ರಗಳಿವೆ. ಇದು ಕಾರಿಗೆ ಸರಾಗ ಚಾಲನೆಯ ಭರವಸೆಯನ್ನು ನೀಡುತ್ತದೆ. ಕಾರಿನ ಒಟ್ಟು ಉದ್ದ 3835 ಎಂಎಂ, ಅಗಲ 1810 ಎಂಎಂ, ಎತ್ತರ 1208 ಎಂಎಂ. 2430 ಎಂ.ಎಂ ವ್ಹೀಲ್‌ಬೇಸ್‌ ಇದೆ.

ಐಶಾರಾಮಿ ಸೌಲಭ್ಯದಲ್ಲಿ ರಾಜಿ ಮಾಡಿಕೊಂಡಿಲ್ಲ, ಸಂಪೂರ್ಣ ಸ್ಪೋರ್ಟಿ ಚರ್ಮದ ಸೀಟುಗಳಿವೆ. ತಲೆ ಹಾಗೂ ಕಾಲಿಗೆ ಹೆಚ್ಚುವರಿ ಸ್ಥಳಾವಕಾಶವಿದೆ. ಹಾಗಾಗಿ, ಆರಾಮದಾಯಕ ಸವಾರಿಯಂತೂ ಸಿಗುತ್ತದೆ. ಹವಾನಿಯಂತ್ರಣ ಉತ್ತಮವಾಗಿದೆ. ಮುಖ್ಯ ಪ್ರಶ್ನೆಯೆಂದರೆ, ಇದು ನಿಜಕ್ಕೂ ರೇಸಿಂಗ್‌ ಸಾಮರ್ಥ್ಯವನ್ನು ಹೊಂದಿರುತ್ತದೆಯೊ ಇಲ್ಲವೊ ಎನ್ನುವುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT