ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್‌ನಿಂದ ಸಾವಯವದೆಡೆಗೆ...

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್‌ ಆಗಿದ್ದವರು ರಾಜು. ಅದೇ ಕ್ಷೇತ್ರದಲ್ಲೇ ಮಾನವ ಸಂಪನ್ಮೂಲ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಸರಿತಾ. ತಿಂಗಳು ಮುಗಿಯುವಷ್ಟರಲ್ಲಿ ಇಬ್ಬರಿಗೂ ಕೈತುಂಬಾ ಸಂಬಳ ಸಿಗುತ್ತಿತ್ತು. ಆದರೆ ಹಣಕ್ಕಿಂತ ಹೆಚ್ಚಾಗಿ ಅವರನ್ನು ಕಾಡಿದ್ದು ಏಕತಾನತೆ.

ಏಕತಾನತೆ ಹಾಗೂ ಕೆಲಸದ ಒತ್ತಡವನ್ನು ಮೀರುವ ಪ್ರಯತ್ನದಲ್ಲಿದ್ದ ಈ ಇಬ್ಬರು ಸಮಾನಮನಸ್ಕರು, ಮನಸ್ಸಿಗೆ ತೃಪ್ತಿ ನೀಡುವ ಉದ್ಯೋಗದ ಹುಡುಕಾಟ ಆರಂಭಿಸಿದರು. ಆಗ ಅವರ ಕೈ ಹಿಡಿದಿದ್ದೇ ಕೃಷಿ. 

ಕೃಷಿಯಿಂದ ಕಲಿತ ಪಾಠ: ಕೃಷಿ ಇವರಿಬ್ಬರಿಗೂ ಹೊಸತೇನಲ್ಲ. ರಾಜು ಮೂಲತಃ ಚಿಕ್ಕಮಗಳೂರಿನ ಗೊಂಡೇದಹಳ್ಳಿಯವರು. ಕೃಷಿ ಕುಟುಂಬದ ಹಿನ್ನೆಲೆ ಇದ್ದವರು. ಸರಿತಾ ಬೀದರ್ ಹೊರವಲಯದ ರೈತ ಕುಟುಂಬದಲ್ಲಿ ಬೆಳೆದವರು. ಇಬ್ಬರಿಗೂ  ಚಿಕ್ಕಂದಿನಿಂದಲೇ ಕೃಷಿಯ ಒಡನಾಟವಿತ್ತು. ಆದರೆ ಅಂದುಕೊಂಡಷ್ಟು ಯಾವುದೂ ಸುಲಭವಲ್ಲ ಎಂಬ ಅರಿವೂ ಅವರಿಗಿತ್ತು.

ಕೃಷಿ ಕ್ಷೇತ್ರದಲ್ಲಿನ ಮೂಲ ಸಮಸ್ಯೆಯ ಬಗ್ಗೆ ಅರಿತುಕೊಂಡರೆ, ಅದರೊಳಗಿನ ಜಾಡು ಸುಲಭವಾಗಬಲ್ಲದು ಎಂದೆಣಿಸಿದ ಇವರು, ಈ ಕುರಿತು ಸಣ್ಣ ಅಧ್ಯಯನವನ್ನೂ ಕೈಗೊಂಡರು. ಆಗ ಅವರ ಮನ ಕಲಕಿದ್ದು ರಾಸಾಯನಿಕದಿಂದ ತತ್ತರಿಸಿಹೋಗುತ್ತಿರುವ ಭೂಮಿಯ ಪರಿಸ್ಥಿತಿ. ರಾಸಾಯನಿಕಕ್ಕೆ ವಿರುದ್ಧವಾಗಿ, ಸಾವಯವ ಕೃಷಿಯಲ್ಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅವರು ನಿರ್ಧರಿಸಿದರು.

ಯಾವುದೇ ಒಂದು ವಿಷಯದ ಕುರಿತು ಆಳ ಅರಿವಿದ್ದರೆ ಮಾತ್ರ ಅದರಲ್ಲಿ  ಪರಿಣತಿ ಪಡೆಯಬಹುದು ಎಂಬುದನ್ನು ನಂಬಿದ್ದ ಇವರು, ಸಾವಯವ ಕೃಷಿಯಲ್ಲಿ ತಿಳಿವಳಿಕೆ ಸಂಪಾದಿಸಲು ಊರೂರು ಅಲೆದರು. ಕೊನೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ‘ಸಾವಯವ ಕೃಷಿ ವಿಜ್ಞಾನ ವಿಭಾಗ’ದ ದೇವಕುಮಾರ್ ಅವರನ್ನು ಭೇಟಿಯಾದರು. ಅಲ್ಲಿಂದ ಅವರಿಬ್ಬರ ನಿಜವಾದ ಕೃಷಿಪಯಣ ಆರಂಭವಾಯಿತು.

ದೇವಕುಮಾರ್ ಅವರ ಸಲಹೆ ಮೇರೆಗೆ ಮೊದಲು ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವ ಹಲವು ಪ್ರಗತಿಪರ ರೈತರನ್ನು ಭೇಟಿ ಮಾಡಿ ಕೃಷಿ, ಅದರ ಉಪಯೋಗಗಳು ಹಾಗೂ ಮಾರುಕಟ್ಟೆ ವಿಧಾನದ ಬಗ್ಗೆ ತಿಳಿದುಕೊಂಡರು. ಸಾವಯವ ಕೃಷಿ ಉತ್ಪನ್ನಗಳ ಮೇಳ, ವಿಚಾರ ಸಂಕಿರಣ ಸೇರಿದಂತೆ – ಸಾವಯವದ  ಕುರಿತು ಎಲ್ಲೇ ಮಾಹಿತಿ ಸಿಗುವಂತಿದ್ದರೂ ತಪ್ಪದೇ ಹಾಜರಾಗುತ್ತಿದ್ದರು.

ಸಾಕಷ್ಟು ವಿಷಯ ಕಲೆಹಾಕಿ, ಒಂದು ವರ್ಷ ಕೃಷಿಕ್ಷೇತ್ರದ ಅಧ್ಯಯನ ನಡೆಸಿದ ನಂತರ ಸಾವಯವ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯುವ ನಿರ್ಧಾರ ಕೈಗೊಂಡರು.

ತಂತ್ರಾಂಶದಷ್ಟು ಸಲೀಸಲ್ಲ ಕೃಷಿ!
ಸಾಫ್ಟ್‌ವೇರ್ ಕ್ಷೇತ್ರದಿಂದ ಸಾವಯವ ಕೃಷಿಗೆ ಕಾಲಿಟ್ಟ ಇಬ್ಬರಿಗೂ ಆರಂಭದ ಹಾದಿಯಲ್ಲಿ ಹಲವು ಸವಾಲುಗಳು ಎದುರಾದವು. ಸಾವಯವ ವಿಧಾನದಲ್ಲೇ ಪರ್ಯಾಯ ಆಲೋಚನೆಯಲ್ಲಿದ್ದಾಗ ರೈತರನ್ನೇ ಸಾವಯವ ಕೃಷಿಕರನ್ನಾಗಿ ಪರಿವರ್ತಿಸಿ, ಅವರಿಂದ ನೇರವಾಗಿ ಖರೀದಿಸುವ ಮಾರುಕಟ್ಟೆ ವಿಧಾನ ರೂಪಿಸಲು ತೀರ್ಮಾನಿಸಿದರು.

ರೈತರನ್ನು ಸಾವಯವ ಕೃಷಿಯತ್ತ ಮನವೊಲಿಸುವುದು ಅಷ್ಟು ಸರಳವಾಗಿರಲಿಲ್ಲ. ರೈತರ ಹೊಲಗಳಿಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು. ಕೆಲವರು ರಾಸಾಯನಿಕ ಗೊಬ್ಬರ ಉಪಯೋಗಿಸಿ ಸಾವಯವ ಕೃಷಿ ಎಂದು ನಂಬಿಸಿ ಮೋಸ ಮಾಡಲು ಯತ್ನಿಸುತ್ತಾರೆ. ಇದರಿಂದ ಒಟ್ಟಾರೆ ಸಾವಯವ ಕೃಷಿಯ ಗುಣಮಟ್ಟವನ್ನು ಅನುಮಾನಿಸುವವರು ಇದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ಸಾವಯವ ಕೃಷಿ, ತಂತ್ರಾಂಶ ರೂಪಿಸಿದಷ್ಟು ಸಲೀಸಲ್ಲ ಎನ್ನುವ ಸತ್ಯವೂ ಅನುಭವಕ್ಕೆ ಬಂತು. ಆದರೆ ನಂಬಿಕಸ್ಥ ರೈತರ ವಿಶ್ವಾಸ ಗಳಿಸಿ ಸಾವಯವ ಕೃಷಿ ಮಾಡಲು ಉತ್ತೇಜಿಸುವಲ್ಲಿ ಸೋಲಲಿಲ್ಲ.

ಇದೀಗ ಇವರ ಮಾರ್ಗದರ್ಶನ ಮತ್ತು ಒಪ್ಪಂದದಂತೆ ಬೀದರ್, ಚಿಕ್ಕಮಗಳೂರು, ಮೈಸೂರಿನ ಎಚ್.ಡಿ.ಕೋಟೆ, ದಾವಣಗೆರೆ, ಶಿಕಾರಿಪುರ, ಭದ್ರಾವತಿ, ಹೊಸದುರ್ಗ, ಶ್ರೀನಿವಾಸಪುರ, ನೆಲಮಂಗಲ, ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಕೆಲವು ರೈತರು ಮಾರಾಟ ಮಳಿಗೆಗೆ ಅನುಗುಣವಾಗಿ ಸಾವಯವ ಪದ್ಧತಿಯಲ್ಲಿ ಕೃಷಿ ರೂಢಿಸಿಕೊಂಡಿದ್ದಾರೆ. ಆಯಾ ಕಾಲಮಾನಕ್ಕೆ ತಕ್ಕಂತೆ ತರಕಾರಿ, ಆಹಾರಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

ತಮಿಳುನಾಡಿನ ಕೊಯಮತ್ತೂರು, ಆಂಧ್ರಪ್ರದೇಶದ ಅನಂತಪುರಂ, ನೆಲ್ಲೂರು,  ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕೆಲವು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತದೆ. ಸಿಗುವ ಲಾಭಾಂಶ ನೇರವಾಗಿ ರೈತರ ಕೈ ಸೇರುತ್ತದೆ.ಮಧ್ಯವರ್ತಿಗಳ ಹಾವಳಿ ಇಲ್ಲಿಲ್ಲ. ರಾಜು ಮತ್ತು ಸರಿತಾ ರೈತರ ಹೊಲಗಳಿಗೆ ಖುದ್ದು ಭೇಟಿ ನೀಡಿ ತಮಗೆ ಬೇಕಾದ ತರಕಾರಿ, ಆಹಾರ ಧಾನ್ಯ ಬೆಳೆಯಲು ಮುಂಗಡವಾಗಿ ಹೇಳುವುದರಿಂದ ಉತ್ಪನ್ನಗಳ ಏರಿಳಿತ ಉಂಟಾಗುವುದಿಲ್ಲ.

ರೈತರೊಂದಿಗೆ ಸ್ನೇಹ ಸಂಬಂಧ
ಕಳೆದ ಮೂರು ವರ್ಷದಿಂದ ರಾಜು ಮತ್ತು ಸರಿತಾ ಸಾವಯವ ಮಳಿಗೆ ನಡೆಸುವ ಮೂಲಕ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಆರ್ಥಿಕ ಸಂಕಷ್ಟಕ್ಕೂ ನೆರವಾಗಿದ್ದಾರೆ.

‘ಗ್ರಾಮದ ಒಬ್ಬ ರೈತ ಸಾವಯವ ಕೃಷಿಗೆ ಒಗ್ಗಿಕೊಂಡರೆ, ಕೆಲವು ರೈತರು ಕೂಡ ಇದನ್ನು ಅನುಸರಿಸಲು ಮುಂದೆ ಬರುತ್ತಾರೆ. ಇದೆಲ್ಲಾ ಸಾಂಘಿಕ ಪ್ರಯತ್ನದ ಮೂಲಕ ಸಾಧ್ಯ’ ಎನ್ನುತ್ತಾರೆ ರಾಜು–ಸರಿತಾ.

‘ಸಾವಯವ ಕೃಷಿಕ್ಷೇತ್ರ ಎಂದರೆ ಬಹುತೇಕ ರೈತರು ಮೂಗು ಮುರಿಯುತ್ತಾರೆ. ಇದಕ್ಕೆ, ಬದಲಾದ ಕೃಷಿನೀತಿ ಕಾರಣವಿರಬಹುದು. ಅತಿಯಾದ ರಸಗೊಬ್ಬರ ಬಳಕೆಯಿಂದ ಹೊಲ–ಗದ್ದೆಗಳು ಬರಡು ಭೂಮಿಗಳಾಗಿ ಪರಿವರ್ತನೆ ಆಗುತ್ತಿವೆ. ಪ್ರಾಣಿ–ಪಕ್ಷಿಗಳು ಕೂಡ ರೈತರ ಜಮೀನಿನ ಕಡೆ ಹೋಗದಂತಹ ವಿಷಮಸ್ಥಿತಿಗೆ ರೈತರ ಭೂಮಿ ಬದಲಾಗಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಸಾವಯವ ಮಳಿಗೆ
ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಬೆಂಗಳೂರಿನ ಯಲಹಂಕ ನ್ಯೂಟೌನ್ ಹಾಗೂ ಜಯನಗರದಲ್ಲಿ ಸಾವಯವ ಮಳಿಗೆ ತೆರೆದಿದ್ದಾರೆ. ತಾಜಾ ತರಕಾರಿ, ನವಣೆ, ಸಜ್ಜೆ, ಸಾಮೆ, ಬರಗು, ಊದಲು, ಹಾರಕ, ರಾಗಿ, ಜೋಳ ಮೊದಲಾದ ಸಿರಿಧಾನ್ಯಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.

ಸಾವಯವ ಧಾನ್ಯಗಳಷ್ಟೇ ಅಲ್ಲ; ನಾಟಿ ಹಸುವಿನ ತುಪ್ಪ, ಗಂಜಳ, ಬೆರಣಿ, ಜೀವದ್ರವ್ಯ, ಪಂಚಗವ್ಯ, ಗಾಣದಿಂದ ತಯಾರಿಸಿದ ಕುಸಬೇ ಎಣ್ಣೆ, ಸಾಸಿವೆ, ಹರಳಣ್ಣೆ, ಕೊಬ್ಬರಿ ಎಣ್ಣೆ , ಆಲೆಮನೆಯಲ್ಲಿ ತಯಾರಾದ ಸಾವಯವ ಬೆಲ್ಲ, ಉತ್ತರಾಕಾಂಡದ ‘ಪೌಂಡಿ’ ಎಂಬ ಪ್ರದೇಶದಲ್ಲಿ ಬೆಳೆಯುವ ವಿವಿಧ ಜಾತಿ ಹಣ್ಣುಗಳಿಂದ ತಯಾರಾದ ಹಣ್ಣಿನ ರಸ, ಉಪ್ಪಿನಕಾಯಿ ಈ ಮಳಿಗೆಗಳಲ್ಲಿ ದೊರೆಯುತ್ತವೆ.

ಬಿದಿರು ಮತ್ತು ನೈಲಾನ್‌ನಿಂದ  ತಯಾರಾದ ಟೂತ್ ಬ್ರಷ್, ಮಣ್ಣಿನ  ಬ್ರಿಡ್ಜ್, ಫಿಲ್ಟರ್‌, ಬೇವಿನ ಮರದ ಬಾಚಣಿಗೆ, ಲಾವಂಚದ ನಾರು, ಅಂಟುವಾಳ, ಹೂವಿನ ಕುಂಡಗಳಿಗೆ ಕೊಟ್ಟಿಗೆ ಗೊಬ್ಬರ – ಹೀಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ರೂಪಿಸಲಾದ ಉತ್ಪನ್ನಗಳನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ.

‘ನಮ್ಮ ಪೂರ್ವಿಕರ ಕಾಲದಲ್ಲಿ ಸಿರಿಧಾನ್ಯ ಕೃಷಿಸಂಸ್ಕೃತಿಯ ಮೂಲಬೆಳೆಯಾಗಿತ್ತು. ಈಗ ಅದು ಕಣ್ಮರೆಯಾಗುತ್ತಿದೆ. ಉತ್ತಮ ಆಹಾರ ಸೇವನೆ ಕೂಡ ಸಂಸ್ಕೃತಿಯೇ ಆಗಿತ್ತು. ಕಡಿಮೆ ಖರ್ಚು, ಕಡಿಮೆ ನೀರು, ರೈತರಿಗೆ ಆದಾಯ ತರುವಂಥ ಬೆಳೆ ಸಿರಿಧಾನ್ಯವಾಗಿದೆ. ಸಿರಿಧಾನ್ಯಗಳ ಉತ್ಪಾದನೆಯಿಂದ ಮಣ್ಣಿನ ಗುಣಮಟ್ಟವನ್ನು ಆರೋಗ್ಯವಾಗಿಡುವ ವಾತಾವರಣ ಇರುತ್ತದೆ. ಕೃಷಿಯ  ತಪ್ಪು ನಿರ್ಧಾರಗಳಿಂದಾಗಿ ರೈತರು ದಾರಿತಪ್ಪುತ್ತಿದ್ದಾರೆ’ ಎಂದು ರಾಜು–ಸರಿತಾ ವಿಷಾದಿಸುತ್ತಾರೆ.

ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗಳ  ನಿಯಂತ್ರಣಕ್ಕೆ ನವಣೆ, ಸಜ್ಜೆ, ಹಾರಕ, ರಾಗಿಯಂತಹ ಸಿರಿಧಾನ್ಯಗಳೇ ಮದ್ದು. ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಿರಿಧಾನ್ಯಗಳು ಕಣ್ಮರೆಯಾಗುತ್ತಿದ್ದು, ದೇಸಿ ತಳಿಗಳನ್ನು ಉಳಿಸಬೇಕು ಎನ್ನುವ ಪ್ರತಿಪಾದನೆ ಅವರದ್ದು.

ಕೃಷಿ ಕ್ಷೇತ್ರದ ಅಸ್ಮಿತೆ ಪ್ರಶ್ನೆ: ‘ಸಾವಯವ ಪದಾರ್ಥಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ವಿಚಾರಸಂಕಿರಣ, ರೈತರೊಂದಿಗೆ ಗುಂಪು ಚರ್ಚೆ ನಡೆಸುವ ಮುಖೇನ ಸಾವಯವ ಕೃಷಿ ಅಸ್ಮಿತೆ ಉಳಿಸುವ ಪ್ರಯತ್ನ ಸಾಗಿದೆ’ ಎಂದು ರಾಜು–ಸರಿತಾ ಹೇಳುತ್ತಾರೆ.

ಸಾವಯವ ಕೃಷಿಯಲ್ಲಿ ತೊಡಗುವ ರೈತರಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಬೇಕು. ಕೇರಳ ಮತ್ತು ಸಿಕ್ಕಿಂಗಳಲ್ಲಿ  ಸರ್ಕಾರವೇ ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿವೆ. ಇದೇ ಮಾದರಿ ರಾಜ್ಯದಲ್ಲೂ ಅನುಷ್ಠಾನಗೊಳ್ಳಲಿ ಎನ್ನುವ ಆಶಯ ಇವರದು.  ಸಂಪರ್ಕಕ್ಕೆ:9741110333.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT